ನೋಡ್ತಿರೋರು

ಬುಧವಾರ, ಜುಲೈ 2, 2014

ಬಂದೇ ಬರುತಾವ ಕಾಲ


ಮೊಬ್ಯೆಲಿಗೊಂದು ಸಂದೇಶ... ನೀನು ಇಂದಿಗೂ ಅಂದಿನಷ್ಟೇ, ಪ್ರೀತಿಸುತ್ತೀಯಾ...? ಹಾಗಿದ್ದರೆ, ನನಗೊಂದು ಕರೆ ಮಾಡುವ ಸೌಜನ್ಯವಿದೆಯಾ...?, ಈ ಸಂದೇಶ ಯಾರದು ಅನ್ನೋ ಕುತೂಹಲ ಅವನಲ್ಲಿ... ಇರಬಹುದು ಅವಳೇ ಅಥವಾ ಇನ್ಯಾರದೋ ಸಂದೇಶ ತಪ್ಪಿ ಬಂತೇ...? ಗೊತ್ತಿಲ್ಲ.. ಆದರೂ ಕುತೂಹಲಕ್ಕೆ ಮನಸೋತ ಅವನ ಮನಸು, ನೀವ್ಯಾರು ಎಂಬ ಸಂದೇಶ ಕಳುಹಿಸದೇ ಇರಲಿಲ್ಲ...ಆ ಕಡೆಯಿಂದ ಉತ್ತರವೂ ಇರಲಿಲ್ಲ. ಬಹುಶಃ ಈ ಪ್ರಶ್ನೆ ಎದುರಾದದ್ದು ಉತ್ತರಕ್ಕೋ ಅಥವಾ ಅವಿತು ಕುಳಿತಿದ್ದ ಕಠೋರ ದ್ರೋಹಕ್ಕೋ ಎಂಬ ಸಂದಿಗ್ಧವಿರಬಹುದು.

ಎಷ್ಟು ಹೊತ್ತಾದರೂ ಬರದ ಸಂದೇಶ ಅಭಿರಾಂನ ಮನಸ್ಸಿಗಾಗಲಿ, ಮಾಡುತ್ತಿದ್ದ ಕೆಲಸಕ್ಕಾಗಲಿ ಸಂಬಂಧವೇ ಇರಲಿಲ್ಲ. ಇದ್ದ ಪ್ರಾಜೆಕ್ಟಿನ ಅಷ್ಟು ಕೆಲಸ ಅವತ್ತಿನ ಮಟ್ಟಿಗೆ ಬರಾಕತ್ತಾಗಿ ನಿಂತಿತ್ತು. ಚಡಪಡಿಕೆಯಲಿ ಮತ್ತೊಮ್ಮೆ ಆ ನಂಬರಿಗೆ ಪೋನ್ ಮಾಡುವ ಬಯಕೆ.. ಬೇಕಾದವರಾಗಿದ್ದರೆ ಅವರೇ ಮಾಡಬಹುದೆಂಬ ಅಹಂ. ಸಂಜೆ ಆಫೀಸು ಮುಗಿದರೂ ಮನೆಗೆ ಹೋಗುವ ಚಿಂತೆಯಿಲ್ಲದೆ ದೂರದ ಬೆಟ್ಟದೊಂದಿಗೆ ಮಾತನಾಡುವ ಬಯಕೆ. ಬ್ಯೆಕು ಅವನ ಮಾತು ಕೇಳಲೇ ಇಲ್ಲ. ಅದು ತನ್ನ ನಿಶ್ಚಲ ಮನಸ್ಸಿನಲ್ಲೇ ಹೊರಟಿತು ಮನೆಯ ಕಡೆಗೆ. ಎಲ್ಲವೂ ದಾಟಿ ಮನೆಯ ಮುಂದೆ ಗಾಡಿ ನಿಂತಾಗಲೇ ಗೊತ್ತಾದದ್ದು. ಓಹ್!! ಮನೆಗೆ ಬಂದ್ನಾ. ಇರಲಿ ಸ್ವಲ್ಪ ಫ್ರೆಶ್ ಆಗಿ ನಂತರ ಹೊರಗೆ ಹೋದರಾಯಿತು, ಎಂದು ಮನದಲ್ಲೇ ಲೆಕ್ಕಾಚಾರ ಹಾಕಿ ಬಾಗಿಲ ಬಳಿ ಬಂದಾಗಲೇ ಮಗಳು ಅಭಿಗ್ನಾ, ಅಪ್ಪಾ !! ಎಂದಾಗ ವಾಸ್ತವಕ್ಕೆ ಬರಲೇ ಬೇಕಾಯಿತು. ಮಗುವಿನ ಮುಖ ನಿಂಗೆ ಈಗೆಲ್ಲಾ ಇವು ಬೇಕಾ ? ಎಂಬ ಪ್ರಶ್ನಾರ್ಥಕ ಭಾವದಂತಿತ್ತು.

ಮಾಮೂಲಿನಂತೆ ದಿನಪ್ರತಿ ಕೆಲಸಗಳಲ್ಲಿ, ಮಗುವಿನ ಜೊತೆಯಲ್ಲಿ ತನ್ನೆಲ್ಲ ದುಗುಡವ ಮರೆಯುವ ಮನಸ್ಸು ಮಾಡಲೇಬೇಕಾಯಿತು. ಅವತ್ತು ಫೆಬ್ರವರಿ ೨೯, ಮರೆತ ಒಂದು ಘಟನೆ, ತನ್ನ ಸ್ವಂತ ಮುಖ್ಯದಿನದಂತೆ ಅಂದು ಬಂದಿತ್ತು. ಆದರೆ ೮ ವರ್ಷಗಳ ಆ ಸಮಯದಲ್ಲಿ ಇಂದಿನಂತೆ ಸಂದೇಶವಿರಲಿಲ್ಲ ಅಷ್ಟೆ. ಮನದಲ್ಲೇ ಯಾವುದೋ ಅಂದು ಕೇಳಿದ ಹಾಡಿನ ಸಾಲು ಮತ್ತೆ ಮತ್ತೆ ನೆನಪಿಸುತ್ತಿತ್ತು.. "ಎಲ್ಲೋ ಕಂಡೆ ನಾ ಮನಸೋತೆ, ನೀ ಕ್ಯೆಕೊಡಲು ಹೀಗಾದೆ". ಹಾ!!! ಖಂಡಿತ ಅದು ಅವಳದೇ ಸಂದೇಶವಿರಬಹುದು, ಯಾಕೆಂದರೆ ಅದರಲ್ಲಿ ವ್ಯಾಕರಣದೋಷ ಹೆಚ್ಚು ಕಂಡಿತ್ತು. ಆದರೂ ಅವಳಂತೆ ವ್ಯಾಕರಣ ದೊಷಕ್ಕೆ ಒಳಗಾದವರೂ, ಇವನಂತೆ ದೂಷಣೆಗೆ ಒಳಗಾದವರು ಜಗತ್ತಿನಲ್ಲಿ ಇಲ್ಲವೇನೂ..?

ಮನಸ್ಸು ಸ್ಮೃತಿಪಟಲದ ೧೦ ವರ್ಷಗಳ ಹಿಂದೆಕ್ಕೆ ಹೋಯಿತು.....


ಆಗಿನ್ನೂ ಕೆಲಸ ಹುಡುಕುವ ಧಾವಂತ ಪ್ರೀತಿಪ್ರೇಮಗಳು ಮನಸ್ಸಿನ ಹತ್ತಿರಕ್ಕೂ ಬಿಟ್ಟುಕೊಳ್ಳಲು ಇರದಷ್ಟು ಬದುಕಿನ ತೀವ್ರ ತುಡಿತ, ಗಂಜಿಗಿದ್ದರೆ ತಾನೇ ಭಂಗಿ ಸೇದುವ ತೆವಲು, ಬದುಕನ್ನ ಒಂದು ಹಂತಕ್ಕೆ ತಂದುಕೊಳ್ಳಲೇ ಬೇಕೆಂಬ ಹಪಹಪಿಗೆ ಬಿದ್ದವ, ಅದ್ಯಾವ ರೀತಿಗೆ ತನ್ನ ಜೀವನಕ್ಕೆ ಶಿಸ್ತು ಸಂಯಮಗಳನ್ನು ಅಳವಡಿಸಿಕೊಳ್ಳುತ್ತಾನೋ ಅದಕ್ಕಿಂತಲೂ ಹೆಚ್ಚು ಅಪ್ಯಾಯಮಾನ ಕೆಲಸ ಹುಡುಕುವ ಕೆಲಸ. ಅವತ್ತಿಗೆ ಹೆಗಲ ಮೇಲಿದ್ದ ಬಹುದೊಡ್ಡ ಜವಾಬ್ದಾರಿ ತಂದೆಯ ರೋಗ, ತಾಯಿಯ ಮಮತೆ ಮತ್ತು ತಂಗಿಯ ಭವಿಷ್ಯದ ಚಿಂತೆ. ದಿನಕಳೆದಂತೆ ಹೊರಗಿನ ಪ್ರಪಂಚದ ಕರಾಳ ಮುಖಗಳು ಬಗೆಬಗೆಯ ರೀತಿಯಲಿ ಪರಿಚಿತವಾಗುತ್ತಿತ್ತು. ಮೊದಲಿಗೆ ಗೆಳೆಯನ ಜೊತೆಗೂಡಿ ನಡೆಸಿದ್ದೇ ಸ್ಕ್ರೀನ್ ಪ್ರಿಂಟಿಂಗ್ ಎಂಬ ಕನಿಷ್ಟ ಬಂಡವಾಳದ ವ್ಯವಹಾರ. ತನ್ನ ಪರಿಚಯದವರ, ಬಂಧುಗಳ ಕಾಡಿಬೇಡಿ ದಕ್ಕಿಸಿಕೊಂಡ ಪ್ರಿಂಟಿಂಗ್ ಆರ್ಡರುಗಳು. ಅದರಲ್ಲಿ ಬಾಕಿ ಬರಬೇಕಿದ್ದ ಹಣವೇ ಇವರ ಬಂಡವಾಳವನ್ನೂ ಮೀರುತಿತ್ತು. ನಗೆಮುಖದ ಕೊಟ್ಟ ಆರ್ಡರುಗಳು, ಕೆಲಸ ಮುಗಿಸಿ ಕ್ಯೆಗಿಡುವ ಹೊತ್ತಿಗಾಗಲೇ ಕಪ್ಪಿಡುತ್ತಿತ್ತು. ಇಲ್ಲವೇ ಕೆಲಸದ ಲೇವಾದೇವಿ ಶುರುವಿರುತ್ತಿತ್ತು. ಇಷ್ಟು ಕನಿಷ್ಟ ಪ್ರಿಂಟಿಗೆ ೩೦೦/- ಯಾಕೆ ೨೦೦/- ತೊಗೊ. ಒಂದೇ ಸಲಕ್ಕೆ ಶ್ರೀಮಂತನಾಗುವ ಹಂಬಲವಾ..? ನನಗೆ ಈ ಕಲರ್ ಇಷ್ಟವಾಗಲಿಲ್ಲ. ಇನ್ನೊಂದು ಬಣ್ಣದ್ದು ಪ್ರಿಂಟ್ ಮಾಡಿಕೊಂಡು ಬಾ. ಇಂಥವೇ ತಗಾದೆಗಳು. ಬದುಕಬೇಕಲ್ಲ ತನ್ನೆಲ್ಲ ಸಹನೆಯನ್ನೂ ಅದುಮಿಟ್ಟುಕೊಂಡು ಅವರು ಕೇಳಿದಂತೆ ಮಾಡಿಕೊಡಬೇಕೆಂಬುದೇ ಜೀವನದ ಧ್ಯೇಯವೇನೋ ಎಂಬಂತೆ ಮತ್ತೆ ಮತ್ತೆ ಪ್ರಿಂಟುಗಳನ್ನು ಮಾಡಿ ಅವರ ಮುಂದೆ ಹಣಕ್ಕಾಗಿ ಮಂಡಿಯೂರಿ ನಿಲ್ಲೋದು, ಅವರು ಇನ್ನೇನೊ ತಗಾದೆ ತೆಗೆಯೋದೋ ಮಾಮೂಲಿಯಾಗಿಬಿಟ್ಟಿತ್ತು.

ಬದುಕಿನ ದಾರಿಗೆ ನಿಂತ ಹೆಬ್ಬಂಡೆಯನ್ನೇ ಮುರಿಯುವ ಛಲದವನಿಗೆ ಇಂತಹವೆಲ್ಲ ಇರಲೇಬೇಕು, ಅದು ಸೃಷ್ಟಿ ನಿಯಮವೋ..? ಮತ್ತೆನೋ, ಆಯ್ತು ನೀವು ೨೫೦/- ರೂಪಾಯಿಯೇ ಕೊಡಿ, ಆದರೆ ನಿಮ್ಮ ಕಡೆಯಿಂದ ನನಗೆ ಇನ್ನೊಂದಿಷ್ಟು ಪ್ರಿಂಟ್ ಆರ್ಡರ್ ಕೊಡಿಸಿಕೊಡಿ ಎಂಬ ಮಾತು ಬರದೇ ಇರುತ್ತಿರಲಿಲ್ಲ. ಅದೇಷ್ಟೇ ನಷ್ಟಬಂದರೂ ಹಿಡಿದ ಈ ವೃತ್ತಿ ನನ್ನ ಬದುಕಿಗೆ ಒಂದು ತಿರುವು ನೀಡದ ತನಕ, ಸ್ಕ್ರೀನ್ ಪ್ರಿಂಟಿಂಗ್ ತವಕ ಬಿಡುವ ಹಾಗಿರಲಿಲ್ಲ.

ಏನನ್ನಾದರೂ ಸಾಧಿಸ ಹೊರಟವನಿಗೆ ಮಾತ್ರ ಮುಂದಿನ ಹೆಜ್ಜೆಯ ಅರಿವು ಇರುವುದಂತೆ....

- ಸಶೇಷ

ಕಾಮೆಂಟ್‌ಗಳಿಲ್ಲ: