ನೋಡ್ತಿರೋರು

ಭಾನುವಾರ, ಅಕ್ಟೋಬರ್ 31, 2010

ಮ್ಯೆಸೂರು ಅರಮನೆ

ಮ್ಯೆಸೂರು ಅರಮನೆ ಒಂದು ಅಧ್ಬುತ ಕಥಾನಕ.........
ಕಣ್ಣ ಮುಂದೆಯೇ ಕಾಣುವ ಕೌತುಕ,
ಎಷ್ಟು ನೋಡಿದರೂ ತೀರದ ತವಕ,
ಅದೇ ಹೆಮ್ಮೆಯ ಕರ್ನಾಟಕ

ಇಲ್ಲಿ ಚಿಟುಕಿಸಿ ಮ್ಯೆಸೂರು ಅರಮನೆ

ಬುಧವಾರ, ಅಕ್ಟೋಬರ್ 6, 2010

ರಂಗೋಲಿ....... ಚಿತ್ತ-ಚಿತ್ತಾರಗಳ ನಡುವೆ - ಸಂಚಿಕೆ ೧


ತುಂಬಾ ದಿನಗಳಿಂದ ಬರೀಬೇಕು, ಬರೀಬೇಕು ಅಂತಾ ಕುಳಿತು ಪೆನ್ನು ಹಿಡಿದ್ರೆ ಹಾಳಾದ್ದು ಏನೇನೋ ಆಲೋಚನೆ ಕಣ್ ಮುಂದೆ ಬರೋದು, ಇವತ್ತು ಬರೀಲೇಬೇಕು, ಅಂತ ಬೆಳ್ಳಂಬೆಳ್ಳಗ್ಗೆ ಎದ್ದು, ಮೊದಲು ಪೋನ್ಗಳು ಸ್ವಿಚ್ ಆಫ್ ಮಾಡಿ ಕೂತೆ, ಮನೆ ಹೊರಗಡೆ ರಂಗೋಲಿ ರಂಗೋಲಿ............ ಅಂತ ಕೂಗ್ತಾಯಿರೋ ಸದ್ದು, ಚಿಕ್ಕಂದಿನಿಂದಲೂ ಈ ಸದ್ದು ಕೇಳಿದ್ದು ಮತ್ತೊಮ್ಮೆ, ನನ್ನ ಬಾಲ್ಯವನ್ನು ನೆನಪಿಸಿದ ಹಾಗೆ ಓಡೋಡಿ ಹೊರಗೆ ಬಂದೆ, ಮನೆಯ ಸುತ್ತಮುತ್ತಲಿನ ಕೆಲವರು ರಂಗೋಲಿ ವ್ಯಾಪಾರ ಮಾಡ್ತಿದ್ರು, ಸೇರಿಗೆ ೧೫ರೂಪಾಯಿ ಅಂತ ಆಕೆ, ಈ ಹೆಂಗಸರು ೧೦ರೂಪಾಯಿಗೆ ಒಂದು ಸೇರು ಕೊಡು ಅಂತ ವಾಗ್ವಾದ.

ನೆನಪಿದ್ದಂತೆ ಸೇರಿಗೆ ೧ರೂಪಾಯಿ ೧.೫೦ರೂಪಾಯಿತ್ತು. ನಿತ್ಯ ಜೀವನದ ದರ ಸಮರ, ಆರ್ಥಿಕ ಸಮತೋಲನ ಈ ರಂಗೋಲಿ ಹುಡುಗಿಯ ಮೇಲು ಬಿದ್ದಂಗಿದೆ ಅನ್ಕೊಂಡು, ಒಳಗೆ ಬರೋವಾಗ ಅಕಸ್ಮಾತ್ ಏನೋ ನೋಡಿದ ನೆನಪಾಗಿ ರಂಗೋಲಿ ಮಾರುವ ಹುಡುಗಿಯನ್ನೇ ದಿಟ್ಟಿಸಿ ನೋಡಿದೆ, ಎಲ್ಲೋ ನೋಡಿದ ನೆನಪು, ಗೊತ್ತಾಗ್ತಾಯಿಲ್ವೆಲ್ಲ, ಅಂತ ಅವಳ ಮುಖವನ್ನೇ ದಿಟ್ಟಿಸಿ ನೋಡ್ತಿದ್ದೆ. ಆಕೆ ಅಲ್ಲಿ ಚೌಕಾಸಿ ಮಾಡಿ ವ್ಯಾಪಾರ ಮುಗಿಸುವ ಧಾವಂತದಲ್ಲಿದ್ದಳು. ಈ ಹುಡುಗಿ ನನಗೆಲ್ಲೋ ಪರಿಚಯ ಇರಬಹುದಾ !!, ಇವಳನ್ನಾ ನೋಡಿದ್ದಿನಾ ಅಂತ ನನ್ನ ಸಮಸ್ತ ಗೆಳೆಯರ ಬಳಗವನ್ನೇ ಒಮ್ಮೆ ಮೆಲುಕು ಹಾಕಿದ್ದಾಯಿತು. ನೆನಪಾಗಲಿಲ್ಲ.

ಯೋಚನೆ ಬೆಳಿಗ್ಗೆಯ ನನ್ನ ಪ್ರಾತಕರ್ಮಗಳನ್ನು ಮರೆಸುವಂತಿತ್ತು. ಆಕೆ ನಮ್ಮ ಬೀದಿಯ ಕಡೆಯವರೆಗೂ ಹೋಗಿ ಒಂದ್ಯೆದು ನಿಮಿಷಕ್ಕೆ ವಾಪಸ್ ಬಂದು, ಅವಳನ್ನ ಕೇಳೇ ಬಿಡುವ ಅಂತ ನಿರ್ಧರಿಸಿ, ರೀ ಮೇಡಂ ಅಂದೆ, ಅರೆ!!! ಅರವಿಂದ ಅಲ್ವಾ ನೀವು ಅಂತಾ ಹುಡುಗಿ ನನ್ನ ಹತ್ರ ಬರ್ತಿದ್ಳು. ಈಗಂತೂ ನನ್ನ ನೆನಪಿನ ಶಕ್ತಿ ಕುಂದಿದೆ ಅನ್ನೋದು ಗ್ಯಾರೆಂಟಿ ಆಗೋಯ್ತು, ಏನಂತ ಹೇಳೋದು ಹು......... ಅಂದೆ. ನೀವಿಗ ಇಲ್ಲಿರೋದಾ ? ನಾನು ನಿಮ್ಮನ್ನ ಗುರುತು ಹಿಡಿತಿನಿ ಅಂತ ಅನ್ಕೊಂಡೆ ಇರಲಿಲ್ಲ ? ಅಪ್ಪ-ಅಮ್ಮ ಎಲ್ಲಾ ಹೇಗಿದ್ದಾರೆ ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಯಾವುದಕ್ಕೂ ಉತ್ತರಿಸಲಿ ಎಂಬ ಧಾವಂತ, ಜೊತೆಗೆ ಈಕೆ ಯಾರು ಎಂಬ ಮರೆವು ? ಎಲ್ಲಾ ಆರಾಮಾಗಿದ್ದಿವಿ, ಅಂತ ಹೇಳಿ ಜಾರಿಕೊಳ್ಳೋ ಪ್ರಯತ್ನ ಮಾಡಿದ್ರು, ಈಕೆ ಯಾರು ಎಂಬ ಸುಳಿವು ನೆನಪಾಗ್ಲಿಲ್ಲ.

ಧ್ಯೆರ್ಯಮಾಡಿ ಕೇಳೇ ಬಿಡೋಣ, ಅನ್ನಿಸಿ, ಕ್ಷಮಿಸಿ, ನಿಮ್ಮನ್ನ ನೋಡಿದ ನೆನಪು ಆದ್ರೆ ಯಾರು ಅಂತ ಗೊತ್ತಾಗ್ತಿಲ್ಲ, ಅಂದೆ ? ಒಂದು ಕ್ಷಣ ಅವಳು ಮುಗುಳು ನಗು ತಡೆಹಿಡಿದು, ನೆನಪಿಸ್ಕೊಳ್ಳೀ, ನೀವು ನನ್ನನ್ನ ಮರೆತಿರೋಲ್ಲ, ಆದ್ರೆ ನೀವು ಮರೀತಿರಾ ಅಂತ ಗೊತ್ತಿರಲಿಲ್ಲ. ಅಂದಾಗ ಬಟ್ಟೆಗೆ ಚಪ್ಪಲಿಸುತ್ತಿ ಹೊಡೆದಂತಾದ ಅನುಭವ, ಹೌದು ನಾನು ಸಾಮಾನ್ಯವಾಗಿ ಯಾರನ್ನು ಅಷ್ಟು ಮರೆತಿರೋಲ್ಲ, ಈಗ್ಯಾಕೆ ಹೀಗೆ ? ಅನ್ನಿಸಿ, ಇಲ್ಲಾರಿ ಗೊತ್ತಾಗಲಿಲ್ಲ,

ನಿಮಗೆ ಹುಳಿಸಾರು ಮಾಡಿಕೊಟ್ಟ ನಾನು ನನ್ನಮ್ಮ ಮರೆತೋಯ್ತಾ ಅಂದ್ಲು, ಹುಳಿಸಾರು ನನಗಿಷ್ಟ ಅಂತ ಈಕೆಗೆ ಹೇಗೆ ಗೊತ್ತಾಯ್ತು, ನಾನ್ಯಾವಾಗ ಈಕೆಯ ಮನೆಗೆ ಹೋಗಿದ್ದೆ ? ಇವರಮ್ಮ ನನಗೇಕೆ ಹುಳಿಸಾರು ಮಾಡಿಕೊಡಬೇಕು ? ಪ್ರಶ್ನೆಗಳಿಗೆಲ್ಲ ನನ್ನ ಮರೆವೇ ಉತ್ತರವೆಂಬಂತೇ ಪೆಚ್ಚಾಗಿ ನೋಡುತ್ತಿದ್ದೆ. ಇನ್ನು ಈ ಮರೆವು ಸುಬ್ಬನಿಗೆ ನೆನಪಿಸೋದು ಸಾಧ್ಯವಿಲ್ಲ ಅನ್ನಿಸಿ, ಆಕೆ ಅನಂತಪುರಕ್ಕೆ ನೀವು ಬಂದಿದ್ದು ನೆನಪಿಲ್ವಾ ಅಂದ್ಳು ? ತಕ್ಷಣ ನನ್ನ ಮೆದುಳಿನಲ್ಲಿ ಬಲ್ಬ್ ಹತ್ತಿ ಉರಿದಂತೆ ಹಾ........ ಬಂದಿದ್ದೇನೆ, ನನ್ನ ಗೆಳೆಯ ಶೇಖರ್ ಆಸ್ಪತ್ರೆಗೆ ಸೇರಿಸಿದಾಗ ಪಕ್ಕದ ಬೆಡ್ನಲ್ಲಿ ಮಲಗಿದ್ದ ಇವರಪ್ಪ ನೆನಪಾಯಿತು, ಹೋ ಸುನಂದ ತಾನೆ ನೀವು ಅಂದೆ! ಹು ಸದ್ಯ ನೆನಪಾಯಿತಲ್ಲಾ, ಅಂತ ಅವಳ ಮೂದಲಿಕೆ, ಹೇಗಿದ್ದೀರಾ,ನಿಮ್ಮ ಅಪ್ಪ-ಅಮ್ಮ ಹೇಗಿದ್ದಾರೆ ? ಅಪ್ಪನ ಆರೋಗ್ಯ ಸರಿ ಹೋಯ್ತಾ ? ಅಮ್ಮ ಈಗ ಎಲ್ಲಿ ? ಎಂಬ ಒಂದಷ್ಟು ಪ್ರಶ್ನೆಗಳು ನನ್ನಿಂದ. ಆಕೆಯನ್ನು ಮನೆಗೆ ಬರ ಹೇಳಿ ಅಮ್ಮನಿಗೆ ಆಕೆಯ ಪರಿಚಯ ಮಾಡಿಕೊಟ್ಟು ನನ್ನ ಹಳೆ ಪ್ರಶ್ನೆಗಳನ್ನೇ ಮತ್ತೊಮ್ಮೆ ಕೇಳಿದೆ.

ಅಪ್ಪ ತೀರಿ ಹೋದ್ರು, ಅಮ್ಮ ನಾನು ಈಗ ರಂಗೋಲಿ ವ್ಯಾಪಾರ ಮಾಡ್ಕೊಂಡು ಬೆಂಗಳೂರಿಗೆ ಬಂದು ೨ ವರ್ಷವಾಯ್ತು. ಯಾವತ್ತೋ ಒಂದಿನ ನೀವೆಲ್ಲಾ ಸಿಗಬಹುದು ಬೆಂಗಳೂರಿನಲ್ಲಿ ಅನ್ಕೊಂಡಿದ್ದೆ, ನನಗಂತೂ ಬಹಳ ಖುಷಿಯಾಯ್ತು, ಅನ್ನೋ ಅವಳ ಮಾತಿನಲ್ಲಿ ಹಿಂದೆ ನೋಡಿದ್ದ ಮತ್ತೆನೋ ಮುಚ್ಚಿಡ್ತಿದ್ದಾಳೆ, ಅನ್ನಿಸ್ತು, ಆಕೆ ಮೊದಲಿನಂತೆ ಸಹಜ ನಗು, ಗೆಲುವು ಇಲ್ಲ, ಯಾಕೆ ಸುನಂದ ಮೊದಲಿನಂತೆ ನೀವು ಈಗಿಲ್ಲ, ಏನೋ ಯೋಚಿಸ್ತಿರೋ ಹಾಗಿದೆ, ಹಾಗೇನು ಇಲ್ಲ, ನೀವೆಲ್ಲಾ ಅವತ್ತು ನಮ್ಮ ಮನೆಗೆ ಬಂದಾಗ ನನಗೇನೋ ಬಹಳ ಖುಷಿಯಾಗಿತ್ತು, ಆದ್ರೆ ಅವತ್ತಿನ ದಿನದ ನಂತರ ನಡೆದ ಘಟನೆಗಳು ತುಂಬಾ ನೋವುಂಟು ಮಾಡಿತ್ತು, ತುಂಬಾ ನೊಂದಿದ್ದಾಳೆ ಅನ್ನಿಸಿ, ಏನಾಯ್ತು ಸುನಂದ, ನನ್ನತ್ರನೂ ಹೇಳಾಬಾರ್ದಾ ಸಾಧ್ಯವಾದ್ರೆ ಪರಿಹಾರ ಮಾಡೋಣ ಹೇಳಿ, ಹಾಗೆಲ್ಲ ನೋವನ್ನ ಮನಸ್ಸಿನಲ್ಲೇ ಹಿಡಿದಿಡಬಾರದು. ನಾನು ನಿಮ್ಮನ್ನ ಅಕಾಲಿಕವಾಗಿ ಮರೆತಿದ್ದೆ ಹೌದು, ಆದ್ರೆ ನಿಮಗೆ ಸಹಕರಿಸುತ್ತೇನೆ ಎಂಬ ವಾಗ್ದಾನ ನೀಡಿದ್ದಾಯಿತು,

ಅರವಿಂದ್, ನೀವೆಲ್ಲ ಬಹುಶಃ ೧೯೯೯ ರ ಏಪ್ರಿಲ್ ತಿಂಗಳಲ್ಲಿ ಅನಂತಪುರದಲ್ಲಿದ್ದರೆಂಬ ನೆನಪು. ಹ್ಯೆದರಾಬಾದಿಗೆ ಹೊರಡ್ತಿದ್ರಿ ಅಲ್ವಾ. ನಿಮ್ಮ ಗೆಳೆಯ ಶೇಖರನನ್ನ ಆಸ್ಪತ್ರೆಯಿಂದ ಬೆಂಗಳೂರಿಗೆ ಕರೆತಂದ ವಾರಕ್ಕೆ ನಮ್ಮಪ್ಪನೂ ಮನೆಗೆ ವಾಪಸ್ ಬಂದ್ರು, ನನಗಾಗ ಗಂಡು ನೋಡೋಕೆ ಶುರು ಮಾಡಿದ್ರು, ನಾನು ಪಿಯುಸಿ ತನಕ ಓದಿದ್ದೆನಾದ್ದರಿಂದ, ಓದಿದ ಹುಡುಗನನ್ನೇ ಮದುವೆಯಾಗಬೇಕು, ಅನ್ನೋ ಆಸೆ, ಜೊತೆಗೆ ಆ ಹುಡುಗ ಸೆಟಲ್ ಆಗಿದ್ರೆ, ನನ್ನ ತಂದೆ ತಾಯಿಯನ್ನು ನನ್ನೊಂದಿಗೆ ಇರಿಸಿಕೊಳ್ಳುವ ಆಲೋಚನೆ, ಅಮ್ಮನಿಗೆ ಓದಿದ ಹುಡುಗನಾದ್ರೆ ಮಾತ್ರ ಮದುವೆಯಾಗೋದು, ಅವನು ನಮ್ಮೂರಿನವನೇ ಆಗಬೇಕೆಂದೇನಿಲ್ಲ. ಎಂಬ ಒಂದಿಷ್ಟು ಶರತ್ತುಗಳನ್ನು ಹೇಳಿದೆ. ಅಮ್ಮ ತಮ್ಮ ಪರಿಚಯವಿದ್ದ ಬಂಧುಗಳಿಗೆ ಸ್ನೇಹಿತರಿಗೆ ನನಗೆ ಮದುವೆಗೆ ವರ ನೋಡ್ತಿರೋ ವಿಷ್ಯ ಹೇಳ್ತಿದ್ರು. ಹಾಗೆ ನನ್ನ ಪರಿಚಿತರಿಂದ ಅದೇ ಊರಿನಿಂದ ಕೆಲವು ಹುಡುಗರೂ ಮನೆಗೆ ಬಂದುಹೋದರು. ಆದರೆ ನಂಗೆ ಇಷ್ಟ ಆಗೋಂತಾ ಕ್ವಾಲಿಟಿಸ್ ಅವರಲ್ಲಿ ಇರಲಿಲ್ಲ. ಈ ಮಧ್ಯೆ ನಮ್ಮ ಊರಿಗೆ ಹೊಸದಾಗಿ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಶುರುವಾಯಿತು. ಹಟಹಿಡಿದು ಕಂಪ್ಯೂಟರ್ ಕಲಿತರೆ ಏನಾದ್ರೂ ಮುಂದೆ ಉಪಯೋಗ ಬರಬಹುದೆಂದು ದಿನವೂ ಅಮ್ಮ-ಅಪ್ಪನ ಮುಂದೆ ದುಂಬಾಲು ಬಿದ್ದೆ, ಅಂತೂ ಇಂತೂ ಕಂಪ್ಯೂಟರ್ ಕಲಿಯೋಕೆ ಒಪ್ಪಿಗೆ ಸಿಕ್ಕಿ, ಸಂಜೆ ತರಗತಿಗೆ ಸೇರಿದ್ದಾಯಿತು.

ಬಹುಶಃ ಇದು ನನ್ನ ಜೀವನದಲ್ಲಿ ನಾ ಮಾಡಿದ ದೊಡ್ಡ ತಪ್ಪು ಅನ್ಸುತ್ತೆ, ಕಂಪ್ಯೂಟರ್ ಕಲಿತ ಹಮ್ಮು ಜೊತೆಗೆ ಒಂದಿಷ್ಟು ತಲೆಗೆ ಹೋಗಿ, ಆದಷ್ಟು ಬೇಗ ಒಂದು ನೌಕರಿ ಹುಡುಕುವ ಆಲೋಚನೆ, ಈ ಮೂರ್ನ್ನಾಲ್ಕು ತಿಂಗಳಲ್ಲಿ ಬಹಳ ಜನ ಹುಡುಗರನ್ನ ನೋಡೋ ಕಾರ್ಯಕ್ರಮವಾದರೂ ನಾನು ಯಾರನ್ನು ಒಪ್ಪಿಕೊಳ್ಳಲೇ ಇಲ್ಲ, ಇದರ ನಡುವೆ ನಮ್ಮ ಇನ್ಸ್ಟಿಟ್ಯೂಟಿಗೆ ಹ್ಯೆದರಾಬಾದಿನಲ್ಲಿನ ಒಂದು ಕಂಪೆನಿಗೆ ಕಂಪ್ಯೂಟರ್ ಆಪರೇಟರ್ಗಳು ಬೇಕಾಗಿದ್ದಾರೆ, ಎಂದು ಸಂಬಳ ತಿಂಗಳಿಗೆ ೭ ಸಾವಿರ, ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆಯಿದೆ. ಎಂದು ಇನ್ಸಿಟ್ಯೂಟಿನ ಹೆಡ್ ಹೇಳಿದರು, ಅದಕ್ಕೆ ಮೊದಲು ಮುಂದಿನ ಶನಿವಾರ ನಿಮ್ಮೆಲ್ಲರನ್ನೂ ಇಲ್ಲೇ ಇಂಟರ್ವ್ಯೂ ತೆಗೆದುಕೊಳ್ಳುತ್ತಾರೆ, ಬೆಳಿಗ್ಗೆ ಸರಿಯಾಗಿ ೧೦ಕ್ಕೆ ಎಲ್ಲರೂ ಇಲ್ಲಿ ಬಂದಿರುವುದೆಂದು ಹೇಳಿದರು. ಅದರಂತೆ ೨೦ ಜನ ಇಂಟರ್ವ್ಯೂಗೆ ತಯಾರಾಗಿ ಬಂದೆವು, ಮೊದಲು ಅವರು ಎಲ್ಲರನ್ನೂ ಒಂದು ರೂಮಿನಲ್ಲಿ ಕುಳಿತುಕೊಳ್ಳಲಿಕ್ಕೆ ಹೇಳಿ, ದೂರದಿಂದಲೇ ಪ್ರತಿಯೊಬ್ಬರನ್ನು ಗಮನಿಸಿ, ನಾನು, ವಂದನಾ, ಸುಖನ್ಯ, ರಾಧಾ, ಗೀತಾ, ಮಮ್ತಾಜ್, ಮೆಹುರೂಬಾಳನ್ನು ಮತ್ತು ಆನಂದನನ್ನು ಕರೆದರು, ನಮಗೆ ಎಲ್ಲಿಲ್ಲದ ಅತ್ಯುತ್ಸಾಹ, ಅವರು ಕೇಳಿದ್ದು ಕೆಲವೇ ಪ್ರಶ್ನೆ ನಿಮ್ಮೂರು ಯಾವುದು ? ಮತ್ತು ನಿಮ್ಮ ಮನೆಯಲ್ಲಿ ಯಾರ್ಯಾರು ಇದ್ದಾರೆ ಮತ್ತು ಏನು ಕೆಲಸ ಮಾಡುತ್ತಿದ್ದಾರೆ? ಎಲ್ಲರೂ ಏನು ಓದಿದ್ದಾರೆ ? ಎಲ್ಲರೂ ನಮ್ಮ ಯೋಗ್ಯಾನುತಾಸಾರ ಹೇಳಿದೆವು, ನಂತರ ಅವರು ನೀವು ಸದ್ಯಕ್ಕೆ ಅಲ್ಲಿ ಆರು ತಿಂಗಳ ಕಾಲ ಟ್ರ್ಯೆನಿಂಗಿನಲ್ಲಿ ಇರುತ್ತೀರಿ. ಮತ್ತು ನಿಮಗೆ ಆ ಆರು ತಿಂಗಳ ಸಂಬಳವನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಮತ್ತು ನಿಮ್ಮ ಖರ್ಚುಗಳನ್ನು ನಾವೇ ನೋಡಿಕೊಳ್ಳುತ್ತೇವೆ. ಇದೆಲ್ಲದಕ್ಕೆ ಒಪ್ಪಿಗೆಯಾದರೆ ಬುಧವಾರ ನೀವುಗಳೆಲ್ಲರೂ ನನ್ನೊಂದಿಗೆ ಹೊರಡಬೇಕು. ನಿಮ್ಮ ಅಭಿಪ್ರಾಯವನ್ನು ನನಗೆ ಸೋಮವಾರದೊಳಗೆ ತಿಳಿಸಬೇಕೆಂದು ಹೇಳಿದರು.

ನನಗಂತೂ ಅರವಿಂದ್ ಪ್ರಪಂಚವನ್ನೇ ಗೆದ್ದ ಅನುಭವ, ಅಪ್ಪ-ಅಮ್ಮನನ್ನು ಹೇಗಾದರೂ ಮಾಡಿ ಒಪ್ಪಿಸಿಬಿಡಬೇಕು, ಇನ್ಮುಂದೆ ನಮ್ಮ ಜೀವನ ಹಸನಾಗಿರುತ್ತದೆ. ನಾನು ಒಂದಷ್ಟು ವರ್ಷ ಕೆಲ್ಸ ಮಾಡಿ, ಒಳ್ಳೆಯ ಹುಡುಗನನ್ನು ಮದುವೆಯಾಗಬೇಕು........ ಇನ್ನು ಏನೇನೋ ಆಲೋಚನೆ, ಅಂತೂ ಅಪ್ಪ-ಅಮ್ಮನನ್ನು ಒಪ್ಪಿಸುವ ಶತಪ್ರಯತ್ನ ಸಫಲವಾಯಿತು.ಅಂದು ಬುಧವಾರ ನಾವೆಲ್ಲ ಅವರೇ ತಂದಿದ್ದ ಟಾಟ ಸುಮೋನಲ್ಲಿ ಹ್ಯೆದರಾಬಾದಿಗೆ ಹೊರಟದ್ದಾಯಿತು................

ಹ್ಯೆದರಾಬಾದಿನಂತಹ ದೊಡ್ಡ ಸಿಟಿಯನ್ನು ನನ್ನ ಜೀವಮಾನದಲ್ಲೂ ನೋಡದ ಅನುಭವ, ನನ್ನ ಕಲ್ಪನೆಗಳನ್ನು ಮೀರಿದ ಸ್ಥಳ, ಇಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನ ಸಾಗರ, ದೊಡ್ಡ ದೊಡ್ಡ ಬಿಲ್ಡಿಂಗಗಳು, ಅಬ್ಬಾ ನಿಜಕ್ಕೂ ನಾನು ಸಕ್ಕತ್ ಖುಷಿಯಿಂದಿದ್ದೆ. ಮೊದಲ ದಿನ ಸಂಜೆ ನಮ್ಮೆಲ್ಲರನ್ನು ಹ್ಯೆದರಾಬಾದಿನ ಚಾರ್ಮಿನಾರ್, ಪೇಟೆ ಬೀದಿಗಳಲ್ಲಿ ಸುತ್ತಾಡಿಸಿದರು. ಮತ್ತು ಎಲ್ಲೆಲ್ಲಿ ಜನಸಂದಣಿಯಿರುತ್ತದೆ. ಯಾವಾಗ ಜನ ಹೆಚ್ಚು ಈ ಸ್ಥಳಗಳಿಗೆ ಬರುತ್ತಾರೆ, ಅಲ್ಲಿಂದ ನಾವಿಳಿದುಕೊಂಡಿದ್ದ ಸ್ಥಳ ಎಷ್ಟು ದೂರ ಎಲ್ಲಾ ವಿಷಯವನ್ನು ತಿಳಿಸಿದರು. ರಾತ್ರಿ ಅಲ್ಲೇ ಒಂದು ಹೋಟೆಲಿನಲ್ಲಿ ಊಟಕ್ಕೂ ಕರೆದುಕೊಂಡು ಹೋದರು. ರಾತ್ರಿ ೧೦.೩೦ಕ್ಕೆ ಕೊಠಡಿಗೆ ಬಂದ ನಾವು ಮಲಗಿಕೊಳ್ಳುವ ತಯಾರಿಯಲ್ಲಿದ್ದೆವು.

ನಮ್ಮ ಜೊತೆ ಒಬ್ಬಳು ಹೆಂಗಸು ಬಂದು ಮಲಗಿದಳು, ಸುಮಾರು ೫೫ ರಿಂದ ೬೦ ವರ್ಷದ ಹೆಂಗಸು, ಹಣೆಗೆ ದೊಡ್ಡ ಕುಂಕುಮ, ನಿಡಿದಾದ ಸೀರೆ, ಹೆಸರು ಸೌಭಾಗ್ಯಮ್ಮ ಅಂತೆ ಮೂಲ ರಾಯಚೂರಿನವಳು ಎಂದಷ್ಟೆ ಗೊತ್ತಾಯಿತು. ಮೊದಲು ಎಲ್ಲರನ್ನು ತೆಲುಗು ಭಾಷೆಯಲ್ಲೇ ಪರಿಚಯ ಮಾಡಿಕೊಂಡಳು, ನಂತರ ನಾನು ಮೂಲತಃ ಕನ್ನಡದವಳು ಎಂದು ತಿಳಿದು ನನ್ನ ಜೊತೆಗೆ ಮಾತ್ರ ಕನ್ನಡದಲ್ಲಿ ಮಾತಾನಾಡಿಸಿದಳು. ನಾನು ಅವಳೊಂದಿಗೆ ಹೆಚ್ಚಿನ ಸಲುಗೆಯಿಂದ ಮಾತಾಡಿದಕ್ಕೋ ಏನೋ, ನನ್ನನ್ನೇ ಮೊದಲು ರೂಮಿನೊಳಗೆ ಬರೋಕೆ ಹೇಳಿ ಬಟ್ಟೆಗಳನ್ನೆಲ್ಲ ಬಿಚ್ಚುವಂತೆ ಹೇಳಿದಳು. ನಾನು ಆಗಂತೂ ಥರಗುಟ್ಟಿ ಹೋದೆ, ಯಾಕೆ ? ಬಟ್ಟೆ ಬಿಚ್ಚಬೇಕು, ನಾನು ಬಿಚ್ಚುವುದಿಲ್ಲ, ಎಂದು ಗಟ್ಟಿಯಾಗಿ ಹೇಳಿದಳು, ಅದುವರೆಗೂ ಶಾಂತ ರೀತಿಯಲ್ಲಿದ್ದ ಸೌಭಾಗ್ಯಮ್ಮ "ಮುಚ್ಚುಕೊಂಡು ಬಿಚ್ಚೆ ಲೌಡಿ, ನಿನಗಿಲ್ಲೇನು, ಹಾಯಾಗಿ ತಿಂದು ಕುಡಿದು ಮಜಾ ಮಾಡೋಕಾ ಕರ್ಕೊಂಡು ಬಂದಿರೋದು, ನಾನು ಹೇಳಿದಂತೆ ಕೇಳಿದರೆ ಇಲ್ಲಿ ಆರಾಮಾಗಿ ಇರ್ತೀಯಾ, ಇಲ್ಲಾಂದ್ರೆ ಸಾಯಿಸಿಬಿಡ್ತಿನಿ" ನಾಳೆಯಿಂದ ನೀವೆಲ್ಲಾ ಕೆಲಸ ಶುರು ಮಾಡಬೇಕು ಅಂದ್ಳು. ನಾನು ಮಾಡೊ ಕಂಪ್ಯೂಟರ್ ಆಪರೇಟರ್ ಕೆಲಸಕ್ಕೂ, ನಿನ್ಮುಂದೆ ಬಟ್ಟೆ ಬಿಚ್ಚೋಕು ಸಂಬಂಧ ಏನು ? ನಾನು ಬಿಚ್ಚೊಲ್ಲ ಅಂತ ಹಟ ಹಿಡಿದೆ, ಕಪಾಳಕ್ಕೆ ಜೋರಾಗಿ ಹೊಡೆದು ಬಟ್ಟೆ ಬಿಚ್ಚೋಕೆ ಅವಳೇ ಪ್ರಯತ್ನಿಸಿದಳು, ಆಗಂತೂ ನನಗೆ ತುಂಬಾ ಸಂಕಟ ಜೊತೆಗೆ ಅಮ್ಮ-ಅಪ್ಪನ ನೆನಪು ಜಾಸ್ತಿಯಾಗಿ ಅಳೋಕೆ ಶುರುವಿಟ್ಟೆ. ನನ್ನ ಆರ್ಭಟವನ್ನ ಕೇಳಿ ಇನ್ನು ಸಿಟ್ಟಾದ ಆಕೆ ಮನಸ್ಸಿಗೆ ಬಂದಂತೆ ಬಡಿಯಲಾರಂಭಿಸಿದಳು. ಅವಳ ಏಟಿಗೆ ನಾನು ಸುಸ್ತಾಗಿ ಜ್ನಾನ ತಪ್ಪಿ ಬಿದ್ದಂತಾಗಿತ್ತು, ಮತ್ತೆ ನೀರು ಹಾಕಿ ಎಬ್ಬಿಸಿ, ಅಸಹ್ಯವಾಗಿ ನನ್ನನ್ನು ನೋಡಲಾರಂಭಿಸಿದಳು. ನನಗೆ ಕ್ಷಣ ಕ್ಷಣಕ್ಕೂ ಅಮ್ಮನದೇ ನೆನಪು. ನಾನು ಋತುಮತಿಯಾದಾಗಲೂ ಅಮ್ಮ ಹೀಗೆ ಮಾಡಿದವಳಲ್ಲ, ಅವಳೇ ನನ್ನ ಎಲ್ಲವನ್ನೂ ಕಲಿಸಿಕೊಟ್ಟಳಾದಳು, ಒಮ್ಮೆಯೂ ಹೀಗೆ ಅಸಹ್ಯವಾಗಿ ಹೇಳಿದವಳಲ್ಲ, ನನಗೆ ಸೌಭಾಗ್ಯಮ್ಮನ ಆರ್ಭಟವನ್ನು ತಡೆಯುವ ಶಕ್ತಿಯೇ ಇಲ್ಲದಾಯಿತು. ನಂತರ ಯಾರಿಗೋ ಪೋನು ಮಾಡಿ ನನ್ನ ದೇಹದ ವಿವರವನ್ನು ಹೇಳಿದಳು ಅನ್ಸುತ್ತೆ, ನಂತರ ನನ್ನ ಜೊತೆಗಿದ್ದ ಹುಡುಗೀರಿಗೂ ಇದೇ ಅನುಭವವಾಯ್ತು.

ಎಚ್ಚರವಾದಾಗ ನಾನು ಯಾವುದೋ ಹಾಸಿಗೆಯಲ್ಲಿ ಮಲಗಿದ್ದೆ, ಅದು ರಾತ್ರಿ ನಾನಿದ್ದ ರೂಮಲ್ಲ, ಗಾಬರಿಯಿಂದೆದ್ದು ಸುತ್ತಲೂ ನೋಡಿದೆ, ಮಬ್ಬುಗತ್ತಲು ಹೊರಗೆ ವಾಹನಗಳು ಓಡಾಡುವ ಸದ್ದಷ್ಟೆ ಕೇಳುತ್ತಿದೆ ಬಾಗಿಲನ್ನು ಜೋರಾಗಿ ಬಡಿದು ಬಡಿದು ಸುಸ್ತಾಯಿತು, ಕುಡಿಯಲೂ ನೀರು ಇಲ್ಲ, ಸಂಜೆಗೆ ಯಾರೋ ಬಾಗಿಲು ತೆಗೆಯುವ ಸದ್ದು, ನಾನು ತಕ್ಷಣ ಎದ್ದು ಬಾಗಿಲ ಬಳಿ ಓಡಿ ಹೋದೆ, ಸೌಭಾಗ್ಯಮ್ಮ, ನನ್ನನ್ನು ಕರ್ಕೊಂಡು ಬಂದ ಆ ವ್ಯಕ್ತಿ ಮತ್ತು ಒಂದಿಬ್ಬರು ಗಂಡಸರು ಒಳಗೆ ಬಂದರು, ನಾನು ಅವರನ್ನು ಬಿಡಿಸಿಕೊಂಡು ಓಡಿಹೋಗಲಿಕ್ಕೆ ಪ್ರಯತ್ನಿಸಿದೆ, ಆಗಲಿಲ್ಲ ಅರವಿಂದ್. ಅವರು ನನ್ನನ್ನ ಭದ್ರವಾಗಿ ಹಿಡಿದು "ಗಲಾಟೆ ಮಾಡಬೇಡ, ನೀನು ನಾವು ಹೇಳಿದಂತೆ ಕೇಳಿದರೆ ನಿನಗೆ ಕೇಳಿದಷ್ಟೂ ಹಣ ಮತ್ತು ನಿಮ್ಮ ಅಪ್ಪ-ಅಮ್ಮನಿಗೂ ಹಣ ಕಳಿಸುವ ವ್ಯವಸ್ಥೆ ಮಾಡುತ್ತೇವೆ. ಇಲ್ಲದಿದ್ದರೆ ನಿನ್ನನ್ನು ಇಲ್ಲೇ ಸಾಯಿಸಿ, ನಿಮ್ಮಮ್ಮ ಅಪ್ಪನಿಗೂ ಸಾಯಿಸುತ್ತೇವೆ ಅಂತ ಹೆದರಿಸಿದರು. ನಾನು ಅಮಾಯಕಳಾಗಿ ಮತ್ತದೇ ಪ್ರಶ್ನೆಕೇಳಿದೆ ನನಗೆ ಕಂಪ್ಯೂಟರ್ ಕೆಲ್ಸ ಕೊಡ್ಸಿ ಸಾಕು, ನಾನು ಇಲ್ಲೇ ಇರ್ತೇನೆ, ನೀವೆಲ್ಲ ನನಗೆ ಹೊಡೆಯಬೇಡಿ, ನನ್ನ ಅಪ್ಪ-ಅಮ್ಮನ ಹತ್ರ ಕಳಿಸ್ಕೊಡಿ ಒಂದ್ಸಲ, ನಾನು ಅವರತ್ರ ಮಾತಾಡಬೇಕು ಎಂದೆಲ್ಲಾ ಮನಸ್ಸಿಗೆ ತೋಚಿದ್ದೆಲ್ಲಾ ಗೋಗರೆದೆ. ಕಲ್ಲು ಹೃದಯದವರು ಕೇಳಬೇಕಲ್ಲ, ಎಲ್ಲದಕ್ಕೂ ಒಪ್ಪಲು ಮುಂಚೆ ನೀನು ನಾವು ಹೇಳಿದ ಕೆಲ್ಸ ಮಾಡಿದರೆ ಮಾತ್ರ ಎಂಬ ಶರತ್ತು ಅವರದು. ಪ್ರತಿ ರಾತ್ರಿ ಅವರು ಹೇಳುವ ವ್ಯಕ್ತಿಯ ಜೊತೆಗೆ ನಾನು ಸುಖವನ್ನು ಹಂಚಬೇಕಂತೆ...........

ಇದ್ಯಾವುದಕ್ಕೂ ನಾನು ಕಿವಿಗೊಡದೆ ವಾರಗಟ್ಟಲೆ ಅವರ ಪ್ರತಿದಿನ ಅವರು ಕೊಡುವ ಹಿಂಸೆಯನ್ನು ಸಹಿಸಿ ಸಾಕಾಯಿತು, ಊಟವಿಲ್ಲದೆ, ಸರಿಯಾದ ನಿದ್ದೆಯಿಲ್ಲದೆ ನಾನು ಡಿಹ್ಯೆಡ್ರೆಷನಿಗೆ ಹೋಗಿ ಆಸ್ಪತ್ರೆಗೆ ಸೇರಿಸುವ ಪರಿಸ್ಥಿತಿ ಬಂದಿತ್ತು. ಅಂತಾ ಸಮಯದಲ್ಲೂ ಅವರು ನನಗೆ ಯಾವುದೇ ಡಾಕ್ಟರನ್ನು ಭೇಟಿಮಾಡುವ ಅವಕಾಶವನ್ನೇ ಕೊಡಲಿಲ್ಲ. ಇನ್ನು ನನ್ನ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ತಿಳಿದ ಅವರೆಲ್ಲ ಒಬ್ಬ ಡಾಕ್ಟರನ್ನು ನಾನಿರುವ ಜಾಗಕ್ಕೆ ಕರೆದುಕೊಂಡು ಬಂದು, ನನ್ನ ಆರೋಗ್ಯ ಸುಧಾರಿಸುವ ಪ್ರಯತ್ನದಲ್ಲಿದ್ದರು. ನಾನು ಡಾಕ್ಟರ್ ನನ್ನ ಬಳಿ ಬಂದು ಚಿಕಿತ್ಸೆ ನೀಡುವುದಕ್ಕೂ ಒಪ್ಪದೆ ಒಂದೇ ಸಮನೆ ಕಿರಿಚಾಡತೊಡಗಿದೆ. ಚಟಾರ್................... ಎಂದು ಕಪಾಳಕ್ಕೆ ಒದೆ ಬಿತ್ತು, ಅಷ್ಟೆ ಗೊತ್ತಾದದ್ದು, ಹೊಡೆದದ್ದು ಯಾರೆಂದು ನೋಡುವುದರೊಳಗೆ ನನಗೆ ಜ್ಣಾನ ತಪ್ಪಿದಂತಾಗಿತ್ತು. ಆಮೇಲೆನಾಯಿತೋ ಗೊತ್ತಿಲ್ಲ. ಎಚ್ಚರವಾದಾಗ ನನಗೆ ಕ್ಯೆಕಾಲುಗಳನ್ನು ಕಟ್ಟಿ ಹಾಕಿದ್ದರು. ಮತ್ತು ಮೊದಲಿನ ಸುಸ್ತು ಸ್ವಲ್ಪ ಕಡಿಮೆಯಾಗಿತ್ತು. ಪಕ್ಕದಲ್ಲೇ ಸೌಭಾಗ್ಯಮ್ಮ ಕುಳಿತಿದ್ದಳು. ಅವಳ ನೋಡುತ್ತಿದ್ದಂತೆ ನನಗೆ ರೋಷ ಉಕ್ಕಿಬಂದರು, ಇನ್ನು ನನ್ನಿಂದೇನು ಹೋರಾಡಲು ಸಾಧ್ಯವಿಲ್ಲ ಎನಿಸಿ, ಸುಮ್ಮನೆ ಮಲಗಿದ್ದೆ.

ಸೌಭಾಗ್ಯಮ್ಮ ಒಮ್ಮೊಮ್ಮೆ ಬಹಳ ಸಾದ್ವಿಯಂತೆ ನನ್ನ ಬಳಿ ಬಂದು ನಿನ್ನ ಆರೋಗ್ಯ ಸುಧಾರಿಸಿಕೋ, ನೀನು ಹಟ ಹಿಡಿದರೆ ಆರೋಗ್ಯ ಸುಧಾರಿಸುವುದಾದರೂ ಹೇಗೆ ? ಮೊದಲು ಹುಷಾರಾಗು ಎಂದೆಲ್ಲ ಥೇಟ್ ನಮ್ಮಮ್ಮನಂತೆ ಹೇಳುವಾಗಲಂತೂ ಅಪ್ಪ-ಅಮ್ಮನ ನೆನಪು ತುಂಬಾ ಬರುತ್ತಿತ್ತು.

ಮುಂದುವರೆಯುವುದು............

ಬುಧವಾರ, ಆಗಸ್ಟ್ 18, 2010

ಚೀನಾದ ಪುರಾತನ ಬೌದ್ದ ದೇವಸ್ಥಾನ

ಬೆಂಗಳೂರಿನ ತೂಗು ಸೇತುವೆ ನೋಡಿರಬಹುದು, ಹಾಗೇ ಚೀನಾದಲ್ಲಿ ತೂಗು ದೇವಸ್ಥಾನ ನೋಡಿ ಇಲ್ಲಿದೆ. ಬೌದ್ಧರಿಗೊಂದು ಯಾತ್ರಾಸ್ಥಳ, ಇದು ಮೌಂಟ್ ಹೆಂಗ್ ಸ್ಥಳದ ಹತ್ತಿರ ಇದ್ದು, ಶಾಂಕ್ಸಿ ನಗರದಲ್ಲಿ ಕಂಡುಬರುತ್ತದೆ. ಡಾಟಾಂಗ್ ನಗರದಿಂದ ೬೫ ಕಿ.ಮೀ. ದೂರ. ಇದೊಂದು ಮುಖ್ಯ ಪ್ರವಾಸಿ ತಾಣ ಹಾಗೂ ಹಳೆಯ ದೇವಸ್ಥಾನ. ಇದು ಸುಮಾರು ೧೫೦೦ ವರ್ಷಗಳ ಹಿಂದೆ ನಿರ್ಮಿಸಿದ್ದಂತೆ. 






























ಸೋಮವಾರ, ಆಗಸ್ಟ್ 16, 2010

ಬದಲಾಗಬೇಕು......,, ಇನ್ನು ಬದಲಾಗಲೇಬೇಕು

ಬದಲಾಗಬೇಕು.......
ಇನ್ನು ಬದಲಾಗಬೇಕು......,,
ಇನ್ನು ಬದಲಾಗಲೇಬೇಕು.........

ಉಳಿಗಾಲವಿಲ್ಲ, ಬದಲಾಗದಿದ್ದೊಡೆ,
ಉಳಿಯಲೇಬೇಕು, ಬರಗಾಲವಿದ್ದೊಡೆ,
ಬಂದಿಹುದು ಬರಗಾಲ ನಾಯಕನಿಲ್ಲದೆ,
ಬಂದಿಹುದು ಬರಗಾಲ ಹಿಡಿತವಿಲ್ಲದೆ,
ಬಂದಿಹುದು ಬರಗಾಲ ನೀತಿನಿಯಮಾವಳಿಯ ಪಾಲಿಸದೆ,
ಬಂದಿಹುದು ಬರಗಾಲ ನ್ಯಾಯ ನೀತಿಗೆ,

ಉಳಿಗಾಲವಿಲ್ಲ ಬದಲಾಗದಿದ್ದೊಡೆ,
ಉಳಿಯಲೇಬೇಕು, ಅಧಿಕಾರ ಗದ್ದುಗೆ,
ಗದ್ದುಗೆ ಬೇಕು...... ಮೂರು ವರ್ಷಗಳಿಗೆ,
ಗದ್ದುಗೆ ಬೇಕು.... ಇನ್ನಷ್ಟು ಅಕ್ರಮಗಳಿಗೆ,
ಗದ್ದುಗೆ ಬೇಕು, ಗಣಿ ಹಗರಣಗಳಿಗೆ,
ಗದ್ದುಗೆ ಬೇಕು, ಅಭಿವೃದ್ಧಿಯ ಮಂತ್ರಕೆ,

ಉಳಿಗಾಲವಿಲ್ಲ ಬದಲಾಗದಿದ್ದೊಡೆ,
ಉಳಿಯಲೇಬೇಕು, ಗೋಹತ್ಯೆ ತಡೆದೊಡೆ,
ಗೋಹತ್ಯೆ ತಡೆಯೋಕೆ....... ಕ್ಯೆಕತ್ತಿರಿಸುವುದಕೆ,
ಗೋಹತ್ಯೆ ತಡೆಯೋಕೆ........ ಕ್ಯೆಎತ್ತೋಕೆ,
ಗೋಹತ್ಯೆಯೊಂದೇ ಇರೋದು ತಡೆಯೋಕೆ,
ಪ್ರಾಣಿ ಹಿಂಸೆ ನಿಲ್ಲಿಸಲಿ ಸಾಧ್ಯವಿದ್ದೊಡೆ,


ಬದಲಾಗಬೇಕು ಮಂತ್ರಿ ಕುತಂತ್ರಿಗಳೆಲ್ಲ,
ಬರಗಾಲಕ್ಕಲ್ಲ, ಗದ್ದುಗೆಯ ಹಂಬಲಕ್ಕಲ್ಲ,
ಗೋಹತ್ಯೆಗೊಂದೆ ಬೇಕಿಲ್ಲ,
ಜನರ ನಾಡಿಮಿಡಿತವ ಅರಿಯಲು,
ಎಲ್ಲರ ಬೇಕು-ಬೇಡಗಳ ತಿಳಿಯಲು..
ಬದಲಾಗಬೇಕು ಮುಖ್ಯಮಂತ್ರಿಗಳೇ
ಯಕ್ಷಿತ್: ನೀವು ಹೇಳಿದ ಮಾತಿಗೆ......
ಆಗದಿದ್ದರೆ ಬದಲಾಗಲೇಬೇಕು ..........ಮುಖ್ಯಮಂತ್ರಿ,

ಶುಕ್ರವಾರ, ಆಗಸ್ಟ್ 6, 2010

ಗುರುತಿನ ಚೀಟಿ ಪ್ರಾಧಿಕಾರ UIDAI


ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಜೂನ್ ೨೫ರ ೨೦೦೯ ರಂದು ಲೋಕಸಭೆಯಲ್ಲಿ ಅಸ್ತಿತ್ವಕ್ಕೆ ಬಂದ ಗುರುತಿನ ಚೀಟಿ ವಿತರಣಾ ಯೋಜನೆ, ಮುಂದಿನ ವರ್ಷಗಳಲ್ಲಿ ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಗುರುತಿನ ಚೀಟಿಯನ್ನು ನೀಡುವ ಯೋಜನೆ ಹಮ್ಮಿಕೊಂಡಿತು. ಈ ಯೋಜನೆಗೆ ಇನ್ಫೋಸಿಸ್ ಸಂಸ್ಥೆಯ ಪ್ರಧಾನರಾದ ನಂದನ್ ನಿಲಕೇಣಿಯವರನ್ನು ಯೋಜನೆಯ ಮುಖ್ಯಸ್ಥರನ್ನಾಗಿ ಗುರುತಿಸಿ ಪ್ರತಿ ನಾಗರೀಕನಿಗೂ ಗುರುತಿನ ಚೀಟಿಯನ್ನು ಕ್ರಮಬದ್ಧವಾಗಿ ನೀಡುವ ಜವಾಬ್ದಾರಿಯನ್ನು ನೀಡಿತು. ಸರ್ಕಾರ ಯೋಜನೆಗೆ ಅಂಗೀಕಾರ ನೀಡಿದ್ದು, ಶಿಸ್ತು ಮತ್ತು ಬದ್ದತೆಗೆ ಹೆಚ್ಚಿನ ಮಹತ್ವ ನೀಡಿದ್ದು, ಬ್ಯೆಯೋಮೆಟ್ರಿಕ್ ಆಧಾರದಲ್ಲಿ ಈ ಸೇವೆಯನ್ನು ಪ್ರಾರಂಭಿಸಲು ಉತ್ಸುಕವಾಗಿದೆ.

ಗುರುವಾರ, ಆಗಸ್ಟ್ 5, 2010

ರಕ್ತದಾನ - ಮಹಾದಾನ

ಪ್ರತಿ ವರ್ಷದ ಜೂನ್ ೧೪ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸುತ್ತಾರೆ. ನಿಮ್ಮ ಸುತ್ತ-ಮುತ್ತಲಲ್ಲೇ ಎಷ್ಟೊ ಜನಕ್ಕೆ ರಕ್ತದ ಅವಶ್ಯಕತೆ ಇರುತ್ತದೆ, ಹಾದಿ ಬೀದಿಯಲ್ಲಿ ದಿನಕ್ಕೊಬ್ಬರಾದರೂ ರಸ್ತೆ ಅಫಘಾತ, ಮತ್ಯಾವುದೋ ತೊಂದರೆಯಿಂದ ಬಳಲುತ್ತಾ ಇರುವವರಿಗೆ ರಕ್ತದ ಅವಶ್ಯಕತೆ ಇರುತ್ತದೆ,  ರಕ್ತದ ಅವಶ್ಯಕತೆ ಇರುವವರಿಗೆ ನಮ್ಮಿಂದ -ನಿಮ್ಮಿಂದ ಸಹಾಯವಾದರೆ ಅದಕ್ಕೆ ಸಿಗುವ ತುಂಬು ಹೃದಯದ ಅಭಿನಂದನೆಯೇ ವರ್ಣಾತೀತ.



ಬುಧವಾರ, ಆಗಸ್ಟ್ 4, 2010

ದೇವರು, ಧರ್ಮ ಮತ್ತವನ ಜಾತಿ. - ಸರಣಿ ೨

ಕ್ರಿ.ಪೂ. ೧೦೦೦
ದೇವರು ಹುಟ್ಟಿದ್ದು ಹೇಗೆ ?

ಹಳೆಶಿಲಾಯುಗದ ಕಾಲದಲ್ಲಿ ಮನುಷ್ಯ ತನ್ನ ಹೊಟ್ಟೆಪಾಡಿಗಾಗಿ ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದದ್ದು, ಪಠ್ಯಪುಸ್ತಕಗಳಲ್ಲಿ ಓದಿಯೇ ಇರುತ್ತೀರಿ. ಅದು ಅವನ ಅಂದಿನ ಅವಶ್ಯಕತೆ. ಆದರೆ ಮನುಷ್ಯನಿಗೆ ತನ್ನ ಸುತ್ತಮುತ್ತಲಿನ ನಿಸರ್ಗದ ವ್ಯೆಪರೀತ್ಯಗಳು, ಒಮ್ಮೊಮ್ಮೆ ವಿಚಿತ್ರವಾಗಿ ಉಂಟಾಗುವ ಗುಡುಗು, ಮಿಂಚು, ಭೂಕಂಪ ಅವನನ್ನು ಗೊಂದಲಕ್ಕೀಡು ಮಾಡುತ್ತಿತ್ತೇನೋ ? ಈ ವಿಚಿತ್ರಗಳ ಅನುಭವದಿಂದ ಮನುಷ್ಯ ತನ್ನನ್ನು ಮೀರಿ ಮತ್ತೊಬ್ಬ ಶಕ್ತಿವಂತನಿರಬಹುದು. ಆ ವ್ಯಕ್ತಿ ಇವೆಲ್ಲವನ್ನು ಮಾಡುತ್ತಿರಬಹುದೇನೋ ಎಂಬ ಭ್ರಾಂತಿಗೆ ಬಂದ ? ನಿಸರ್ಗದ ದೃಷ್ಠಿಯಲ್ಲಿ ಮನುಷ್ಯ ಕಂಡ ಪ್ರತಿ ಬದಲಾವಣೆಗಳನ್ನು ನಂತರದ ದಿನಗಳಲ್ಲಿ ದೇವರು ಎಂಬ ಹೆಸರಿನಲ್ಲಿ ಕರೆದಿರಬಹುದು.

ಇಂಥ ದೇವರುಗಳನ್ನು ಕಾಲಕ್ರಮೇಣ ಪ್ರತಿ ಪಂಗಡದಲ್ಲೂ ಅವರ ಕಲ್ಪನೆಯ ಅನುಸಾರ ಮೂರ್ತರೂಪ ಕೊಟ್ಟು, ಆ ಗುಂಪಿನ ನಾಯಕ ತನಗೆ ಏನು ತೋಚುತ್ತಿತ್ತೋ ಹಾಗೆ ಪೂಜೆಯನ್ನೋ ಅಥವಾ ಮತ್ತಿನ್ಯಾವುದೋ ರೀತಿ ಮನವಿಯನ್ನೋ ಮಾಡುತ್ತಿದ್ದುದು ಇನ್ನಿತರ ಸದಸ್ಯರುಗಳಿಗೆ ಅದೇ ಸರಿ ಮತ್ತು ನಾಯಕನ ಮಾತಿನಂತೆ ಮತ್ತವನು ಮಾಡುತ್ತಿದ್ದ ಪೂಜೆಯೆಂಬ ಹೆಸರಿನ ಪ್ರಕಾರವೇ ದೇವರನ್ನು ಒಲಿಸುವುದು ಎಂಬ ಭಾವನೆ ಬಂದಿರಬಹುದು. ಹೀಗೆ ನಡೆಸುವ ಪೂಜೆ-ಪುನಸ್ಕಾರಗಳ ನಂತರ ಅವರ ಕಷ್ಟಗಳು ಆಕಸ್ಮಿಕವಾಗಿ ನಿವಾರಣೆಯಾದಾಗ ದೇವರು ನಮ್ಮ ಇಷ್ಟಾರ್ಥವನ್ನು ಸಿದ್ಧಿಸುವ ವ್ಯಕ್ತಿ ಮತ್ತು ನಾವು ಆ ಕಾಣದ ವ್ಯಕ್ತಿಗೆ ಯಾವತ್ತೂ ಅಭಾರಿಯಾಗಿರಬೇಕೆನ್ನಿಸಿತೇನೋ ?,

 .  ಪ್ರಕೃತಿಯಲ್ಲಿನ ಪ್ರತಿ ಕ್ಷಣದ ಬದಲಾವಣೆಗಳು ಕೆಲವು ಕಾಲದ ನಂತರ ನಿಲ್ಲುತ್ತವೆ, ಮತ್ತೆ ಮತ್ತೆ ಪುನರಾವರ್ತನೆಗಳಾಗುತ್ತವೆ. ಇಂಥ ಪುನಾರವರ್ತನೆಗಳು ಭೂಮಿಯ ಮೇಲ್ಮ್ಯೆ ಲಕ್ಷಣ, ಭೌಗೋಳಿಕ ವ್ಯತ್ಯಾಸ, ವಾತಾವರಣದ ಏರು ಪೇರುಗಳಿಂದ ಸಾಧ್ಯ. ಕನಿಷ್ಠ ವಿಚಾರಗಳನ್ನು ಯೋಚಿಸಲು ಇಷ್ಟಪಡದ ಜನ ತಮ್ಮ ಗುಂಪಿನ ನಾಯಕನ ಅಣತಿಯಂತೆ ತಮ್ಮದೇ ಆದ ವಿಧಾನಗಳನ್ನು, ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವು ಮಾರ್ಪಾಡುಗಳನ್ನು ಕಾಲಕ್ರಮೇಣ ಮಾಡಿಕೊಂಡದ್ದು ಇರಬಹುದು. ಆಗಿನ ಶಿಲಾಯುಗದ ಜನರ ಅನೇಕ ಗುಂಪುಗಳು ಇಂಥದೇ ಪರಿಸ್ಥಿತಿಯನ್ನು ಎದುರಿಸಿ ಅವರದೇ ಆದ ನೀತಿ ಕಟ್ಟುಪಾಡುಗಳನ್ನು ಆಚರಣೆಗೆ ತಂದಿದ್ದಿರಬಹುದು.

ಮನಶಾಸ್ತ್ರಜ್ಣರು ಹೇಳುವಂತೆ ಎಲ್ಲ ಮನುಷ್ಯರು ಕಾಲಕ್ಕೆ ತಕ್ಕಂತೆ ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಅವು ಕಾಲದಿಂದ ಕಾಲಕ್ಕೆ ಬದಲಾದರೂ, ಅವುಗಳಲ್ಲಿನ ಬದಲಾವಣೆಗಳು ಮುಂದಿನ ತಲೆಮಾರಿನಿಂದ ಆಗಿರುತ್ತವೆ. ದೇವರು ಎಂಬ ಭಾವ ಮನುಷ್ಯನ ಕೆಲವು ವಿಚಿತ್ರ ಯೋಚನೆಗಳಿಗೆ ಅನುಕೂಲವು ಹಾಗೂ ಅನಾನುಕೂಲವು ಆಗಿದ್ದಿರಬಹುದು. ಅವನ ಅನುಕೂಲಗಳನ್ನು ದೇವರ ಕೃಪೆಯೆಂದು, ಅವನ ಅನಾನುಕೂಲವನ್ನು ಶಾಪವೆಂದು ಭ್ರಮಿಸಿ, ಅದರಂತೆ ನಡೆದುಬಂದಿರಬಹುದು.

ಪ್ರದೇಶದಿಂದ ಪ್ರದೇಶಕ್ಕೆ ಮಾರ್ಪಾಡುಗಳಾದಾಗ ಮೊದಲಿಗೆ ದೇವರ ಪರಿಕಲ್ಪನೆಯನ್ನು ಪ್ರತಿಗುಂಪುಗಳು ನಂಬಿದ್ದ ರೀತಿಯೇ ಶ್ರೇಷ್ಠ ಎಂಬುವ, ಹಾಗೂ ಅದರಂತೆ ನಡೆದುಕೊಳ್ಳುವ ಹಂಬಲ ಹೆಚ್ಚಾದದ್ದಿರಬಹುದು. ನಲವತ್ತು ಜನರಿರುವ ಒಂದು ಗುಂಪಿನ ನಾಯಕ ತನ್ನ ಮನಸ್ಸಿಚ್ಚೆಯಂತೆ ಯಾವುದನ್ನು ಆಚರಿಸುವನೋ ಅದೇ ಆ ಗುಂಪಿನ ಸದಸ್ಯರ ಆಚರಣೆಗಳಾಗಿರಬಹುದು. ನಂತರದ ದಿನಗಳಲ್ಲಿ ಅವನ ಗುಂಪಿನ ಮಕ್ಕಳು ಮೊಮ್ಮಕ್ಕಳು, ಮರಿ ಮಕ್ಕಳು ಆ ಕ್ರಮವನ್ನೇ ಆಚರಿಸುತ್ತಾ ಅದೇ ನಮ್ಮ ಕುಲದೇವರು ಮತ್ತು ಆ ಜಗವೇ ನಮ್ಮ ಜಾತಿ ಎಂಬ ಅಭಿಮತಕ್ಕೆ ಬಂದಿದ್ದಿರಬಹುದು. ಕಲ್ಲಿನಿಂದ ಕಲ್ಲನ್ನು ಹೊಡೆದಾಗ ಉಂಟಾಗುತ್ತಿದ್ದ ಬೆಳಕು ಬೆಂಕಿಯಾಗಿ, ನಂತರದ ದಿನಗಳಲ್ಲಿ ಮನುಷ್ಯನಿಗೆ ಅದರ ಬಳಕೆಯು ತಾನು ತಿನ್ನಿವ ಆಹಾರಕ್ಕೆ ಅಗತ್ಯವಾಗಿ, ಆಹಾರಗಳನ್ನು ಬೇಯಿಸಿ ತಿಂದರೆ ರುಚಿ ಹೆಚ್ಚೆಂಬುದನ್ನು ತಿಳಿದು, ಬೇಯಿಸಿ ತಿನ್ನುವ ಆಹಾರ ಶುದ್ಧ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎಂಬ ಚಿಂತನೆ, ದೇವರ ಹುಟ್ಟಿಗೂ ತಳುಕು ಹಾಕಿ ನೋಡಬಹುದು.

ಮುಂದುವರೆಯುವುದು.................

ಮಂಗಳವಾರ, ಆಗಸ್ಟ್ 3, 2010

ಯುವ ಜನರೇ ಆತ್ಮಹತ್ಯೆಗೆ ಮುನ್ನ ಯೋಚಿಸಿ ?

ಬದುಕಿನ ಕಟ್ಟಕಡೆಯ ಸಂಧರ್ಭವಾದರು, ಯಾರಿಗೂ ತಿಳಿಯದ ನಿಗೂಢ, ಇಂದಿನ ಯುವ ಜನರ ಮನದಲ್ಲಿ ಸಾವು ಎಂಬುದು ಆಟಿಕೆಯ ವಸ್ತುವೇ ? ಸಾವನ್ನು ಅಷ್ಟು ಸುಲಭವಾಗಿ ಆಸ್ವಾದಿಸುವುದಾದರೆ ಎಷ್ಟೋ ಸಮಸ್ಯೆಗಳಿಗೆ ಜೀವವೇ ಇರುತ್ತಿರಲಿಲ್ಲ. ಇಂದಿನ ಧಾವಂತದದ ಯುಗದಲ್ಲಿ ಎಲ್ಲೆಲ್ಲೂ ಪ್ಯೆಪೋಟಿ, ಎಲ್ಲರನ್ನು ಹಿಂದುಕ್ಕುವಂತ ನಾಗಾಲೋಟದ ಮನಸ್ಸಿಗೆ ಅಷ್ಟು ಸುಲಭವಾಗಿ ಸಾವು ಬಂತಂದರೆ ಅಥವಾ ಸಾವಿನ ನಿರ್ಣಯವನ್ನು ಕ್ಯೆಗೆತ್ತುಕೊಂಡರೆ ಅದಕ್ಕಿಂತಲೂ ಹೇಡಿತನ ಮತ್ತೊಂದಿಲ್ಲ.

ಅಸಲಿಗೆ ನಮ್ಮ ಯುವ ಜನರಲ್ಲಿ ಸಮಸ್ಯೆಗಳ ಪರಿಹಾರವನ್ನು ಹುಡುಕಿಕೊಳ್ಳುವ ತಾಳ್ಮೆಯೇ ಇಲ್ಲದಾಗಿದೆಯೇ ? ಅಥವಾ ಪ್ಯೆಪೋಟಿ ಜಗತ್ತಿಗೆ ಅವರನ್ನು ಒಡ್ಡಿಕೊಳ್ಳುವ ಛಲವೇ ಮರೆತು ಹೋಗಿದೆಯೇ ? ಸಮಸ್ಯೆ ಕೌಟುಂಬಿಕದ್ದೆ ಇರಲಿ, ಅಥವಾ ನೌಕರಿಯದೆ ಇರಲಿ, ಪ್ರತಿ ಸಮಸ್ಯೆಗಳು ಸೃಷ್ಟಿಗಳಿಗೂ ಕಾರಣ ಪರಿಹಾರವಿಲ್ಲದೆ ಇಲ್ಲ. ಈಗ್ಗೆ ಕೆಲವು ವರುಷಗಳಿಂದ ಸ್ವಾಭಾವಿಕ ಸಾವಿನ ಸಂಖ್ಯೆ ಇಳಿಮುಖವಾದರು, ಅಸ್ವಾಭಾವಿಕವಾಗಿ ಸಾವನ್ನು ಬರಮಾಡಿಕೊಳ್ಳುವ ಯುವ ಜನರಲ್ಲಿ ಮಾನಸಿಕ ಸ್ಥ್ಯೇರ್ಯ, ಸಮಸ್ಯೆಗಳ ಸ್ವರೂಪದಲ್ಲಿರುವ ಗೋಜಲುಗಳು, ಅರ್ಥಮಾಡಿಕೊಳ್ಳುವದರಲ್ಲಿ ಸಂಯಮವೇ ಕಳೆದು ಹೋಗಿದೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕದೆ ಯಾರನ್ನೋ ಹೊಣೆಯನ್ನಾಗಿ ಮಾಡುವ, ಸಾವನ್ನೇ ಆಯ್ಕೆ ಮಾಡಿಕೊಳ್ಳುವ ಯೋಚನೆಯಲ್ಲಿರುವ, ಮತ್ತು ಅದರ ಕೂತೂಹಲಕ್ಕೆ ಪ್ರಯತ್ನಿಸುವ ಮಿತ್ರರೇ, ಒಮ್ಮೆ ನಿಮ್ಮ ಸಮಸ್ಯೆಯಾ ಬಗ್ಗೆ ಚಿಂತನೆ ನಡೆಸಿ, ಸಾಧ್ಯವಾದರೆ ನಿಮ್ಮ ಆಪ್ತರೊಡನೆ ಒಮ್ಮೆ ಚರ್ಚಿಸಿ,

ನನ್ನ ಮಿತ್ರನೊಬ್ಬ ಕಳೆದ ವರುಷಗಳ ಹಿಂದೆ ಇದ್ದಕ್ಕಿದ್ದಂತೆ ನೇಣಿಗೆ ಶರಣಾದ, ಅವನ ಸಮಸ್ಯೆ ಕೇವಲ ದುಡ್ಡಿಗೆ ಸಂಭಂದಿಸಿದ್ದು, ತಂಗಿಯ ಮದುವೆಗೆ ಸಾಲ ಮಾಡಿದ್ದ ಜವಾಬ್ದಾರಿಯುತ ವ್ಯಕ್ತಿ, ಸಾಲ ತೀರಿಸಲಾಗದೆ ಸಾವನ್ನು ಬರಮಾಡಿಕೊಂಡಿದ್ದ. ಒಂದಿಬ್ಬರು ಗೆಳೆಯರಲ್ಲಿ ಸಣ್ಣ ಪುಟ್ಟ ಸಾಲ ಇತ್ತಾದರೂ ಅದ್ಯಾವುದು ಅವನ ಸಾವಿನಿಂದ ಪರಿಹಾರವಾಗುವ ಸಮಸ್ಯೆಯಲ್ಲ. ತನ್ನ ೧೮ನೇ ವಯಸ್ಸಿಗೆ ಸಾಲ ಮಾಡಿ ಆಟೋ ಖರೀದಿಸಿದ ಹುಡುಗ, ಸಮಯದ ಪರಿವೆಯೇಯಿಲ್ಲದೆ ದುಡಿದು ಎರಡು ವರುಷಗಳಲ್ಲೇ ಸಾಲ ತೀರಿಸಿದವನು, ತನ್ನ ತಂಗಿಯ ಮದುವೆಗೆ ಮಾಡಿದ ಸಾಲ ತೀರಿಸದೆ ಹೋದಾನೆ, ಅದು ಕೇವಲ ಒಂದೂವರೆ ಲಕ್ಷ. ಆತನ ಪರಿಸ್ಥಿತಿಗೆ ಅದು ದೊಡ್ಡದೇ ಇರಬಹುದು, ಸಾವಿನಿಂದ ಅದು ಪರಿಹಾರವಾಗಲಿಲ್ಲ. ಈಗ ಅವನ ಸಾಲವೂ ಬೆಳೆದಿದೆ. ಅವನ ತಾಯಿಗೆ ವಯಸ್ಸಾಗಿದ್ದರೂ ದುಡಿದು ಸಾಲ ತೀರಿಸುವ ಹಂಬಲ. ಆದರೆ ಆರೋಗ್ಯ ಕ್ಯೆಕೊಟ್ಟಿದೆಯಾದರೂ, ಒಬ್ಬರಲ್ಲಿ ಅವಲಂಬನೆಯಾಗದ ತುಡಿತ. ಆಕೆಯೇ ಮಗನಂತೆ ಸಾವಿಗೆ ಶರಣಾಗಿದ್ದಾರೆ ?

ನನ್ನ ಮತ್ತೊಬ್ಬ ಗೆಳೆಯ ಶೇಖರ್ ಈ ದಿನ ಅವನು ಇಲ್ಲವಾದರೂ ಅವನ ಮಾನಸಿಕ ಸ್ಥ್ಯೇರ್ಯ, ಬದುಕಿನ ಹಂಬಲ ಎಂಥವರಿಗೂ ಉತ್ಸಾಹ ತರಿಸುವಂತದ್ದು. ಪದವಿಯ ಕೊನೆಯ ವರ್ಷದಲ್ಲಿ ನಮ್ಮೆಲ್ಲರ ಜೊತೆಗೆ ಪ್ರವಾಸಕ್ಕೆ ಹೊರಟ ಶೇಖರನಿಗೆ ಅದೇ ತನ್ನ ಜೀವನದ ಕಡೆಯ ಉಲ್ಲಾಸದ ಕ್ಷಣ ಎಂದು ಯಾರೂ ಎಣಿಸಿರಲಿಲ್ಲ. ಆಂಧ್ರಪ್ರದೇಶದ ಹ್ಯೆದರಾಬಾದಿಗೆ ಪ್ರವಾಸ ಹೊರಟ ನಾವೆಲ್ಲರೂ ಅನಂತಪುರದ ಸ್ಟೇಶನ್ ಬರುವ ಹೊತ್ತಿಗೆ ಟ್ರೇನ್ ಸಿಗ್ನಲ್ಗಾಗಿ ಅನಂತಪುರದಲ್ಲಿನ ಸಣ್ಣ ಸ್ಟೇಶನ್ ಬಳಿ ನಿಲ್ಲುತ್ತಿತ್ತು. ಬಾಗಿಲ ಬಳಿ ನಿಂತಿದ್ದ ಶೇಖರ್ ಒಮ್ಮೆಗೆ ಕಾಲುಜಾರಿತಷ್ಟೇ........... ಕೆಲವೇ ನಿಮಿಷಗಳಲ್ಲಿ ಟ್ರೇನಿನ ಅಡಿಯಲ್ಲಿ ಸಿಕ್ಕ ಅವನ ಎರಡು ಕ್ಯೆಗಳು ಮತ್ತು ಒಂದು ಕಾಲು ಅವನ ಪರಿವೆಯೇ ಇಲ್ಲದೆ ಜಜ್ಜಿ ಹೋಗಿತ್ತು, ಅದೃಷ್ಟವಶಾತ್ ಅವನ ತಲೆ ಟ್ರೇನಿನ ಕಂಬಿ ಮತ್ತು ಗೋಡೆಯ ಮಧ್ಯದಲ್ಲಿತ್ತು. ತಕ್ಷಣ ಟ್ರೇನಿನ ಚ್ಯೇನೆಳೆದು ಅವನನ್ನು ಉಳಿಸುವುದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದೆವು. ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲೇ ಕೆಲವು ದಿನಗಳು ಇದ್ದ. ನಂತರ ಪರಿಸ್ಥಿತಿ ಕ್ಯೆಮೀರಿದಾಗ ಬೆಂಗಳೂರಿನ ಸಂಜಯ್ ಗಾಂಧೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಹಲವು ಕಡೆ ಓಡಾಡಿದ್ದಾಯಿತು, ಡಾಕ್ಟರ್ಗಳ ಕಠಿಣ ಪರಿಶರಮದಲ್ಲೂ ಅವನ ಕಾಲು ಕ್ಯೆಗಳು ಮೊದಲಿನಂತೆ ಸಾಧ್ಯವಾಗದೆ ಅವನ ಎರಡು ಕ್ಯೆ ಹಾಗು ಒಂದು ಕಾಲನ್ನು ತೆಗೆಯಲೇ ಬೇಕಾದ ಪರಿಸ್ಥಿತಿಯಿತ್ತು. ಕೆಲವು ದಿನಗಳ ನಂತರ ಜ್ಞಾನ ಬಂದವನಿಗೆ ತನ್ನ ಕಾಲು ಕ್ಯೆಗಳಿಗೆ ಬ್ಯಾಂಡೇಜ್ ಸುತ್ತಿರುವಷ್ಟೇ ತಿಳಿಯುತ್ತಿತ್ತು. ಅವನ ಈ ಪರಿಸ್ಥಿತಿಯನ್ನು ಅವನಿಗೆ ಹೇಗೆ ಹೇಳುವುದು ಅನ್ನುವುದೇ ಅವನ ಕುಟುಂಬಕ್ಕೆ ಹಾಗು ನಮಗೆ ಅರ್ಥವಾಗಲಿಲ್ಲ. ಸುಮಾರು ಎರಡು ತಿಂಗಳು ಅವನಿಗೆ ವಿಷಯ ತಿಳಿಸುವ ಗೋಜಿಗೆ ಹೋಗಿರಲಿಲ್ಲ, ಅವನು ಏನನ್ನು ಕೇಳುತ್ತಿರಲಿಲ್ಲ, ಒಮ್ಮೆ ಹೀಗೆ ಮಾತಿನ ಭರದಲ್ಲಿ ಗೆಳೆಯನೊಬ್ಬ ಕ್ಯೆ ಕಾಲುಗಳನ್ನು ತೆಗೆಯುವ ವಿಷಯ ಮಾತನಾಡುತ್ತಿದ್ದಾಗ " ನನ್ನ ಪರಿಸ್ಥಿತಿಯು ಹಂಗೆ ಅಲ್ವಾ ಶಿವ " ಅಂದಾಗ ಮಾತ್ರ ದುಖದ ಕಟ್ಟೆ ಎಲ್ಲರನ್ನು ದೂಡಿ ಮುಂದೆ ಬಂದಿತ್ತು. ಹೆಚ್ಚು ಕಡಿಮೆ ಎಂಟು ತಿಂಗಳುಗಳೇ ಉರುಳಿದವು.

ನಂತರದ ಕೆಲವು ತಿಂಗಳಲ್ಲಿ ಅವನ ವ್ಯಕ್ತಿತ್ವದಲ್ಲಾದ ಬದಲಾವಣೆಗಳು ನಿಜಕ್ಕೂ ಊಹಿಸಲು ಸಾಧ್ಯವಿಲ್ಲ. ತನ್ನ ಎರಡು ಭುಜದ ಕೆಳಗೂ ಕೋಲುಗಳನ್ನು ಸಿಕ್ಕಿಸಿ, ಅವನು ನಡೆಯುತ್ತಿದ್ದರೆ ನಾವು ಅವನೊಂದಿಗೆ ಓಡುತ್ತಿದ್ದೆವು, ಬೀಳುತ್ತಾನೆ ಎಂಬ ಭಯದಿಂದಲ್ಲ, ಅವನ ನಡಿಗೆಯ ವೇಗ ಅಂತದ್ದು. ಎಂದಿಗೂ ಎಲ್ಲರೊಂದಿಗೆ ನಗುನಗುತ್ತಲೇ ಮತಾನಾದುತ್ತಿದ್ದ ಗೆಳೆಯನಿಗೆ ತನ್ನ ಎರಡು ಕ್ಯೆ ಮತ್ತು ಕಾಲಿಲ್ಲವೆಂಬ ವಿಚಾರ ಮರೆತು ಹೋದನೇನೋ ಎನ್ನುವಷ್ಟು, ಉತ್ಸಾಹ ಭರಿತನಾಗಿದ್ದ. ಒಂದು ವರ್ಷದಲ್ಲಿ ಅವನ ಲವಲವಿಕೆ, ವಿಚಾರಗಳು ಎಲ್ಲವೂ ಭಿನ್ನವಾಗಿದ್ದವು. ತನ್ನ ಈ ಸಮಸ್ಯೆಯಿಂದ ೪ ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ  ನನಗಿನ್ನೂ ನೀನು ಬೇಡ ಎಂದರು, ಅವನು ಯೋಚಿಸುತ್ತಿದ್ದ ರೀತಿ, ಸತ್ಯದೆದಗಿನ ಮಾತು ನಮ್ಮೆಲ್ಲರನ್ನೂ ಬಹಳ ಕಾಡುತ್ತಿತ್ತು.

ಇಂಥ ಉದಾಹರಣೆಗಳು ನಮ್ಮ ನಿಮ್ಮ ನಿತ್ಯ ಬದುಕಿನಲ್ಲಿ ಸಾವಿರಾರು ಬಂದು ಹೋಗುತ್ತವೆ, ಅವಕ್ಕೆ ಸಾವೊಂದೇ ಪರಿಹಾರವಾದರೆ, ನನ್ನ ಗೆಳೆಯನ ತಾಯಿ ಹಾಗು ಶೇಖರ್ ಎಂದೋ ಆತ್ಮಹತ್ಯೆಗೆ ಮುಂದಾಗುತ್ತಿದ್ದರು. ಸ್ನೇಹಿತರೆ ಇದಕ್ಕಿಂತಲೂ ಕ್ರೂರವೆ ನಿಮಗೊದಗಿರುವ ಸಮಸ್ಯೆ ?

ಸಾವನ್ನು ಕರೆಯುವ ಮುನ್ನು ಯೋಚಿಸಿ ನೋಡಿ. ನಿಮ್ಮ ಭವಿಷ್ಯ ನಿಮ್ಮ ಕ್ಯೆಯಲ್ಲೇ ಹೊರತು, ನಿಮ್ಮ ಪೋಷಕರದೋ ? ಸ್ನೇಹಿತರದೋ ಅಲ್ಲ ? ನಿಮ್ಮ ಜೀವನದ ಪ್ರತಿ ತಿರುವುಗಳಿಗೆ ನೀವೇ ಜವಾಬ್ದಾರರು.

ಗುರುವಾರ, ಜುಲೈ 15, 2010

ದೇವರು, ಧರ್ಮ ಮತ್ತವನ ಜಾತಿ. - ಸರಣಿ ೧

ದೇವರು ಎಂಬ ಪದ ಸಾರ್ವಜನಿಕವಾಗಿ ಒಮ್ಮೆ ಚರ್ಚೆಗೆ ಬಂದರೆ ಅಲ್ಲಿ ತನ್ನ ಪರಮ ಪ್ರಿಯ ದೇವರೇ ಶ್ರೇಷ್ಠ. ಮತ್ತೆಲ್ಲವೂ ನಿಕೃಷ್ಟ, ಎಂಬಂತೆ ವಾದ ಮಂಡಿಸುವ ಭಕ್ತ ಸಮೂಹ ಎಲ್ಲಿಲ್ಲ ಹೇಳಿ. ಅದರಲ್ಲೂ ವಾದಿಸುವವ ತಾನು ಪೂಜಿಸುವ ದೇವರು ಹೇಗೆಲ್ಲ ಶ್ರೇಷ್ಠ ಎಂಬುದನ್ನು ಸಾಬೀತುಪಡಿಸಲಿಕ್ಕೆ, ಆ ದೇವರ ಕುರಿತಾದ ಕಥೆಗಳು, ಉಪಮೆಗಳು, ಮತ್ತು ಆಧಾರಗಳು, ಮತ್ಯಾವುದೋ ಮಹಿಮೆ, ಅವತಾರಗಳ ಪಟ್ಟಿಯನ್ನೇ ಕೊಟ್ಟುಬಿಡುತ್ತಾನೆ. ನಿಜಕ್ಕೂ ದೇವರೇ ಕೇಳಿಸಿಕೊಂಡರು (ಇದ್ದಲ್ಲಿ) ಈ ಪರಿಯ ವಿಚಾರಗಳು ಅವನಿಗೂ ತಿಳಿದಿರುತ್ತದೋ ಇಲ್ಲವೋ, ಆದರೆ ಹಟಕ್ಕೆ ಬೀಳುವ ಭಕ್ತ ಅದನ್ನು ಹೇಗಾದರೂ ಸರಿಯೇ ಪ್ರಾಬಲ್ಯಕ್ಕೆ ಕಟ್ಟು ಬೀಳುವ ಹಾಗೆ ವಾದಿಸುತ್ತಾನೆ.

ಅಸಲಿಗೆ ದೇವರಿಗೂ ಧರ್ಮಕ್ಕೂ ವಾದಿಸುವ ವ್ಯಕ್ತಿಗೆ ಅಸಲಿಗೆ ಪ್ರತ್ಯಕ್ಷ ದೇವರೇ ಎದುರಿಗೆ ಬಂದರೂ ನಂಬುವುದಿಲ್ಲ, ಇಂತಹ ಪರಿಸ್ಥಿತಿಯಲ್ಲೂ ದೇವರೆಂಬ ದೇವರೇ ಏನು ಮಾಡಲಾಗದಿರುವಾಗ, ಇಲ್ಲ ಸಲ್ಲದ ವಾದ ವಿವಾದಗಳಲ್ಲಿ ತಲೆತೂರಿಸಿ ತನ್ನ ವಾದಶಕ್ತಿಯಿಂದಲೇ ಮತ್ತೊಬ್ಬನನ್ನು ಮರುಳು ಮಾಡುತ್ತೇನೆಂದು ನಿಂತವನಿಗೆ ಮತ್ತೆಲ್ಲವೂ ಗೌಣ್ಯ.

ಎಲ್ಲರೂ ದೇವರು!!!!!!!!!!! ದೇವರು!!!!!!!!!! ಎನ್ನುವ ಈ ದೇವರು ನಿಜಕ್ಕೂ ಯಾರು ? ಮತ್ತು ಯಾವುದು ?

ದೇವರು ಯಾರು ? ಎಂದರೆ (ಧರ್ಮಗಳ ಬಗ್ಗೆ ಮುಂದೆ ದಿನ ಚರ್ಚೆ ಮಾಡೋಣ) ಹಿಂದೂ ಎಂಬ ಹಣೆಪಟ್ಟಿಯಲ್ಲಿ ಬೆಳೆದವನು ಅಟ್ಟಿ ಲಕ್ಕಮ್ಮನಿಂದ ಹಿಡಿದು ಬ್ರಹ್ಮ, ವಿಷ್ಣು, ಮಹೇಶ್ವರಾದಿಗಳವರೆಗೂ ದೊಡ್ಡ ಪಟ್ಟಿಯನ್ನು ಕೊಡುತ್ತಾನೆ. ಇನ್ನು ಮುಸ್ಲಿಂ ಹಣೆಪಟ್ಟಿಯಡಿ ದೇವರುಗಳ ಸಂಖ್ಯೆ ಚಿಕ್ಕದಾದರೂ ಆತ ಯಾವುದನ್ನೂ ಬಿಡದೆ ತಿಳಿಸುತ್ತಾನೆ. ಇನ್ನು ಕ್ರ್ಯೆಸ್ತ, ಜ್ಯೆನ, ಬೌದ್ದ, ಇನ್ನಿತರ ಹಣೆಪಟ್ಟಿಯಡಿ ಬರುವ ಪ್ರಪಂಚದ ದೇವರುಗಳು ತಮ್ಮವೇ ದೇವರುಗಳ ಪ್ರವರ ನೀಡಿ, ಏನನ್ನೋ ಸಾಧಿಸಿಬಿಟ್ಟನೆಂಬಂತೆ ಒಮ್ಮೆ ಬೀಗುತ್ತಾರೆ.

ದೇವರು ಪರಿಕಲ್ಪನೆಯಲ್ಲಿ ಒಂಥರಾ ರಿಮೋಟ್ ಇದ್ದ ಹಾಗೆ, ಅವನ ಟಿವಿಯಲ್ಲಿ ಬರೋಬ್ಬರಿ ೬೦೦ ಕೋಟಿ ಹೆಚ್ಚು ಚಾನೆಲ್ಗಳು ಅಡಕ. ಹಾಗಿರುವ ದೇವರಿಗೆ ಭಕ್ತನ ಪ್ರತಿ ಹೆಜ್ಜೆಯೂ ಆಲೋಚನೆಗಳು ಮತ್ತವನ ನಡುವಳಿಕೆಗಳು, ಒಳ್ಳೆಯದು ಕೆಟ್ಟದ್ದು ಎಲ್ಲವೂ ತಿಳಿದಿರುವ ದೇವರಿಗೆ, ಈ ಉಪಮೆಗಳು ಯಾವತ್ತೂ ದೇವರ ಅಸ್ತಿತ್ವದಲ್ಲಿದ್ದಾನೆಂಬ ನಂಬಿಕೆಗಷ್ಟೆ ಅರ್ಹ. ನಿಜಕ್ಕೂ ದೇವರು ಎಂಬುದು ಇಂದಿನ ಬಹುಜನರ ಪ್ರಶ್ನಾರ್ಥಕ ಚಿಹ್ನೆ, ಇದರ ಉತ್ತರ ಬಿಡಿಸಲು ಹೋದ ಪ್ರತಿಯೋರ್ವನು ನಿರಾಶೆಯಿಂದ ಪ್ರಯತ್ನ ಬಿಟ್ಟಿರುತ್ತಾನೆ. ಹಾಗಂತ ಎಲ್ಲೂ ದೇವರಿಲ್ಲ ಎಂಬ ಮಾತಿಗೆ ಅವನ ವಿರೋಧ ಇದ್ದೇ ಇರುತ್ತದೆ.

ಮಂಗಳವಾರ, ಜೂನ್ 22, 2010

ಶುಕ್ರವಾರ, ಜೂನ್ 4, 2010

ಗೋವಿನ ಹಾಡು -ಧರಣಿ ಮಂಡಲ ಮಧ್ಯದೊಳಗೆ

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಲಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು

ಎಳೆಯ ಮಾವಿನ ಮರದ ಕೆಳಗೆ
ಕೊಳಲ್ನುದುತ ಗೊಲ್ಲ ಗೌಡನು
ಬಳಸಿನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗುರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು.

ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಮೊರೆದು ರೋಷದಿ ಗುಡುಗುತ ಹುಲಿ
ಭೋರಿಡುತ ಚಂಗನೆ ಜಿಗಿದು
ನೆಗೆಯಲು ಚೆದರಿ ಹೋದವು ಹಸುಗಳು
ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನ ಹುಲಿರಾಯನು

ಮೇಲೆ ಬಿದ್ದು ನಿನ್ನಲೀಗಲೇ
ಬಿಳಹೊಯ್ವೇನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಕ್ರೂರವ್ಯಾಘ್ರನು ಕೂಗಲು,

ಒಂದು ಬಿನ್ನಹ ಹುಲಿಯೇ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆ ನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೇ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆನೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆ ಕೊಟ್ಟು
ಕಂಡ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಅರ ಮೊಲೆಯನು ಕುಡಿಯಲಮ್ಮ
ಅರ ಬಳಿಯಲಿ ಮಲಗಲಮ್ಮ
ಅರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯೋಡ ಹುಟ್ಟಗಳಿರ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ ಕರುವನು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡ ವ್ಯಾಗ್ರನೆ ನಿನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮತ ಕೇಳಿ
ಕಣ್ಣನಿರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತನು
ಮುನ್ನ ತದಿಂತೆಂಡಿತು

ಎನ್ನ ವಂಶದ ಗೋವ್ಗಲೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ.

ವಸಂತ್ ಶೆಟ್ಟಿ ಹಾಗೂ ಅನಿಲ್ ರಮೇಶರ ಸಹಕಾರದಲ್ಲಿ :-)


ಅರವಿಂದ್

ಸೋಮವಾರ, ಮಾರ್ಚ್ 29, 2010

ಭಾವಗೀತೆ - ಜಿ. ಎಸ್. ಶಿವರುದ್ರಪ್ಪ

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲುಮಣ್ಣುಗಳ ಗುಡಿಯೊಳಗೆ,
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೇ,

ಎಲ್ಲಿದೆ ಬಂಧನ, ಎಲ್ಲಿದೆ ನಂದನ
ಎಲ್ಲಾ ಇವೆ ಈ ನಮ್ಮೊಳಗೇ,
ಒಳಗಿನ ತಿಳಿಯನು ಕಲಕದೆ
ಇದ್ದರೆ ಅಮೃತದ ಸವಿಯು ನಾಲಿಗೆಗೆ,

ಹತ್ತಿರವಿದ್ದರೂ ದೂರ ನಿಲ್ಲುವೆವು,
ನಮ್ಮ ಅಹಮ್ಮಿನ ಕೋಟೆಯಲಿ,
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲಿ
- ಜಿ. ಎಸ್. ಶಿವರುದ್ರಪ್ಪ

ಶನಿವಾರ, ಮಾರ್ಚ್ 27, 2010

ಕನ್ನಡ ಭಾವಗೀತೆಗಳು

ಭಾವಗೀತೆಗಳು
ಕನ್ನಡ ಭಾವಗೀತೆಗಳನ್ನು ಇಳಿಸಿಕೊಳ್ಳಿ.

ಭಾವಗೀತೆಗಳು
ಭಾವಗೀತೆಗಳು
ಭಾವಗೀತೆಗಳು ೩

ಮಂಗಳವಾರ, ಜನವರಿ 12, 2010

ಬುಧವಾರ, ಜನವರಿ 6, 2010