ಈ ವಿಶ್ವದ ಆಸ್ತಿತ್ವಕ್ಕೆ ಕಾರಣೀಭೂತವಾದ ಒಬ್ಬ ಸೃಷ್ಟಿಕರ್ತನಿದ್ದಾನೆಂಬ ನಂಬಿಕೆ
ಪ್ರಾಚೀನವಾದದ್ದು. ಇದರ ಆಗುಹೋಗುಗಳಿಗೆಲ್ಲಾ ಅವನೇ ಹೊಣೆ. ದೇವರ ಕಲ್ಪನೆಯಲ್ಲಿ
ವೈವಿಧ್ಯ ಇದೆ. ಕೆಲವರಿಗೆ ದೇವರು ಸಾಕಾರ ಮತ್ತೆ ಕೆಲವರಿಗೆ ನಿರಾಕಾರ;
ಪೂಜ್ಞಾಪೂರ್ಣವಾದ ನಿಯಮ 'ದೇವರು ಸರ್ವಾಂತರ್ಯಾಮಿ, ಸರ್ವಜ್ಞ, ಸರ್ವಶಕ್ತ.' 'ತೇನವಿನಾ
ತೃಣಮಪಿ ನ ಚಲತಿ', ಅವನ ಸಹಾಯವಿಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಅಲ್ಲಾಡುವುದಿಲ್ಲ'
ಎಂಬ ಅಚಲವಾದ ನಂಬಿಕೆ ಹಲವರಿಗೆ. ಪ್ರತಿಯೊಬ್ಬನ ಜೀವ ನಡುಸುವುದೂ ಆತನದೇ ಜವಾಬ್ದಾರಿ.
ಕೆಲವರು 'ಹುಟ್ಟಿಸಿದ ದೇವರು ಹುಲ್ಲು ಮೇಯುಸುತ್ತಾನೆಯೇ' ಎಂಬ ಹೇಳಿಕೆಯಲ್ಲಿ ಅಗಾಧ
ವಿಶ್ವಾಸ ಇಟ್ಟರೆ, ಕೆಲವರಿಗೆ 'ಮಾಡಿದ್ದುಣ್ಣೊ ಮಹಾರಾಯ' ಎಂಬುದರಲ್ಲಿ ನಂಬಿಕೆ. ಇನ್ನೂ
ಹಲವರು ಈ ಜನ್ಮದಲ್ಲಿ ಏನಾಗಬೇಕು ಎಂಬುದನ್ನು ಭಗವಂತ ಹಿಂದಿನ ಜನ್ಮದಲ್ಲಿಯೇ ನಿಷ್ಕರ್ಷೆ
ಮಾಡಿದ್ದಾನೆ, ಆದ್ದರಿಂದ ಆಗುವುದೆಲ್ಲಾ ನಮ್ಮ ಹಣೆಬರಹದಂತೆ ಎಂಬ ವಿಧಿವಾದ (Fatalism)
ಕ್ಕೆ ಶರಣುಹೋಗುತ್ತಾರೆ. ಮತ್ತೊಂದು ನಂಬೆಕೆಯಂತೆ ಆರು ದಿನಗಳು ಮಾಡಿದ ಪಾಪಗಳಿಗೆಲ್ಲಾ
ಏಳನೇ ದಿನ ಭಾನುವಾರ ಬೆಳಗ್ಗೆ ದೇವರಲ್ಲಿ ಕ್ಷಮೆ ಬೇಡಿದರೆ ತಕ್ಷಣ ಎಲ್ಲಾ ಪಾಪಗಳನ್ನೂ
ಪರಿಹರಿಸುತ್ತಾನೆ. ಅನುಕೂಲವಾದ ಈ ಸಾಪ್ತಾಹಿಕ ಚಕ್ರವನ್ನು ಜೀವನ ಪರ್ಯಂತ ಹಾಯಾಗಿ
ಸಲೀಸಾಗಿ ನಡೆಸಿಕೊಂಡು ಹೋಗಬಹುದು. ದೇವರ ಈ ಬಗೆಗಿನ ವೈವಿಧ್ಯದಿಂದ ಕೂಡಿರುವ
ನಂಬಿಕೆಗಳೇನೇ ಇರಲಿ ಪೂಜೆ ಪುನಸ್ಕಾರ ಪ್ರಾರ್ಥನಾಧಿಗಳ ಮೂಲಕ ದೇವರನ್ನು ಒಲಿಸಿಕೊಂಡು
ಪ್ರಾಪಂಚಿಕ ಇಷ್ಟಾರ್ಥಗಳನ್ನು ಪಡೆಯಬಹುದು ಎಂಬುದು ಸಾರ್ವತ್ರಿಕ ನಂಬಿಕೆ. ಸಮಾಜಕಲ್ಯಾಣ
ವಿಶ್ವಶಾಂತಿಗಳನ್ನು ಪ್ರಾರ್ಥನೆ, ಯಜ್ಞ ಯಾಗಾದಿಗಳ ಮೂಲಕ ಸಾಧಿಸಬಹುದೆಂಬ ನಂಬಿಕೆಯೂ
ಅಷ್ಟೇ ಬಲವಾಗಿದೆ.
ಪ್ರಾರ್ಥನೆ ವೈಯುಕ್ತಿಕವಾಗಬಹುದು ಅಥವಾ ಸಾಮೂಹಿಕವಾಗಬಹುದು, ಮೌನದ
ಧ್ಯಾನವಾಗಬಹುದು; ಆರ್ಭಟದ ಸಂಕೀರ್ಥನವಾಗಬಹುದು. ಇವೆಲ್ಲಾ ಒಂದು ಧರ್ಮಕ್ಕೆ
ಸೀಮಿತವಾಗಿಲ್ಲ. ಕಷ್ಟಗಳು ಪರಿಹಾರಕ್ಕೆ ಸಾಮನ್ಯವಾಗಿ ಎಲ್ಲ ಧರ್ಮಗಳ ಜನರೂ ದೇವರಿಗೆ
ಮೊರೆ ಹೋಗುತ್ತಾರೆ. ಅವರವರ ಕಷ್ಟಗಳು, ಸಮಸ್ಯೆಗಳು, ಸಾಧನೆಗಳಿಗಾಗಿ ಪ್ರಾರ್ಥನೆಯನ್ನೇ
ಅವಲಂಬಿಸುತ್ತಾರೆ. ಆದರೆ ಸ್ವಪ್ರಯತ್ನ ದೃಡ ಮನಸ್ಸು, ಆತ್ಮ ವಿಶ್ವಾಸಗಳಿಂದ ಮಾತ್ರ
ಯಶಸ್ಸು ಪಡೆಯಲು ಸಾಧ್ಯ. ನಮ್ಮ ಯಾವುದೇ ಯಶಸ್ಸಿಗೂ ಪ್ರಾರ್ಥನೆಗೂ ಸಂಬಂಧವಿಲ್ಲ.
ಪ್ರಪಂಚದಲ್ಲಿ ಲಕ್ಷಾಂತರ ಮಂದಿ ಪಂಡಿತರು, ವಿಜ್ಞಾನಿಗಳು, ದಾರ್ಶಿನಿಕರು,
ರಾಜಕಾರಣಿಗಳು ಪೂಜಾದಿಗಳ ಸೊಂಕಿಲ್ಲದೆ ಗಣನೀಯ ಸ್ಥಾನಗಳನ್ನು ಗಳಿಸಿದ್ದಾರೆ. ಹಾಗೆಯೇ
ಕೋಟ್ಯಾಂತರ ಮಂದಿ ನೆಮ್ಮದಿಯ ಜೀವನವನ್ನೂ ನಡೆಸುತ್ತಿದ್ದಾರೆ. ಪಂಡಿತ ಜವಹರಲಾಲ್
ನೆಹರೂರವರು ಎಂದೂ ಸ್ವಾರ್ಥಕ್ಕಾಗಿ ಪ್ರಾರ್ಥನೆ ಮಾಡಲಿಲ್ಲ ಮತ್ತು ಉನ್ನತ ಪದವಿಗಾಗಿ
ಪ್ರಾರ್ಥನೆಯ ನೆರವನ್ನು ಪಡೆಯಲಿಲ್ಲ. ಆದರೂ ಅವರು ೧೭ ವರ್ಷಗಳ ಕಾಲ ಪ್ರಧಾನ
ಮಂತ್ರಿಯಾಗಿ ರಾಷ್ಟ್ರೀಯ ಅಂತರರಾಷ್ಟ್ರೀಯ ಇತಿಹಾಸದಲ್ಲಿ ಪ್ರಮುಖ ಸ್ಥಾನ
ಪಡೆದಿದ್ದಾರೆ. ಇಂಥ ಉದಾಹರಣೆಗಳು ಒಂದೇ ಎರಡೇ, ಅಸಂಖ್ಯಾತವಾಗಿವೆ. ಸ್ವಾಮಿ
ವಿವೇವಾಕನಂದರು ಹೇಳುವ ಹಾಗೆ ನಮ್ಮ ಭವಿಷ್ಯಕ್ಕೆ ನಾವೇ ಸಂಪೂರ್ಣ ಹೊಣೆ.
ಪ್ರಾರ್ಥನೆ ಪೂಜಾದಿಗಳಿಂದ ಸಮಾಜವನ್ನು ಬದಲಾವಣೆ ಮಾಡಲಾಗುವುದಿಲ್ಲ. ಮಾನವನ
ಪ್ರಪಂಚದ ಇತಿಹಾಸವನ್ನೇ ಬದಲಾವಣೆ ಮಾಡಿದ ರಷ್ಯಾ, ಚೈನಾ ಮಹಾಕ್ರಾಂತಿಗಳು ಹೋಮ ಯಜ್ಞಯಾಗ
ಭಜನೆಗಳಿಂದ ಆಗಲಿಲ್ಲ. ನಮ್ಮ ದೇಶದಲ್ಲಿ ಲೋಕ ಕಲ್ಯಾಣಕ್ಕಾಗಿ, ಜಗತ್‌ಶಾಂತಿಗಾಗಿ,
ಮಳೆಗಾಗಿ ಪದೇ ಪದೇ ಯಜ್ಞ ಯಾಗಾದಿಗಳನ್ನು ನಡೆಸುವುದು ಮಾಮೂಲಾಗಿ ಹೋಗಿದೆ. ಲಕ್ಷಾಂತರ
ಮಂದಿ ನಿರ್ಗತಿಕರಿಗೆ ಬಟ್ಟೆ ಬರೆಯಿಲ್ಲದೆ ಒಂದು ಹೊತ್ತು ಊಟಕ್ಕೂ ಇಲ್ಲದೇ ಇದ್ದಾಗ
ಸಹಸ್ರಾರು ಟನ್‌ಗಳಷ್ಟು ಆಹಾರ ಪದಾರ್ಥಗಳನ್ನು ಮತ್ತು ಅಮೂಲ್ಯವಾದ ವಸ್ತುಗಳನ್ನು
ಬೆಂಕಿಗೆ ಹಾಕುವುದು ಅಕ್ಷಮ ಅಪರಾಧವೆಂದು ಪರಿಗಣಿಸಿ, ಶಾಸನದ ಮೂಲಕ ಇಂತಹ ಸಮಾಜಘಾತಕ
ಕೃತ್ಯಗಳನ್ನು ತಪ್ಪಿಸಬೇಕು. ದುಷ್ಕರ್ಮಿಗಳಿಗೆ ಶಿಕ್ಷೆಯನ್ನು ವಿಧಿಸಬೇಕು.
ನಮ್ಮ ಸಮಾಜದಲ್ಲಿ ಏರುಪೇರು ಇರುವ ಹಾಗೆ ದೇವರುಗಳಲ್ಲೂ ಏರುಪೇರುಗಳುಂಟು. ಏನೂ
ಗತಿಯಿಲ್ಲದ, ಮೈಮೇಲೆ ಬಟ್ಟೆ ಇಲ್ಲದ, ಒಂದು ಹಿತ್ತಾಳೆ ಒಡೆವೆಯೂ ಇಲ್ಲದ ದೇವರುಗಳೂ
ಇವೆ. ಹಾಗೆಯೇ ತಾತಾ, ಬಿರ್ಲಾ, ಗೋಯೆಂಕಾಗಳೂ ಇವೆ. ನಮ್ಮ ದೇಶದ ಕಡುಬಡವರಿಗಿರುವ
ದುರ್ಗತಿ ದೇವರಿಗಾದರೆ ಇನ್ನೂ ಕೆಲವು ಸಿರಿವಂತ ದೇವರುಗಳು ಚಿನ್ನ, ವಜ್ರ
ವೈಡೂರ್ಯಗಳಿಂದ ಯಾವಾಗಲೂ ರಾರಾಜಿಸುತ್ತಿರುತ್ತವೆ. ಜೊತೆಗೆ 'ಗರುಡೋತ್ಸವ'
'ತೆಪ್ಪೋತ್ಸವ' 'ಲಕ್ಷದೀಪೋತ್ಸವ' 'ಶಯನೋತ್ಸವ' ಗಳು, ಲಕ್ಷಾಂತರ ಮಂದಿ ಭಕ್ತಾದಿಗಳ,
ಸುಖಜೀವನ, ಈ ಎಲ್ಲ ಅರ್ಥವಿಲ್ಲದ ನಂಬಿಕೆಗಳಿಗೆ ಭಯ ಮತ್ತು ಮೌಢ್ಯ ಕಾರಣಗಳು. ನಮ್ಮಲ್ಲಿ
ಬಹುಮಂದಿಗೆ ಎದ್ದರೆ ಭಯ, ಕುಳಿತುಕೊಂಡರೆ ಭಯ, ಎಷ್ಟೋ ಮಂದಿಗೆ ಯೋಚನೆ ಮಾಡುವುದಕ್ಕೇ
ತುಂಬಾ ಭಯವಾಗುತ್ತದೆ. ಎಲ್ಲ ಮೂಢನಂಬಿಕೆಗಳೂ ಅಸಂಗತವಾಗಿದ್ದು ಕಷ್ಟಕಾಲದಲ್ಲಿ ಆಧಾರ
ಸ್ಥಂಭಗಳಾಗುವುದಿಲ್ಲ. ಏನೋ ಒಂದು ಭೀತಿ ಭಯದ ವಾತಾವರಣದಲ್ಲಿ ಮಗು ಹುಟ್ಟುತ್ತದೆ. ಅದೇ
ವಾತಾವರಣದಲ್ಲಿಯೇ ಬೆಳೆಯುತ್ತದೆ.
ಈ ಲೇಖನದ ಉದ್ಧೇಶ ದೇವರು, ಪ್ರಾರ್ಥನೆ ಪೂಜಾದಿಗಳನ್ನು ಅಲ್ಲಗಳೆಯುವುದಲ್ಲ. ಇವುಗಳ
ಗುಣಾವಗುಣಗಳನ್ನು ಮುಕ್ತಮನಸ್ಸಿನಿಂದ ವೈಚಾರಿಕವಾಗಿ ನಿರ್ಭಯವಾಗಿ ವಿಶ್ಲೇಷಣೆ
ಮಾಡುವುದು ಮುಖ್ಯವಾದ ಉದ್ಧೇಶ. ಯಾವುದನ್ನೂ ಯಾಂತ್ರಿಕವಾಗಿ ಮಾಡಬಾರದು. ದೇವರು, ಧರ್ಮ,
ಪ್ರಾರ್ಥನೆ, ಪೂಜಾದಿಗಳನ್ನು ಇಷ್ಟಾರ್ಥಗಳನ್ನು ಪಡೆಯುವುದಕ್ಕೆ, ಸಮಾಜ ಕಲ್ಯಾಣಕ್ಕೆ
ವಾಣಿಜ್ಯೋದ್ಯಮಗಳನ್ನಾಗಿ ಉಪಯೋಗಿಸಿಕೊಂಡು ಶೋಷಣೆಯ ಸಾಧನವನ್ನಾಗಿ
ಮಾಡಿಕೊಂಡಿರುವುದಕ್ಕೆ ನನ್ನ ಉಗ್ರ ವಿರೋಧ. ಮುಗ್ಧ, ದುರ್ಬಲ ಮನಸ್ಸಿನ ಎಷ್ಟೋ ಜನರನ್ನು
ಹರಕೆ ಶಾಂತಿ ಧರ್ಮಗಳ ಹೆಸರಿನಲ್ಲಿ ಹೆದರಿಸುತ್ತಿರುವುದು ನಿತ್ಯಕರ್ಮವಾಗಿದೆ.
ಕಡುಬಡವನಿಂದ ಅತಿಶ್ರೀಮಂತನವರೆಗೆ ಯಥಾಶಕ್ತಿ ಈ ಆಚರಣೆಗಳಿಗಾಗಿ ಹಣ ವ್ಯಯವಾಗುತ್ತಿದೆ.
ಕಾಲ ವ್ಯರ್ಥವಾಗುತ್ತಿದೆ. ಹೀಗೆ ಪೋಲಾಗುತ್ತಿರುವ ಹಣದ ಮೊತ್ತ ವರ್ಷಕ್ಕೆ ಕೊಟ್ಯಾಂತರ
ರೂಪಾಯಿಗಳಾಗುತ್ತವೆ. ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ಅಂಕಿಅಂಶಗಳನ್ನು
ಸಂಗ್ರಹಿಸುವುದು ಸೂಕ್ತ. ಇವುಗಳೆಲ್ಲಕ್ಕಿಂತ ಹೆಚ್ಚಾಗಿ ಈ ಅರ್ಥವಿಲ್ಲದ ಆಚರಣೆಗಳಿಂದ
ಮನುಷ್ಯನ ಆತ್ಮವಿಶ್ವಾಸಕ್ಕೆ ಧಕ್ಕೆಯುಂಟಾಗುತ್ತದೆ. ಮನಸ್ಸು ಇನ್ನೂ ದುರ್ಬಲವಾಗಿ
ಯಾವಾಗಲೂ ಡೋಲಾಯಮಾನ ಸ್ಥಿತಿಯಲ್ಲಿಯೇ ಇರುತ್ತದೆ. ಪ್ರಾರ್ಥನೆ ಪೂಜಾದಿಗಳನ್ನು
ವ್ಯಾಪರಕ್ಕಾಗಿ ಬಳಿಸಿಕೊಂಡರೆ, ಅವು ಲೇವಾದೇವಿಯಾದರೆ ಮನಸ್ಸಿಗೆ ಎಂದೂ ಶಾಂತಿ
ಸಿಗುವುದಿಲ್ಲ.
ಪ್ರಾರ್ಥನೆ ಮತ್ತು ಭಕ್ತಿ ಅವರವರ ಮನೋಭಾವವನ್ನು ಅವಲಂಬಿಸಿರುತ್ತವೆ. ಡಂಭಾಚಾರ
ಆಟಾಟೋಪಗಳಿಗೆ ಧರ್ಮದಲ್ಲಿ ಎಂದೂ ಸ್ಥಾನವಿಲ್ಲ. ನಮ್ಮಲ್ಲಿ ಸಾಮಾನ್ಯವಾಗಿ ಮಾಡುವುದು
ಅನಾಚಾರ, ಆದರೆ ಮನೆ ಮುಂದೆ ಬೃಂದಾವನ. ಅಷ್ಟೇ ಅಲ್ಲ ಅನಾಚಾರ ಹೆಚ್ಚಾದಷ್ಟೂ ಮನೆ ಸುತ್ತ
ಬೃಂದಾವನ ವೃದ್ಧಿಸುತ್ತದೆ. ಬೂಟಾಟಿಕೆ ದಾಸಯ್ಯನಿಗೆ ಮೈಯೆಲ್ಲಾ ನಾಮಗಳೇ. ನಮ್ಮಲ್ಲಿ
ನಿದರ್ಶನಕ್ಕಿಂತ, ಅಂತಶುದ್ಧಿಗಿಂತ ಪ್ರದರ್ಶನವೇ ಹೆಚ್ಚು. ಅಬಾಲವೃದ್ಧರು, ಜವಾನನಿಂದ
ರಾಷ್ಟ್ರಪತಿಯವರೆಗೆ ಎಲ್ಲರೂ ತಮ್ಮ ತಲೆಕೂದಲನ್ನು ದೇವರಿಗೆ ಕೊಡುತ್ತಾರೆ. ಮಂಡೆ
ಬೋಳಾಗುವುದಕ್ಕಿಂತ ಮನ ಬೋಳಾಗುವುದು ಮುಖ್ಯ.
ಎಲ್ಲಿ ಹಣಕ್ಕೆ ಪ್ರಾಧಾನ್ಯ ಇದೆಯೋ ಅಲ್ಲಿ ಧರ್ಮವಿಲ್ಲ. ಆಯೋಗ್ಯನೊಬ್ಬ
ಅಪಾತ್ರನೊಬ್ಬ ಕೇವಲ ಬೇಡಿಕೊಳ್ಳುವುದರಿಂದ ಫಲ ಸಿಕ್ಕರೆ ಅದು ಅಕ್ರಮ. ವ್ಯಕ್ತಿ
ಪಾತ್ರನಾದರೆ ಬೇಡಿಕೊಳ್ಳುವ ಅವಶ್ಯಕತೆಯೂ ಇಲ್ಲ. ಹಣ ಖರ್ಚು ಮಾಡುವ ಅವಶ್ಯಕತೆಯೂ ಇಲ್ಲ.
ಹಣಕ್ಕೂ, ದೇವರಿಗೂ, ಪ್ರಾರ್ಥನೆಗೂ ಯಾವ ಸಂಬಂಧವೂ ಇಲ್ಲ. ಪೂಜೆ ಪ್ರಾರ್ಥನಾದಿಗಳ
ಹೆಸರಿನಲ್ಲಿ ಹಣ ಖರ್ಚು ಮಾಡುವುದು ಯಾಂತ್ರಿಕವಾಗಿ ಆಚರಿಸುತ್ತಿರುವ ಅರ್ಥವಿಲ್ಲದ
ಸಂಪ್ರದಾಯ.
ಎಷ್ಟೆಲ್ಲಾ ಹಣ ಪೋಲು ಮಾಡಿ ಯಜ್ಞ ಯಾಗಾದಿಗಳನ್ನು ಮಾಡಿದ ಮೇಲೂ ನಮ್ಮ ದೇಶದಲ್ಲಿ
ಕ್ಷಾಮಡಾಮರಗಳಾಗಲಿ, ಅತಿವೃಷ್ಟಿ ಅನಾವೃಷ್ಟಿಗಳಾಗಲೀ, ಅಶಾಂತಿಯಾಗಲೀ ತಪ್ಪಿಲ್ಲ. ಇಂತಹ
ಯಾವ ಆಚರಣೆಗಳನ್ನೂ ಧರ್ಮದ ಹೆಸರಿನಲ್ಲಿ ಮಾಡದೆ ಇರುವ ಹಲವು ದೇಶಗಳು ಸುಭಿಕ್ಷವಾಗಿವೆ.
ಇಂತಹ ಕೆಲವು ದೇಶಗಳಲ್ಲಿ ಊಟವಿಲ್ಲದವನಿಲ್ಲ, ಮನೆ ಇಲ್ಲದವನಿಲ್ಲ. ಆಸ್ತಿಕತೆಯನ್ನು
ಗುತ್ತಿಗೆ ಪಡೆದಿರುವ ನಮ್ಮ ದೇಶ ನಾಸ್ತಿಕ ದೇಶಗಳಿಂದ ಸಹಾಯ ಪಡೆಯವುದು ಎಂಥ ಪರಿಹಾಸ್ಯ.
ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಮಾತುಮಾತಿಗೂ ಪಾರಮಾರ್ಥಿಕದ ಬಗ್ಗೆ ಎಷ್ಟೇ ಭಾಷಣ
ಮಾಡಿದರೂ ನಮ್ಮ ದೇಶದಲ್ಲಿರುವಷ್ಟು ವ್ಯಾವಹಾರಿಕಗುಣ ಬೇರೆ ಯಾವ ದೇಶದಲ್ಲಿಯೂ ಇಲ್ಲ.
ದುಡ್ಡಿಲ್ಲದೆ ಇದ್ದರೆ ಯಾವ ಧರ್ಮವಿಧಿಯೂ ನಡೆಯುವ ಹಾಗೆಯೇ ಇಲ್ಲ. ದೇವರು ದರ್ಶನಕ್ಕೂ
ಹಣ, ತೆಂಗಿನಕಾಯಿ ಒಡೆಸಿದ್ದಕ್ಕೂ ಹಣ, ಕುಳಿತರೆ ಹಣ, ನಿಂತರೆ ಹಣ.
ಪ್ರಾರ್ಥನೆ, ಭಜನೆ, ಪೂಜಾದಿಗಳಿಂದ ಎಲ್ಲ ಆಗುತ್ತದೆ ಎಂದು ಕೊಂಡರೆ ಏನೂ
ಆಗುವುದಿಲ್ಲ. ಆಕ್ರಮಣಕಾರರು ನಮ್ಮ ದೇಶದ ದೇವಾಲಯಗಳನ್ನು ನೆಲಸಮ ಮಾಡುವುದಕ್ಕೆ ಬಂದಾಗ
ನಮ್ಮ ದೈವ ಭಕ್ತರು ಅವರೊಂದಿಗೆ ಹೋರಾಡದೆ ಯಾವನು ವಿಗ್ರಹಗಳನ್ನು ಬೇಧಿಸಲು ಕೈ
ಎತ್ತುವನೋ ಅವನಿಗೆ ಕೈ ಬಿದ್ದು ಹೋಗುತ್ತದೆ, ಕಾಲು ಸ್ವಾಧೀನವಿರುವುದಿಲ್ಲ, ತಲೆ
ನುಚ್ಚು ನೂರಾಗುತ್ತದೆ ಎಂದು ನಬೋಮಂಡಲವನ್ನು ಭೇದಿಸುವಂತೆ ಪ್ರಾರ್ಥನೆ ಮಾಡಿದರು.
ಫಲಿತಾಂಶ ಎಲ್ಲರಿಗೂ ತಿಳಿದ ವಿಷಯ. ಬಹು ದೇವರುಗಳು ನಾಮಾವಶೇಷವಾದವು. ಹಲವು ವಿಗ್ರಹಗಳು
ಭಿನ್ನವಾದವು.
ಪ್ರಾರ್ಥನೆ ವ್ಯರ್ಥ ಎಂದು ನಾನು ಹೇಳುವುದಿಲ್ಲ. ಆದರೆ ಅದನ್ನು ಜನ ಹೇಗೆ
ಬಳಿಸಿಕೊಳ್ಳುತ್ತಿದ್ದಾರೆ ಎಂಬುದೇ ಶೋಚನೀಯ. ಪ್ರಾರ್ಥನೆ ಮಾನಸಿಕ ಸ್ವಾಸ್ಥಕ್ಕೆ
ಪುಷ್ಟಿಕೊಟ್ಟು ಈ ಪರಿಸರದ ನಿಗೂಢತೆಯ ಬಗ್ಗೆ ತಿಳಿದಿಕೊಳ್ಳಲು ಸಹಕಾರಿಯಾಗಬಲ್ಲದು.
ಪ್ರಾರ್ಥನೆ ಮಾಡುವುದಕ್ಕೆ ಪ್ರಶಾಂತ ವಾತಾವರಣ ಬಹುಮುಖ್ಯ. ಆಗಲೇ ಏಕಾಗ್ರತೆ ಬರಲು
ಸಾಧ್ಯ. ಘಂಟೆ ಜಾಗಟೆಗಳಿಂದ, ಅಬ್ಬರ ಘೋಷಣೆಗಳಿಂದ, ಘಂಟಾಘೋಷವಾಗಿ ಮಂತ್ರಗಳನ್ನು
ಹೇಳುವುದರಿಂದ ಶಾಂತಿ ಸಿಗುವುದಿಲ್ಲ; ಆಯಾಸವಾಗಬಹುದು ಅಷ್ಟೆ. ಹಾಗೆಯೇ ಹಣ ಖರ್ಚು
ಮಾಡಿಸುವ ಪ್ರಾರ್ಥನೆ ಪೂಜಾದಿಗಳಿಗೆ ಅರ್ಥವೂ ಇಲ್ಲ ಪರಮಾರ್ಥವೂ ಇಲ್ಲ.
ಇದ್ದಕಡೆಯೇ ಮನಶುದ್ಧಿಗಾಗಿ ಪ್ರಾರ್ಥನೆ ಮಾಡಬಹುದು. ಪ್ರಾರ್ಥನೆಗಾಗಿ ಯಾವ
ದೇವರನ್ನೂ ದೇವಸ್ಥಾನಗಳನ್ನೂ ಹುಡಿಕಿಕೊಂಡು ಹೋಗಬೇಕಾಗಿಲ್ಲ. ರಮಣ ಮಹರ್ಷಿಗಳಾಗಲೀ,
ಅರವಿಂದ ಘೋಷರಾಗಲಿ ಎಂದೂ ಪಾರಮಾರ್ಥಿಕ ಚಿಂತನೆಗೆ ಹಣ ಖರ್ಚು ಮಾಡಲಿಲ್ಲ. ಗಾಂಧೀಜಿ ಯಾವ ದೇವಸ್ಥಾನಕ್ಕೂ ಹೋಗಲಿಲ್ಲ. ತೀರ್ಥಯಾತ್ರೆ ಮಾಡಲಿಲ್ಲ. ಪುಣ್ಯಕ್ಷೇತ್ರಗಳಿಗೂ ಅವರಿಗೂ
ಬಹುದೂರ. ಅವರು ಎಂದೂ ತೆಂಗಿನಕಾಯಂತೂ ಒಡೆಸಲೇ ಇಲ್ಲ. ಆದರೆ ಆಧುನಿಕ ಮತ್ತು ನವ್ಯ
ಗಾಂಧೀಭಕ್ತರ ಆಚರಣೆಗಳು ತದ್ವಿರುದ್ಧ. ಮುಖ್ಯವಾಗಿ ಪ್ರಾರ್ಥನೆ ಪೂಜಾದಿಗಳು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ
ಅಳವಹಿಸಿಕೊಂಡು ಕಾರ್ಯಗತಮಾಡುವ ಸಾಧನಗಳಾಗಬೇಕು. ಅವೇ ಅಂತಿಮ ಧ್ಯೇಯಗಳಾಗ ಬಾರದು.
ಆದುದರಿಂದ ಪ್ರತಿಯೊಬ್ಬನೂ ದಯೆ, ಅನುಕಂಪ, ಸೇವಾ ಮನೋಭಾವ, ಸರಳ ಜೀವನ ಇವುಗಳನ್ನು
ಜೀವನದ ಮನೋಧರ್ಮಗಳನ್ನಾಗಿ ಮಾಡಿಕೊಂಡರೆ ವ್ಯಕ್ತಿಗೆ ಶಾಂತಿ ತೃಪ್ತಿ ಸಮಾಧಾನಗಳು
ಸಿಗುವುದರ ಜೊತೆಗೆ ಸಮಾಜಕಲ್ಯಾಣವೂ ಆಗುತ್ತದೆ. ಇದಕ್ಕಿಂತ ಹೆಚ್ಚಿನ ಪ್ರಾರ್ಥನೆಯಾಗಲೀ
ಪೂಜೆಯಾಗಲಿ ಅಥವಾ ಧರ್ಮವಾಗಲೀ ಯಾವುದೂ ಇಲ್ಲ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ