ನೋಡ್ತಿರೋರು

ಗುರುವಾರ, ಡಿಸೆಂಬರ್ 24, 2009

ಕನಸು ನನಸಾದಾಗ..............

ಇವತ್ತು ನಿಮ್ಮೊಂದಿಗೆ ಒಂದು ಸುಂದರ ಕನಸುಗಳನ್ನ ಹಂಚಿಕೊಳ್ಳುವ ಇರಾದೆ. ಕನಸುಗಳೆಂದರೆ ಕಪ್ಪು ಬಿಳಿಪಿನ ಕನಸೇ, ಕಲರ್ ಪುಲ್ ಕನಸೇ ? ಅಕಸ್ಮಾತ್ ಕನಸು ಕಪ್ಪು ಬಿಳುಪಾಗಿಯು ಬೀಳ್ತವೆಯೇ ? (ಇದುವರೆಗೂ ಯಾವ ಕನಸು ನನಗಂತೂ ಕಪ್ಪು ಬಿಳುಪಾಗಿ ಬಿದ್ದಿಲ್ಲ ) :) ನನದು ಒಂದು ಕಲರ್ ಪುಲ್ ಕನಸ ಕೇಳಿ .........,


ನೆನ್ನೆ ರಾತ್ರಿ ಮಲಗುವಾಗಲೇ ತಡವಾಯ್ತು ಬಹುಶಃ ಎರಡು ಮೂರು ಘಂಟೆ ಇರಬಹುದು. ಸ್ವಲ್ಪ ಹೊತ್ತಿನಲ್ಲೇ ವಾಸ್ತವದಲ್ಲಿ ನನಗೆ ಪರಿಚಯವಿಲ್ಲದವರೊಬ್ಬರು, ಆದರೆ ತುಂಬಾ ಪರಿಚಿತರಂತೆ ಮಾತನಾಡುತಿದ್ದಾರೆ. ಎಷ್ಟು ಹೊತ್ತಾದರೂ ಅವರ ಮುಖವೇ ಕನಸಿನಲ್ಲಿ ಮೂಡುತ್ತಿಲ್ಲ . ಆದರೆ ಆ ಧ್ವನಿ ನನಗೆ ತುಂಬಾ ಪರಿಚಿತವೇನೋ ಎಂಬಂತೆ, ಎಚ್ಚರವಾದರೂ ಅವರೊಂದಿಗೆ ಮಾತಾನುದುತ್ತಿರುವಂತೆ ಭಾಸ. ಅಷ್ಟರೊಳಗೆ ಬೆಳಗಿನ ಜಾವವಾದ್ದರಿಂದ ನಾನು ನನ್ನ ನಿತ್ಯ ಕೆಲಸಗಳಲ್ಲಿ ತೊಡಗಿಕೊಂಡೆ, ಇಂದು ಮಧ್ಯಾನ್ಹ ೧೨ಕ್ಕೆ ನನ್ನ ಕಚೇರಿಯಲ್ಲಿ ಅಕೌಂಟ್ ಅಸಿಸ್ಟಂಟ್ ಹುದ್ದೆಗೆ ಸಂದರ್ಶನವಿತ್ತು. ಅಷ್ಟರೊಳಗೆ ನಾನು ಆ ಕನಸನ್ನು ಮರೆತುಹೋಗಿದ್ದೆ. ಸಂದರ್ಶನಕ್ಕೆ ಬಂದ ೫ ಜನರಲ್ಲಿ ೨ ಹುಡುಗಿಯರು ಮತ್ತೆಲ್ಲ ಹುಡುಗರು. ಆಗತಾನೆ ಪದವಿ ಮುಗಿಸಿ ಬಂದಿದ್ದ ಹೊಸಬರು. ಒಬ್ಬೊಬ್ಬರಾಗಿ ಸಂದರ್ಶನಕ್ಕೆ ಹಾಜರಾಗುತ್ತಿದ್ದರು. ಇನ್ನೇನು ಎಲ್ಲರ ಸಂದರ್ಶನ ಮುಗಿಸುವ ಹೊತ್ತಿಗೆ ಮತ್ತೊಂದು ಹುಡುಗಿಯು ಸಂದರ್ಶನಕ್ಕೆ ಬಂದಿದ್ದಾಳೆ ಎಂದು ನನ್ನ ಕಚೇರಿಯ ಸ್ವಾಗತಕಾರಿಣಿ ಪೋನ್ ಮೂಲಕ ಮೀಟಿಂಗ್ ರೂಮಲ್ಲಿದ್ದ ನನಗೆ ತಿಳಿಸಿದಳು, ಆಗಲೇ ಘಂಟೆ ೧.೩೦ ಆಗಿತ್ತು. ಸರಿ ಆಕೆಯನ್ನು ಸಂದರ್ಶನಕ್ಕೆ ಬರಲು ಹೇಳಿ, ಈಗಾಗಲೇ ಸಂದರ್ಶಿಸಿದವರಲ್ಲಿ ಯಾರು ಉತ್ತಮರೆಂದು ಮನಸ್ಸಿನಲ್ಲೆ ಲೆಕ್ಕಾಚಾರ ಹಾಕುತ್ತಿದ್ದೆ. ಒಳಗೆ ಬರಬಹುದ ?????????? ಎಂದು ಕೇಳಿದ ಧ್ವನಿಗೆ ಆಶ್ಚರ್ಯಚಕಿತನಾದೆ, ಏಕೆಂದರೆ ಇದೆ ಧ್ವನಿಯನ್ನು ತಾನೇ ಕನಸಿನಲ್ಲಿ ಕೇಳಿದ್ದು. ಒಂದು ಕ್ಷಣ ಮೂಕ ವಿಸ್ಮಿತನಂತಾಗಿ, ಕಮಿನ್ ಎಂದು ಹೇಳಿದೆ. "ನ್ಯೆಸ್ " ಟೆಲ್ ಮಿ ಅಬೌಟ್ ಯುವರ್ ಸೇಲ್ಪ್ಹ್ ? ಅಂತಷ್ಟೇ ಉಗುಳು ನುಂಗಿಕೊಂಡು ಹೇಳಿದ್ದು. ಆ ಹುಡುಗಿಯ ಹೆಸರು ಮಾನಸ, ಊರು ಶಿವಮೊಗ್ಗದ ಹತ್ತಿರ ಶಿರಾಳಕೊಪ್ಪ, ಆ ಕಡೆಯಿಂದ ಉಳಿಯಿತು ಆ ಧ್ವನಿ. ಆಕೆ ಏನೇನೋ ಹೇಳತೊಡಗಿದಳು, ಒಂದು ಯಾವುದು ಕೇಳಿಸಿದಂತಾಯಿತು. ಒಂದೈದು ನಿಮಿಷ ಕಾಟಾಚಾರಕ್ಕೆ ಮಾತಾಡಿ ಆಕೆಯನ್ನು ಹೊರಡುವಂತೆ ಹೇಳಿ ಹೊರಬಂದೆ.


ಊಟ ಮುಗಿಸಿ, ನನ್ನ ಬಾಕಿ ಕೆಲಸದಲ್ಲಿ ತಲ್ಲಿನನಾಗಲು ಪ್ರಯತ್ನಿಸಿದನಾದರು, ಯಾಕೋ ಸಾಧ್ಯವಾಗಲಿಲ್ಲ. ಪ್ರತಿ ಐದು ನಿಮಿಷಕೊಮ್ಮೆ ಆಕೆಯ ಪರಿಚಯ ಪತ್ರವನ್ನು ಓದತೊಡಗಿದೆ. ಹು... ಹು. ಇಲ್ಲ ...... ಯಾವುದೇ ಕಾರಣಕ್ಕೂ ಇನ್ನು ಬೇರೆ ಸಂದರ್ಶನವನ್ನು ಮಾಡಬಾರದು. ಈಕೆಯನ್ನೇ ಆರಿಸುವ ಎಂದು ಒಳಮನಸು ಹೇಳಿತಾದರು, ಮತ್ತೊಮ್ಮೆ ಅವಳೇನು ಅಂಥ ಸುಂದರಿಯಲ್ಲ, ಆದರು ಮಾತು, ಸಂಯಮ, ಪ್ರಜ್ಞೆ ಎಲ್ಲವು ಸರಿ, ಮೇಲಾಗಿ ಮೊದಲೆರಡು ಸಂದರ್ಶನ ಮಾಡಿದ ಹುಡುಗ ಹುಡುಗಿಗಿಂತ ಕೆಲಸಕ್ಕೆ ಬೇಕಾದ ವಿಚಾರಗಳನ್ನು ಈಕೆ ತಿಳಿದುಕೊಂಡಿಲ್ಲ ಎನಿಸುತ್ತಿತ್ತು. ಯಾವ ನಿರ್ಧಾರವನ್ನು ತೆಗೆದುಕೊಳ್ಳದೆ ನನ್ನ ಹಿರಿಯ ಅಧಿಕಾರಿಗಳಿಗೆ ನಾಳೆ ಶಾರ್ಟ್ ಲಿಸ್ಟ್ ಕಳಿಸುತ್ತೇನೆ, ಎಂದು ಮಿಂಚಂಚೆ ಕಳುಹಿಸಿದೆ.

ಮಿಂಚಂಚೆಗೆ ಪ್ರತ್ಯುತ್ತರ ಬಂತು ಇಂದೇ ನಿರ್ಧಾರ ತೆಗೆದುಕೊಳ್ಳಬೇಕು, ನಾಳೆ ನಾನು ಬೆಳಿಗ್ಗೆ ಇರುವುದಿಲ್ಲ ಇಂತಿ ಎಂ ಡಿ. ನನ್ನ ಲೆಕ್ಕಾಚಾರ ತಲೆಕೆಳಗಾಗುವ ಸರದಿ ಈಗ (ನಾಳೆ ಬೆಳಿಗ್ಗೆ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಮೀಟಿಂಗ್ ಇತ್ತು. ಅಷ್ಟರೊಳಗೆ ನಾನು ಆರಿಸಿದವರ ಪರಿಚಯ ಪತ್ರವನ್ನು ನಮ್ಮ ಎಂ ಡಿಗೆ ನೀಡುವ ಎಂದೆಣಿಸಿದ್ದೆ) . ಜಗದೀಶ್ ೫/೧೦, ನವೀನ ಕುಮಾರ್ ೬/೧೦, ಸಂಜನ ೬/೧೦, ನಟರಾಜ್ ೩/೧೦, ಮಾನಸ ೯/೧೦ ಬರೆದಾಗಿತ್ತು :)

ಎಲ್ಲವನ್ನು ಕೂಲಂಕುಷವಾಗಿ ನೋಡಿದ ಎಂ. ಡಿ. ಹಾಸ್ಯ ಮಿಶ್ರಿತವಾಗಿ ಏನರವಿಂದ್ ೯/೧೦ ಈಕೆ, ಅಷ್ಟು ಚೆಂದನಾ ? ? ಅಂತ ಕಣ್ಣು ಹೊಡೆದು ಕೇಳಿದಾಗ, ಆತಂಕದಲಿದ್ದ ನಾನು ಹು...... ಸರ್,,,,,,,, ಅಯ್ಯೋ ಇಲ್ಲಾ ಸರ್........... ಅಂತ ಏನೇನೋ ಒದರಲಾರಂಭಿಸಿದೆ. ಆದರೆ ಅವರು ಅದನ್ನು ಗಮನಿಸಲಿಲ್ಲ ಅನ್ಸುತ್ತೆ. ಸರಿ ಹಾಗಾದರೆ ಆಕೆಯನ್ನು ನಾಳೆ ಮತ್ತೊಂದು ಸುತ್ತಿನ ಸಂದರ್ಶನಕ್ಕೆ ಸಮಯವನ್ನು ನೀನೆ ಗೊತ್ತು ಮಾಡು, ಸಂಜೆ ೩ರ ನಂತರವಾದರೆ ಮೋಹನ್(ಮತ್ತೊಬ್ಬ ಎಂ. ಡಿ.) ಸಹ ಇರ್ತಾರೆ, ಎಂದರು. ತಲೆಯಲ್ಲಾಡಿಸಿ ಹೊರಬಂದೆ, ಮನಸಿನಲ್ಲಿ ಏನೋ ಸಂತೋಷ, ನನ್ನ ಕುರ್ಚಿಯ ಹೋಗಿ ಮೊದಲು ಫೋನ್ ರಿಸಿವರ್ ಕ್ಯೆಗೆತ್ತುಕೊಂಡು ಮೊದಲಿನಿಂದಲೂ ಆ ಮೊಬ್ಯೆಲ್ ಸಂಖ್ಯೆ ಗೊತ್ತೇನೋ ಎಂಬಂತೆ ಪಟಪಟನೆ ಸಂಖ್ಯೆ ಒತ್ತಿದೆ...... ೯೯೪೫೦........(ಆಕೆಯ ಧ್ವನಿಗೆ ಕಾತರನಾಗಿದ್ದೆ) ಆ ಕಡೆಯಿಂದ ಹಲೋ ......... ಎಂದಿತೊಂದು ಧ್ವನಿ (ಅವಳಲ್ಲ), :( ಸಾವರಿಸಿಕೊಂಡು "ಆಮ್ ಸ್ಪೀಕಿಂಗ್ ತು ಮಿಸ್. ಮಾನಸ ?, ಇಲ್ಲ (ಕನ್ನಡಲ್ಲೇ) ಅವಳಿಲ್ಲ ಯಾರು ಮಾತಾಡೋದು ಎಂದಿತು ಆ ವ್ಯಕ್ತಿ, ನಾನು ಇಂತ ಕಂಪೆನಿಯಿಂದ, ಈ ವಿಚಾರವಾಗಿ ಪೋನ್ ಮಾಡ್ತಿದ್ದೀನಿ, ನಿಮ್ಮ ಹುಡುಗಿಗೆ ನಮ್ಮ ಆಫೀಸಿಗೆ ಸಂದರ್ಶನಕ್ಕೆ ಬಂದಿದ್ದರು, ಅವರಿಗೆ ನಾಳೆ ನಮ್ಮ ಆಫೀಸಿಗೆ ಬಂದು ನನ್ನನ್ನು ಕಾಣಲು ಹೇಳಿ ಎಂದೆ (ಸಂಜೆ ೩ ಘಂಟೆಗೆ, ಹೇಳಲು ಮರೆಯಲಿಲ್ಲವಾದರು). ಮತ್ತು ಯಾವುದೇ ವಿಚಾರಕ್ಕೂ ನನ್ನ ಮೊಬ್ಯೆಲ್ ಸಂಖ್ಯೆಯನ್ನು ಕೊಟ್ಟಿರಿ ಎಂದು ಆ ವ್ಯಕ್ತಿಗೆ ನನ್ನ ನಂಬರನ್ನು ನೀಡಿದೆ, ಅಲ್ಲಿಯವರೆಗೆ ಕಾಯುವ ತಾಳ್ಮೆ ನನ್ನಲ್ಲಿರಲಿಲ್ಲ. ಪೋನ್ ಇಟ್ಟೆ.


ಯಾಕೋ ಕೆಲಸ ಮಾಡುವ ಮನಸಿಲ್ಲ, ಮನದಲ್ಲೇ ---- ಛೆ ಇವಳಾದರು ಫೋನ್ ಎತ್ತಿದ್ದರೆ........... ನನ್ನ ಮೊಬ್ಯೆಲ್ ನಂಬರನ್ನ ಆ ವ್ಯಕ್ತಿ ಸರಿಯಾಗಿ ಬರೆದುಕೊಂಡಿಲ್ಲದಿದ್ದರೆ, ಬಹುಷಃ ಸರಿಯಾಗಿ ಬರೆದುಕೊಂಡಿದ್ದರು, ಆಕೆ ಫೋನ್ ಮಾಡದಿದ್ದರೆ, ಛೆ!!!! ಏನೆಲ್ಲಾ ಯೋಚನೆ..... ಚಡಪಡಿಸುತ್ತಿದೆ ಮನಸು........................ ಇನ್ನು ನಾಳೆ ಅವಳು ಸಂದರ್ಶನಕ್ಕೆ ಬರ್ತಾಳೆ ಮೂರು ಘಂಟೆಗೆ .............. ಕಾಯುವ ಸರದಿ ನನದು. :(

ಬುಧವಾರ, ಡಿಸೆಂಬರ್ 16, 2009

ಪ್ರೀತಿಗೊಂದು ಬ್ಯ್ಯೆಯಾಗ್ರಫಿ

ಎಂಥ ಸುಂದರ ಕಲ್ಪನೆ, ಎಂಥ ನವಿರಾದ ವಿಚಾರಗಳು, ಪ್ರೀತಿ ಬಗ್ಗೆ ಮಾತಾಡ್ತಾ ಹೋದ್ರೆ ಅದಕ್ಕೊಂದು ಆದಿ ಅಂತ್ಯನೇ ಇಲ್ಲದ, ಸುವರ್ಣಾತೀತ, ಸುಕೋಮಲ ಮನಸುಗಳ ದಿವ್ಯ ವಿಚಾರ. ಅದೊಂದು ಸಮುದ್ರ ಭೋಗರತದ ಆರ್ತನಾದದಲ್ಲೂ ದಿವಿನಾದ ಏಕಾಂತವ ಕಾಣುವ ಕವನಗಳ ಸಂಕೋಲೆ, ಮಾತುಗಳು ಸಾವಿರ ಕಡಲ ಅಲೆಗಳಾಗಿ ತಾ ಮುಂದು ನಾ ಮುಂದು ಅಂದರೂ, ಎಲ್ಲೋ ಕಾಣದ ನೀರವ ಮೌನ, ಮನಸುಗಳ ಸಂಘರ್ಷದ ಆರ್ತನಾದದಲ್ಲೂ ಅದೊಂದು ದಿವ್ಯ ಬೆಳಗು.

ಮೊದಲ ಬಾರಿಗೆ ಎಲ್ಲೋ ಎಡತಾಕಿಕೊಂಡು ಎದೆಯ ಭಾವನೆಗಳಿಗೆ ಲಗ್ಗೆ ಇಡುವ ಈ ಪ್ರೀತಿಗೆ ಎಂಥ ವ್ಯಕ್ತಿ ಸೂಕ್ತ ಎಂಬ ನಿರ್ಧರಿಸುವ ಧೃಡ ನಿರ್ಧಾರವೇ ಇರುವುದಿಲ್ಲ, ಎಲ್ಲೋ ಕಾಲೇಜಿನಲ್ಲಿ, ಯಾವುದೋ ಕಚೇರಿಯ ಸಹೋದ್ಯಮಿ, ಬಸ್ ಸ್ಟಾಂಡಿನ ಬೆಳಗಿನ ಧಾವಂತದಲ್ಲಿ, ಆಕಸ್ಮಿಕ ಪ್ರಯಾಣದಲ್ಲಿ, ಅಂತರ್ಜಾಲದ ಹರಟೆಯಲ್ಲಿ, ಆಕಸ್ಮಿಕವಾಗಿ ಬಂದು ಬೀಳುವ ಯಾವುದೋ ಮೊಬ್ಯೆಲ್ ಸಂಖ್ಯೆಯ ಕಿರುಸಂದೇಶದಲ್ಲಿ ಇಂಥ ಅದೆಷ್ಟೋ ಅಲ್ಲಿ-ಇಲ್ಲಿಗಳಲ್ಲಿ ಒಂದು ಬಾರಿ ಮಿಂಚಿನಂತೆ ಬಂದು ಹೋಗುವ ಈ ಭಾವನೆ, ಜೀವವನ್ನೇ ಹಿಡಿದು ನುಂಗುವ ಮಟ್ಟಕ್ಕೆ ಹೋದರೂ ಆಶ್ಚರ್ಯವಿಲ್ಲ, ಹಾಗಾದರೆ ಮುಂದೆ ಹೇಳುತ ಹೊರಡುವ ಈ ವಿಧವಿಧದ ಪರಿಚಯಗಳಲ್ಲಿ ಎಂಥ ಅನುಬಂಧ ಇದೆ ಅಲ್ವಾ ತಿಳಿಯೋಣ!!!!

ಈ ಹುಡುಗ ಆಗ ತಾನೇ ಪಿಯುಸಿ ಎರಡನೇ ವರ್ಷದಲ್ಲಿ ಕಾಲಿರಿಸಿದವ, ತನ್ನ ಮುಂದಿನ ಭವಿಷ್ಯತ್ತಿನ ದಾರಿಯನ್ನು ಸುಗಮಗೊಳಿಸುವುದಕ್ಕಾಗಿ ಓದೊಂದೆ ಸರಿ ಎಂಬ ಮನೋಭಾವದವ. ತಂದೆ ತಾಯಿಗಳ ಅಚ್ಚುಮೆಚ್ಚಿನ ಒಬ್ಬನೇ ಮಗ. ಹೆಸರು ಬಾಬು ಪೂರ್ತಿ ಹೆಸರು ಆನಂದ ಬಾಬು. ಹುಟ್ಟಿದಾರಾಭ್ಯ ಕಷ್ಟ ಕೋಟಲೆಗಳನ್ನೇ ಮೃಷ್ಟಾನ್ನವಾಗಿ ಮ್ಯೆವೇಳಿಸಿಕೊಂಡವ. ಓದು ಅಷ್ಟಕ್ಕಷ್ಟೆಯಾದ್ರೂ, ಬುದ್ದಿವಂತ. ಇಂತಹ ಒಬ್ಬ ಸಾಮಾನ್ಯ ಹುಡುಗ ಎಂಥಂಥ ಸಂಧರ್ಬಗಳನ್ನು ಎದುರಿಸುವ...

ಆನಂದಬಾಬು ಅಂಥ ಸುಂದರಾಂಗನಲ್ಲದಿದ್ದರೂ ಪದ್ಮಿನಿಯನ್ನು ನೋಡಿದ ಕೆಲವು ದಿನಗಳಿಂದ ಅವಳ ಯೋಚನೆಯಲ್ಲೇ ತನ್ನ ಸಮಯವನ್ನು ಕಳೆಯುತಾ ಹೋಗುವುದರಲ್ಲಿ ಅವನಿಗೆಂಥದೋ ಅಭ್ಯಾಸ. ಪದ್ಮಿನಿಯೇನು ಅಂಥಾ ಚಂದುಳ್ಳಿ ಚೆಲುವೆಯಲ್ಲದಿದ್ದರೂ ತನ್ನ ಸಾಮಾನ್ಯ ಅಂದಕ್ಕೆ ಮೆರುಗು ನೀಡುವ ಅವಳ ಕಣ್ಣುಗಳು ಎಂಥವನನ್ನೂ ಒಂದು ಕ್ಷಣ ಹಿಡಿದಿಡುವ ತಾಕತ್ತು. ಇಂಥ ಸಾಮಾನ್ಯರ ಬಗ್ಗೆ ನಡೆಯುವ ಪ್ರೇಮ ಪ್ರಲಾಪ ಎಂಥದ್ದೂ ಅದರ ಅಂತ್ಯ .................. ???????





ಮುಂದುವರೆಯುವುದು............

ಮಂಗಳವಾರ, ಡಿಸೆಂಬರ್ 8, 2009

24 ಗಂಟೆ ಕನ್ನಡ ಹಾಡುಗಳು



ಮತ್ತೊಂದು ನಿರಂತರ ೨೪ ಘಂಟೆಗಳ ರೇಡಿಯೋ ವಾಹಿನಿ


ಅರವಿಂದ್

ಶನಿವಾರ, ನವೆಂಬರ್ 7, 2009

ಚಂದಿರ(ಕಾಂತೆ)

ಚಂದಿರನ ಕಾಂತಿಯನು,

ಚಿರನಗೆಯು ಕದಿಯುವುದೆ ?

ಚಂದ್ರಿಕೆಯ ಚಂಚಲತೆಗೆ,

ಚಿಂತೆಯ ಮಾತೇಕೆ ?


ಚಂದಿರ ನೀ ಎಂದಿಗೂ

ಸುಂದರ.........

ಹಾಗೆ ಚಂದ್ರಿಕೆಯೂ

ಅತಿ ಮಧುರ........

ಗುರುವಾರ, ಅಕ್ಟೋಬರ್ 1, 2009

ಬಬ್ರುವಾಹನ

ಬಬ್ರುವಾಹನ ಚಿತ್ರದ "ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ....." ವಿಡಿಯೋ ತುಣುಕು. :)


ಮಂಗಳವಾರ, ಸೆಪ್ಟೆಂಬರ್ 8, 2009

ಹನಿಗವನ

ಅವಳ ಮೇಲೊಂದು ಪ್ರೇಮಕವನ
ಬರೆಯುವ ಹೊತ್ತಿಗೆ
ಮುಗಿಸಿದ್ದು ಖಂಡಕಾವ್ಯ.

ಅವಳ ಮೇಲನ ಪ್ರೀತಿಯ
ಅಪ್ಪಿಕೊಳ್ಳುವದರೊಳಗೆ
ಆಕೆ ಆರಿಸಿಯಾಗಿತ್ತು
ಮತ್ತೊಬ್ಬ ಇನಿಯ.

ಮಳೆಯ ಅಬ್ಬರಕ್ಕೆ
ಕೊಡೆಯಾಗಿದ್ದೆ ನಾ ಮೇಲಿನಿಂದ
ಜಾರಿ ಹೋಗಿದ್ದಳಾಗಲೇ
ಬಿಡಿಸಲಾಗದ ತೋಳ ತೆಕ್ಕೆಯಿಂದ.

ಚಿನ್ನದಂತಹ ಹುಡುಗ
ಎಂದು ಆಗಾಗ ಹೇಳುವಾಗಲೇ, ನಾ
ತಿಳಿದುಕೊಳ್ಳಬೇಕಿತ್ತು ನಾ ಅಲ್ಲ
ಬೇಕಿರುವುದು ಅವಳಿಗೆ ಚಿನ್ನ.

ಮುಂಗಾರುಮಳೆಯಂತಿದ್ದ
ಪ್ರೀತಿಯ ಓಘ.
ಬರುಬರುತ್ತಾ ಆದದ್ದು ಮಾತ್ರ
ಸ್ಯೆಕ್ಲೋನ್ ವೇಗ.

ಮಂಗಳವಾರ, ಆಗಸ್ಟ್ 18, 2009

ಪ್ರೀತಿ "ಹಾಲುಬಾಯಿ-ಹಾಗಲಕಾಯಿ".....????


ನೀನೊಮ್ಮೆ ಹಾಲುಬಾಯಿ, ಮಗದೊಮ್ಮೆ ಹಾಗಲಕಾಯಿ,

ಸಿಹಿಹೂರಣ ನಡೆದು ನೀ ನನ್ನೊಡನೆ ಬರುವಾಗ,
ಸಿಗದಾಯಿತೆ ಕಾರಣ ನೀ ದೂರ ಸರಿದಾಗ,

ಸಿಂಗಾರರದ ಸೊಬಗು ನೀ ನನ್ನೊಡಲಲಿರಲು
ಬೆಂಗಾಡಿನ ಬದುಕು ನೀ ನನ್ನಗಲಲು,

ಪ್ರೀತಿ ನೀನೊಮ್ಮೆ ಹಾಲುಬಾಯಿ, ಮಗದೊಮ್ಮೆ ಹಾಗಲಕಾಯಿ.

ಶುಕ್ರವಾರ, ಆಗಸ್ಟ್ 14, 2009

ಗೆಳೆಯನ ಮಾರಾಟ

ಮ್ಯೆಸೂರು, ಬೆಂಗಳೂರು, ಕೊಚ್ಚಿನ್ನು,
ತ್ರಿವೆಂಡ್ರಂ, ತಿರುಚನಾಪಳ್ಳಿ, ಮಡಿಕೇರಿ,
ಮಂಗಳೂರು, ಹುಣಸೂರು, ಚಾಮರಾಜನಗರ,
ಎಲ್ಲೆಲ್ಲಿ ಹುಡುಕಿದ್ದು, ಬಿಕರಿಗೆ ಕೊಳ್ಳುವವರ,
ಸಿಗಲಿಲ್ಲ ಯಾರೂ ಕೊಳ್ಳಲು ಈ ವರ,

ಸೇಲ್ ಆಗೋದೆ ಇಲ್ಲಾ ಈ ಗಾಡಿ,
ಅಂತ ಹೇಳ್ತಾಯಿದ್ರು ಅವರ ಡ್ಯಾಡಿ,
ಕೊಟ್ಟಿದ್ದು ಎಷ್ಟೊ ಡಿಸ್ಕೌಂಟ್ ಆಫರ್ಸ್,
ಬರಲಿಲ್ಲ ಯಾರೂ ಮೆಚ್ಚುಕೊಂಡು ಈ ಫೇಸ್,

ಚಿಂತೆಶುರುವಾಯಿತು ಅವರ ಮಮ್ಮಿ ಡ್ಯಾಡಿಗೆ,
ಯೋಚನೆಯಿಟ್ಟಿತು, ತಂಗಿ ಭಾವನಿಗೆ,
ಹೇಗೆ ಮಾಡೋದು ಬಿಕರಿ,
ಕೇಳಲು ಹೊರಟರು ಯಾರಿಗಾದ್ರೂ ಬೇಕಾ..............ರೀ.

ಬಂದಿತೊಂದು ಚೆಂದದ ಹುಡುಗಿ,
ವ್ಯೆದ್ಯಕೀಯದ ಹಿನ್ನಲೆಯ ಬೆಡಗಿ,
ಒಳ್ಳೆ ಜೋಡಿ, ಹುಡುಕಿದರೂ ನೋಡೀ,
ಕೊಟ್ಟಿದ್ದು ಎರಡು ಲಕ್ಷದ ಸೋಡಿ,

ಮಾರಾಟವಾಯ್ತು ಆ ವೇಸ್ಟ್ ಬಾಡಿ,
ಮದುವೆಗೆ ಬರೋದು ಮರೀಬ್ಯಾಡಿ.


(ನನ್ನ ಗೆಳೆಯನ ಮೂರು ವರ್ಷಗಳ ಹುಡುಗಿ ಹುಡುಕಾಟ ಕಡೆಗೂ ನಿಂತಿದೆ, ಆ ಖುಷಿಯಲ್ಲಿ ಅವನು ಶಿಖರ ಮುಟ್ಟಿದ್ದಾನೆ, ಪಾಪ :)
ಮುಂದೇನೋ........???? )

ಶುಕ್ರವಾರ, ಜೂನ್ 26, 2009

ಮನದ ಕದತೆರೆದಾಗ

ನಂಬಿ ನೀ ಬಂದಿಹೆಯಲ್ಲ
ಮನದ ಕಾರ್ಮೋಡದ ಬಾಗಿಲ ಸರಿಸಲು,
ಬಿಡದೀ ಮನವ ನೀ ಎಲ್ಲ
ಆವರಿಸಿರುವೆ
ಜಗದ ಕಣ್ಣೊಟಕೆ ಸತಿ-ಪತಿಯರಾಗಲು
ಬಂಧನವೊಂದು ಕುರುಹು!

ಬಿಟ್ಟು ಬಂದಿಹೆ ಗೊತ್ತು
ತಂದೆ ತಾಯಿಯರ ಕ್ಯೆತುತ್ತು
ಸೋದರ ಸೋದರಿಯರ
ಒಲವಿನ ತಾಕತ್ತು
ಚಿಂತೆ ಬೇಡ ಹೃದಯೇಶ್ವರಿ
ನೀ ಎನ್ನ ಮನದ ರಾಜೇಶ್ವರಿ!

ಯಜಮಾನನಾಗುವುದಕ್ಕಿಂತ ನಿನಗೆ
ಗೆಳೆಯನಾಗುವೆ ಜೊತೆವರೆಗೆ
ಹೆಜ್ಜೆ ಹೆಜ್ಜೆಗಳು ಜೊತೆಜೊತೆಗೆ
ನೋವಿನ ಮಜ್ಜೆಗೂ
ಸಾವಿನ ಸಜ್ಜೆಗೂ
ಜೊತೆಯಾಗಿ ಸಾಗೋಣ
ಇದು ನನ್ನ ಪ್ರಮಾಣ!

ನಿನಗೋಸ್ಕರ ನಾ ಏಳು ಸಮುದ್ರವ ದಾಟುವುದಿಲ್ಲ
ಚಂದ್ರಮನನ್ನು ತೆಕ್ಕೆಗೆ ತರುವುದಿಲ್ಲ
ಸುಖಾಸುಮ್ಮನೆ ಹೊಗಳುತಿಲ್ಲ
ಒಂದಿಷ್ಟು ನೆಮ್ಮದಿ, ಅರೆಪಾವು ಸೌಖ್ಯ
ಬರಿಸಲಾಗದ ಪ್ರೀತಿ, ಖಂಡಿತಾ ನಾ
ಕೊಡದೇ ಇರುವುದಿಲ್ಲ
ಕಾಯುತಿರುವೆ ತಿಳಿಸುವೆಯಾ !

ಪ್ರೀತಿಯೆಂದರೇನು? ಭಾಗ ೧


ಪ್ರೀತಿಯೆಂದರೆ ಹೀಗೆ ಅಂತಾ ಯಾರೂ ಹೇಳೋಕೆ ಆಗೋಲ್ಲಾರೀ, ಆದ್ರೂ ಒಬ್ಬೊಬ್ಬರು ಹೇಳೋ ವ್ಯಾಖ್ಯಾನಗಳು ಒಂದೊಂದು ರೀತಿ,

ಪ್ರೀತಿಯೆಂದರೆ ಏನೆಂದು ಹೇಳುವುದು.......................
ಅದೊಂದು ಚಡಪಡಿಕೆ, ಅದೊಂದು ಕೌತುಕತೆ, ಅದೊಂದು ವಿಷಾದತೆ, ಅದೊಂದು ಸ್ವಾಯತ್ತತೆ, ಅದೊಂದು ಸಮನ್ವಯತೆ, ಅದೊಂದು ಕಕ್ಕುಲತೆ, ಅದೊಂದು ವ್ಯಾಕುಲತೆ, ಅದೊಂದು ಸಾಮೀಪ್ಯತೆ, ಅದೊಂದು ಸಂಪನ್ನತೆ, ಅದೊಂದು ಪ್ರಸನ್ನತೆ, ಅದೊಂದು ಸಮಾನತೆ,
ಅದೊಂದು ಚಿಂತೆ, ಅದೊಂದು ಸಂತೆ, ಅದೊಂದು ಗೊಂದಲತೆ, ಅದೊಂದು ಗೌಜುಗತೆ, ಎಲ್ಲಕ್ಕೂ ಮೀರಿದ ಎಲ್ಲವೂ ಮಿರಿ ಮಿರಿ ಮಿಂಚಿನಂತೆ ಮಾಡುವ ಮಾಯಾದೀಪ, ಯಾರ ಕ್ಯೆಗೂ ಸಿಕ್ಕದ ಒಂದು ಸುಭದ್ರ ಭಾವನೆ, ಹಾಗೇ ಒಂದಿಷ್ಟು ಆತಂಕ, ಎಲ್ಲೋ ಏನೋ ಹುಡುಕುತಿರುವವ ಧಾವಂತ, ಎಲ್ಲವೂ ಇದೆ ಈ ಎರಡಕ್ಷರದ ಪ್ರೀತಿಯಲ್ಲಿ.

ಹೇಳಲು ಪದಗಳಿಲ್ಲ,
ಹೇಳುತಿರಲು ನಿಲ್ಲೋಲ್ಲ,
ಹೇಳಿಕೆಗೆ ಮರಗೋಲ್ಲ,
ಹೇಳಿದರೂ ಕೇಳೋಲ್ಲ......................

ಕೇಳಿದರೂ ತಿಳಿಸೋಲ್ಲ,
ಕೇಳಿಸಿದರೂ ಹೇಳೊಲ್ಲ,
ಕೇಳಿಕೆಗೆ ಕಿವಿಗೊಡದೆ
ಪ್ರೀತಿ ಎಂದಷ್ಟೆ ಹೇಳಿ..............................

ಹೃದಯಕ್ಕೆ ಲಗ್ಗೆ ಇಡುವ ವಿಶಾಲ ಅರ್ಥದ ದಿವಿನಾದ ಪದ.
ಪ್ರೀತಿ. . . .


ನಮ್ಮ ಜೀವನದಲ್ಲಿ ಪ್ರೀತಿಗೆ ಯಾಕೆ ಎಷ್ಟು ಮಹತ್ವ ಕೊಡುತ್ತೇವೆ ಎಂದು ನನ್ನ ಅನುಭವವನ್ನು ಹಂಚಿಕೊಳ್ಳುತ್ತೆನೆ.

೧. ಚಿಕ್ಕಂದಿನಿಂದಲೂ ನಮ್ಮನ್ನು ಯಾರು ಸರಿಯಾಗಿ ಗುರುತಿಸದಿದ್ದರೆ,
೨. ಸಿಗಬೇಕಾದ ಪ್ರೀತಿ, ಮಮತೆ, ವಾತ್ಸಲ್ಯ ಸಿಗದಿದ್ದರೆ,
೩. ನಮ್ಮ ಅಂತರಂಗದ ಭಾವನೆಗಳನ್ನು ಇನ್ನೋಬ್ಬರಲ್ಲಿ ಹಂಚಿಕೊಳ್ಳಲು,
೪. ನಮ್ಮ ಪ್ರತಿ ಯೋಚನೆಗಳು, ಯೋಜನೆಗಳು ಅವಳನ್ನು ಸಂತೋಷಗೊಳಿಸಲು.
೫. ಆಕೆಯ ಬಗ್ಗೆ ನಮಗಿರುವ ಮೌನ ಪ್ರೀತಿ,
೬. ಅವಳ ಬಗ್ಗೆ ನಾವುಗಳು ಕಟ್ಟಿದ್ದ ಕನಸಿನ ಗೋಪುರಕ್ಕೆ ಧಕ್ಕೆ ಬಂದಾಗ.
೭. ಎಲ್ಲವೂ ಅವಳಿಗಾಗೆ ಅನ್ನುವ ಭಾವನೆ, ಜೊತೆಗಿನ ನಿಷ್ಕಲ್ಮಶ ಒಲವು.

ಪ್ರೀತಿಯೆಂದರೇನು ? ಭಾಗ ೨

ಪ್ರೀತಿಯೆಂದರೆ ಅದು ಸುಮ್ಮನೆ ಆಕರ್ಷಣೆಯಲ್ಲ, ಅದಕ್ಕೆ ಇಂತದೇ ಎಂಬ ಭಾವವಿಲ್ಲ, ನಾವು ಒಬ್ಬ ವ್ಯಕ್ತಿಯನ್ನು ಇಷ್ಟಪಡೋದು ಮೊದಲನೆಯದಾಗಿ ಆಕರ್ಷಣೆಯಿಂದಲ್ಲ, ಅವರ ಮಾತಿನಲ್ಲಿರುವ ಸತ್ಯದಿಂದ, ಮತ್ತು ಪ್ರಾಮಾಣಿಕತೆಯಿಂದ, ಇಲ್ಲಿ ಗಂಡ ಹೆಂಡತಿ, ಗೆಳೆಯ ಗೆಳತಿ, ತಂದೆ ತಾಯಿ, ಬಂಧು ಬಾಂಧವರನ್ನೂ ಮೀರಿ ಮತ್ತೊಂದು ಸೆಳೆತವಿದೆ, ಅದೇ ಸ್ನೇಹ ಅದರ ಮಟ್ಟಿಗೆ ಹೇಳುವುದಾದರೆ ನೀವು ನಿಮ್ಮ ಹುಟ್ಟಿನ ನಂತರ ತಂದೆ ತಾಯಿ, ಅಣ್ಣ-ತಂಗಿ, ಅಕ್ಕ-ತಮ್ಮ, ಬಂದು ಬಳಗದವರೆಲ್ಲರೂ ಆಯ್ಕೆಗಳೇ ಇಲ್ಲದೇ ನಿಮ್ಮವರು ಎಂದು ಹೇಳಬೇಕಾಗುತ್ತದೆ, ಆದ್ರೆ ಸ್ನೇಹಿತನ ಆಯ್ಕೆ ಮಾತ್ರ ನಿಮ್ಮ ಯೋಚನೆಗೆ, ನಿಮ್ಮ ಭಾವ ಸ್ಪಂದನೆಗೆ, ಮನಸಿನ ಉದ್ವೇಗಕ್ಕೆ ಜೊತೆಯಾಗಿ ಹೆಜ್ಜೆಯಾಗುವ ಒಂದು ಮನಸ್ಸು ಮಾತ್ರ.

ನಿಮ್ಮ ಆಯ್ಕೆಆ ಮನಸ್ಸಿಗೆ ಮಾತ್ರವೇ ಹೊರತು ಅದರ ಹಿಂದಿರುವ ಮತ್ಯಾವುದೋ ಮಾತುಗಳಿಗಲ್ಲ, ಉದಾ : ನೀವು ಆಸ್ಪತ್ರೆಯಲ್ಲಿ ಕೆಲಸ ಮಾಡ್ತೀದ್ದಿರಾದ್ದರಾ ಎಂದುಕೊಳ್ಳೋಣ. ನಿಮ್ಮ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಡಾಕ್ಟರ್, ಹಾಗೂ ಟ್ರಿಟ್ಮೆಂಟ್ ಎಲ್ಲಾ ಇದೆಯನ್ನಿ, ಆದರೂ ಮತ್ತ್ಯಾವುದೋ ಹೆಚ್ಚಿನ ಚಿಕಿತ್ಸೆಗಾಗಿ ನೀವು ಬೇರೆ ಆಸ್ಪತ್ರೆಗೆ ಆ ರೋಗಿಯನ್ನು ಕಳುಹಿಸೋದಿಲ್ವೆ, ಹಾಗೆ ನಿಮ್ಮ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಸೌಕರ್ಯಗಳಿದ್ದರೂ ಹೃದಯಾಘಾತಕ್ಕೆ ಅಥವಾ ಮತ್ಯಾವುದೋ ಮಾರಣಾಂತಿಕ ಖಾಯಿಲೆಗೆ ಬೇರೆ ಆಸ್ಪತ್ರೆಗೆ ರೋಗಿಯನ್ನು ಸೇರಿಕೊಳ್ಳಲು ನೀವೆ ಹೇಳುತ್ತೀರಿ, ಹಾಗೆಯೇ ಡಾಕ್ಟರ್ಗಳ ವಿಷಯವಾಗಿ ಬಂದರೆ ಎಲ್ಲಾ ಡಾಕ್ಟರ್ಗಳು ಯಾಕೆ ನಾವು ಇಂಥದರಲ್ಲಿ ಪರಿಣಿತರು ಅಂತಾ ಹೇಳುತ್ತಾ ಬೋರ್ಡ್ ಹಾಕಿಕೊಳ್ಳುತ್ತಾರೆ ಹೇಳಿ, ಬರುವವರಿಗೆ ನಾವು ಇಂತದರಲ್ಲಿ ಪರಿಣಿತರಷ್ಟೆ, ಇನ್ನುಳಿದ ವಿಷಯಗಳ ಬಗ್ಗೆ ಅಲ್ಪವಾದ ಜ್ಣಾನವಿದೆ ಹಾಗೂ ಆ ಉಳಿದ ವಿಶೇಷ ಚಿಕಿತ್ಸೆಗಾಗಿ ಮತ್ತೊಬ್ಬ ಡಾಕ್ಟರರ ಅಗತ್ಯವಿದ್ದರೆ ಅವರ ವಿಳಾಸ ಕೊಡುತ್ತೇವೆಯೆಂದೋ ಅಥವಾ ನೀವೆ ಆ ಡಾಕ್ಟರರ ವಿಳಾಸವನ್ನು ಪತ್ತೆ ಹಚ್ಚಿ ಹೋಗುವುದಿಲ್ಲವೆ ಹಾಗೆ ? ಇದು ಕೂಡ

ಒಬ್ಬ ಪರ ಸ್ತೀ ಅಥವಾ ಪರಪುರಷರ ಸಂವಾದ ಬರೀ ಅನ್ಯೆತಿಕತೆಗೆ ಹೋಲಿಸುವುದಾದರೆ ಕೆಲವು ಇಲ್ಲಿ ಪ್ರಕಟಿಸಬಾರದ ಎಷ್ಟೋ ವಿಚಾರಗಳು ಬಗ್ಗೆ ನನಗೆ ಜಿಗುಪ್ಸೆ ಹುಟ್ಟುತ್ತದೆ, ಅಂತದ್ದನ್ನೇ ಸಮಾಜ ಸುಲಭವಾಗಿ ಒಪ್ಪಿ ಅದಕ್ಕೆ ತನ್ನದೇ ರೀತಿಯಲ್ಲಿ ಅರ್ಥಕೊಡುವಾಗ ಇನ್ನು ಒಂದು ನಿಷ್ಕಲ್ಮಶ ಸಂಬಂಧದಲ್ಲಿ ಅನ್ಯೆತಿಕತೆ ಡಂಬಾಚಾರಿಗಳ ಕುರುಡು ನಂಬಿಕೆಯಷ್ಟೆ.

ಎಷ್ಟೊ ಮದುವೆಯಾದ ಹುಡುಗರೂ ಹುಡುಗೀಯರೂ ಹೇಳುವುದ ನೀವು ಕೇಳಿರಬೇಕು, ನನ್ನ ಗಂಡ ನನಗೆ ಸರಿಯಾದ ಜೋಡಿಯಲ್ಲ ಅಥವಾ ನನ್ನ ಹೆಂಡತಿ ನನಗೆ ತಕ್ಕುದಾದವಳಲ್ಲ ಅಂತಾ ಹೇಳ್ತಿರ್ತಾರೆ, ಅಂದರೆ ಅದು ಹಣಕಾಸು, ಮರ್ಯಾದೆ, ಅಥವಾ ಅಂತಸ್ತಿಗೆ ಸರಿಸಮವಲ್ಲ ಅಂತ ಅಲ್ಲ ಮನಸ್ಸಿನ ಭಾವನೆಗಳ ಹೊರಹೊಮ್ಮುವಿಕೆಗೆ ಒಂದು ಚಡಪಡಿಕೆಗೆ ಸಿಗಬೇಕಾದ ವೇದಿಕೆ ಅವಳಲ್ಲ ಅಥವಾ ಅವನಲ್ಲ ಎಂಬುದಿಷ್ಟೆ. ನಿಮ್ಮ ಮನಸ್ಸಿನಲ್ಲಿ ಏಳುವ ರಾಗಲಹರಿಗೆ ಒಂದು ಆಯಾಮಬೇಕಷ್ಟೆ, ಅದಕ್ಕೆ ಪುರುಷ ಸ್ತ್ರೀ ಎಂಬ ಭೇಧವಿಲ್ಲ, ಅದಕ್ಕೆ ಹೆಚ್ಚಾಗಿ ವಯಸ್ಸಿನ ಮಿತಿಯಿಲ್ಲ, ಹಣ್ಣು ಹಣ್ಣು ಮುದುಕರಿಗೂ ಮುದುಕಿಯರಿಗೂ ನನಗೊಂದು ಸಂಗಾತಿಯ ಸಾಮೀಪ್ಯ ಬೇಕೆನ್ನುವುದು, ಅನ್ಯೆತಿಕತೆಯಲ್ಲ, ಅವರ ಮನಸ್ಸಿನ ಉದ್ವೇಗಕ್ಕೆ ಸಿಗಬೇಕಾದ ಒಂದು ವೇದಿಕೆ.

ಜೇಡರಬಲೆ

ಜೇನಾಗಿ ಹೋದೆಯಾ.....
ನನ್ನವಳೆ ಜೇನಾಗಿ ಹೋದೆಯಾ....
ಜಾನು ಎಂದು ಕರೆದಾಗ ನಾ
ನೀ ಜೇನಾಗಿ ಹೋದೆಯಾ...

ಹೋಗುವ ಮುಂಚೆ ಮರೆತೆ ನನ್ನನೇ
ನೂಕಿ ಹೋಗಿರುವೆ ಜೇಡರ ಬಲೆಯೊಳಗೆ
ಸೆಣಸಾಡುತಿರುವೆ ಇನ್ನೂ ಬರಲಾರದೆ ಹೊರಗೆ,
ಇರಲಾರದೆ ಒಳಗೆ,

ಜೇನಾಗಿ ಹೋದೆಯಾ.......
ಮನದಿನಿಯೆ ಜೇನಾಗಿ ಹೋದೆಯಾ.....
ಕಾದಿರುವುದು ಸಾಕಿನ್ನು ಒಳಗೆ,
ಇರಲಾರೆ ಇನ್ನೊಂದು ಗಳಿಗೆ,
ಹೋದೆ ನೀ ಮರೆತು ನನ್ನಯ ಬೇಗೆ,
ಹೇಳಲಿ ಹೇಳು ಈ ಸಂಕಟ ಯಾರು ಯಾರಿಗೆ ?

ಇರಲಾರದೆ ಒಂದಿಷ್ಟು ನಗೆ ನನ್ನವಳೆ
ಬಿಡಿಸು ಬಾ, ನಾನಿರುವೇ ಈಗಲೂ ನೀ ಹೆಣೆದ ಜೇಡರಬಲೆಯೊಳಗೆ

ಹುಡುಗಿ ಪ್ರೀತಿಸುತ್ತಾಳೆ.....

ಶ್ರೀಮಂತ ಸೊಕ್ಕಿರುವ ಪ್ರೀತಿಯನ್ನು
ಸಿರಿವಂತ ಗುಣವಿರುವ ಒತ್ತಾಸೆನನ್ನು
ಕಣ್ಣೀರನ್ನು ಪನ್ನೀರನ್ನಾಗಿಸುವ ಪರಿಕೀಯನಾದರೂ ಅವನು

ಹುಡುಗಿ ಪ್ರೀತಿಸುತ್ತಾಳೆ.....

ಹೊಂಡದಲೂ ಕೊಂಡಯ್ಯುವ ಸುಜುಕಿಯಷ್ಟು ಸರಾಗದ ಮನಸನ್ನು
ಸಾಪ್ಟವೇರನಾಗಿಲ್ಲದಿದ್ದರೇನು ಸಾಪ್ಟ್ ಆದ ಗುಣವನ್ನು
ಸುಖಾಸುಮ್ಮನೆ ಅಭಿನಂದಿಸುವವನನ್ನು

ಹುಡುಗಿ ಪ್ರೀತಿಸುತ್ತಾಳೆ.....

ಟಿವಿಯಿಲ್ಲದಿದ್ದರೂ ಪ್ರೀತಿಯ ಠೀವಿಯ ಅರಿತವನನ್ನು
ಫ್ರಿಜಿಲ್ಲದಿದ್ದರೂ ತಣ್ಣಗಿನ ನಗುವನ್ನು
ಮೊಬ್ಯೆಲಿನಲ್ಲದಿದ್ದರೂ ಮೊಂಬತ್ತಿಯಂತೆ ಬಾಳಾಗುವವನನ್ನು

ಹುಡುಗಿ ಪ್ರೀತಿಸುತ್ತಾಳೆ....

ಡೌರಿ(Dowry)ಯೇ ಪಡೆಯದ ಮದುಮಗನನ್ನು
ಪ್ರೀತಿಯ ಪರಾಕಾಷ್ಟೆಗೆ ಕೊಂಡೊಯ್ಯುವ ಮೃದುತನವನ್ನು
ಪೀಸಿಲ್ಲದೆ ನೇವರಿಸುವ ಅವಳಿರುವತೆಯನ್ನುಯಾವತ್ತಿನ ಹುಡುಗಿಯರೂ ಪ್ರೀತಿಸುವುದು ಹೀಗೆ
ಅರಿತವಿಲ್ಲ ಪ್ರೀತಿಯ ಇನ್ನೊಂದು ಬೇಗೆ

ಮತ್ತದೆ ಭಾವ ಅವಳ ನೆನಪಿನಂತೆ

ಅವಳೊಂದಿಗಿನ ಪ್ರೀತಿಯ ದಿನಗಳ ನೆನೆದೂ
ದಿನವೂ ನಾನು ಒದ್ದೆ ಒದ್ದೆ,
ಅವಳ ನೆನಪು ಒದೆಯುತ್ತಿದೆ
ಪುಟ್ಟ ಕಂದಮ್ಮನ ಒದೆತದಂತೆ,

ಪ್ರೀತಿ ಬದಲಾಗಿರಬಹುದು ಅವಳಲ್ಲಿ,
ಬದಲಾಗಿಲ್ಲ ಬದುಕು ಅವಳಿಲ್ಲದಿಲ್ಲಿ,
ಹರಿವ ನೀರೆಂದೇ, ನಾನು ಪ್ರೀತಿಸಿದ್ದು
ಅರಿಯಲೇ ಹೋದಳೆಲ್ಲ ಎಂದು ನಿಮಗೆ ನೆನಪಿಸಿದ್ದು,
ನನ್ನೀ ಹೃದಯದ ಕಡೆಯಿಂದ ಹರಿಯುತಿದೆ,
ಕೆಲವೊಮ್ಮೆ ಹೃದಯವೇ ಕ್ಯೆಕಿತ್ತು ಬರುವಂತೆ,
ಅವಳ ಪ್ರತಿ ಮಾತು ಕನವರಿಸುತಿಹೆ,
ಅವಳಿಲ್ಲದೇ ಹೋದಳೇ ಬಾಳಪಯಣದಲೆಂದು,

ಈ ಪ್ರೀತಿಗೆ ಷಡ್ವ್ಯೆರಿಗಳೆಂದರೆ ಕಡಿಮೆಯೇ,
ವಿರೋಧಕ್ಕೆ ನಿಂತವರೂ ಊರಿಗೆ ಊರೇ,
ಬೆಂಬಲವಿರಲಿಲ್ಲ ಈ ಮುಗ್ಧ ಪ್ರೀತಿಗೆ,
ಬೇಡದಾಗಿತ್ತು ನಾನೇ ಅವಳಿಗೆ,

ಮತ್ತದೇ ಭಾವ, ಅವಳ ನೆನಪು,
ಕಣ್ಣ ಹೊಳಪು, ಮನದ ಬಿಸುಪು,
ನೆನೆದಿದ್ದೇನೆ, ಒದ್ದೆ ಮುದ್ದೆಯಾಗಿದ್ದೇನೆ ಇನ್ನೂ..........................................

ಸರಣಿ ೧ - ಡಾ. ಎಚ್. ನರಸಿಂಹಯ್ಯ ಒಂದು ನೆನಪು

ಡಾ|| ಹೆಚ್‌. ನರಸಿಂಹಯ್ಯನವರು ೬ನೇ ಜೂನ್ ೧೯೨೦ರಂದು ಕೋಲಾರ ಜಿಲ್ಲೆಯ
ಗೌರೀಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಒಂದು ಬಡ, ಹಿಂದುಳಿದ ಕುಟುಂಬದಲ್ಲಿ
ಹುಟ್ಟಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಈಗ ಅವರಾರೂ ಇಲ್ಲ.

ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ,
೧೯೩೫ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿ. ಎಸ್‌ಸಿ.
(ಆನರ್ಸ್) ಮತ್ತು ಎಂ. ಎಸ್‌ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು.
ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.

೧೯೪೬ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ, ಭೌತಶಾಸ್ತ್ರ
ಆಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಆ ಮೇಲೆ ಹನ್ನೆರೆಡು ವರ್ಷಗಳು
ಪ್ರಿನ್ಸಿಪಲ್‌ರಾಗಿದ್ದರು. ೧೯೭೨ ರಿಂದ ೧೯೭೭ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ
ಉಪಕುಲಪತಿಗಳು. ಅವರ ಕಾಲದಲ್ಲಿ ಹಲವು ಮಹತ್ತರ ಕಾರ್ಯಗಳ ಸಾಧನೆ. ಈಗ ಎಚ್. ಎನ್.
ನ್ಯಾಷನಲ್ ಎಜುಕೇಷನ್ ಸೊಸೈಟಿ ಆಪ್ ಕರ್ನಾಟಕದ ಅಧ್ಯಕ್ಷರು.

ವಿದ್ಯಾರ್ಥಿ ದೆಶೆಯಲ್ಲಿ ಅವರು ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದರು.
ಅಧ್ಯಾಪಕರಾದ ಮೇಲೂ ೧೯೪೬ರಿಂದ ಇಲ್ಲಿಯ ತನಕ ಕಾಲೇಜ್ ಹಾಸ್ಟಲೇ ಅವರ ಮನೆ. ಒಟ್ಟು ೫೭
ವರ್ಷಗಳ ವಿದ್ಯಾರ್ಥಿನಿಲಯದ ಜೀವನ ಒಂದು ವಿಶಿಷ್ಟ ಧಾಖಲೆ.

೧೯೪೨ ನೆಯ ಇಸಿವಿಯಲ್ಲಿ, ಸೆಂಟ್ರಲ್ ಕಾಲೇಜ್‌ನಲ್ಲಿ ಮೂರನೆಯ ಬಿ.ಎಸ್‌ಸಿ, ಆನರ್ಸ್
ತರಗತಿಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರು ಮೊದಲು ಮಾಡಿದ 'ಕ್ವಿಟ್ ಇಂಡಿಯಾ'
ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ.
ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡಾ ಜೈಲುವಾಸ.

ಅಮೆರಿಕಾದ ಓಹೈಒ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ (Ohio State University) ಮೂರು
ವರ್ಷದಲ್ಲಿ ಅಭ್ಯಾಸ ಮಾಡಿ ನ್ಯೂಕ್ಲಿಯಾರ್ ಫಿಸಿಕ್ಸ್‌ನಲ್ಲಿ ೧೯೬೦ರಲ್ಲಿ ಡಾಕ್ಟರೇಟ್
ಪದವಿ ಪಡೆದರು. ಅಲ್ಲಿಯ ಪರೀಕ್ಷೆಗಳಲ್ಲಿಯೂ ಉತ್ತಮ ಮಟ್ಟದ ಪ್ರಥಮ ಶ್ರೇಣಿ. ಏಳು
ವರ್ಷಗಳ ನಂತರ ಅಮೇರಿಕಾದ ಸದರನ್ ಇಲ್ಲಿನಾಯ್ ವಿಶ್ವವಿದ್ಯಾಲಯ (Southern Illinois
University) ದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

ಇವರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ನಾಲ್ಕು ನ್ಯಾಷನಲ್ ಕಾಲೇಜು, ಐದು ನ್ಯಾಷನಲ್
ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ
ಮೀಸಲು. ಅವರ ಸರ್ವಸ್ವವನ್ನು ಈ ಸಂಸ್ಥೆಗಳಿಗೆ ಕೊಟ್ಟಿದ್ದಾರೆ. ಅಲ್ಲದೆ ಈ
ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಈ
ಸಂಸ್ಥೆಗಳ ಪೈಕಿ ಆರೇಳು ಸಂಸ್ಥೆಗಳು, ಇವರ ಪ್ರಯತ್ನದ ಫಲವಾಗಿ ಗ್ರಾಮಾಂತರ
ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ.

ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೌಢ್ಯದ
ವಿರುದ್ಧ ಸತತ ಹೋರಾಟ. ಮುವತ್ತು ವರ್ಷಗಳ ಹಿಂದೆ ಬೆಂಗಳೂರು ಸೈನ್ಸ್ ಪೋರಂ (Bangalore
Science forum) ಎಂಬ ವಿಜ್ಞಾನ ವೇದಿಕೆಯ ಸ್ಥಾಪಕ ಅಧ್ಯಕ್ಷರು. ಸಂಗೀತ, ನಾಟಕ, ನೃತ್ಯ
ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದಾರೆ. ಜಯನಗರದ ನ್ಯಾಷನಲ್
ಕಾಲೇಜಿನಲ್ಲಿರುವ ಬೆಂಗಳೂರು ಲಲಿತ ಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ.
ಅವರ ವಿಶಿಷ್ಟ ಸೇವೆಗಾಗಿ `ರಾಜ್ಯ ಪ್ರಶಸ್ತಿ` , ಭಾರತ ಸರ್ಕಾರದ `ಪದ್ಮ ಭೂಷಣ`,
ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ.
ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ
ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ
ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ
ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು
`ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್‌ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್
ಆಫ್ ದಿ ಪ್ಯಾರಾ ನಾರ್ಮಲ್` (Committee for Scientific Investigation of the
claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ`. ಕರ್ನಾಟಕ ರಾಜ್ಯ ವಿಧಾನ
ಪರಿಷತ್‌ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ
ಸದಸ್ಯರಾಗಿದ್ದರು.

ಉತ್ತಮ ಅಧ್ಯಾಪಕ, ದಕ್ಷ ಆಡಳಿತಗಾರ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು. ಮಾನಸಿಕ,
ದೈಹಿಕ ನೋವುಗಳ ಮಧ್ಯೆಯೂ ಅವರ ಹಾಸ್ಯ ಮನೋಭಾವವನ್ನು ಕಾಣಬಹುದು. ಸ್ನೇಹಮಯ
ಮಾನವತಾವಾದಿ, ವಿಚಾರವಾದಿ. ಒಳ್ಳೆಯ ಅಭ್ಯಾಸಗಳಿಂದ ಕೂಡಿದ ಸ್ವಚ್ಛ, ಸರಳ ಸಂಯಮದ ಜೀವನ.
ತೆರೆದ ಮನದಷ್ಟೇ ತೆರೆದ ಜೀವನ. ಅದಮ್ಯ ಆತ್ಮವಿಶ್ವಾಸ. ಜೀವನ ಪರ್ಯಂತ ಹೋರಾಟ.
ಕರ್ಮಯೋಗಿ. ಎಪ್ಪತ್ಮೂರರ ಹೊಸ್ತಿನಲ್ಲಿಯೂ ನಿರಂತರ ದುಡಿಮೆ. ರಾಷ್ಟ್ರೀಯವಾದಿ, ಸುಮಾರು
ಅರವತ್ತು ವರ್ಷಗಳಿಂದ ಖಾದಿದಾರಿ. ಪಟ್ಟು ಹಿಡಿದು ಕಾರ್ಯಸಾಧಿಸುವ ಮನೋಭಾವ, ದೃಡ
ಮನಸ್ಸು.

ಅನಾಥ ವಿದ್ಯಾರ್ಥಿಯಾಗಿ ಹಳ್ಳಿಯಿಂದ ಬಂದು ಯಾವ ಜಾತೀಯ, ರಾಜಕೀಯ ಬೆಂಬಲವಿಲ್ಲದೆ
ಉನ್ನತ ಸ್ಥಾನಗಳನ್ನು ಗಳಿಸಿ ಐವತ್ತೇಳು ವರ್ಷಗಳ ಹಿಂದೆ ಯಾವ ಶಾಲೆಯಲ್ಲಿ ಓದಿದರೋ,
ತದನಂತರ ಯಾವ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರೋ ಅದೇ ಶಾಲಾ ಕಾಲೇಜುಗಳ ಆಡಳಿತ
ಮಂಡಳಿಯಾದ ಪ್ರತಿಷ್ಟಿತ ನ್ಯಾಷನಲ್ ಸೊಸೈಟಿಗೆ ಅಧ್ಯಕ್ಷರಾಗಿರುವುದು ಒಂದು ಅಪೂರ್ವ
ಸಾಧನೆ.

ಸರಣಿ ೨ - ಡಾ. ಎಚ್. ನರಸಿಂಹಯ್ಯ - ವಿಜ್ನಾನ ಮತ್ತು ಸಮಾಜದಲ್ಲಿನ ಪಾತ್ರ

ವಿಜ್ಞಾನದ ಯಾವುದೇ ವಿಭಾಗವೂ ಸಮಾಜದ ಒಳಿತಿಗಾಗಿ ಉಪಯೋಗಕ್ಕೆ ಬರಬಲ್ಲದು. ಅನೇಕ ಕ್ಷೇತ್ರಗಳಲ್ಲಿ ರಸಾಯನಶಾಸ್ತ್ರದ ಬಳಕೆ ಕಂಡು ಬರುತ್ತದೆ. ರಾಸಾಯನಿಕ ಕ್ರಿಯೆ ಇಲ್ಲದ ಕಾರ್‍ಯಗಳು ಅಪರೂಪ. ಜೀವನವೇ ಬಹುಪಾಲು ರಸಾಯನಶಾಸ್ತ್ರವಾಗಿ ಕಂಡುಬರುತ್ತದೆ. ವಿeನದ ಈ ವಿಭಾಗದ ಪ್ರಾಧಾನ್ಯ ತುಂಬಾ ಹೆಚ್ಚಾಗಿದ್ದು, ಆಳವಾದ ಸಂಶೋಧನೆಯ ಮೂಲಕ ಮನುಷ್ಯಕುಲದ ಸಂತೋಷಕ್ಕಾಗಿ ಇದರ ಉಪಯೋಗವಾಗಬೇಕು.

ಸಂಶೋಧನೆ ದಿನದಿನಕ್ಕೆ ಹೆಚ್ಚು ದುಬಾರಿಯಾಗುತ್ತಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಗೆ ಇಷ್ಟೇ ಪ್ರಮುಖವಾದ ಅನೇಕ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಇರುತ್ತದೆ. ವಿಜ್ಞಾನದ ಸಂಶೋಧನೆಯಲ್ಲಿ, ಗುಣಮಟ್ಟದಲ್ಲಾಗಲಿ, ಸಾಮರ್‍ಥ್ಯದಿಂದಾಗಲಿ ಭಾರತದ ವಿಜ್ಞಾನಿಗಳು, ಜಗತ್ತಿನ ಯಾವುದೇ ವಿಜ್ಞಾನಿಗಳಿಗೂ ಕಡಿಮೆ ಅಲ್ಲ. ವಿಜ್ಞಾನದ ಯೋಜನೆಗಳಿಗೆ, ಕಾರ್‍ಯಕ್ರಮಗಳಿಗೆ, ಅಪಾರ ಹಣವನ್ನು ಮುಂದುವರೆದ ದೇಶಗಳು ತೊಡಗಿಸುವಂತೆ ನಮ್ಮಲ್ಲಿ ಸಾದ್ಯವಿಲ್ಲದೆ ಇರುವುದರಿಂದ ಹೊಸ ಸಂಶೋಧನೆಗಳಲ್ಲಿ ಆ ದೇಶಗಳೊಡನೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಪರದೇಶಗಳನ್ನು ಸುಮ್ಮನೆ ಅನುಸರಿಸುವುದಕ್ಕಿಂತ ನಮ್ಮ ಸಮಾಜಕ್ಕೆ ಪ್ರಸ್ತುತವಾದ ಸಮಸ್ಯೆಗಳ ಕಡೆ ಸಂಶೋಧನೆ ಹೆಚ್ಚಿನ ಗಮನ ಕೊಡಬೇಕು.

ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಮುಂದುವರೆಸಿಕೊಂಡು ಹೋಗುವುದರ ಜತೆಗೆ ಬೇರೆ ಕೆಲವು ಕರ್ತವ್ಯಗಳನ್ನು ನಿರ್ವಹಿಸುವುದು ಅವಶ್ಯಕ. ವಿಜ್ಞಾನಿಗಳು ಹೆಚ್ಚಿನ ಶಿಕ್ಷಣ ಪಡೆದ ಧೀಮಂತರಾಗುವುದರಿಂದ ಅವರು ತಮ್ಮ eನವನ್ನು ಸಾಮಾನ್ಯ ವ್ಯಕ್ತಿಗಳ ಮನೋಭಾವನ್ನು ತಿದ್ದುವ ಕಾರ್ಯದಲ್ಲಿ ಉಪಯೋಗಿಸಿ, ಸಮಾಜದ ಸುಧಾರಣೆಗೆ ಸಹಾಯಕರಾಗಬೇಕು. ವಿಜ್ಞಾನದ ಮತ್ತು ವೈeನಿಕ ಮಾರ್ಗಗಳು ಜನಪ್ರಿಯವಾಗುವಲ್ಲಿ ವಿeನಿಯ ಪ್ರಾಮುಖ್ಯ ಬಹಳ ಹಿರಿದಾದುದು. ವಿಜ್ಞಾನಕ್ಕೆ ಸಂಬಂದಿಸಿದಂತೆ ಮಾತೃಭಾಷೆಗಳಲ್ಲಿ, ಇಂಗ್ಲೀಷನಲ್ಲಿ ಜನಪ್ರಿಯ ಲೇಖನಗಳನ್ನು ಬರೆಯುವುದು ಮತ್ತು ಉಪನ್ಯಾಸ ಕೊಡುವುದು-ಈ ದಿಸೆಯಲ್ಲಿ ವಿಜ್ಞಾನಿಗಳು ಪ್ರಯತ್ನಿಸಬೇಕು. ವಿಜ್ಞಾನಿಯ ಮನೋಭಾವವು ಅವನು ದಂತಗೋಪುರದಲ್ಲಿರುವ ಅಪೂರ್ವಬುದ್ಧಿಶಾಲಿ ಎಂಬ ಭಾವನೆಯನ್ನು ಜನರಲ್ಲಿ ಉಂಟುಮಾಡುವ ರೀತಿಯಲ್ಲಿ ಇರಬಾರದು. ಸಾಮಾನ್ಯ ಜನತೆ ವಿಜ್ಞಾನಿಯನ್ನು ವಿಶೇಷ ಜಾತಿಗೆ ಸೇರಿದ ಪ್ರಾಣಿ ಎಂದು ಅಂದುಕೊಳ್ಳುವಂತಾಗಬಾರದು. ಒಟ್ಟು ಸಮಾಜದ ದುಡಿಮೆಯಲ್ಲಿ, ಶಿಕ್ಷಣವನ್ನು ಪಡೆದಿರುವ ವಿಜ್ಞಾನಿ ಸಾಮಾನ್ಯ ಜನರ ಯೋಚನಾ ಶಕ್ತಿಯನ್ನು ಬೆಳೆಯಿಸುವಲ್ಲಿ ಶ್ರಮಿಸುವುದು ಆತನ ಕರ್ತವ್ಯವೇ ಹೊರತು ಉಪಕಾರವೇನೂ ಅಲ್ಲ. ಇಂತಹ ಸನ್ನಿವೇಶಗಳು ನಡೆಯುವ ಸಂದರ್ಭದಲ್ಲಿ ಜನಪ್ರಿಯ ಉಪನ್ಯಾಸಗಳನ್ನು, ಉಪಯುಕ್ತ ವಿಜ್ಞಾನ ಪ್ರದರ್ಶನಗಳನ್ನು ಏರ್ಪಡಿಸಿದರೆ ವಿಜ್ಞಾನದಲ್ಲಿ ಆಸಕ್ತರಾಗಿರುವ ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಹಾಯಕವಾಗುತ್ತದೆ.

ನಮ್ಮ ದೇಶದಲ್ಲಿ ವಿಜ್ಞಾನಿಗಳು ಹಲವಾರು ಸಂದರ್ಭಗಳಲ್ಲಿ ಪರಸ್ಪರ ವಿರುದ್ಧವಾದ ಎರಡು ರೀತಿಯ ಮನೋಭಾವವನ್ನು ವ್ಯಕ್ತಪಡಿಸುವುದು ದುರದೃಷ್ಟ. ಪ್ರಯೋಗಶಾಲೆಗಳಲ್ಲಿ ಅವರು ಹೆಚ್ಚಿನ ವಿಚಾರಶಕ್ತಿಯನ್ನು, ವೈಜ್ಞಾನಿಕ ಮನೋಭಾವನ್ನು ವ್ಯಕ್ತಪಡಿಸುತ್ತಾರೆ. ಆದರೆ ಜೀವನದಲ್ಲಿ ಅವರ ಯೋಚನಾಶಕ್ತಿ ರಜೆ ತೆಗೆದುಕೊಂಡಿದೆಯೋ ಏಂಬಂತೆ ಅವೈಜ್ಞಾನಿಕವಾಗಿ ವರ್ತಿಸುತ್ತಾರೆ. ಒಂದೇ ಮನಸ್ಸು ತರ್ಕಬದ್ದವಾಗಿ, ಅತಾರ್ಕಿಕವಾಗಿ ಯೋಚಿಸುತ್ತದೆ. ಯೋಚನೆಯಲ್ಲಿ ಏಕಸೂತ್ರತೆಯೆ ಕಂಡುಬರುವುದಿಲ್ಲ. ಅವನ ಮೆದುಳಿನಲ್ಲಿ ಎರಡು ಸ್ವಿಚ್‌ಗಳು ಇದ್ದಂತೆ ತೋರುತ್ತದೆ. ಒಂದು ಸ್ವಿಚ್ ತರ್ಕಬದ್ದವಾಗಿ ಯೋಚಿಸುತ್ತಿದ್ದರೆ, ಎರಡೆನೆಯ ಸ್ವಿಚ್ ತರ್ಕವಿಲ್ಲದೆ ಯೋಚಿಸುತ್ತಿರುತ್ತದೆ. ಇದಕ್ಕಿಂತ ಮತ್ತಾವ ಪವಾಡ ಬೇಕು?

ಅಧ್ಯಾಪಕನು ತರಗತಿಯಲ್ಲಿ ಸಿದ್ಧಾಂತವನ್ನು ವೈಜ್ಞಾನಿಕವಾಗಿ ಪಾಠ ಹೇಳುತ್ತಾನೆ. ಆದರೆ ಇದೇ ವ್ಯಕ್ತಿ ಚರ್ಚಿನಲ್ಲಿ ಅಥವಾ ದೇವಸ್ಥಾನದಲ್ಲಿ ಯಾವುದೇ ಸಂಕೋಚವಿಲ್ಲದೆ ವಿಜ್ಞಾನಕ್ಕೆ ಅಸಂಗತವಾದ ವಿಕಾಸವಾದವನ್ನು ನಂಬಿಕೆಯ ಮೂಲಕ ಬೋಧಿಸುತ್ತಾನೆ. ಮನುಷ್ಯ ಯಶಸ್ವಿಯಾಗಿ ಚಂದ್ರನನ್ನು ತಲುಪಿ ಬಂದಿದ್ದಾನೆ. ಆದರೂ ಗ್ರಹಣದ ಬಗೆಗೆ ಎರಡು ಸಿದ್ಧಾಂತಗಳಿವೆ, ಒಂದು ತರಗತಿಯಲ್ಲಿ ಬೋಧನೆಗೆ, ಮತ್ತೊಂದು ಮನೆಯಲ್ಲಿ ಆಚರಣೆಗೆ. ಭೌತಶಾಸ್ತ್ರವನ್ನು ಪಾಠ ಹೇಳುತ್ತಾ, ಹಸ್ತ ಸಾಮುದ್ರಿಕವನ್ನು ನಂಬುವವರುಂಟು. ಹಾಗೆಯೇ ಹಲವಾರು ವಿಜ್ಞಾನಿಗಳು ಜ್ಯೋತಿಷ್ಯವನ್ನು ನಂಬುವುದು ಅಪರೂಪವೇನೂ ಅಲ್ಲ. ಒಬ್ಬ ವಿಜ್ಞಾನಿಯು ವಸ್ತುಸ್ಥಿರತೆಯ ವಿಶ್ವನಿಯಮವು ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ವಸ್ತು ಮತ್ತು ಚೈತನ್ಯಗಳ ಸ್ಥಿರತೆಯ ನಿಯಮವು ಪುಟ್ಟಪರ್ತಿ ಹಾಗೂ ವೈಟ್‌ಫೀಲ್ಡ್‌ಗಳಿಗೆ ಅನ್ವಯಿಸುವುದಿಲ್ಲವೆಂದು ಹೇಳಿದರೆ ಅದು ಶತಮೂರ್ಖತನ. ಎಚ್.ಎಂ.ಟಿ ಕೈಗಡಿಯಾರವೊಂದು ಶೂನ್ಯದಲ್ಲಿ ಸೃಷ್ಟಿಯಾಗುತ್ತದೆ ಎಂದು ನಂಬುವುದು ಮೂರ್ಖತನವಲ್ಲವೆ? ನೀರು, ಪೆಟ್ರೋಲ್ ಆಗಿ ಪರಿವರ್ತನೆ ಆಗಬಲ್ಲದು, ಕ್ಯಾನ್ಸರ್, ಡಯಾಬಿಟಿಸ್ ನಂತಹ ರೋಗಗಳು `ಬೂದಿ` ಹಚ್ಚುವುದರಿಂದ ವಾಸಿಯಾಗುತ್ತವೆ ಎಂದು ಹೇಳುವುದರಲ್ಲಿ ಏನಾದರೂ ಆರ್ಥವಿದೆಯೆ? ಆಶಿಕ್ಷಿತನೊಬ್ಬ ಹೀಗೆ ಹೇಳಿದರೆ ಅವನನ್ನು ಕ್ಷಮಿಸಬಹುದು. ಆದರೆ ವಿದ್ಯಾವಂತರು ಈ ರೀತಿಯ ಆಭಿಪ್ರಾಯಗಳನ್ನು ವ್ಯಕ್ತಪಡಿಸುವುದಲ್ಲದೆ, ಈ ರೀತಿಯ ಪವಾಡಗಳ ಬಗ್ಗೆ ತಮ್ಮ ಗಾಢವಾದ ನಂಬಿಕೆಗಳನ್ನು ವ್ಯಕ್ತಪಡಿಸುವುದು ಶೋಚನೀಯ. ಇದು ನಿಜವಾದರೆ ಜಗತ್ತಿನಲ್ಲಿ ವಿeನದಲ್ಲಿ ನಡೆದಿರುವ ಎಲ್ಲ ಶೋಧನೆಗಳು ಅರ್ಥರಹಿತವಾಗುತ್ತವೆ. ನಮ್ಮ ದೇಶದಲ್ಲಿ ಮೂಢನಂಬಿಕೆಗಳು ತುಂಬಿ ತುಳುಕುತ್ತಿದ್ದು ಜಗತ್ತಿನ ವಿಚಾರವಂತರ ನಡುವೆ ನಗೆಗೀಡಾಗುವಂತೆ ಮಾಡಿವೆ. ಮೂಢ ನಂಬಿಕೆಯನ್ನು ಪ್ರತಿಪಾದಿಸುವ ವಿದ್ಯಾವಂತನು, ಮೂಢನಂಬಿಕೆಯನ್ನು ಹೊಂದಿರುವ ಅವಿದ್ಯಾವಂತನಿಗಿಂತ ಹೆಚ್ಚು ಆಪಾಯಕಾರಿ ಎಂದು ಹೇಳುವ ಅವಶ್ಯಕತೆಯೇ ಇಲ್ಲ.

ಈ ರೀತಿಯ ವಿಚಿತ್ರ, ಪ್ರಕೃತಿಯನ್ನು ಮೀರಿದ ಶಕ್ತಿಯ ಬಗ್ಗೆ ನಂಬಿಕೆಯನ್ನು ಹೊಂದಿರುವವರು. ಮುಗ್ಧ ಜನ ಅಷ್ಟೇ ಅಲ್ಲ, ಜನಜನಿತರಾದ ಶಿಕ್ಷಣವೇತ್ತರೂ ಸೇರಿದ್ದಾರೆ. ಇಂತಹ ಸ್ಥಿತಿಯ ಬಗ್ಗೆ, ವಿಜ್ಞಾನಿಗಳ ಪ್ರತಿಕ್ರಿಯೆ ಯಾವ ಬಗೆಯದು? ಅವುಗಳನ್ನು ಗಮನಿಸದೆ ಇರುವುದು ಸರಿಯೆ? ವಿಜ್ಞಾನಿಗಳು ಮತ್ತು ಬುದ್ಧಿಜೀವಿಗಳು ಇಂತಹವರ ಬಗ್ಗೆ ಹೊಂದುವ ಉದಾಸೀನಭಾವ, ನಿಷ್ಕ್ರಿಯತೆ ಸಮಾಜಕ್ಕೆ ತುಂಬಾ ಹಾನಿಯನ್ನುಂಟು ಮಾಡುತ್ತದೆ. ಈ ರೀತಿಯ ತಟಸ್ಥ ಮನೋಭಾವ ಅರ್ಥರಹಿತ, ಅವೈಜ್ಞಾನಿಕ ವಿಚಾರಗಳಿಗೆ ಪರೋಕ್ಷವಾಗಿ ಸಮರ್ಥನೆ ಕೊಟ್ಟಂತೆ ಆಗುತ್ತದೆ. ಮೌನವು ಸಮ್ಮತಿಯ ಲಕ್ಷಣ ಆಗಿ ಬಿಡಬಹುದು.

ಸತ್ಯಶೋಧನೆಯ ಹಂಬಲದಿಂದ, ಸಮಾಜದ ಸುಧಾರಣೆಯ ಉದ್ಧೇಶದಿಂದ ಈ ರೀತಿಯ ಅಸಾಮಾನ್ಯ ಪ್ರಕ್ರಿಯೆಗಳನ್ನು ಕುರಿತು ವೈಜ್ಞಾನಿಕವಾಗಿ ಪರಿಶೀಲನೆ ನಡೆದು ಸಮಾಜಕ್ಕೆ ಸತ್ಯ ಸಂಗತಿಯು ತಿಳಿಯುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ವಿಜ್ಞಾನ ಮತ್ತು ಮೂಢನಂಬಿಕೆಗಳು, ಎರಡನ್ನೂ ಒಟ್ಟಾಗಿ ಸಮಾಜದಲ್ಲಿ ಉಳಿಸಿಕೊಂಡತಾಗುತ್ತದೆ. ಪ್ರಯೋಗ ಶಾಲೆಯಲ್ಲಿ ನಡೆಯುವ ಸಾಂಪ್ರಾದಾಯಿಕ ಸಂಶೋಧನೆಯಷ್ಟೆ ಈ ರೀತಿಯ ವೈಜ್ಞಾನಿಕ ಪರಿಶೀಲನೆಯೂ ಜರೂರಿಂದ ನಡೆಯಬೇಕಾದ ಕೆಲಸ.

ಯಾವುದೇ ವ್ಯಕ್ತಿ ನೀರನ್ನು ಪೆಟ್ರೋಲ್‌ನ್ನಾಗಿ ಪರಿವರ್ತಿಸಲು ಸಾಧ್ಯವಿದ್ದರೆ, ಅವನ ಶಕ್ತಿಯನ್ನು ಇಂಧನ ಸಮಸ್ಯೆಯ ಪರಿಹಾರಕ್ಕೆ ಸೂಕ್ತವಾಗಿ ಉಪಯೋಗಿಸಿಕೊಳ್ಳಬೇಕು. ಅದು ಸುಳ್ಳು ಘೋಷಣೆಯಾಗಿದ್ದರೆ ಆ ವ್ಯಕ್ತಿಯು ಎಷ್ಟೇ ಪ್ರಬಾವಶಾಲಿಯಾಗಿದ್ದರೂ, ಮೋಸದ ಅಪಾದನೆಯ ಕಾರಣ ಶಿಕ್ಷೆಗೆ ಒಳಪಡಿಸಬೇಕು. ಆಹಾರ ವಸ್ತುಗಳ, ಔಷದಿಗಳ ಕಲಬೆರಕೆ, ಅಸಮರ್ಕವಾದ ತೂಕ ಅಳತೆಯ ಉಯೋಗ ಮುಂತಾದ ವಂಚನೆಯ ಗುಂಪಿಗೆ (ಇವು) ಸೇರುತ್ತವೆ.

ಆದರೆ ಸುಳ್ಳು ದೇವಮಾನವರು, ಮತ್ತಿತರರು ಶತಮಾನಗಳಿಂದ ಮುಗ್ಧ ಬಡ ಜನತೆಯನ್ನು ದೇವರು, ಧರ್ಮದ ಹೆಸರಿನಲ್ಲಿ ವಂಚಿಸುತ್ತಾ ಬಂದಿದ್ದಾರೆ. ಅವರುಗಳ ಶಿಕ್ಷೆಗೆ ಒಳಪಡುವುದಿರಲಿ, ಅಪಾರವಾದ ಸಂಪತನ್ನು ಗಳಿಸಿ ವಿಲಾಸೀ ಜೀವನವನ್ನು ನಡೆಸುತ್ತಿದ್ದಾರೆ. ವಿಜ್ಞಾನದ ಪ್ರಚಲಿತ ನಿಯಮಗಳನ್ನು ಮೀರುವ ಪವಾಡಗಳ ಬಗ್ಗೆ ವಿಜ್ಞಾನಿಗಳು ಪ್ರಬಲವಾಗಿ ವಿರೋಧಿಸಿ ಅವುಗಳ ಕೆಡುಕನ್ನು ತಪ್ಪಿಸಬೇಕು. ಯಾವುದೇ ಅವೈಜ್ಞಾನಿಕವಾದ ಹೇಳಿಕೆ ಪರೀಕ್ಷೆಗೆ ಗುರಿಪಡಿಸಬೇಕು. ಪ್ರತಿಯೊಂದು ಮೂಢನಂಬಿಕೆಯೂ ಪರಿಶೀಲನೆಗಳ ಮೂಲಕ ನಿರಾಕರಣವಾಗಬೇಕು. ಭಯ ಮತ್ತು ಅಜ್ಞಾನಗಳಿಂದ ರೂಪಿತವಾಗಿರು ಮೂಢನಂಬಿಕೆಗಳು, ಆತ್ಮವಿಶ್ವಾಸವನ್ನು ಖಂಡಿಸುತ್ತವೆ; ಸ್ವತಂತ್ರ ಆಲೋಚನೆಯನ್ನು ಮೊಟಕುಗೊಳಿಸುತ್ತವೆ. ಮಾಟ ಮಂತ್ರದಂತಹ ಪ್ರಗತಿವಿರೋಧಿ ಚಟುವಟಿಕೆಗಳು ನಮ್ಮ ಸಮಾಜಕ್ಕೆ ಹೆಚ್ಚಿನ ಆಘಾತವನ್ನುಂಟುಮಾಡಿವೆ.

ವಿಜ್ಞಾನಿಗಳು ಅತ್ಯಂತ ವಿನಮ್ರವಾಗಿ ತಮ್ಮ ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ರಹಸ್ಯವಾಗಿಸುವುದು (Mystifying) ಹೆಚ್ಚಿನ ಗೊಂದಲ ಉಂಟುಮಾಡಬಹುದು. ಉನ್ನತ ಶಿಕ್ಷಣಾಲಯಗಳಲ್ಲಿ ವೈಜ್ಞಾನಿಕ ಪರಿಶೀಲನೆಯ ಯೋಜನೆಗಳು ಕಾರ್ಯಗತವಾಗಬೇಕು. ಪವಾಡಗಳು, ಮೂಢನಂಬಿಕೆಗಳು, ಮಂತ್ರವಾದ ಮುಂತಾದವುಗಳ ಬಗ್ಗೆ ವಿಜ್ಞಾನದ ಸಭೆಗಳಲ್ಲಿ, ಸಮ್ಮೇಳನಗಳಲ್ಲಿ, ಚರ್ಚಿಸಬೇಕು. ಸಮಾಜದ ಮೇಲೆ ಪ್ರಭಾವ ಬೀರುತ್ತಿರುವ ಸಮಸ್ಯೆಗಳಿಂದ ವಿಜ್ಞಾನಿಯು ಪ್ರತ್ಯೇಕವಾಗಿ ಇರುವುದು ಸಾಧ್ಯವಿಲ್ಲ. ವಿಜ್ಞಾನಿಯು ತನ್ನ ಶೋಧನೆಯ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕು. ಸಂಶೋಧನೆಯು ನಾಲ್ಕು ಗೋಡೆಗಳ ಮಧ್ಯಕ್ಕೆ ಸೀಮಿತವಾಗದೆ, ಜೀವನ ಮತ್ತು ಅಲ್ಲಿನ ಸಮಸ್ಯೆಗಳು ಅವನ ಸಂಶೋಧನಾ ಕ್ಷೇತ್ರವಾಗಬೇಕು. ಹಲವಾರು ಅತಾರ್ಕಿಕವಾದ ನಡವಳಿಕೆಗಳಿಂದ ಸಮಾಜವು ಅನ್ಯಾಯಕ್ಕೆ ಒಳಪಟ್ಟಿದ್ದು, ಉಸಿರು ಕಟ್ಟುವ ವಾತಾವರಣವಿದೆ. ಅದನ್ನು ಶುದ್ಧಗೊಳಿಸುವಲ್ಲಿ ವಿಜ್ಞಾನಿಗಳು ಇನ್ನೂ ಪ್ರಯತ್ನಿಸದೆ ಇರುವುದು ಸರಿಯಲ್ಲ. ಈ ಸಮಾವೇಶದಲ್ಲಿ ಪರಿಸರದ ಪರಿಶುದ್ಧತೆಯ ಬಗ್ಗೆ ಸಂಪ್ರಬಂಧವೊಂದಿದೆಯೆಂದು ತಿಳಿದು ಸಂತೋಷವಾಯಿತು. ಈ ಸಂಪ್ರಬಂಧದ ಉದ್ಧೇಶ ನೀರು ಮತ್ತು ಗಾಳಿಯಿಂದ ಉಂಟಾಗುವ ಮಾಲಿನ್ಯವನ್ನು ಕುರಿತದ್ದು, ಇವುಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಎನ್ನುವುದು ನಿಜ. ಆದರೆ ಮಾನಸಿಕ ಬದುಕನ್ನು ಕಲುಷಿತಗೊಳಿಸಿರುವುದು ಹೆಚ್ಚು ಅಪಾಯಕಾರಿ. ಅದ್ದರಿಂದ ಮನುಷ್ಯನನ್ನು ಕಲುಷಿತಗೊಳಿಸಿರುವ ಎಲ್ಲ ಅಂಶಗಳ ಕಡೆಗೂ ಸೂಕ್ಷ್ಮವಾಗಿ ಗಮನಹರಿಸಿ, ಅವುಗಳನ್ನು ತ್ಯಜಿಸಿವುದು ಬಹಳ ಮುಖ್ಯ.

ವಿಜ್ಞಾನದ ಫಲಿತಗಳ ಬಗ್ಗೆ ಹೆಚ್ಚಿನ ಆದ್ಯತೆ ಕೊಡುವುದು, ವಿಜ್ಞಾನಿಗಳಲ್ಲಿ ಮತ್ತು ಸಮಾಜದಲ್ಲಿ ವಿಶೇಷವಾಗಿ ಕಂಡುಬರುತ್ತದೆ. ನನ್ನ ಅಭಿಪ್ರಾಯದಲ್ಲಿ ವಿಜ್ಞಾನದ ಮೂಲ ಉದ್ಧೇಶಗಳು (Basic Postualtes) ಕೂಡ ಅಷ್ಟೇ ಮುಖ್ಯ. ವಿಜ್ಞಾನದ ಬೆಲೆಯು ಅಪರಿಮಿತ ವಿಷಯ ಸಂಗ್ರಹ, ಅಂಕಿ ಅಂಶಗಳಿಗಳಷ್ಟೇ ಸೀಮಿತವಾಗಿರದೇ, ವೈಜ್ಞಾನಿಕ ಮನೋಧರ್ಮದಲ್ಲಿ ನಿಂತಿದೆ. ವೈಜ್ಞಾನಿಕ ಮನೋಧರ್ಮ ಮತ್ತು ಪದ್ಧತಿಗಳ ಬಗ್ಗೆ ಪಾಠಗಳು, ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಬೇಕು. ಎಲ್ಲ ಅಧ್ಯಾಪಕರು, ಎಲ್ಲ ವಿಜ್ಞಾನದ ಅಧ್ಯಾಪಕರು ವೈಜ್ಞಾನಿಕ iನೋಧರ್ಮವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ನಮ್ಮ ದೇಶವು ನೂರಾರು ವರ್ಷಗಳಿಂದ ಎದುರಿಸುತ್ತಿರುವ ಜಟಿಲವಾದ ಸಮಸ್ಯೆಗಳನ್ನು ವೈಜ್ಞಾನಿಕ ಮಾರ್ಗದಿಂದ ಮಾತ್ರ ಪರಿಹರಿಸಲು ಸಾಧ್ಯ. ನಮ್ಮ ಸಮಾಜ ಎದುರಿಸುತ್ತಿರುವ ಜಾತಿಯಂತಹ ಸಾಮಾಜಿಕ ಪಿಡುಗುಗಳ ಪರಿಹಾರ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವಗಳಿಂದ ಮಾತ್ರ ಸಾಧ್ಯ. ಆಗಮಾತ್ರ ಮಾನವೀಯ ಮೌಲ್ಯ ಮತ್ತು ನೀತಿ ಅವಲಂಬಿತ ವಿಶ್ವಧರ್ಮ ರೂಪಿತವಾಗಬಹುದು. ಧರ್ಮವು ನೀತಿಸ್ವರೂಪವನ್ನು ಹೊಂದಿರುವಂತಹದು. ಈ ರೀತಿಯ ಧರ್ಮವು ರಾಷ್ಟ್ರೀಯತೆಗಳ ಮೂಲವಾದ ಬೇಲಿಯನ್ನು ದಾಟಿ ಸ್ಥಾಪಿತವಾಗಬೇಕಾದರೆ ವಿಶ್ವಮಾನ್ಯತೆಯನ್ನು ಹೊಂದಿರುವ ವಿಜ್ಞಾನದ ತತ್ವಗಳನ್ನು ಅನ್ವಯಿಸುವುದರಿಂದ ಮಾತ್ರ ಸಾಧ್ಯ.

ವಿಜ್ಞಾನ ಮತ್ತು ಅದರ ಬಳಕೆಯು, ವೈಜ್ಞಾನಿಕ ಮನೋಧರ್ಮವನ್ನು ಪಡೆದು ಕಾರ್ಯಪ್ರವೃತ್ತವಾದರೆ ಬಡತನದ ನಿರ್ಮೂಲನ, ಶೋಷಣೆಯ ನಾಶ ಸಾಧ್ಯ. ಅದು ಪ್ರಗತಿವಿರೋಧೀ ಸಿದ್ಧಾಂತಗಳನ್ನು, ಸ್ವಹಿತಾಸಕ್ತಿಯನ್ನು ದೂರಮಾಡ ಬಲ್ಲದು.

ವಿಜ್ಞಾನಿಗಳಾಗಿ ನಾವು ನಮ್ಮ ಆತ್ಮಸಾಕ್ಷಿಗೆ, ವಿಜ್ಞಾನಕ್ಕೆ ಹಾಗೂ ಅದರ ಮಾರ್ಗಗಳಿಗೆ ಪ್ರಾಮಾಣಿಕರಾಗಿರೋಣ. ಜೀವನೋಪಾಯ ಮಾರ್ಗವಾಗಿ ವಿಜ್ಞಾನ ಇರುವುದು ಬೇಡ. ನಮಗೆ ಅದರಲ್ಲಿ ಜೀವಂತ ನಂಬಿಕೆ ಇರಬೇಕು. ನಾವು ತರ್ಕಬದ್ಧವಾಗಿ ದೈರ್ಯದಿಂದ ವರ್ತಿಸಿದಾಗ ಮಾತ್ರ ಸಮಾಜದ ಸುಧಾರಣೆ ಸಾಧ್ಯ.

ಸರಣಿ ೩ - ಡಾ. ನರಸಿಂಹಯ್ಯ - ಧರ್ಮ ಮತ್ತು ವ್ಯೆಚಾರಿಕ ಮನೋಭಾವ

ಶ್ರೀ ಸತ್ಯಸಾಯಿಬಾಬಾ ಅವರು ಹೊಂದಿರುವ ಪವಾಡ ಶಕ್ತಿಗಳನ್ನು ಕುರಿತು ದೇಶದಾದ್ಯಂತ ವಿಪುಲವಾದ ಚರ್ಚೆ ನಡೆಯುತ್ತಿತ್ತು. ಇದು ಆಗ ರಾಷ್ಟ್ರೀಯ ವಿವಾದದ ವಿಷಯವಾಗಿದೆ. ಅನೇಕ ದಿನಪತ್ರಿಕೆಗಳು ಮತ್ತು ನಿಯತಕಾಲಿಕಗಳು ಸಾಕಷ್ಟು ಪುಟಗಳನ್ನು ಈ ವಿಷಯದ ಚರ್ಚೆಗೆ ವಿನಿಯೋಗಿಸಿವೆ. ಹೆಚ್ಚು ಕಮ್ಮಿ ಇದು ಮನೆ ಮಾತಾಗಿತ್ತು.

ಬೆಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ರಚಿತವಾದ ಪವಾಡಗಳು ಮತ್ತು ಮೂಢನಂಬಿಕೆಗಳು ಕುರಿತು ವೈಜ್ಞಾನಿಕವಾಗಿ ತನಿಖೆ ಮಾಡಲು ರಚಿತವಾದ ಸಮಿತಿಯ ಪ್ರಯತ್ನಗಳು ಈ ವಿವಾದಕ್ಕೆ ಅವಕಾಶ ಮಾಡಿಕೊಟ್ಟಿರುವುದು ನಮಗೆ ತಿಳಿದಿರುವ ಸಂಗತಿ. ನಮ್ಮ ಸಮಾಜದಲ್ಲಿ ಬಹಳ ಪ್ರಮಾಣದಲ್ಲಿ ಮೂಢನಂಬಿಕೆಗಳು ಇವೆಯಲ್ಲವೆ, ಅವು ಸಮಾಜಕ್ಕೆ ಅನೇಕ ರೀತಿಯಲ್ಲಿ ಹಾನಿಯನ್ನು ಉಂಟು ಮಾಡಿವೆ. ಮತ್ತೆ ಕೆಲವು ವ್ಯಕ್ತಿಗಳು ತಮಗೆ ಸಾಮಾನ್ಯ ವ್ಯಕ್ತಿಗಳಿಂದ ಆಗದಂತಹ ಕಾರ್ಯಗಳನ್ನು ಮಾಡುವ ಸಾಮರ್ಥ್ಯ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ಈ ಸಮಸ್ಯೆಗಳನ್ನು ವಿಶ್ವವಿದ್ಯಾಲಯವು ಪರಿಶೀಲಿಸುವುದು ಅವಶ್ಯಕ ಮತ್ತು ಉಚಿತ ಎನ್ನಿಸಿತು. ೧೯೭೬ರ ಮಾರ್ಚ್ ತಿಂಗಳಲ್ಲಿ ವಿಶ್ವವಿದ್ಯಾಲಯವು ತನ್ನ ಆಯವ್ಯಯವನ್ನು ರೂಪಿಸುವ ಸಂದರ್ಭದಲ್ಲಿ ಈ ಉದ್ದೇಶಕ್ಕಾಗಿ ಇಪ್ಪತೈದು ಸಾವಿರ ರೂಪಾಯಿಗಳನ್ನು ತೆಗೆದಿಡಲಾಯಿತು. ಏಪ್ರಿಲ್ ಮೊದಲ ವಾರದಲ್ಲಿ ಉಪ ಕುಲಪತಿಯವರ ಅಧ್ಯಕ್ಷತೆಯಲ್ಲಿ, ಬೇರೆ ಬೇರೆ ಕ್ಷೇತ್ರಕ್ಕೆ ಸೇರಿದ ಹನ್ನೊಂದು ಜನರ ಸಮಿತಿಯನ್ನು ರಚಿಸಲಾಯಿತು.

ನಮ್ಮ ತನಿಖೆಯ ಕ್ಷೇತ್ರ ತುಂಬಾ ವಿಶಾಲ ಮತ್ತು ಅಸ್ಪಷ್ಟವಾದ್ದರಿಂದ ಮೊದಲ ಹಂತದಲ್ಲಿ ಉಚಿತವಾದ, ಸ್ಪಷ್ಟವಾದ ಕೆಲವು ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆಂದು ನಿಶ್ಚಯಕ್ಕೆ ಬಂದೆವು. ಶೂನ್ಯದಲ್ಲಿ ವಸ್ತುಗಳನ್ನು ಸೃಷ್ಟಿಸುವ ಅಸಹಜವಾದ ಸಂಗತಿಯ ಬಗ್ಗೆ ಸಹಜವಾಗಿಯೇ ಆಧ್ಯತೆ ಕೊಟ್ಟೆವು. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ನಾಲ್ಕು-ಐದು ವ್ಯಕ್ತಿಗಳು ನಮಗೆ ಹೊಳೆದರು. ಈ ಸಮತಿಯ ಉದ್ಧೇಶಗಳು ಪ್ರಕಟವಾದ ಕೂಡಲೇ ಶ್ರೀ ಶಿವಬಾಲಯೋಗಿಗಳು ತಮ್ಮ ಬೆಂಗಳೂರಿನ ಆಶ್ರಮಕ್ಕೆ ನನ್ನನ್ನು ಆಹ್ವಾನಿಸಿದರು. ನಾನು ಇಬ್ಬರು ಆಧ್ಯಾಪಕರ ಜೊತೆ ಆಶ್ರಮಕ್ಕೆ ಬೇಟಿ ಕೊಟ್ಟೆ. ಚರ್ಚೆಯ ಸಮಯದಲ್ಲಿ ಶೂನ್ಯದಲ್ಲಿ ಯಾವ ವಸ್ತುವನ್ನೂ ತಾವು ಸೃಷ್ಟಿಸುವುದಿಲ್ಲವೆಂದು ಸ್ವಾಮೀಜಿಯವರು ಸ್ಪಷ್ಟಪಡಿಸಿದರು. ಈ ರೀತಿಯ ಶಕ್ತಿಯನ್ನು ಪಡೆದಿದ್ದಾರೆ ಎಂದು ಹೆಸರು ಮಾಡಿದ್ದ ಕೊಡಗಿನ ಶ್ರೀ ಸ್ವಾಮಿ ಶಂಕರ ಮತ್ತು ಮೈಸೂರಿನ ಸಮೀಪದ ಶ್ರೀ ಸಚ್ಚಿದಾನಂದ ಗಣಪತಿ ಸ್ವಾಮಿ ಅವರು ತಾವು ಯಾವುದೇ ರೀತಿಯ ಪವಾಡಗಳನ್ನು ಮಾಡುವುದಿಲ್ಲವೆಂದು ಬಹಿರಂಗವಾಗಿ ತಿಳಿಸಲು ಪ್ರಾರಂಭಿಸಿದರು. ಇಷ್ಟರಲ್ಲಿಯೇ `ದೇವ ಬಾಲಕ` ಎಂದು ಹೆಸರಾದ ಶ್ರೀ ಬಾಳ ಶಿವಯೋಗಿ ಅವರು ಬೆಂಗಳೂರಿಗೆ ಬಂದಿದ್ದು, ಅವರಿಂದ ನನಗೆ ಆಹ್ವಾನ ಬಂದಿತು. ಚರ್ಚೆಯ ಸಂದರ್ಭದಲ್ಲಿ ನಾನು ಅವರ ಬೆರಳುಗಳ ಚಲನೆಯನ್ನು ಹಾಗೂ ಕಾವಿಯ ನಿಲುವಂಗಿ ಒಳಗೆ ಇದ್ದ ಮುಷ್ಟಿಯನ್ನು ಗಮನಿಸುತ್ತಿದ್ದೆ. ಚರ್ಚೆ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ವಾಮೀಜಿಯವರು ತಮ್ಮ ಕೈಯನ್ನು ತಕ್ಷಣ ಮುಂದೆ ಚಾಚಿ, ಮುಚ್ಚಿದ ಮುಷ್ಟಿಯನ್ನು ವೃತ್ತಾಕಾರವಾಗಿ ತಿರುಗಿಸಿ, ಒಂದು ಚಿಕ್ಕ ವಿಗ್ರಹವನ್ನು, ರುದ್ರಾಕ್ಷಿಯನ್ನು ನನಗೆ ಕೊಟ್ಟರು. ನಾನು ಅಂತಹುದನ್ನು ನಿರೀಕ್ಷಿಸುತ್ತಿದ್ದರಿಂದ, ನನಗೆ ಏನೂ ಆಶ್ಚರ್ಯವಾಗಲಿಲ್ಲ. ಅವರ 'ಪವಾಡ' ನನಗೆ ಸ್ಪಷ್ಟವಾಗಿಯೇ ಅರಿವಾಯಿತು. ಈ ಕಾರ್ಯದಲ್ಲಿ ಅವರು ಇನ್ನೂ ಅನನುಭವಿ. ಈ ' ಕಲೆ' ಯಲ್ಲಿ ಅವರು ಕಲಿಯಬೇಕಾದ್ದು ಇನ್ನೂ ಬಹಳ ಇದೆ. ಆದರೆ ಅವರು ಪ್ರಾಮಾಣಿಕ ವ್ಯಕ್ತಿ. ಯಾವುದೇ ವಸ್ತುವನ್ನು ಸೃಷ್ಟಿಸುವ ಅಥವಾ ಬದಲಾಯಿಸುವ ಶಕ್ತಿ ತಮಗೆ ಇಲ್ಲವೆಂದು ಅವರು ಒಪ್ಪಿಕೊಂಡರು. ಸತ್ಯಸಾಯಿಬಾಬಾರ ಪರಿಶೀಲನೆಯ ನಂತರ ವಾಸ್ತವ ಸಂಗತಿಗಳನ್ನು ತಿಳಿಸುತ್ತೇನೆ ಎಂದು ಅವರು ಅಭಿಪ್ರಾಯಪಟ್ಟರು.

ಸತ್ಯಸಾಯಿಬಾಬಾರನ್ನು ನೋಡುವ ಮುಂಚೆ ಪಾಂಡವಪುರದ ಎಂಟು ವರ್ಷದ ಬಾಲಕ, ಶ್ರೀ ಸಾಯಿಕೃಷ್ಣರನ್ನು ಪರೀಕ್ಷೆಗೆ ಒಳಪಡಿಸಬೇಕೆಂದು ನಿಶ್ಚಿಯಿಸಿದೆವು. ಶೂನ್ಯದಲ್ಲಿ ವಿಭೂತಿಯನ್ನು ಉಂಟಮಾಡುವುದರಲ್ಲಿ ಅವರು ಬಹಳ ಪ್ರಸಿದ್ಧರಾಗಿದ್ದರು. ಯಾವ ರೀತಿ ಪಾಂಡವಪುರ ಪವಾಡ ಬೆಳಕಿಗೆ ಬಂತು ಎಂಬುದನ್ನು ಇನ್ನೊಮ್ಮೆ ಬರೆಯುತ್ತೇನೆ.

ಈ ತನಿಖೆಯ ಫಲಿತಾಂಶ ವಿಶೇಷ ಪರಿಣಾಮವನ್ನುಂಟುಮಾಡಿತು. ಸಮಿತಿಯ ಅರ್ಹತೆ, ಸಾಮರ್ಥ್ಯಗಳ ಬಗೆಗೆ ಕೆಲವು ಅನುಮಾನಗಳನ್ನು ಹೊಂದಿದ್ದವರು ಸಹ ಈ ಪರಿಶೀಲನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಪವಾಡದ ಕಟ್ಟುಕಥೆಗಳನ್ನು ಶೋಧಿಸಿದ್ದಕ್ಕಾಗಿ ಸಮಿತಿಯನ್ನು ಅಭಿನಂದಿಸಿ ನೂರಾರು ಪತಗಳು ಬಂದವು. ಪತ್ರಿಕೆಗಳು ಈ ಮುಖ್ಯ ವಿಷಯಕ್ಕೆ ಹೆಚ್ಚಿನ ಪ್ರಚಾರ ಕೊಟ್ಟವು. ಇಷ್ಟರಲ್ಲಿ ಶೂನ್ಯದಲ್ಲಿ ವಸ್ತುಗಳ ಸೃಷ್ಟಿಯ ಬಗ್ಗೆ ಪರಿಶೀಲಿಸಲು ಅವಕಾಶ ಮಾಡಿಕೊಡುವಂತೆ ಕೋರಿ ಶ್ರೀ ಸತ್ಯಸಾಯಿ ಬಾಬಾ ಅವರಿಗೆ ಮೂರು ಪತ್ರಗಳನ್ನು ಬರೆದಿದ್ದೆ. ಆದರೆ ಅವುಗಳಿಗೆ ಅವರಿಂದ ಯಾವ ಉತ್ತರವೂ ಬರಲಿಲ್ಲ.

ಈ ಮೂರು ಪತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಇದಕ್ಕೆ ಸಂಬಂಧಿಸಿದ ವಿವಾದ ದೇಶದ ಎಲ್ಲೆಡೆ ಪ್ರಚಾರಕ್ಕೆ ಬಂತು. ಇಷ್ಟರಲ್ಲಿಯೇ ಕೆಲವು ಸ್ವಾರಸ್ಯಕರ ಬೆಳವಣಿಗೆ ಕಂಡುಬಂತು. ಶ್ರೀ ಸತ್ಯಸಾಯಿಬಾಬಾರ 'ಮುಖವಾಣಿ' ಗಳು ಪಾಂಡವಪುರದ ರಹಸ್ಯ ಬಯಲಾದ ಕೂಡಲೇ, ಸಾಯಿಕೃಷ್ಣರಿಗೂ, ಸಾಯಿಬಾಬಾರಿಗೂ ಯಾವುದೇ ಸಂಬಂಧವಿಲ್ಲವೆಂದು ಘೋಷಿಸಿದರು. ಪಾಂಡವಪುರದ ಎಲ್ಲ ಚಟುವಟಿಕೆಗಳು ಸಾಯಿಬಾಬಾರ ಹೆಸರಿನಲ್ಲಿಯೇ ನಡೆಯುತ್ತಿತ್ತು ಎಂಬ ಅಂಶವನ್ನು ಓದುಗರ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಸಾಯಿಬಾಬಾರ ಸ್ಫೂರ್ತಿಯಿಂದಲೇ ಈ 'ದೇವಬಾಲಕನು' ನು 'ಪವಾಡ' ಗಳನ್ನು ಮಾಡುತ್ತಿದ್ದನೆಂಬುದು ಜನಜನಿತ ಸಂಗತಿ. ಅಲ್ಲಿನ ಭಕ್ತರು ಸಾಯಿಬಾಬಾರನ್ನು 'ಮೈನ್‌ಸ್ವಿಚ್'ಗೂ ಬಾಲಕನನ್ನು 'ಬಲ್ಬಿಗೂ' ಹೋಲಿಸುತ್ತಿದ್ದರು. ಈ 'ದೇವಬಾಲಕ' ನು 'ಪ್ರೌಢದೇವ' ನಾಗಿ ಬೆಳವಣಿಗೆಯನ್ನು ಹೊಂದುವುದಕ್ಕೆ ಸಮಿತಿಯು ತಡೆಯನ್ನುಂಟುಮಾಡಿದ್ದು ಸಂತೋಷದ ಸಂಗತಿ. ಈ ಬಾಲಕನ 'ದೈವತ್ವ' ದ ಬೆಳವಣಿಗೆ ಯಾವ ಅಡಿಯೂ ಉಂಟಾಗದಿದ್ದರೆ ಬಹುಶಃ ಕಾಲಕ್ರಮೇಣ ಈ ಗುಂಪಿಗೆ ಸೇರಿದ 'ಐವತ್ತು ವರ್ಷದ ದೇವರಂತಹ' ವ್ಯಕ್ತಿಗಳನ್ನು ಮೀರಿಸುತ್ತಿದ್ದ ಎಂದು ತೋರುತ್ತದೆ.

ಈ ವಿವಾದ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ವೈಟ್‌ಫೀಲ್ಡ್‌ನ ಶ್ರೀ ಸತ್ಯಸಾಯಿ ಕಾಲೇಜಿನಲ್ಲಿ ಸಮಾರಂಭವೊಂದು ನಡೆಯಿತು. ಈ ಸಭೆಯ ಕಾರ್ಯಕಲಾಪವನ್ನು ನೋಡಿದಾಗ ಅದರ ಮುಖ್ಯ ಉದ್ಧೇಶ ವಿಶ್ವವಿದ್ಯಾಯಲಯದ ಸಮತಿಯನ್ನು ಆಕ್ಷೇಪಿಸುವುದೇ ಆಗಿತ್ತು ಎಂಬುದು ಸ್ಪಷ್ಟವಾಯಿತು. ಶ್ರೀ ಸತ್ಯಸಾಯಿಬಾಬಾರವರು ತಮ್ಮ ಉಪನ್ಯಾಸದಲ್ಲಿ ವಿಶ್ವವಿದ್ಯಾಲಯದ ಸಮಿತಿಯನ್ನು ಉಗ್ರವಾಗಿ ಖಂಡಿಸಿದರು. ತಮ್ಮ 'ಪವಿತ್ರ ದೇಹ' ದಿಂದ ವಿಷಕಾರಿದರು. ನನ್ನನ್ನು ಮತ್ತು ಸಮಿತಿಯ ಇತರ ಸದಸ್ಯರನ್ನು ನಾಯಿಗಳೆಂದು, ಇರುವೆಗಳೆಂದು ಕರೆದರು. ತಮ್ಮನ್ನು ನಕ್ಷತ್ರಕ್ಕೂ, ಆಗಾಧವಾದ ಸಮುದ್ರಕ್ಕೂ ಹೋಲಿಸಿಕೊಂಡರು. ಜಗತ್ತಿನ ಯಾವುದೇ ಶಕ್ತಿಯು ತಮ್ಮನ್ನು ಪರೀಕ್ಷಿಸಲು ಸಾಧ್ಯವಿಲ್ಲವೆಂದು ಘೋಷಿಸಿದರು.

ಈ ವಿವಾದದ ಪ್ರಾಮುಖ್ಯವನ್ನು ಅರಿತ ದಿನಪತ್ರಿಕೆಗಳು ಹಾಗೂ ನಿಯತಕಾಲಿಕಗಳ ಪ್ರತಿನಿಧಿಗಳು ಪುಟ್ಟಪರ್ತಿಗೆ ಸಂದರ್ಶನವನ್ನು ಕೋರಿ ತೀರ್ಥಯಾತ್ರೆ ಕೈಗೊಂಡರು. ಇದಕ್ಕೆ ಮುಂಚೆ ಪ್ರಮುಖ ವ್ಯಕ್ತಿಗಳು ಅವರ 'ದರ್ಶನ' ಕ್ಕೆ ದಿನಗಟ್ಟಲೆ, ಗಂಟೆಗಟ್ಟಲೆ ಕಾಯಬೇಕಾಗಿತ್ತು. ಈಗ ಪರಿಸ್ಥಿತಿ ಬದಲಾಗಿತ್ತು. ಪತ್ರಿಕಾ ಪ್ರನಿಧಿಗಳಿಗಾಗಿ ಸಾಯಿಬಾಬಾರವರು ಆತಂಕದಿಂದ, ಕಾತುರದಿಂದ ಕಾಯುವ ಸ್ಥಿತಿ ಬಂತು. ತಮ್ಮ ಸಮರ್ಥನೆಗಾಗಿ ದಿನಪತ್ರಿಕೆಗಳ, ವಾರಪತ್ರಿಕೆಗಳ ಕೆಲವು ವ್ಯಕ್ತಿಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ವ್ಯವಸ್ಥೆ ಮಾಡಿದರು. ಅವರ ಭಕ್ತರ ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಲು ಆರಂಭವಾದವು. ಈ ಎಲ್ಲಾ ಲೇಖನಗಳು ಅವರ ದೈವೀಗುಣಗಳನ್ನು ಕೊಂಡಾಡಿದವು. ನೀರನ್ನು ಪೆಟ್ರೋಲನ್ನಾಗಿ ಪರಿವರ್ತಿಸುವುದು, ಗುಣವಾಗದ ರೋಗಗಳನ್ನು ಗುಣಪಡಿಸುವುದು, ಸತ್ತವರನ್ನು ಬದುಕಿಸುವುದು, ವಸ್ತುಗಳನ್ನು ಸೃಷ್ಟಿಸುವುದು, ಈ ರೀತಿಯ ಅನೇಕ ಪವಾಡಗಳ ಬಗ್ಗೆ ವಿಚಿತ್ರ ವಿವರಣೆ ಬಂದಿತು. ಈ ಎಲ್ಲ ಅಂಶಗಳಿಂದ ಶ್ರೀ ಸತ್ಯಸಾಯಿಬಾಬಾ ಅವರು ನಿರ್ಮಲ, ಪರಿಶುದ್ಧ ದೇವರಲ್ಲದೆ ಬೇರೆ ಯಾರೂ ಅಲ್ಲ ಎಂಬ ತೀರ್ಮಾನಕ್ಕೆ ಬಂದರು. ನಿಜವಾಗಿಯೂ ದೇವರಾಗಿದ್ದರೆ ಅವರು ಮಾತನಾಡುವ ತೆಲುಗನ್ನು ಅನುವಾದಿಸಲು ಬೇರೆಯವರ ಅವಶ್ಯಕತೆ ಯಾಕೆ? ಯಾವುದೇ ಬಾಷೆಯನ್ನು ಸುಲಭವಾಗಿ ಮಾತನಾಡಲು ತಮ್ಮ ದೈವೀ ಶಕ್ತಿಯನ್ನು ಅವರು ಉಪಯೋಗಿಸಿಕೊಳ್ಳಬಹುದಿತ್ತು. ದೇವರು ಎಲ್ಲವನ್ನೂ ಬಲ್ಲವನು. ಆದರೆ ಸಾಯಿಬಾಬಾ ಅವರ ವಿಜ್ಞಾನ ಮತ್ತಿತರ ವಿಷಯಗಳ ಜ್ಞಾನ ಒಬ್ಬ ಪ್ರೌಢಶಾಲೆಯ ವಿದ್ಯಾರ್ಥಿಗಿಂತ ಕಮ್ಮಿ ಎಂದು ಖಂಡಿತವಾಗಿ ಹೇಳಬಲ್ಲೆ. ಎಲ್ಲ ವ್ಯಕ್ತಿಗಳಂತೆ ಈ 'ದೇವರು' ಕೂಡ ಅನೇಕ ವಿಷಯಗಳಲ್ಲಿ ಅಸಮರ್ಥ. ಈ ದೇವರು ಬರಗಾಲದ ಪ್ರದೇಶದಲ್ಲಿ ಮಳೆ ಬರಿಸಿದ್ದನ್ನಾಗಲೀ ವಿಪತ್ತುಗಳನ್ನು ನಿವಾರಿಸಿದ್ದನ್ನಾಗಲೀ, ಬತ್ತ, ಗೋದಿಗಳನ್ನು ಸೃಷ್ಟಿಸಿ ಬಡವರಿಗೆ ಹಂಚಿ ಸಹಾಯ ಮಾಡಿದ್ದನ್ನಾಗಲೀ ಯಾವಗಲೂ ನೋಡಲಾಗಿಲ್ಲ. ಯಾರಿಗೆ ಗೊತ್ತು, ಅವರಿಗೂ ಕೂಡ ತಮ್ಮದೇ ಆದ ಕಷ್ಟಗಳಿರಬಹುದು.

ಪಾಂಡವಪುರದ ಪವಾಡ ಕಧೆ ಬೆಳಕಿಗೆ ಬಂದ ನಂತರ ಹಾಗೂ ಶ್ರೀ ಸತ್ಯಸಾಯಿಬಾಬಾ ಅವರಿಗೆ ಎಚ್. ಎನ್. ಬರೆದ ಮೂರು ಪತ್ರಗಳು ಪ್ರಕಟವಾದ ಮೇಲೆ ಸಾಯಿಬಾಬಾ ಭಯಭೀತರಾಗಿದ್ದರು. ಅವರು ಈ ಎರಡು ತಿಂಗಳಲ್ಲಿ ಮಾಡಿರುವ ಉಪನ್ಯಾಸಗಳನ್ನು ವಸ್ತುನಿಷ್ಠವಾಗಿ ನೋಡಿದರೆ ಅವರ ಗೊಂದಲ ಮನಸ್ಥಿತಿ ಕಂಡುಬರುತ್ತದೆ. ತಮ್ಮ ಸಮರ್ಥನೆಗೆ ಎಲ್ಲ ರೀತಿಯ ಪ್ರಚಾರವನ್ನು ವಿವಿಧ ರೀತಿಯಲ್ಲಿ ಕೈಗೊಂಡಿದ್ದಾರೆ. ಇವನ್ನೆಲ್ಲಾ ನೋಡಿದರೆ ಅವರು ತಮ್ಮ ಆಸ್ತಿತ್ವಕ್ಕಾಗಿಯೇ ಹೋರಾಟ ನಡೆಸುತ್ತಿರುವಂತೆ ಕಂಡು ಬರುತ್ತಿತ್ತು.

ಶೂನ್ಯದಲ್ಲಿ ವಸ್ತುಗಳ ಸೃಷ್ಟಿ ಸಾಧ್ಯವೇ ಎಂಬುದು ನಮ್ಮ ಮುಂದಿನ ಪ್ರಶ್ನೆ. ಈ ರೀತಿಯ ಸೃಷ್ಟಿ ಮನುಷ್ಯನಿಗೆ ಮೀರಿದ್ದು ಆಗಿದ್ದು, ಎಲ್ಲ ವಿಜ್ಞಾನದ ನಿಯಮಗಳನ್ನು ಇದು ತಿರಸ್ಕರಿಸುತ್ತದೆ. ಈ ಅಸಾಮಾನ್ಯವಾದ ಪವಾಡದ ಮುಂದೆ ಇಂದಿನವರೆಗಿನ ಎಲ್ಲ ವಿಜ್ಞಾನದ ಶೋಧನೆಗಳು, ಸಾಧನೆಗಳು ಅಲ್ಪ ಪ್ರಮಾಣದಾಗುತ್ತದೆ. ಅದ್ದರಿಂದ ಪ್ರಾಯೋಗಿಕ ನೆಲೆಯಲ್ಲಿ ಇದು ಸಾಧ್ಯವೇ ಅಥವಾ ಅಲ್ಲವೇ ಎಂಬುದನ್ನು ನೋಡುವುದು ಮಾತ್ರ ನಮ್ಮ ಉದ್ಧೇಶ. ಶೂನ್ಯದಲ್ಲಿ ವಸ್ತುಗಳ ಸೃಷ್ಟಿ ಸಾಧ್ಯವಾದರೆ ಅದು ವಿಜ್ಞಾನದ ಪರಿಧಿಯಲ್ಲಿ ಕಂಡುಬರುವ ಪ್ರಯೋಗವೇ ಹೌದು. ಈ ಕಾರ್ಯದ ಬಗ್ಗೆ ನಾವು ವಿವರಣೆಯನ್ನು ಬಯಸುತ್ತಿಲ್ಲ. ಈ ಕಾರ್ಯ ನಿಜವಾದ ಪಕ್ಷದಲ್ಲಿ ಆ ವಿವರಣೆ ವಿಜ್ಞಾನದ ಕಕ್ಷೆಗೆ ಮೀರಿದ್ದು. ಪ್ರಯೋಗದ ಮೂಲಕ ಈ ಅಂಶವನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ನಮ್ಮ ಉದ್ಧೇಶ. ಈ 'ಅನುಭವ' ಕ್ರಿಯೆಯ ರೀತಿಯನ್ನಾಗಲಿ, ವಿವರಣೆಯನ್ನಾಗಲೀ ನನ್ನಂತಹ ಐಹಿಕ ವ್ಯಕ್ತಿಗಳು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದೇ ಇರಬಹುದು. ಇದು ಇಲ್ಲಿ ಮುಖ್ಯವಲ್ಲ. ಆದರೆ ಅವರು ತಮ್ಮ ಪ್ರಯೋಗವನ್ನು ಬಹಿರಂಗವಾಗಿ ಪ್ರಯೋಗಿಸುವುದು ಅವಶ್ಯಕ. ಅವರು ಸಂಬಂಧವಿಲ್ಲದ ವಾದಗಳನ್ನಾಗಲೀ, ಶಬ್ಧಗಳ ಸಂತೆಯನ್ನಾಗಲೀ ಪ್ರದರ್ಶಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಅಸಂಬದ್ಧ ತರ್ಕಗಳು ಸಮಸ್ಯೆಯನ್ನು ಗೊಂದಲಕ್ಕೆ ತಳ್ಳುತ್ತಿವೆಯಷ್ಟೆ. ಆದ್ದರಿಂದ ಅವರ ಶಿಷ್ಯರ ಪುಸ್ತಕಗಳಿಂದ ಅಧ್ಯಾಯ, ಅಧ್ಯಯಗಳನ್ನಲಾಗಲೀ, ಪಂಕ್ತಿಗಳನ್ನಾಗಲಿ ಉದ್ಧರಿಸುವುದು ಅನವಶ್ಯಕ. ತಮ್ಮ ಸ್ವಂತ ಅನುಭವಗಳನ್ನು ತಿಳಿಸುವುದರ ಮೂಲಕ ಸಮಸ್ಯೆಗೆ ಬಣ್ಣ ಕೊಡುವುದು ಬೇಡ. ಶ್ರೀ ಸತ್ಯಸಾಯಿಬಾಬಾ ಅವರು ನಮ್ಮ ಪ್ರಯೋಗಗಳಿಗೆ ಸಹಕರಿಸಿದರೆ ಸಾಕು. ಬೇರೆಯವರ ಪುರಾವೆಗಳಾಗಲೀ, ಸಮರ್ಥನೆಗಳಾಗಲೀ ಅನವಶ್ಯಕ.

ಈ ಪವಾಡದ ಬಗ್ಗೆ ನನ್ನಂತಹವರಿಗೆ ಅನೇಕ ಅನುಮಾನಗಳು ಕಾಡುತ್ತಿವೆ. ಮೊದಲನೆಯದಾಗಿ ಅವರು 'ಸೃಷ್ಟಿಸುವ' ಯಾವುದೇ ವಸ್ತುಗಳು ಅವರ ಮುಷ್ಟಿಗಾತ್ರಕ್ಕಿಂತ ಕಡಿಮೆ ಇರಲು ಕಾರಣವೇನು? ಎರಡನೆಯದಾಗಿ ಅವರು ಸೃಷ್ಟಿಸುವ ಕೈಗಡಿಯಾರ, ಉಂಗುರ ಅಥವಾ ಮತ್ತಾವುದೇ ವಸ್ತುವು ಮೊದಲು ಪ್ರಪಂಚದಲ್ಲಿ ಇರುವಂತಹುದೇ ಯಾಕೆ ಆಗಿರುತ್ತದೆ? ಇಲ್ಲಿ ಕಂಡು ಬರುವ ವಸ್ತುಗಳನ್ನೇ ಅವರು ಪ್ರದರ್ಶಿಸುತ್ತಾರೆ. ಆದ್ದರಿಂದ ಅವರು ದೊಡ್ಡ ಗಾತ್ರದ ಕುಂಬಳಕಾಯಿಯನ್ನಾಗಲೀ ಅಥವಾ ಮೂರು ಅಡಿಯ ಲೋಹದ ಮೂರ್ತಿಯನ್ನಾಗಲೀ ಯಾಕೆ ಸೃಷ್ಟಿಸಬಾರದೆಂದು ಎಚ್.ಎನ್ರವರ ಕೋರಿಕೆ. ಅವರು ತಮಗೆ ಇಷ್ಟ ಬಂದ ವಸ್ತುಗಳನ್ನು ಸೃ,ಷ್ಟಿಸದೆ, ನಾವು ಕೇಳಿದ ವಸ್ತುಗಳನ್ನು ಸೃಷ್ಟಿಸಬೇಕೆಂದು ಬಯಸುತ್ತೇನೆ. ಅನೇಕ ಸೂಕ್ಷ್ಮ ಭಾಗಗಳನ್ನು ಒಳಗೊಂಡಿರುವ ಗಡಿಯಾರವನ್ನು ಅವರು ಸೃಷ್ಟಿಸಲು ಸಾಧ್ಯವಿರಬೇಕಾದರೆ, ಅದಕ್ಕಿಂತ ಸರಳವಾದ ಕುಂಬಳಕಾಯಿ ಅಥವಾ ದೊಡ್ಡ ಲೋಹದ ಮೂರ್ತಿಯನ್ನು ಸೃಷ್ಟಿಸುವುದು ಅವರಿಗೆ ಸುಲಭವಾಗಬೇಕು. ತನ್ನದೇ ಆದ ಮೊಹರು ಇರುವ ವಸ್ತುಗಳನ್ನು ಸೃಷ್ಚಿಸುವುದರಿಂದ ಅದು ಮೂಲ ವಸ್ತುಗಳ ಸೃಷ್ಟಿಯಾಗಲಾರದು. ಈ ಉದ್ಧೇಶಕ್ಕಾಗಿ ಅವುಗಳನ್ನು ಮೊದಲೇ ಸುಲಭವಾಗಿ ತಯಾರಿಸಬಹುದು. ಇದರ ಜೊತೆಗೆ ಈ ಬಗೆಯ 'ಸೃಷ್ಟಿ'ಯು ಕೆಲವಾರು ನೈತಿಕ ಹಾಗೂ ಕಾನೂನಿ ಸಮಸ್ಯೆಗಳಿಗೆ ಒಳಪಡುತ್ತದೆ. ಹೆಚ್. ಎಂ. ಟಿ ವಾಚಿನ 'ಸೃಷ್ಟಿ' ನಿಜವಾದರೆ ಕಂಪೆನಿಯ ಪೇಟೆಂಟಿನ ಕಳುವಿನ ಪ್ರಶ್ನೆ ಬರುತ್ತದೆ. ಬೇರೆ ದೇಶಗಳಿಂದ ಅಮದಾದ 'ವಾಚ್‌ಗಳ ಸೃಷ್ಟಿ' ಕಂಡುಬಂದರೆ ಸುಂಕ ತಪ್ಪಿಸಿಕೊಂಡ ಅಪಾದನೆಯ ಜೊತೆಗೆ ಕಳ್ಳಸಾಗಾಣಿಕೆಯ ಅಪರಾಧಕ್ಕೆ ಅವಕಾಶವಾಗುತ್ತದೆ. ಚಿನ್ನದ ವಸ್ತುಗಳ 'ಸೃಷ್ಟಿಸಿ' ಅದನ್ನು ಘೋಷಿಸದಿದ್ದರೆ ಚಿನ್ನ ನಿಯಂತ್ರಣ ಕಾನೂನನ್ನು ಮೀರಿದಂತೆ ಆಗುತ್ತದೆ. ಸಾಯಿಬಾಬರವರ 'ಸೃಷ್ಟಿ' ನಿಜವಾದರೆ ಮೇಲಿನ ಮುಖ್ಯ ಅಪರಾಧಗಳಿಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.

ಸತ್ಯಸಾಯಿಬಾಬಾ ಅವರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಕಾರ್ಯಕ್ರಮಗಳುನ್ನು ವಿಶ್ಲೇಷಿಸಿದೆವಾದರೆ ಎಲ್ಲ ಮನುಷ್ಯರಂತೆ ದೇಹರಚನೆ, ದೈನಿಕ ಅಭ್ಯಾಸಗಳು, ಕಂಡುಬರುತ್ತವೆ. ಅವರಿಗೂ ಕೆಲವು ವಿಷಯಗಳಲ್ಲಿ ಆಸಕ್ತಿ, ಅನಾಸಕ್ತಿಗಳು, ಸಾಮರ್ಥ-ಅಸಾಮರ್ಥ್ಯ, ವ್ಯವಹಾರಗಳಲ್ಲಿ ಕಂಡುಬರುವ ಸೋಲು-ಗೆಲುವುಗಳು, ಕೋಪಕ್ಕೆ ಒಳಗಾಗಿ ಆಗಾಗ್ಗೆ ನಿಂದನೆಯ ಮಾತುಗಳನ್ನು ಉಪಯೋಗಿಸವುದು, ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವುದು, ನಿರಾಶೆ-ಆತಂಕಗಳಿಗೆ ಒಳಗಾಗುವುದು, ಜ್ಞಾನದ ಪರಿಮಿತಿ ಈ ಎಲ್ಲ ಅಂಶಗಳು ಅವರು ಎಲ್ಲರಂತೆ ಮನುಷ್ಯರು ಎಂಬುಂದನ್ನು ತಿಳಿಸುತ್ತದೆ. ಕೆಲವು ಅಂಶಗಳಲ್ಲಿ ಎಲ್ಲೋ ಸ್ವಲ್ಪ ವ್ಯತ್ಯಾಸವಿರಬಹುದು. ಸಾರ್ವಜನಿಕವಾಗಿ ಗಮನಿಸಬಹುದಾದ ಅವರ ಸ್ವಭಾವಗಳಲ್ಲಿ, ದೇವರ ಯಾವುದೇ ಹೆಜ್ಜೆ ಗುರುತಾಗಲೀ, ಪರಿಪೂರ್ಣತ್ವದ ಸೂಚನೆಯಾಗಲೀ ಕಂಡುಬರುವುದಿಲ್ಲ. ಯಾವುದೇ ವ್ಯಕ್ತಿಯು ದೈವೀ ಗುಣವನ್ನು ಅಥವಾ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದರೆ ಅವನ ಯಾವುದೇ ಚಿಕ್ಕ ಕಾರ್ಯದಲ್ಲಿಯೂ ಅದು ಗೋಚರವಾಗಬೇಕು. ದೈವಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವುದು ಜೀವನ ಮಾರ್ಗ ಆಗಬೇಕು.

ಈ ವಿಷಯದಲ್ಲಿ ನನಗೆ ಬುದ್ಧ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿಯವರಂತಹ ಮಹಾನ್ ಆಧ್ಯಾತ್ಮವಾದಿಗಳ ನೆನಪು ಬರುತ್ತದೆ. ಅವರ ಜೀವನಗಳು ತೆರೆದಿಟ್ಟ ಪುಸ್ತಕಗಳು, ಅವರ ನೆಲೆ 'ತೆರೆದ ಮನಗಳು'. ಸ್ವಾಮಿ ವಿವೇಕಾನಂದರ ಕೊಠಡಿಗೆ ಯಾರೇ ಹೋಗಬಹುದಿತ್ತು, ಗಾಂಧೀಜಿಯವರ ಶಿಬಿರವು ಗಾಜಿನಂತೆ ಪಾರದರ್ಶಕವಾಗಿದ್ದು, ಸಾರ್ವಜನಿಕ ಪ್ರದೇಶದಂತೆ ಇತ್ತು. ಭಗವಾನ್ ಬುದ್ಧನ ವಾಸಸ್ಥಳಕ್ಕೆ ಆಕಾಶವೇ ಚಾವಣಿಯಾಗಿತ್ತು. ಅವರುಗಳ ಸರಳವಾದ, ಕಟ್ಟುನಿಟ್ಟಾದ ಬದುಕನ್ನು ಪಾಲಿಸಿದರು. ಯಾರೇ ಯಾವ ಪ್ರಶ್ನೆಯನ್ನೂ ಕೇಳಿದರೂ ಅವರು ಉತ್ತರಿಸಿದರು. ತಮ್ಮನ್ನು ಅಂಧವಾಗಿ ಅನುಕರಿಸಬೇಡಿರೆಂದು ಅವರುಗಳು ಎಲ್ಲರನ್ನೂ ಕೇಳಿಕೊಂಡರು. ಅವರ ಎಲ್ಲ ಹೇಳಿಕೆಗಳೂ ವೈಜ್ಞಾನಿಕ ದೃಷ್ಟಿಕೋಣವನ್ನು ಹೊಂದಿದ್ದವು. ಗಾಂಧೀಜಿಯವರು ತಮ್ಮ ಆತ್ಮ ಚರಿತ್ರೆಯನ್ನು 'ಸತ್ಯದ ಶೋಧನೆ' ಎಂದೇ ಕರೆದಿದ್ದಾರೆ. ತಿರುವಣ್ಣಾ ಮಲೈನ ರಮಣ ಮಹರ್ಷಿಗಳು ಕೂಡ ಶ್ರೇಷ್ಠ ವ್ಯಕ್ತಿಯಾಗಿದ್ದು, ನಮ್ಮ ಗೌರವಕ್ಕೆ ಪಾತ್ರರಾಗಿದ್ದಾರೆ. ಅಂತಿಮ ಸತ್ಯವನ್ನು ಕಂಡುಕೊಳ್ಳುವಲ್ಲಿ ಅವರೆಲ್ಲಾ ವಿನಯ ಮತ್ತು ವೈಚಾರಿಕತೆಯನ್ನು ವ್ಯಕ್ತಪಡಿಸಿದರು.

ಸತ್ಯಸಾಯಿಬಾಬಾ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದು ಅವರ ಕರ್ತವ್ಯ. ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳ ಬೇಕಾದ ಅವರು ತಮಗೆ ಇದೆಯೆಂದು ಹೇಳಿಕೊಳ್ಳುವ ಆಧ್ಯಾತ್ಮಿಕ ಶಕ್ತಿಗಳನ್ನು ಬಹಿರಂಗವಾಗಿ ತೋರ್ಪಡಿಸುವುದು ಅವಶ್ಯಕ. ಅವರ ಬಗ್ಗೆ ಪೂರ್ವಗ್ರಹಪೀಡಿತ ಅಥವಾ ಪೂರ್ವಗ್ರಹವಿಲ್ಲದೆ ಅನುಮಾನಪಡುತ್ತಿರುವ ಸಂಶಯ ಪರಿಹಾರವಾಗುತ್ತದೆ. ಇದು ಸಾರ್ವಜನಿಕರ ದೃಷ್ಟಿಯಿಂದ ಪ್ರಾಮುಖ್ಯವನ್ನು ಪಡೆದುಕೊಂಡಿದೆ. ತಮ್ಮಲ್ಲಿ ನಂಬಿಕೆ ಇರುವವರಿಗಿಂತ ಹೆಚ್ಚಾಗಿ ಇಲ್ಲದೇ ಇರುವವರ ಕಡೆ ಹೆಚ್ಚು ಗಮನ ಹರಿಸಬೇಕಾದ್ದು ಅವರ ಕರ್ತವ್ಯ. ಪ್ರೀತಿ, ನಂಬಿಕೆ ಮತ್ತು ಪೂರ್ವಗ್ರಹಗಳಿಲ್ಲದೆ ತಮ್ಮೆಡೆಗೆ ಬರುವವರಿಗೆ ದರ್ಶನ ಕೊಡುತ್ತೇವೆ ಎಂದು ಅವರು ಹೇಳಿಕೊಳ್ಳುವುದರಲ್ಲಿ ಸಂತೋಷಪಡುತ್ತಾರೆ. ಹಿಂದೆ ಹಾಗೂ ಇತ್ತೀಚಿನ ಕೆಲವು ವಾರಗಳಲ್ಲಿ ಅವರನ್ನು ಕಂಡ ವ್ಯಕ್ತಿಗಳೆಲ್ಲ ಮೇಲಿನ ನಿಯಮಗಳಿಗೆ ಬದ್ಧರಾಗಿದ್ದವರೇ ಎಂದು ನಾನು ಕೇಳಬಯಸುತ್ತೇನೆ. ಅವರ ಭಕ್ತವೃಂದವನ್ನು ಮೇಲುನೋಟಕ್ಕೆ ಗಮನಿಸಿದರೂ ಅವರಲ್ಲಿ ಅನೀತಿವಂತರು, ಭಷ್ಟಾಚಾರಿಗಳು, ವರಮಾನ ತೆರಿಗೆ ತಪ್ಪಿಸಿಕೊಂಡವರೂ, ಸಮಾಜ ದ್ರೋಹಿಗಳು ಬೇಕಾದಷ್ಟು ಜನ ಸಿಗುತ್ತಾರೆ. ವಿಶ್ವವಿದ್ಯಾಲಯ ತನಿಖಾ ಸಮಿತಿಯವರು ಅವರ ಸಂದರ್ಶನಕ್ಕೆ ಅನರ್ಹರೆಂದು ತೋರುತ್ತದೆ. ಸಾಯಿಬಾಬಾ ಅವರ ದೃಷ್ಟಿಯಲ್ಲಿ ನಾವು ಅವರ ಸಹವಾಸಕ್ಕೆ ಯೋಗ್ಯರಲ್ಲಿ. ಅದು ನಿಜವಿದ್ದರೂ ಇರಬಹುದು.

'ನೀವು ದೇವರೇ' ಎಂಬ ಪ್ರಶ್ನೆಗೆ ಅವರು ' ದೇವರು ಎಲ್ಲರಲ್ಲಿಯೂ ಇದ್ದಾನೆ' ಎಂಬ ಉತ್ತರ ಕೊಟ್ಟರೆಂದು ಪತ್ರಿಕೆಗಳಲ್ಲಿ ವರದಿ ಆಗಿದೆ. ಇಪ್ಪತೈದು ವರ್ಷಗಳಿಂದ ಆಗ್ ಆಧ್ಯಾಪಕರಾಗಿದ್ದ ಎಚ್.ಎನ್. ಈ ಉತ್ತರ ಅಪ್ರಸ್ತತ ಎಂದು ವಿನಯಪೂರ್ವಕವಾಗಿ ತಿಳಿಸ ಬಯಸುತ್ತೇನೆ. ಇದು ಪ್ರಶ್ನೆಯನ್ನು ಮರೆಸುವ ಪ್ರಯತ್ನ. ತಮ್ಮನ್ನು ಆಕ್ಷೇಪಿಸುವವರು ತಾವು ಮಾಡಿರುವ ಮಾನವೀಯ ಮತ್ತು ಶೈಕ್ಷಣಿಕ ಕಾರ್ಯಗಳನ್ನು ಮರೆಯುತ್ತಾರೆ ಎಂದು ಶ್ರೀ ಸತ್ಯಸಾಯಿಬಾಬಾರವರು ನೊಂದ ದ್ವನಿಯಲ್ಲಿ ಹೇಳುವುದುಂಟು. ನಾವು ಆ ಬಗ್ಗೆ ಇಲ್ಲಿ ಚರ್ಚಿಸುತ್ತಿಲ್ಲ ಎಂದು ತಿಳಿಸಲು ಇಚ್ಛಿಸುತ್ತೇನೆ.

ನಾವು ತೆಗೆದುಕೊಂಡಿರುವ ಸಮಸ್ಯೆಯ ಅಂತರಾಳವು ಹೆಚ್ಚಿನ ಪ್ರಾಮುಖ್ಯವನ್ನು ಹೊಂದಿದ್ದು, ಅನೇಕ ಮಹತ್ತರವಾದ ಪರಿಣಾಮಗಳಿಗೆ ಕಾರಣವಾಗಬಲ್ಲದು. ಈ ತನಿಖೆಯು ಯಾವುದೇ ವ್ಯಕ್ತಿಯನ್ನು ಮುಖಭಂಗ ಮಾಡುವ ಉದ್ಧೇಶದಿಂದ ಹೊರಟಿಲ್ಲ. ಆದರೆ ಪ್ರಗತಿ ವಿರೋಧಿಯಾದ ಆರಾಧನಾ ಪದ್ಧತಿಯ ಮನೋಭಾವನ್ನು ಪ್ರಶ್ನಿಸುತ್ತದೆ. ಇದರ ಗುರಿ ' ಸತ್ಯಾನ್ವೇಷಣೆ' ಯಾಗಿದೆ. ನಮ್ಮ ದೇಶವು ಸಾವಿರಾರು ದೇವರುಗಳು, ಬಾಬಾಗಳು ಮತ್ತು ' ಮಿನಿ' ಬಾಬಾಗಳ ಸಂತೆಯಾಗಿದೆ. ಪರಿಶೀಲನ ಮಾರ್ಗದಿಂದ, ಪ್ರಶ್ನಿಸುವ ರೀತಿಯಿಂದ ಅಸಲು ನಕಲುಗಳನ್ನು ಬೇರ್ಪಡಿಸುವ ಅವಶ್ಯಕತೆಯಿದೆ. ಈಗ ಪ್ರತಚಲಿತವಾಗಿರುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ರಂಗಗಳನ್ನು ಪರಿಶುದ್ಧಗೊಳಿಸುವುದು ಅತ್ಯವಶ್ಯಕ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಅನೇಕ ಶತಮಾನಗಳಿಂದ ಈ ದೇಶದಲ್ಲಿ ಅಗಾಧ ಪ್ರಮಾಣದಲ್ಲಿ ಶೋಷಣೆ ನಡೆದಿದೆ. ಬಡವರು ಹಾಗೂ ದಡ್ಡರೂ ನಿರಂತರವಾಗಿ ಮೋಸಕ್ಕೆ ಒಳಪಟ್ಟಿದ್ದಾರೆ. ಈ ಜ್ಞಾನ ಯುಗದಲ್ಲೂ ಕೆಲವು ವಿಜ್ಞಾನಿಗಳು ಇದಕ್ಕೆ ಅಪವಾದವಾಗಿಲ್ಲ.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮ್ಮ ದೇಶವು ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ ಎಂಬುದು ನಿಜ. ವಿಜ್ಞಾನಿಯು ಪ್ರಯೋಗಶಾಲೆಯಲ್ಲಿ ಜೀವವನ್ನು ಸೃಷ್ಟಿಸುವ ಹಂತದಲ್ಲಿ ಇದ್ದಾನೆ. ಪ್ರಕೃತಿಯ ಅನೇಕ ರಹಸ್ಯಗಳನ್ನು ಮನುಷ್ಯನು ತನ್ನ ಪರಿಶೀಲನ ಮನೋಭಾವದಿಂದ, ಅವಿರತ ಶ್ರಮದಿಂದ ಬಿಡಿಸಿದ್ದಾನೆ. ನೆನ್ನೆಯ ದಿನ ಅತಿಮಾನುಷ ಎಂದು ಅಂದುಕೊಂಡ ಸಂಗತಿಯು ಈ ದಿನ ಸಂಪೂರ್ಣ ಸಹಜ ಸಂಗತಿಯಾಗಿದೆ. ಇದು ಸಾಧನೆಯ ಒಂದು ಮುಖ ಮಾತ್ರ.

ಈ ಪ್ರಗತಿಯ ಮತ್ತೊಂದು ಭಾಗದ ಚಿತ್ರ ಅತ್ಯಂತ ನಿರಾಶದಾಯಕ. ವಿಜ್ಞಾನಿ ಅಥವಾ ವಿಜ್ಞಾನದ ವಿದ್ಯಾರ್ಥಿ ಪ್ರಯೋಗ ಶಾಲೆಯಲ್ಲಿ ಸಮಸ್ಯೆಗಳನ್ನು ಎದುರಿಸುವಾಗ ವಿಚಾರವಾದಿಯಾಗಿ ಕಂಡುಬರುತ್ತಾನೆ. ಆದರೆ ಇದೇ ವ್ಯಕ್ತಿ ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಾಗ ಸಂಪೂರ್ಣವಾಗಿ ವೈಚಾರಿಕತೆಯನ್ನು ತ್ಯಜಿಸಿ ಬಿಡುತ್ತಾನೆ. ಅವನ ಯೋಚನಾಶಕ್ತಿ ರಜೆ ತೆಗೆದುಕೊಂಡು ಬಿಡುತ್ತದೆ. ಕೆಲವು ವಿಜ್ಞಾನಿಗಳು ಪವಾಡಗಳನ್ನು ಮಾಡುತ್ತೇವೆ ಎಂದು ಹೇಳುವ ವ್ಯಕ್ತಿಗಳನ್ನು ಅಂಧರಾಗಿ ಅನುಸರಿಸುವುದೂ ಉಂಟು. ವಿಜ್ಞಾನವು ಜೀವನ ನಂಬಿಕೆಯಾಗದೆ ಹೊಟ್ಟೆಪಾಡಿನ ಮಾರ್ಗವಾದಲ್ಲಿ, ಅಂತಹ ವ್ಯಕ್ತಿಗಳು ಹೇಗೆ ತಾನೇ ವೈಜ್ಞಾನಿಕ ಮನೋಭಾವವನ್ನು ವೈಚಾರಿಕತೆಯನ್ನು ಪ್ರಚಾರ ಮಾಡಲು ಸಾಧ್ಯ.

ನಮ್ಮ ದೇಶವು ಮೂಢನಂಬಿಕೆಗಳಿಂದ ತುಂಬಿ ತುಳುಕುತ್ತಿದೆ. ಶಿಕ್ಷಣ ಪಡೆಯುತ್ತಿರುವವರಿಗೆ ಸರಿಯಾದ ಶಿಕ್ಷಣ ದೊರೆಯಬೇಕಾಗಿರುವುದು ಈಗ ಅತ್ಯಂತ ಅವಶ್ಯಕ. ಮೂಢನಂಬಿಕೆಯು ಭಯ ಮತ್ತು ಅಜ್ಞಾನಗಳಿಂದ ಉಂಟಾಗುತ್ತದೆ. ಅವು ಆತ್ಮವಿಶ್ವಾಸವನ್ನು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ನಾಶಪಡಿಸುತ್ತವೆ. ಅವು ಸ್ವತಂತ್ರ ಚಿಂತನೆಯನ್ನು, ನಿರ್ಭೀತ ಮನೋಭಾವವನ್ನು ಮೊಟಕುಗೊಳಿಸುತ್ತವೆ.

ವಿಜ್ಞಾನದ ಫಲಿತಾಂಶಗಳು ಬಗ್ಗೆ ನಾವು ಹೆಚ್ಚು ಗಮನ ಕೊಟ್ಟಿದ್ದೇವೆ. ಆದರೆ ವಿಜ್ಞಾನದ ಚೈತನ್ಯವು (spirit) ಜನಪ್ರಿಯವಾಗಿಲ್ಲ. ವಿಜ್ಞಾನದ ನಿಜವಾದ ಪ್ರಾಮುಖ್ಯ ಈ ಅಂಶದಲ್ಲಿ ಅಡಗಿದೆ ಎಂಬುದು ನನ್ನ ಅಭಿಪ್ರಾಯ.

ನಮ್ಮ ತಿಳುವಳಿಕೆಯಲ್ಲಿ ಎಷ್ಟೆ ಕಂದರಗಳಿದ್ದರೂ, ವಿಜ್ಞಾನಕ್ಕೆ ತನ್ನದೆ ಆದ ಮಿತಿಗಳಿದ್ದರೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳವಲ್ಲಿ ವಿಜ್ಞಾನದ ವಿಧಾನಗಳೇ ಹೆಚ್ಚು ಸಮರ್ಪಕ. ಯಾವುದೇ ಹೇಳಿಕೆ ಅಥವಾ ಸೂಕ್ತಿಯನ್ನು ಒಪ್ಪಿಕೊಳ್ಳವುದು ಸರಿಯಲ್ಲ. ಸಾಧ್ಯವಾದಷ್ಟರಮಟ್ಟಿಗೆ ಅವುಗಳನ್ನು ಪ್ರಯೋಗಗಳ ಮೂಲಕ ಪರಿಕ್ಷೀಸಬೇಕು. ಎಲ್ಲ ಪರಿಶೀಲನ ಮಾರ್ಗಗಳಲ್ಲೂ ವಿಚಾರವು ಅಡಿಪಾಯವಾಗಬೇಕು. ಈ ಮನೋಭಾವವನ್ನು ಬೆಳೆಸುವ ದಿಸೆಯಲ್ಲಿ ಎಲ್ಲ ಸಂಸ್ಥೆಗಳು ಮತ್ತು ವಿಶ್ವವಿಧ್ಯಾಲಯಗಳು ಕಾರ್ಯಪ್ರವೃತ್ತರಾಗಬೇಕು. ಪಂಡಿತ ಜವಹರಲಾಲ್ ನೆಹುರೂರವರು ಅಲಹಾಬಾದಿನ ವಿಶ್ವವಿದ್ಯಾಲಯದ ವಿಶೇಷ ಘಟಿಕೋತ್ಸವದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಉದ್ಧೇಶಗಳನ್ನು ಕುರಿತು ಹೇಳಿದ ಮಾತುಗಳನ್ನು ಬಹುಪಾಲು ವಿಶ್ವವಿದ್ಯಾಲಯಗಳು ಮರೆತು ಬಿಟ್ಟಿವೆ. ವಿಶ್ವವಿದ್ಯಾಲಯವು ಮಾನವತಾವಾದ, ಸಹನೆ, ವೈಚಾರಿಕತೆ, ನಿರ್ದಿಷ್ಟ ಗುರಿಗಾಗಿ ಹೋರಾಡುವ ಸಾಹಸ ಮತ್ತು ಸತ್ಯದ ಅನ್ವೇಷಣೆಯ ಸಂಕೇತ. ವಿಶ್ವವಿದ್ಯಾಲಯಗಳು ಉನ್ನತ ಧ್ಯೇಯಗಳನ್ನು ಹೊಂದಿ ಮನುಷ್ಯನ ಪ್ರಗತಿಯಲ್ಲಿ ಮುನ್ನುಗ್ಗಬೇಕು. ಅವು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ, ಜನಗಳಿಗೆ ಹಾಗೂ ದೇಶಕ್ಕೆ ಒಳ್ಳೆಯದನ್ನು ಮಾಡಿದಂತೆ ಆಗುತ್ತದೆ, ಎಂದು ನೆಹರೂರವರು ಅಭಿಪ್ರಾಯ ಪಟ್ಟಿದ್ದಾರೆ.

ನಮಗೆಲ್ಲ ತಿಳಿದಿರುವಂತೆ ಇತ್ತೀಚೆಗೆ ಸಂವಿಧಾನ ತಿದ್ದುಪಡಿ ಸಮಿತಿಯು ಪ್ರತಿಯೊಬ್ಬ ಪ್ರಜೆಯ ಮೂಲಭೂತವಾದ ಹತ್ತು ಕರ್ತವ್ಯಗಳನ್ನು ಸೂಚಿಸಿದೆ. ಅವುಗಳಲ್ಲಿ ಎಂಟನೆಯ ಕರ್ತವ್ಯವು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು. ಮಾನವತಾವಾದ, ವೈಚಾರಿಕತೆ, ಪರೀಕ್ಷಾ ಮನೋಭಾವ ಹಾಗೂ ಸುಧಾರಕ ದೃಷ್ಟಿಯನ್ನು ತಿಳಿಸುತ್ತದೆ. ಈ ಕರ್ತವ್ಯವನ್ನು ಪ್ರತಿಯೊಬ್ಬನೂ ಗಂಭೀರವಾಗಿ ತೆಗೆದುಕೊಡು ಕಾರ್ಯರೂಪಕ್ಕೆ ತಂದರೆ ಬಹಳ ಒಳ್ಳೆಂi ಪರಿಣಾಮಗಳಾಗುತ್ತವೆ. ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ರೀತಿಯ ತನಿಖೆಗಳನ್ನು ಕೈಗೊಳ್ಳುವುದಕ್ಕೆ ಸಂವಿಧಾನದ ಒಪ್ಪಿಗೆ ಕೂಡ ದೊರೆತಿದೆ ಎಂಬುದು ಈ ಅಂಶದಿಂದ ತಿಳಿದು ಬರುತ್ತದೆ.

ಈಗ ಸತ್ಯಸಾಯಿಬಾಬಾ ಮತ್ತು ಅವರ ಬೆಂಬಲಿಗರು ಉನ್ಮಾದದ ಆವೇಶದ ಮಾತುಗಳ ಕಡೆ ಗಮನ ಹರಿಸೋಣ. ಬಹಳಷ್ಟು ಲೇಖನಗಳನ್ನು ಪ್ರಕಟಿಸುವುದರಿಂದ, ಸಂಶಯದ ಆವರಣದಲ್ಲಿ ಅನೇಕ ವಸ್ತುಗಳನ್ನು ಪ್ರದರ್ಶಿಸುವುದರಿಂದ, ಬೀದಿಯಲ್ಲಿ ನಿಂತು ಕೂಗುವುದರಿಂದ ಆ ಸತ್ಯಸಾಯಿಬಾಬಾರವರು ಶೂನ್ಯದಲ್ಲಿ ವಸ್ತುಗಳನ್ನು ಸೃಷ್ಟಿಸುತ್ತಾರೆ ಎಂಬುದು, ನಿಜವಾಗುವುದಿಲ್ಲ. ಇವೆಲ್ಲವೂ ಅವರ ದೈವೀಶಕ್ತಿಯನ್ನು ರುಜುವಾತು ಮಾಡುವುದಿಲ್ಲ. ಎಲ್ಲಿಯ ತನಕ ಈ ಸಂದಿಗ್ಧತೆ ಮುಂದುವರೆಯಬೇಕು? ಸಾವಿರಾರು ಜನರಿಗೆ ಇದರ ಬಗ್ಗೆ ನಿಜವಾದ ಸಂಶಯಗಳಿವೆ. ಇಷ್ಟು ಸಮಯವಾದರೂ ಈ ಒಗಟು ಪರಿಹಾರವಾಗದೇ ಇರುವುದು ಸರಿಯಲ್ಲ. ದೇಶದ ತುಂಬ ನಡೆಯುತ್ತಿರುವ ಚರ್ಚೆಯು ವ್ಯರ್ಥವಾಗುವುದು ಉಚಿತವಲ್ಲ. ಈ ಹೆಚ್ಚಿನ ವಿವಾದಿಂದ ಏನಾದರೂ ಗಟ್ಟಿಯಾದ ತೀರ್ಮಾನಕ್ಕೆ ಬರುವುದು ಅವಶ್ಯಕ. ಈ ಸಮಸ್ಯೆಯು ಸರಳ ಮತ್ತು ಸ್ಪಷ್ಟ. ಸಂಬಂಧವಿಲ್ಲದ ಸಂಗತಿಗಳನ್ನು ಇದರ ಜೊತೆಯಲ್ಲಿ ತಂದು ಗೊಂದಲ ಮಾಡುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ನುಣಿಚಿಕೊಳ್ಳವ ಪ್ರಯತ್ನವಾಗಲೀ, ಹಾರಿಕೆಯ ಉತ್ತರವಾಗಲೀ, ವ್ಯರ್ಥಮಾತುಗಳಾಗಲೀ ಅವಶ್ಯಕತೆ ಇಲ್ಲ. ಶ್ರೀ ಸತ್ಯಸಾಯಿಬಾಬಾರವರು ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ, ನಮ್ಮ ಸಮಿತಿಯು ಅವರನ್ನು ನೋಡುವ ಅವಕಾಶವನ್ನು ಕೊಟ್ಟು ನೈತಿಕ ಧೈರ್ಯವನ್ನು ವ್ಯಕ್ತಪಡಿಸಲಿ. ಅವರೊಡನೆ ಚರ್ಚಿಸಲು ಹಾಗೂ ಬಹಿರಂಗವಾಗಿ ಅವರ ಪವಾಡವನ್ನು ಪರೀಕ್ಷಿಸಲು ಅವಕಾಶವನ್ನು ಮಾಡಿಕೊಟ್ಟು ಅವರು ತಮ್ಮ ಮಾತಿನ ಸತ್ಯವನ್ನು ಸಾಬೀತುಪಡಿಸಲಿ.

ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಎಚ್. ಎನ್. ವಿಷಯವನ್ನು ಗ್ರಹಿಸುವಲ್ಲಿ ತೆರೆದ ಮನಸ್ಸನ್ನು ಹೊಂದಿದ್ದರು. ಹೊಸ ಅಂಶಗಳಿಂದ, ಅನುಭವಗಳಿಂದ ನನ್ನ ಅಭಿಪ್ರಾಯಗಳನ್ನು ಮತ್ತು ಪ್ರಾಯೋಗಿಕ ನೆಲೆಯಲ್ಲಿ ಕಂಡುಕೊಂಡಿರುವ ತೀರ್ಮಾನಗಳನ್ನು ಬದಲಾಯಿಸಿಕೊಳ್ಳಲು ಸಿದ್ಧನಿದ್ದೇನೆ ಎಂದಿದ್ದರು.

ಸರಣಿ ೪ ಡಾ. ಎಚ್. ನರಸಿಂಹಯ್ಯ - ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ?

ನಮಗೆಲ್ಲ ತಿಳಿದಿರುವಂತೆ ಜ್ಯೋತಿಷ್ಯದ ಪ್ರಕಾರ ಮನುಷ್ಯನ ನಡವಳಿಕೆಗಳ ಮೇಲೆ ಗ್ರಹಗಳ ಪ್ರಭಾವ ವ್ಯಾಪಕವಾದದ್ದು. ಶತಮಾನಗಳಿಂದ ಜನಪ್ರಿಯವಾಗಿರುವ ಈ ನಂಬಿಕೆ ಎಲ್ಲ ದೇಶದ ಜನರ ಮನಸ್ಸಿನಲ್ಲಿ ಗಾಢವಾಗಿ ಬೇರೂರಿದೆ. ಪ್ರಕೃತಿಯ ಘಟನೆಗಳು ಆದಿಮಾನವನಿಗೆ ಭಯ ಭಕ್ತಿಯನ್ನುಂಟು ಮಾಡಿದ್ದು, ಅವನ ಬಹುಪಾಲು ನಂಬಿಕೆಗಳು ಈ ಹಿನ್ನೆಲೆಯಲ್ಲಿಯೇ ರೂಪುಗೊಂಡವು. ಮಿಂಚು ಗುಡುಗುಗಳು ಅವನಿಗೆ ಸಾಕಷ್ಟು ಭಯವನ್ನುಂಟು ಮಾಡಿರಬೇಕು. ಮಧ್ಯಾನದಲ್ಲಿ ಗ್ರಹಣ ನಡೆದಾಗ ಕತ್ತಲು ಮುಸುಕಿದ್ದು ಎಂತಹ ದೈರ್ಯಶಾಲಿಯಾದ ಆದಿಮಾನವನಿಗೂ ನಡುಕವನ್ನುಂಟು ಮಾಡಿರ ಬೇಕು. ಭೂಕಂಪವು ಅವನಿಗೆ ಹೆಚ್ಚಿನ ದಿಗಿಲನ್ನು ತಂದಿರಬೇಕು. ಕನಸು, ರೋಗಗಳು, ಸಾವು- ಇವೆಲ್ಲಾ ಅವನಿಗೆ ರಹಸ್ಯಗಳಾಗಿರ ಬೇಕು.

ಪ್ರಾಚೀನ ಜೋತಿಷ್ಯದ ಉಗಮವು ಖಗೋಳಶಾಸ್ತ್ರದಲ್ಲಿ ಕಂಡುಬರುತ್ತದೆ. ಖಗೋಳಶಾಸ್ತ್ರವು ವಿಜ್ಞಾನವಾದ್ದರಿಂದ ಅದು ಬೆಳೆಯುತ್ತಾ ಬಂದಿದೆ. ವಿಜ್ಞಾನದ ಎಲ್ಲ ಪ್ರಯೋಗಗಳು, ತಾತ್ಕಾಲಿಕವಾಗಿದ್ದು, ಅಧಿಕಾರಮುಕ್ತವಾಗಿ ಕುರುಡಾಗಿ ಅದು ಮಾತನಾಡುವುದಿಲ್ಲ. ವಿಜ್ಞಾನದ ಎಲ್ಲ ಸಿದ್ಧಾತಂಗಳು, ನಿಯಮಗಳು ಹೊಸ ಸಂಶೋಧನೆಯ ಬೆಳಕಿನಲ್ಲಿ ಪುನರ್ ರಚಿತವಾಗುತ್ತವೆ. ಯಾವುದೇ ಒಂದು ವಿಷಯ ವಿಜ್ಞಾನವೆನಿಸಿಕೊಳ್ಳಬೇಕಾದರೆ ಅದು ವಸ್ತುನಿಷ್ಠತೆ, ಪುನಾರವೃತ್ತಿ ಸಾಮರ್ಥ್ಯ, ದೃಡತೆ, ವಿಶ್ವಮಾನ್ಯತೆ- ಈ ಎಲ್ಲ ರೀತಿಯ ಅಂಶಗಳನ್ನು ತೃಪ್ತಿಪಡಿಸ ಬೇಕಾಗುತ್ತದೆ. ವಿಜ್ಞಾನದ ಎಲ್ಲ ಶಾಖೆಗಳು ಅಪೂರ್ಣತೆಯಲ್ಲಿಯೇ ಆರಂಭವಾಗುತ್ತವೆ. ಇದಕ್ಕೆ ಕಾರಣ ಜ್ಞಾನದ ಮಿತಿ ಮತ್ತು ಆ ಕಾಲದಲ್ಲಿ ಬಳಕೆಯಲ್ಲಿದ್ದ ಒರಟಾದ ಉಪಕರಣಗಳು, ಕೆಲವು ಸಂದರ್ಭಗಳಲ್ಲಿ ತಪ್ಪು ಗ್ರಹಿಕೆಗೆಳು ಕೂಡ ಈ ಬಗೆಯ ಅಪೂರ್ಣತೆಗೆ ಕಾರಣವಾಗುತ್ತವೆ. ಆದರೆ ನಿರಂತರ ಸತ್ಯಶೋಧನೆಯ ಹಂಬಲ ವಿಜ್ಞಾನದ ಮಹೋನ್ನತಿಯಾಗಿದೆ.

ವಿಜ್ಞಾನದ ಇತರ ಶಾಖೆಗಳಂತೆ ಪ್ರಾಚೀನ ಖಗೋಳಶಾಸ್ತ್ರ ಸಹ ಹಲವಾರು ತಪ್ಪುಗ್ರಹಿಕೆಗಳನ್ನು ಪಡೆದುಕೊಂಡಿತ್ತು. ನಕ್ಷತ್ರ ಖಚಿತವಾದ ಆಕಾಶ ಮತ್ತು ಚಂದ್ರ ಮೊದಲಿನಿಂದಲೂ ಮನುಷ್ಯನನ್ನು ಆಕರ್ಷಿಸಿದ್ದವು ಕುತೂಹಲ ಮತ್ತು ಸೂಕ್ಷ್ಮ ನಿರೀಕ್ಷಣಾ ಶಕ್ತಿಯಿರುವ ಜನರು ಅವುಗಳ ಬಗ್ಗೆ ಮತ್ತಷ್ಟು ತಿಳಿಯಲು ಪ್ರಯತ್ನಿಸಿದರು. ಆಗ ವಿಷಯವನ್ನು ತಿಳಿಯಲು ಅವರಿಗೆ ಕಣ್ಣು ಮಾತ್ರ ಏಕೈಕ ಸಾಧನೆಯಾಗಿತ್ತು. ಪ್ರಾಚೀನ ಖಗೋಳಶಾಸ್ತ್ರ ಹಾಗೂ ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಿವೆ. ಅವು ಸೂರ್ಯ, ಚಂದ್ರ, ರಾಹು, ಕೇತು, ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ. ಆದರೆ ಸೂರ್ಯ-ಚಂದ್ರರು ಗ್ರಹಗಳಲ್ಲ, ಸೂರ್ಯ ನಕ್ಷತ್ರವಾದರೆ ಚಂದ್ರ ಉಪಗ್ರಹ. ಇದರ ಜೊತೆಗೆ ರಾಹು ಕೇತುಗಳು ಆಸ್ತಿತ್ವದಲ್ಲಿ ಇಲ್ಲದೆ ಇರುವವು. ಅವು ಅವರ ಕಲ್ಪನೆಯ ಕೃತಕ ಬಿಂದುಗಳು. ಜ್ಯೋತಿಷ್ಯದ ಆಧಾರವಾಗಿರುವ ಒಂಬತ್ತು ಗ್ರಹಗಳಲ್ಲಿ ಎರಡು ಗ್ರಹಗಳೇ ಅಲ್ಲ, ಮತ್ತೆರಡು ಇಲ್ಲವೇ ಇಲ್ಲ. ಇದಲ್ಲದೆ ಜ್ಯೋತಿಷಿಗಳಿಗೆ ನಿಖರವಾದ ಕಾಲದ ಪರಿಕಲ್ಪನೆ ಇರಲಿಲ್ಲವಾದರೂ, ಅದರ ಪ್ರಾಮುಖ್ಯ ಜ್ಯೋತಿಷ್ಯದಲ್ಲಿ ಹೆಚ್ಚಾಗಿದೆ. ಈ ಎಲ್ಲ ಕಾರಣಗಳು ಜ್ಯೋತಿಷ್ಯಕ್ಕೆ ತಪ್ಪಾದ ದುರ್ಬಲ ಅಡಿಪಾಯವನ್ನು ಒದಗಿಸಿವೆ. ಈ ರೀತಿಯ ತಪ್ಪು ಗ್ರಹಿಕೆಗಳ ಆಧಾರದಿಂದ ರಚಿತವಾಗಿರುವ ಜ್ಯೋತಿಷ್ಯವನ್ನು ವಿಜ್ಞಾನವೆಂದು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.

ವಿಜ್ಞಾನದ ಪ್ರಕಾರ ಗ್ರಹಗಳು ಸೂರ್ಯನ ಭಾಗಗಳು. ಆದ್ದರಿಂದ ಅವುಗಳು ಸೂರ್ಯನ ರೀತಿಯ ಭೌತಿಕ ಸ್ವರೂಪವನ್ನೇ ಪಡೆದುಕೊಂಡಿವೆ. ಭೂತವಸ್ತುವಿನ ದೊಡ್ಡ ರಾಶಿಗಳಾಗಿರುವ ಗ್ರಹಗಳು ಭೂಮಿಯಿಂದ ಮಿಲಿಯನ್‌ಗಟ್ಟಲೆ ಮೈಲಿಗಳ ದೂರದಲ್ಲಿವೆ. ಇವು ಮನುಷ್ಯನ ಜೀವನದ ಘಟನೆಗಳ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಗ್ರಹಿಸಲು ಅಸಾಧ್ಯ. ಮನುಷ್ಯನ ಎಲ್ಲ ಗುಣಗಳನ್ನು ಗ್ರಹಗಳಿಗೆ ಆರೋಪಿಸವುದು ಹಾಸ್ಯಾಸ್ಪದ. ಗ್ರಹಗಳ ಸ್ಥಾನಗಳು, ಶುಭ, ಅಶುಭ, ಸ್ನೇಹಪರ, ಶತ್ರುಗಳು, ಸೇಡಿನ ಭಾವನೆಯನ್ನು ಹೊಂದುವವು ಆಗುತ್ತವೆ ಎಂಬ ನಂಬಿಕೆ ಪ್ರಚಲಿತವಾಗಿದೆ. ನಮ್ಮ ಪ್ರಾಚೀನ ಜನಾಂಗದಲ್ಲಿ ತಪ್ಪಾಗಿ, ಒರಟು ಒರಟಾಗಿ ರೂಪಗೊಂಡ ವಿಚಾರಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಈ ಯುಗದಲ್ಲೂ ಹೆಚ್ಚಿನ ಪ್ರಭಾವವನ್ನು ಬೀರುತ್ತಿರುವುದು ದುರದೃಷ್ಟಕರ. ಸತ್ಯದ ಶೋಧನೆಗೆ ವಿಜ್ಞಾನದ ಮಾರ್ಗಗಳು ಪ್ರಬಲವಾದ ಸಾಧನಗಳು. ಈ ವಿಧಾನಗಳನ್ನು ಜ್ಯೋತಿಷ್ಯದ ಸತ್ಯಸಂಧತೆ ಅಥವಾ ಅಸತ್ಯವನ್ನು ನಿರ್ಧರಿಸಲು ಸಮರ್ಪಕವಾಗಿ ಉಪಯೋಗಿಸಿಕೊಳ್ಳ ಬಹುದು.

ಜ್ಯೋತಿಷ್ಯವು ರಾಹುಕಾಲ, ಗುಳಿಕಾಲ ಮತ್ತು ಯಮಗಂಡಕಾಲ ಈ ಮೂರು ಅಂಶಗಳನ್ನು ಅಡಿಪಾಯವಾಗಿ ಹೊಂದಿದೆ. ರಾಹು, ಕೇತು ಆಸ್ತಿತ್ವದಲ್ಲಿಯೇ ಇಲ್ಲದಿರುವಾಗ ರಾಹುಕಾಲ, ಗುಳಿಕಾಲಗಳಿಗೆ ಸಹಜವಾಗಿಯೇ ಯಾವ ಅರ್ಥವೂ ಇಲ್ಲ. ಜ್ಯೋತಿಷ್ಯದ ಪ್ರಕಾರ ರಾಹುಕಾಲದಲ್ಲಿ ಪ್ರಯಾಣ, ಮದುವೆ, ಧಾರ್ಮಿಕ ಕಾರ್ಯ ಈ ಬಗೆಯ ಶುಭಕಾರ್ಯಗಳನ್ನು ನಡೆಸ ಬಾರದು. ಈ ನಂಬಿಕೆ ನಿಜವಾದ ಪಕ್ಷದಲ್ಲಿ ರಾಹುಕಾಲದಲ್ಲಿ ಹೊರಟ ವಿಮಾನಗಳು, ರೈಲುಗಳು, ಬಸ್ಸುಗಳು ಅಪಘಾತಕ್ಕೆ ಒಳಗಾಗಬೇಕು. ಅಪಘಾತಗಳ ಸ್ವರೂಪವನ್ನು ಸ್ಥೂಲವಾಗಿ ಪರೀಕ್ಷಿಸಿ ನೋಡಿದರೂ ಕೂಡ, ಅಪಘಾತಗಳಿಗೂ ವಾಹನಗಳು ಹೊರಟಕಾಲಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸಂಶಯವಿಲ್ಲದೆ ಗೊತ್ತಾಗುತ್ತದೆ. ನ್ಯೂಯಾರ್ಕ, ಚಿಕಾಗೋ, ಲಂಡನ್ ಅಂತಹ ವಿಮಾನ ನಿಲ್ದಾಣಗಳಲ್ಲಿ ಯಾವಾಗಲೂ ವಿಮಾನಗಳು ಬಂದು ಹೋಗುತ್ತಿರುತ್ತವೆ. ಅವುಗಳು ರಾಹುಕಾಲವನ್ನು ತಪ್ಪಿಸಲು ಕಾಯುವುದಿಲ್ಲ. ರೈಲು ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರೂ ಕೇಳುವುದಿಲ್ಲ. ಆದರೆ ಎಲ್ಲ ದಿನಗಳು ಅಶುಭವಾದವು ಅಥವಾ ಶುಭವಾದವು ಎಂದು ತೋರಿಸಲು ಕಷ್ಟಪಡಬೇಕಾಗಿಲ್ಲ.

ಜಾತಕಗಳು ಕೂಡ ಜ್ಯೋತಿಷ್ಯದ ಆಧಾರಗಳ ಮೇಲೆ ರಚಿತವಾಗಿತ್ತವೆ. ವ್ಯಕ್ತಿಯು ಹುಟ್ಟಿದಾಗ ಕಂಡುಬರುವ ಗ್ರಹಗತಿಗಳ ಆಧಾರದಿಂದ ಜಾತಕಗಳನ್ನು ಬರೆಯಲಾಗುತ್ತದೆ. ವ್ಯಕ್ತಿಯ ಜೀವನದ ಎಲ್ಲ ಪ್ರಮುಖ ಘಟ್ಟಗಳು ಅದರಲ್ಲಿ ಸುರಕ್ಷಿತವಾಗಿ ಅಡಕವಾಗಿರುತ್ತದೆ ಎಂದು ನಂಬಿಕೆ ಇದೆ. ಗ್ರಹಗಳ ಸ್ಥಾನವು ವಿದ್ಯಾಭ್ಯಾಸ, ಮದುವೆ, ವಿದೇಶ ಪ್ರಯಾಣ, ಅಪಘಾತ, ಸಾವು ಇವುಗಳನ್ನೆಲ್ಲಾ ನಿರ್ಧರಿಸುತ್ತದೆ ಎಂದು ನಂಬುವುದು ಅರ್ಥರಹಿತ. ವಧು-ವರರಿಗಿಂತ ಗ್ರಹಗಳ ಪಾತ್ರ ಮದುವೆಯ ವ್ಯವಹಾರಗಳಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಕೆಲವು ಜಾತಕಗಳು, ತಮ್ಮ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು, ಅವು ಭಾವಿ ಅತ್ತೆ ಅಥವಾ ಮಾವನ ಮೇಲೆ ದೃಷ್ಪರಿಣಾಮ ಬೀರುತ್ತವೆ ಎಂದು ತಿಳಿಸುತ್ತದೆ. ಆ ಗ್ರಹಗಳ ದುಷ್ಪರಿಣಾಮವನ್ನು ತಪ್ಪಿಸುವುದಕ್ಕಾಗಿ ತಂದೆ ಅಥವಾ ತಾಯಿ ಬದುಕಿಲ್ಲದೆ ಇರುವ ವಧು-ವರರನ್ನು ಹುಡುಕಲಾಗುತ್ತದೆ.

ವಧು-ವರರ ಜಾತಕಗಳು ಅತ್ಯಂತ ಸಮರ್ಪಕವಾಗಿ ಕೂಡಿ ಬಂದಿದ್ದನ್ನು ಗಮನಿಸಿಯೇ ಆದ ಎಷ್ಟೋ ಮದುವೆಗಳು ಯಶಸ್ವಿಯಾಗಿ ಇಲ್ಲದೆ ಇರುವುದಕ್ಕೆ ನಿದರ್ಶನಗಳಿವೆ. ಈ ಗುಂಪಿನಲ್ಲಿ ಜಾತಕ ಸೂಚಿಸುವುದಕ್ಕಿಂತ ಮುಂಚೆಯೇ ಕಂಡುಬರುವ ವಿಧವೆ-ವಿಧುರರು ದೊರೆಯುತ್ತಾರೆ. ಸಾಮಾನ್ಯವಾಗಿ ಪ್ರಸಿದ್ಧ ಜ್ಯೋತಿಷಿಗಳು ಬಹಳ ಮಟ್ಟಿನ 'ನಂಬಿಕೆ' ಗೆ ಅರ್ಹರೆಂದು ಭಾವಿಸಲಾಗುತ್ತಿದೆ. ಆದರೆ ಇವರ ಲೆಕ್ಕಾಚಾರಗಳು ಸುಳ್ಳಾಗುವುದು ಬೇಕಾದಷ್ಟು ಸಾರಿ ಕಂಡುಬರುತ್ತದೆ. ಪ್ರಸಿದ್ಧ ಜ್ಯೋತಿಷಿಗಳು ಒಪ್ಪಿದ ಜಾತಕಗಳ ಪ್ರಕಾರ ನಡೆದ ಮದುವೆಗಳಲ್ಲೂ ಅನಿರೀಕ್ಷಿತ ದುರಂತಗಳು, ಸಂಸಾರ ವಿರಸ, ತಪ್ಪು ತಿಳುವಳಿಕೆ, ಅಸುಖವು ಕಂಡಬುವುದರಿಂದ ಅವರನ್ನು ನಂಬಿಕೆಗೆ ಅನರ್ಹರಾದ ಜ್ಯೋತಿಷಿಗಳ ಸಾಲಿನಲ್ಲಿಯೇ ಸೇರಿಸಬೇಕಾಗುತ್ತದೆ. ಜಗತ್ತಿನಲ್ಲಿಯೇ ಶೇ ೯೦ಕ್ಕೆ ಹೆಚ್ಚು ಜನರ ಮದುವೆಗಳು ಯಾವುದೇ ಜಾತಕವಿಲ್ಲದೆ ನಡೆಯುತ್ತವೆ. ಅವರ ವಿವಾಹಗಳು ಉಳಿದವರಂತೆ ಸುಖವೋ ಅಥವಾ ಅಸುಖವೋ ಆಗಿರುತ್ತದೆ. ಹೀಗೆ ವಿಶ್ವಮಾನ್ಯತೆ ಇಲ್ಲದೆ ಇರುವ ಜ್ಯೋತಿಷ್ಯ ಎಂದಿಗೂ ವಿಜ್ಞಾನ ಆಗಲಾರದು.

ಪ್ರಕೃತಿಯ ವಿಕೋಪದ ಸಂದರ್ಭದಲ್ಲಿ ಕಾಣುವ ಸಾವಿನ ಸನ್ನಿವೇಶಗಳು ವಿಶ್ಲೇಷಿಸಿದಾಗ ಕೂಡ ಈಗಾಗಲೇ ದುರ್ಬಲರಾಗಿರುವ, ತಪ್ಪುದಾರಿಯಲ್ಲಿ ಹೋಗುತ್ತಿರುವ ಜ್ಯೋತಿಷ್ಯದ ಮೇಲೆ ಮಾರಕ ಪರಿಣಾಮಗಳನ್ನುಂಟು ಮಾಡುತ್ತದೆ. ವಿಮಾನ ಅಪಘಾತದಲ್ಲಿ ಸತ್ತ ಎಲ್ಲ ದುರದೃಷ್ಟಶಾಲಿಗಳ ಜಾತವಕವೂ ಒಂದೇ ಸೂಚನೆಯನ್ನು ಕೊಡುತ್ತದೆ ಎಂದು ಅಭಿಪ್ರಾಯಪಡುವುದು ತೀರ ಅಸಂಗತ. ಇದೇ ರೀತಿ ಚಂಡಮಾರುತ ಅಥವಾ ಭೂಕಂಪಕ್ಕೆ ಬಲಿಯಾದ ಎಲ್ಲ ವ್ಯಕ್ತಿಗಳ ಜಾತಕದಲ್ಲೂ ಅವನ ಸಾವಿನ ದಿನ ಒಂದೇ ರೀತಿಯಲ್ಲಿ ಸೂಚಿತವಾಗಿರುತ್ತದೆ ಎಂದು ಹೇಳುವುದು ಅಷ್ಟೆ ಅಸಂಬದ್ಧವಾದುದು.

ಜ್ಯೋತಿಷ್ಯದ ಪ್ರಕಾರ ಚಂಡಮಾರುತ್ತಕ್ಕೆ ಅಥವಾ ಭೂಕಂಪಕ್ಕೆ ಬುದ್ಧಿವಂತಿಕೆ ಹಾಗೂ ಸಮಯೋಚಿತ ಬುದ್ಧಿ ಇರಬೇಕು. ಅವು ಯಾವ ಜಾತಕಗಳಲ್ಲಿ ಒಂದೇ ದಿನ ಸಾವಿನ ಭವಿಷ್ಯ ಬರೆದಿದೆಯೊ ಅಂತಹವರನ್ನು ಮಾತ್ರ ಹುಡಿಕಿಕೊಂಡು ಮರಣಕ್ಕೆ ಕಾರಣವಾಗಬೇಕು. ಚಂಡಮಾರುತ ಬೀಸಿದ ಪ್ರದೇಶಗಳಲ್ಲಿ ಸುರಕ್ಷಿತವಾದ ಮನೆಗಳಲ್ಲಿ ವಾಸಮಾಡುವ ಶ್ರೀಮಂತರ ಅಥವಾ ಭೂಕಂಪಗಳಿಂದ ರಕ್ಷಿಸಲ್ಪಡುವ ಪ್ರದೇಶಗಳಲ್ಲಿ ಇರುವ ಪ್ರದೇಶದ ಜನರ ಜಾತಕಗಳು ಸಾವಿಗೀಡಾದ ಬಡವರಿಗಿಂತ ಉತ್ತಮ ಅದೃಷ್ಟವನ್ನು ಹೊಂದಬೇಕು. ಅವಳಿ ಮಕ್ಕಳ ಜಾತಕಗಳು ಒಂದೇ ರೀತಿಯಲ್ಲಿ ಇರುತ್ತದೆಂಬುದು ತರ್ಕ ಒಪ್ಪುವ ಮಾತು. ಆದರೆ ಅನೇಕ ಸಂದರ್ಭಗಳಲ್ಲಿ ಇಬ್ಬರ ಅವಳಿ ಮಕ್ಕಳ ಮನೋಭಾವದಲ್ಲಿ ಆಸಕ್ತಿಗಳಲ್ಲಿ ಹಾಗೂ ಸಾಧನೆಗಳಲ್ಲಿ ಅಜಗಜಾಂತರವಿರುತ್ತದೆ. ಈ ಅಂಶ ಕೂಡ ಜ್ಯೋತಿಷ್ಯದ ಟೊಳ್ಳುತನವನ್ನು ವ್ಯಕ್ತಪಡಿಸ ಬಲ್ಲದು.

ಜ್ಯೋತಿಷಿಗಳ ಭವಿಷ್ಯವಾಣಿಯು ಓದಲು ತಮಾಷೆಯಾಗಿರುತ್ತದೆ. ಅವು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಇದ್ದು, ಒಂದಕ್ಕಿಂತ ಹೆಚ್ಚು ಅರ್ಥವನ್ನು ಕೊಡುತ್ತಿರುತ್ತವೆ. ದಿನ ಪತ್ರಿಕೆಗಳಲ್ಲಿ ಮತ್ತು ವಾರಪತ್ರಿಕೆಗಳಲ್ಲಿ ಕಂಡುಬರುವ ಭವಿಷ್ಯದ ಸ್ವರೂಪ ಎಲ್ಲ ವಾರಗಳಲ್ಲೂ ಒಂದೇ ರೀತಿಯ ಸ್ಥೂಲವಿವರಣೆಯನ್ನು ಹೊಂದಿರುತ್ತದೆ. ಚುನಾವಣೆಯ ಮೊದಲ ಸಮೀಕ್ಷೆಯಷ್ಟೇ ಊಹೆಗೆ ಒಳಪಟ್ಟಿರುತ್ತದೆ. ಆದರೆ ಜ್ಯೋತಿಷಿ ತನ್ನ ಭವಿಷ್ಯದಲ್ಲಿ ಅಲ್ಲಲ್ಲಿ ಬುಧ, ಶನಿ, ರಾಹು, ಇತ್ಯಾದಿಗಳ ಪ್ರಭಾವವನ್ನು ಸೂಚಿಸಿರುತ್ತಾನೆ ಅಷ್ಟೆ.

ಇಬ್ಬರು ಜ್ಯೋತಿಷಿಗಳ ಅಭಿಪ್ರಾಯಗಳಲ್ಲಿ ಸಾಮಾನ್ಯವಾಗಿ ಯಾವ ಹೊಂದಿಕೆಯೂ ಇರುವುದಿಲ್ಲ. ಇಬ್ಬರಿಗೂ ತಮ್ಮದೆ ಆದ ಜ್ಯೋತಿಶಾಸ್ತ್ರವಿರಬೇಕೆಂದು ತೋರುತ್ತದೆ. ಹೀಗಿದ್ದರೂ ಜ್ಯೋತಿಷ್ಯ ವಿಜ್ಞಾನದ ಪಟ್ಟ ಪಡೆದುಕೊಳ್ಳಬೇಕು.

ಇಬ್ಬರು ಜ್ಯೋತಿಷಿಗಳ ಭವಿಷ್ಯದಲ್ಲಿ ಭಿನ್ನಾಭಿಪ್ರಾಯ ಇರುವುದು ಇರಲಿ, ಒಬ್ಬನೇ ಜ್ಯೋತಿಷಿಯ ಭವಿಷ್ಯವು ಕೂಡ ಗೊಂದಲದಿಂದ ಕೂಡಿದ್ದು ಸತ್ಯಕ್ಕೆ ಬಹಳ ದೂರದಲ್ಲಿ ಇರುತ್ತದೆ. ಎಲ್ಲ ರೀತಿಯ ಸಾಧ್ಯತೆಗಳ ಬಗ್ಗೆಯೂ ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾಗ ಯಾರಾದರೂ ಒಬ್ಬರ ಮಾತು ನಿಜವಾಗಿ ನಡೆಯುವ ಸಂಗತಿಗಳೊಂದಿಗೆ ಸರಿಹೊಂದುವುದು ಆಶ್ಚರ್ಯವೇನೂ ಅಲ್ಲ. ಇದು ಜ್ಯೋತಿಷ್ಯದ ಅದಿಕೃತತೆಯನ್ನು ಸೂಚಿಸುವುದಿಲ್ಲ. ಕೆಟ್ಟುಹೋದ ಗಡಿಯಾರ ಕೂಡ ದಿನದಲ್ಲಿ ಎರಡು ಸಾರಿ ಸರಿಯಾದ ವೇಳೆ ಸೂಚಿಸುತ್ತದೆ. ಕೋತಿಯೊಂದು ಟೈಪ್‌ರೈಟರ್‌ನ ಅಚ್ಚಿನ ಮೊಳೆಯನ್ನು ಒತ್ತುವಂತೆ ಮಾಡಿದಾಗ ಅದು ಅಕಸ್ಮಿಕವಾಗಿ ಯಾವುದೋ ಒಂದು ಪದ ಅಥವಾ ಷೇಕ್ಸ್‌ಪಿಯರ್‌ನ ದ್ವಿಪದಿಯೇ ಆಗಿರಬಿಡಬಹುದು. ಹೀಗೆಂದ ಮಾತ್ರಕ್ಕೆ ಕೋತಿಗೆ ಟೈಪಿಂಗ್ ಕಲೆ ಅಥವಾ ಷೇಕ್ಸ್‌ಪಿಯರ್‌ನ ಪರಿಜ್ಞಾನ ಇದೆಯೆಂದು ಅರ್ಥವಲ್ಲ.

ಕೆಲವು ಸಂದರ್ಭಗಳಲ್ಲಿ ಮುಂದಿನ ವರ್ಷದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳ ಸಾವಿನ ಸೂಚನೆಯಿಂದ ಎಂಬಂತಹ ಭವಿಷ್ಯವಾಣಿಯನ್ನು ನೋಡುತ್ತೇವೆ. ಒಂದು ವರ್ಷದಲ್ಲಿ ಇಬ್ಬರು ಸಾಯುವುದು ಖಚಿತ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ದೊಡ್ಡ ವ್ಯಕ್ತಿಗಳಾದ್ದರಿಂದ ಜ್ಯೋತಿಷಿಯ ಭವಿಷ್ಯ ನಿಜವಾಲೇಬೇಕು. ಹೆಣ್ಣುಮಕ್ಕಳಿಗೆ ಜನ್ಮವಿತ್ತ ತಾಯಿಯೊಬ್ಬಳಿಗೆ ಜ್ಯೋತಿಷಿಯೊಬ್ಬರು ಈ ಸಾರಿ ಗಂಡುಮಗುವಿನ ಜನನವಾಗುತ್ತದೆ ಎಂಬ ಭವಿಷ್ಯ ನುಡಿದಿದ್ದರು. ಸಂಭ್ರಮದಲ್ಲಿದ್ದ ಆಕೆ ಮತ್ತೆ ಹೆಣ್ಣುಮಗುವಿನ ತಾಯಿಯಾದಳು. ಬೇಜಾರಿನಿಂದ ಅವಳು ಜ್ಯೋತಿಷ್ಯದ ಬಗ್ಗೆ ಕೋಪ ವ್ಯಕ್ತಪಡಿಸಿದಾಗ ಅವನು ಗೋಡೆಯ ಮೇಲೆ 'ಹೆಣ್ಣುಮಗು' ಎಂದು ಬರೆದಿದ್ದನ್ನು ತೋರಿಸಿ, ಪ್ರಸವದ ಸಂದರ್ಭದಲ್ಲಿ ಸಂತೋಷವಾಗಿರಲೆಂದು ಉದ್ದೇಶಪೂರ್ವಕವಾಗಿಯೇ ತಾನು ಹೀಗೆ ಹೇಳಿದ್ದೆನೆಂದು ಉತ್ತರ ಕೊಟ್ಟನಂತೆ. ಜ್ಯೋತಿಷಿ ಮತ್ತು ಭವಿಷ್ಯ ಕೇಳಿದ ವ್ಯಕ್ತಿಗಳಲ್ಲಿಯೇ ಸಮಸ್ಯೆ ಇದ್ದಾಗ ಇಂತಹ ಜಾಣತನದ ತಂತ್ರಗಳು ಸಾಮಾನ್ಯವಾಗಿ ಉಪಯೋಗವಾಗುತ್ತವೆ. 'ಇಲ್ಲಸ್ಟ್ರೇಟಡ್ ವೀಕ್ಲಿ' ಪತ್ರಿಕೆಯ ಸಂಪಾದಕೀಯವೊಂದರಲ್ಲಿ ೧೯೭೭ರ ಚುನಾವಣೆಯ ನಂತರ ಕೇಳಿ ಬಂದ ವರದಿಯ ಪ್ರಸ್ತಾಪದ ಬಗ್ಗೆ ನೆನಪಿನಿಂದ ಹೇಳುತ್ತಿದ್ದೇನೆ. ಪತ್ರಿಕೆಗೆ, ಮುಂದಿನ ಪ್ರಧಾನಿ ಯಾರೆಂಬುದರ ಬಗ್ಗೆ ವಿಭಿನ್ನವಾದ ಹಲವಾರು ಸೂಚನೆಗಳು ಜ್ಯೋತಿಷಿಗಳಿದ ಬಂದಿತ್ತು. ಅವಗಳಲ್ಲಿ ಸಂಪಾದಕರು ಗುಜರಾತ್ ರಾಜ್ಯದವರು ಪ್ರಧಾನಮಂತ್ರಿ ಆಗಬಹುದು ಎಂಬ ಸೂಚನೆಯನ್ನು ಆರಿಸಿಕೊಂಡಿದ್ದರು. ಅದರ ಪ್ರಕಾರ ಅವರು ಹೆಚ್ಚು ದಿನಗಳು ಅಧಿಕಾರದಲ್ಲಿ ಇರುವುದಿಲ್ಲ, ಗುಜರಾತ್ ಅಥವಾ ಉತ್ತರ ಪ್ರದಶದವರು ಪ್ರಧಾನಮಂತ್ರಿ ಆಗುತ್ತಾರೆ ಎಂದು ಚುನಾವಣೆಯ ನಂತರ ಹೇಳುವುದು ಸಾಮಾನ್ಯ ತಿಳುವಳಿಕೆ. ಇದಕ್ಕೆ ಜ್ಯೋತಿಷ್ಯದ ಜ್ಞಾನ ಬೇಕಾಗುವುದಿಲ್ಲ. ಪ್ರಧಾನಮಂತ್ರಿಯ ಅಧಿಕಾರದ ಅವಧಿಯ ಬಗ್ಗೆ ಹೇಳಿದ ಭವಿಷ್ಯ ಯಾವ ರೀತಿ ಸುಳ್ಳಾಯಿತು ಎಂಬುದು, ಜ್ಯೋತಿಷ್ಯದ ಅಸಮರ್ಥತೆಗೆ ಮತ್ತೊಂದು ನಿದರ್ಶನ. ಜ್ಯೋತಿಷ್ಯ, ಪ್ರದೇಶಗಳನ್ನು, ರಾಜಕೀಯ ಪಕ್ಷಗಳನ್ನು ಗುರುತಿಸಿಕೊಳ್ಳುವುದು ಗಮನಾರ್ಹ.

ತಪ್ಪು ಭವಿಷ್ಯ ಹೇಳುವರು ನಕಲಿ ಜ್ಯೋತಿಷಿಗಳೆಂದು, ಜ್ಯೋತಿಷಿಗಳು ಹೇಳುವದು ಉಂಟು. ನಿಖರವಾಗಿ ಯಾರೇ ಒಬ್ಬ ಜ್ಯೋತಿಷಿ ಭವಿಷ್ಯ ನುಡಿದು, ಭವಿಷ್ಯ ಸುಳ್ಳಾಗುವುದಕ್ಕೆ ತರ್ಕಬದ್ಧವಾಗಿ ಕಾರಣ ಕೊಟ್ಟರೆ ಸ್ವಲ್ಪ ಮಟ್ಟಗೆ ಜ್ಯೋತಿಷ್ಯಕ್ಕೆ ಬೆಲೆ ಕೊಡಬಹುದು. ವಿಜ್ಞಾನಕ್ಕೆ ಸಂಬಂಧಿಸಿದಂತೆ ಏನೇ ತಪ್ಪಾದರೂ, ಅದರ ಬಗ್ಗೆ ಆಳವಾದ ಪರಿಶೀಲನೆ ನಡೆದು ಸೋಲಿಗೆ ಕಾರಣವನ್ನು ವಿಶ್ಲೇಷಿಸಿ ತಿದ್ದಕೊಳ್ಳಲು ಸಾಧ್ಯವಾಗುತದೆ. ನಮಗೆಲ್ಲಾ ತಿಳಿದುವಂತೆ ವಿಮಾನ ಅಪಘಾತದ ವಿವರವಾದ ತಪಾಸಣೆ ಅದರ ಮುಂದಿನ ಪ್ರಯಾಣದ ಬಗ್ಗೆ ಮತ್ತಷ್ಟು ಎಚ್ಚರಿಕೆ ತೆಗೆದುಕೊಳ್ಳುವಂತೆ ಸಹಾಯ ಆಗುತ್ತದೆ.

ಜೀವನದಲ್ಲಿ ಎಲ್ಲವೂ ಪೂರ್ವ ನಿರ್ಧಾರಿತವಾಗುತ್ತದೆಂಬ ವಿಧಿವಾದವನ್ನು ಜ್ಯೋತಿಷ್ಯ ತಿಳಿಸುತ್ತದೆ. ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದಂತೆ ಈ ನಿಯಮ ಅಷ್ಟೊಂದು ಕರಾರುವಕ್ಕಾಗಿ ಇರುವುದಿಲ್ಲ. ಆಗ ಬುದ್ಧಿವಂತ ಜ್ಯೋತಿಷಿಗಳು ಗ್ರಹಗಳ ಪ್ರಭಾವವನ್ನು ತರುತ್ತಾರೆ. ಈ ಅಂಶವನ್ನು ಜನರ ಶೋಷಣೆಗೆ ಜ್ಯೋತಿಷಿಗಳು ಉಪಯೋಗಿಸಿಕೊಳ್ಳುತ್ತಾರೆ. ಜನರು ನಿರಾಶೆಯಲ್ಲಿದ್ದಾಗ, ಸಮಸ್ಯೆಗಳಲ್ಲಿ ಇದ್ದಾಗ ಜ್ಯೋತಿಷಿಗಳ ಮೊರೆಹೋಗುತ್ತಾರೆ. ಗ್ರಹಗಳ ಅನಿಷ್ಟ ಗತಿಯಿಂದ ಉಟಾಂಗುವ ಘೋರ ಪರಿಣಾಮಗಳನ್ನು ಜ್ಯೋತಿಷಿಗಳು ಅವರಿಗ ತಿಳಿಸುತ್ತಾರೆ. ಆ ಅಮಂಗಳ ನಿವಾರಣೆಯು ಶಾಂತಿ, ಪೂಜೆಗಳಿಂದ ಪರಿಹಾರವಾಗುತ್ತದೆಂಬ ಸ್ವಾಂತನವನ್ನು ಕೊಡುತ್ತಾರೆ. ಅದಕ್ಕಾಗಿ ಖರ್ಚಾಗುವ ಹೆಚ್ಚಿನ ಹಣದ ಬಗ್ಗೆ ಹೇಳಲು ಮರೆಯುವುದಿಲ್ಲ. ಅವರ ಮಾರ್ಗದರ್ಶನವನ್ನು ಬಯಸುವ ಯಾರೂ ಅವರ ಅಭಿಪ್ರಾಯಗಳನ್ನು ತಿರಸ್ಕರಿಸುವುದಿಲ್ಲ. ಜ್ಯೋತಿಷಿಗಳ ಮಧ್ಯಸ್ಥಿಕೆಗಾರರು 'ಅಲೌಕಿಕ' ಗ್ರಹಗಳ ಪರಿಣಾಮಗಳನ್ನು ಲೌಕಿಕ ಪ್ರಯೋಜನಗಳಿಗಾಗಿ ಹೆಚ್ಚು ಕಡಿಮೆ ಮಾಡಲು ಸಮರ್ಥರಾಗಿರುತ್ತಾರೆ. ಬಹಳ ಮುಖ್ಯವಾಗಿ ಜ್ಯೋತಿಷ್ಯ ಮುಗ್ಧ ಜನರನ್ನು ಭಯದಲ್ಲಿರಿಸಿ ಅವರ ಸುಲಿಗೆಗೆ ಕಾರuವಾಗುತ್ತದೆ. ಜ್ಯೋತಿಷ್ಯ ಒಂದು ವಾಣಿಜ್ಯವಾಗಿದೆ.

ಜ್ಯೋತಿಷಿಗಳು ಹೇಳದೇ ಇದ್ದ ಹಲವಾರು ಮುಖ್ಯ ಘಟನೆಗಳು ಸಂಭವಿಸಿದ್ದು, ಗಮನಿಸಬೇಕಾದ್ದು. ಜೂನ್ ೧೯೭೫ರಲ್ಲಿ ತುರ್ತುಪರಿಸ್ಥಿತಿ ಘೋಷಣೆ ಆಗುತ್ತದೆಂದು ಯಾವು ಜ್ಯೋತಿಷಿಯೂ ಭವಿಷ್ಯ ನುಡಿಯಲಿಲ್ಲ. ಚರಿತ್ರಾಹವಾದ ೧೯೭೭ರ ಚುನಾವಣೆಯ ಬಗ್ಗೆಯೂ ಯಾವುದೇ ಭವಿಷ್ಯ ಕೇಳಿಬರಲಿಲ್ಲ. ೨೦೦೬ರ ಗುಜರಾತ್ ಭೂಕಂಪದ ಬಗ್ಗೆಯೂ, ಹಾಗೇ ಸುನಾಮಿಯ ಬಗ್ಗೆಯೂ ಯಾರೂ ಭವಿಷ್ಯ ಹೇಳಿರಲಿಲ್ಲ, ಸುನಾಮಿಯೆಂದರೆ ಏನಂದೆ ಅಸಲಿಗೆ ಜ್ಯೋತಿಷ್ಯದವರಿಗೆ ಅದು ಉಂಟುಮಾಡಿದ ಅಫಘಾತದ ನಂತರ ಗೊತ್ತಾದದ್ದು. ದೇಶದ ಇತಿಹಾಸದ ದೃಷ್ಟಿಯಿಂದ ಮಹತ್ತರ ಪರಿಣಾಮ ಬೀರಿದ ಈ ಎರಡು ಘಟನೆಗಳ ಬಗ್ಗೆ ಏನೂ ತಿಳಿಸದೆ ಇದ್ದುದಕ್ಕೆ ಜ್ಯೋತಿಷಿಗಳು ಯಾವ ನೆಪ ಹೇಳುವರೊ ನನಗೆ ಗೊತ್ತಿಲ್ಲ. ೧೯೭೭ರ ಚುನಾವಣೆ ಫಲಿತಾಂಶದ ಬಗ್ಗೆ ಕೂಡ ಯಾರೂ ಮುನ್ಸೂಚನೆ ಕೊಟ್ಟಿರಲಿಲ್ಲ. ಸಾವಿರಾರು ಜನರಿಗೆ ಸಾವು ನೋವುಗಳನ್ನು ಉಂಟುಮಾಡಿದ ಇತ್ತೀಚಿನ ಚಂಡಮಾರುತದ ಬಗ್ಗೆ ಜ್ಯೋತಿಷಿಗಳು ಜನರಿಗೆ ಏನೂ ಸೂಚಿಸಿರಲಿಲ್ಲ.

ದಿನನಿತ್ಯದ ಘಟನೆಗಳನ್ನು ವಿಶ್ಲೇಷಿಸಿದಾಗ ಜ್ಯೋತಿಷ್ಯದ ಅಧಿಕೃತತೆ ನಿರಾಕರಣೆ ಆಗುವುದನ್ನು ಮೇಲಿನ ಎಲ್ಲ ಉದಾಹರಣೆಗಳು ತಿಳಿಸಬಲ್ಲವು. ಅನೇಕ ಜನ ಸಿಕ್ಷಣವನ್ನು ಪಡೆದವರು, ವಿಜ್ಞಾನಿಗಳು, ಜ್ಯೋತಿಷ್ಯವನ್ನು ನಂಬುವುದು ಶೋಚನೀಯ ವಿಚಾರ. ಪ್ರಯೋಗಶಾಲೆಯಲ್ಲಿ ವಿಚಾರವಾದಿಯಾದ ವಿಜ್ಞಾನಿ ಜೀವನದ ಸಮಸ್ಯೆಗಳನ್ನು ಎದುರಿಸುವಾಗ ವಿಚಾರಕ್ಕೆ ಮಂಗಳ ಹಾಡುವುದು ಕಂಡುಬರುತ್ತದೆ. ಜ್ಯೋತಿಷ್ಯವೂ ಉಳಿದ ಮೂಢನಂಬಿಕೆಗಳಂತೆ ಸ್ವತಂತ್ರ ಆಲೋಚನೆ ಮತ್ತು ಆತ್ಮವಿಶ್ವಾಸಕ್ಕೆ ಧಕ್ಕೆಯನ್ನು ತರುತ್ತದೆ. ಈ ರೀತಿಯ ಮೂಢನಂಬಿಕೆಗಳಿಂದ ಉಂಟಾಗುವ ಪರಿಸರ ಮಾಲಿನ್ಯವು ವಾಯು, ಜಲ, ಮಾಲಿನ್ಯಗಳಿಗಿಂತ ಹೆಚ್ಚು ಅಪಾಯಕಾರಿ.

ಖಗೋಳಸ್ತ್ರವು ವಿಜ್ಞಾನವಾಗಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಜ್ಯೋತಿಷ್ಯ ಮಾತ್ರ ತನ್ನ ಪುರಾತನ ನಂಬಿಕೆ ಹಾಗೂ ತಪ್ಪುಗ್ರಹಿಕೆಗಳನ್ನೇ ಹೊಂದಿದೆ. ಈಗಲೂ ನವಗ್ರಹಗಳು ಜ್ಯೋತಿಷ್ಯದ ದಾರಿಯನ್ನು ತೋರಿಸುತ್ತವೆ. ಇವುಗಳಲ್ಲಿ ನಾಲ್ಕು ಗ್ರಹಗಳೇ ಅಲ್ಲ. ಆದರೆ ಯುರೆನೆಸ್, ನೆಪ್ಚೂನ್, ಪ್ಲೇಟೋ ಅಂತಹ ಹೊಸ ಗ್ರಹಗಳನ್ನು ವಿಜ್ಞಾನಿಗಳು ಕಂಡಹಿಡಿದರು. ಆದರೆ ಅವು ಇನ್ನೂ ತಮ್ಮನ್ನು ಗುರುತಿಸಲು ಜ್ಯೋತಿಷ್ಯಿಗಳನ್ನೇ ಕೇಳಿಕೊಳ್ಳುತ್ತಿವೆ. ಬಹುಮಂದಿ ಜ್ಯೋತಿಷ್ಯಿಗಳಿಗೆ ಇವುಗಳ ಆಸ್ತಿತ್ವದ ವಿಚಾರವೇ ತಿಳಿದಿಲ್ಲ.

ನಮ್ಮ ದೇಶದಲ್ಲಿ ಸಾಮಾಜಿಕ ಕೆಳಸ್ತರದಿಂದ ಬಂದ ಜನರು ಶಿಕ್ಷಣವನ್ನು ಮೊದಲ ಬಾರಿಗೆ ಪಡೆದುಕೊಂಡಾಗ ಅವರಲ್ಲಿ ರೂಪಗೊಳ್ಳುತ್ತಿರುವ ಮನೋಭಾವ ಕೂಡ ಅಪಾಯಕಾರಿ. ಕೀಳರಿಮೆಯಿಂದ ಬಳಲುತ್ತಿರುವ ಅವರ ತರ್ಕಹೀನವಾದ 'ಮುಂದುವರಿದ' ಶಿಕ್ಷಣ ಪಡೆದ ಜನರ ಮನೋಭಾವವನ್ನು ಅನುಕರಿಸುತ್ತಾರೆ. ಜ್ಯೋತಿಷ್ಯದಂತಹ ಪ್ರಗತಿ ವಿರೋಧಿ ನಂಬಿಕೆಗಳನ್ನು ಹೊಂದುವುದು ಸಾಮಾಜಿಕ ಅಂತಸ್ತಿನ ಗುರುತಾಗಿದೆ. ವ್ಯಕ್ತಿಯ ಒಳಿತಿಗಾಗಿ ಅಥವಾ ಸಮಾಜದ ಒಳಿತಿಗಾಗಿ ಈ ರೀತಿ ಮನೋಧರ್ಮ ಹೆಚ್ಚಿನ ಹಾನಿಯನ್ನುಂಟುಮಾಡುವ ಅವಿವೇವಕವಾಗಿದೆ. ಈ ರೀತಿ ಹೊಸದಾಗಿ ಪರಿವರ್ತಿತರಾದವರು ಅಲ್ಲಿಯೇ ಶತಮಾನಗಳಿಂದ ಇದ್ದವರಿಗಿಂತ ಹೆಚ್ಚಿನ ಅಭಿಮಾನವನ್ನು ಹೊಂದಿರುತ್ತಾರೆ.

ಜ್ಯೋತಿಷ್ಯದ ಬಗ್ಗೆ ಹಲವಾರು ಜನ ಮಹಾನ್ ವ್ಯಕ್ತಿಗಳು ತಿಳಿಸಿರುವ ಅಭಿಪ್ರಾಯಗಳು ಮಹತ್ವಪೂರ್ಣವಾಗಿವೆ. ಬುದ್ಧರು ತನ್ನ ವಿನಯ ಪೀಟಿಕಾ ಗ್ರಂಥದಲ್ಲಿ ನಕ್ಷತ್ರಗಳ ಲೆಕ್ಕಾಚಾರದಂತಹ ತಂತ್ರಗಳಿಂದ ಜೀವನ ನಡೆಸುತ್ತಾರೊ ಇವರಿಂದ ದೂರವಿರಬೇಕು ಎಂದು ಎಚ್ಚರಿಸುತ್ತಾನೆ.

ನಕ್ಷತ್ರ ವೀಕ್ಷಣೆ ಮತ್ತು ಜ್ಯೋತಿಷ್ಯ, ಶಕುನಗಳ ಆಧಾರದಿಂದ ಶುಭ ಅಥವಾ ಅಶುಭವನ್ನು ತಿಳಿಸುವುದು, ಒಳಿತು, ಕೆಡುಕುಗಳ ಬಗ್ಗೆ ಭವಿಷ್ಯ ನುಡಿಯುವುದು ಇಂತಹವುಗಳನ್ನೆಲ್ಲಾ ತ್ಯಜಿಸಬೇಕು ಎಂಬ ಅಭಿಪ್ರಾಯ ಬುದ್ಧನ ಉಪದೇಶಗಳಲ್ಲಿ ಕಂಡುಬರುತ್ತದೆ. ಮನುಷ್ಯನ ಭವಿಷ್ಯದ ನಿರ್ಣಯಕ್ಕೆ ಅವನೆ ಕಾರಣ ಎಂದು ದೃಢವಾಗಿ ನಂಬಿದ್ದ ಸ್ವಾಮಿ ವಿವೇಕಾನಂದ ಅವರು ಜ್ಯೋತಿಷ್ಯದ ಬಗ್ಗೆ ಕಟುವಾದ ಅಭಿಪ್ರಾಯ ಪಡುತ್ತಾರೆ. 'ನಕ್ಷತ್ರಗಳ ಪ್ರಭಾವ ನನ್ನ ಮೇಲೆ ಆಗುವುದಾದರೆ ಆಗಲಿ, ಅದು ನನ್ನ ಜೀವನದ ಮೇಲೆ ಪ್ರಭಾವ ಬೀರದರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ಜ್ಯೋತಿಷ್ಯ ಮತ್ತಿತರ ಸಂಗತಿಗಳು ಸಾಮಾನ್ಯವಾಗಿ ದುರ್ಬಲ ಮನಸ್ಸಿನ ಗುರುತುಗಳು. ಇಂತಹವುಗಳು ಬದುಕಿನಲ್ಲಿ ಪ್ರಾಮುಖ್ಯ ಪಡೆದುಕೊಂಡ ಕೂಡಲೆ ವೈದ್ಯರನ್ನು ಕಂಡು ಉತ್ತಮ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು' ಎಂಬುದು ವಿವೇಕಾನಂದರ ಅಭಿಪ್ರಾಯ.

ಅಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು, ಯಾವುದೇ ಶಿಕ್ಷಣ ಕ್ರಮದ ಉದ್ದೇಶವಾಗಬೇಕು. ಪ್ರಶ್ನಿಸದೆ, ಪರಿಶೀಲಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದು. ಅದು ಭಗವದ್ಗೀತೆ, ಬೈಬಲ್ ಅಥವಾ ಕುರಾನ್ ಆಗಿರಲಿ, ವೈಜ್ಞಾನಿಕವಾದ ಆಲೋಚನೆಗಳಿಗೆ ತೃಪ್ತಿಯನ್ನುಂಟು ಮಾಡಬೇಕು. ಸಮಾಜದ ಸುಧಾರಣೆ ಶಿಕ್ಷಣದ ಒಂದು ಉದ್ದೇಶ. ನಮ್ಮ ಶಿಕ್ಷಣ ಪದ್ಧತಿ ಅವಿದ್ಯಾವಂತ ಮೂಢನಂಬಿಕೆಯುಳ್ಳವನನ್ನು ವಿದ್ಯಾವಂತ ಮೂಢನಂಬಿಕೆಯುಳ್ಳವನನ್ನಾಗಿ ಪರಿವರ್ತಿಸುತ್ತದೆ. ಇವರಿಬ್ಬರಲ್ಲಿ ಯಾರು ಹೆಚ್ಚು ಅಪಾಯಕಾರಿ ಎಂಬುದು ನಮಗೆಲ್ಲ ಗೊತ್ತು.

ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಕೊಡುತ್ತಿರುವ ಸಂಸ್ಥೆಗಳು ಜ್ಯೋತಿಷ್ಯ, ಹಸ್ತ ಸಾಮುದ್ರಿಕ, ಪವಾಡದಂತಹ ಪ್ರಗತಿವಿರೋಧೀ ಅಂಶಗಳ ವೈಜ್ಞಾನಿಕ ತಪಾಸಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.

ದೊರೆತಿರುವ ಆಧಾರಗಳ ಸಹಾಯದಿಂದ ನಾನು ಜ್ಯೋತಿಷ್ಯವನ್ನು ಕುರಿತು ವಿಶ್ಲೇಷಿಸಿದ್ದೇನೆ. ಇದರಿಂದ ಜ್ಯೋತಿಷ್ಯವು ಸಂಪೂರ್ಣವಾಗಿ ಅವೈಜ್ಞಾನಿಕ ಎಂಬ ತೀರ್ಮಾನಕ್ಕೆ ಬರಬಹುದು. ವಿಜ್ಞಾನದ ವಿದ್ಯಾರ್ಥಿಯಾದ ನಾನು ಹೊಸ ಸಂಗತಿಗಳ ಸಹಾಯದಿಂದ ನನ್ನ ಅಭಿಪ್ರಾಯವನ್ನು ಬದಲಿಸಿಕೊಳ್ಳಲು ಸಿದ್ಧನಿದ್ದೇನೆ. ತೆರೆದ ಮನಸ್ಸು ನಮ್ಮದು. ಪ್ಯಾರಚೂಟ್‌ನಂತೆ ತೆರೆದಾಗ ಮಾತ್ರ ಅದು ಕಾರ್ಯನಿರ್ವಹಿಸುವುದು ಎಂದು ನಾನು ಬಲ್ಲೆ. ಆದರೆ ಇಲ್ಲಿ ತೆರೆದ ಮನಸ್ಸು ಎಂದರೆ ಖಾಲಿ ತಲೆ ಅಲ್ಲ ಎಂಬುದನ್ನು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ.

ಸರಣಿ ೫ - ಡಾ. ಎಚ್. ನರಸಿಂಹಯ್ಯ - ಭಾರತದ ಜಾತಿ ವ್ಯವಸ್ಥೆ

ನನ್ನ ಉಪನ್ಯಾಸದ ವಿಷಯ 'ಇಂಡಿಯಾ ದೇಶದ ಜಾತಿ ವ್ಯವಸ್ಥೆ'. ನಾನು ಭೌತ ವಿಜ್ಞಾನದ ವಿದ್ಯಾರ್ಥಿಯೇ ಹೊರತು, ಸಾಮಾಜಿಕ ವಿಜ್ಞಾನದ ವಿದ್ಯಾರ್ಥಿಯಲ್ಲ. ಹೀಗಿರುವಾಗ ಜಾತಿ ವ್ಯವಸ್ಥೆಯ ಬಗ್ಗೆ ನನ್ನನ್ನು ಮಾತನಾಡಲು ಕೇಳಿರುವುದನ್ನು ನೋಡಿದರೆ, ಸಾಂಪ್ರದಾಯಿಕ ಹಾಗೂ ಪಾಂಡಿತ್ಯಪೂರ್ಣ ಭಾಷಣವನ್ನು ನನ್ನಿಂದ ನಿರೀಕ್ಷಿಸಿಲ್ಲವೆಂಬುದು ಗೊತ್ತಾಗುತ್ತದೆ. ನಾನು ಈ ಸಮಸ್ಯೆಯನ್ನು ಸಮಾಜ ವಿಜ್ಞಾನಿಯಾಗಿ ವಿಶ್ಲೇಸುವುದಕ್ಕಿಂತ ಹೆಚ್ಚಾಗಿ, ವಿಜ್ಞಾನದ ವಿದ್ಯಾರ್ಥಿಯಾಗಿ, ಶಿಕ್ಷಣದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿರುವ ವ್ಯಕ್ತಿಯಾಗಿ ವಿಶ್ಲೇಷಿಸುತ್ತೇನೆ. ಚಾತಿಯು ವಿಶೇಷ ರೀತಿಯ ಸಾಮಾಜಿಕ ವರ್ಗೀಕರಣವಾಗಿದ್ದು, ಈ ಪ್ರವೃತ್ತಿ ಎಲ್ಲ ಸಮಾಜದಲ್ಲಿಯೂ ಕಂಡು ಬರುತ್ತದೆ. ವಂಶ ವ್ಯತ್ಯಾಸಗಳು, ಧರ್ಮ ಯುದ್ಧದಲ್ಲಿನ ವಿಜಯ, ಆರ್ಥಿಕ ಬೆಳವಣಿಗೆ ಇವೆಲ್ಲಾ ವಿವಿಧ ಪ್ರಮಾಣದಲ್ಲಿ ಜಗತ್ತಿನಲ್ಲಿ ಕಂಡುಬರುವ ಅನೇಕ ಜಾತಿ ವ್ಯವಸ್ಥೆಗಳಿಗೆ ಕಾರಣವಾಗಿವೆ. ಜಾತಿ ವ್ಯವಸ್ಥೆಯ ಈ ಸ್ವರೂಪವು ಏಕರೂಪವಾಗಿಲ್ಲ.

ಭಾರತದ ಜಾತಿ ವ್ಯವಸ್ಥೆಯು ಮೊದಲು ವೃತ್ತಿಗೆ ಸಂಬಂಧಿಸಿದಂತೆ ಆರಂಭವಾಯಿತು. ಅನಂತರ ಈ ಸ್ವರೂಪವು ಹೊರಟುಹೋಗಿ ಅತಿನಿಷ್ಠೆಯುಳ್ಳ ಸ್ವಗೋತ್ರ ಸ್ತರಗಳಾಗಿ ಬೇರ್ಪಟ್ಟಿತು. ನಮಗೆಲ್ಲರಿಗೂ ತಿಳಿದಿರುವಂತೆ ಹಿಂದೂಧರ್ಮದ ಜಾತಿ ವ್ಯವಸ್ಥೆಯಲ್ಲಿ ಸಮಾಜವು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ನಾಲ್ಕು ಜಾತಿಗಳಾಗಿ ವಿಭಜಿಸಲ್ಪಟ್ಟಿದ್ದು, ಆ ಜಾತಿಗಳು ಕ್ರಮವಾಗಿ ಅವುಗಳ ಸಾಮಾಜಿಕ ಅಂತಸ್ತನ್ನು ಸೂಚಿಸುತ್ತದೆ. ಬ್ರಾಹ್ಮಣವರ್ಗ ಪೌರೋಹಿತ್ಯ ಮತ್ತು ಬೋಧನೆಯ ವೃತ್ತಿಯನ್ನು ಕೈಗೊಂಡಿದ್ದರು. ಕ್ಷತ್ರಿಯರು ಆಡಳಿತಗಾರರು ಮತ್ತು ಯೋಧರಾಗಿದ್ದರು. ವ್ಯಾಪಾರ ಮತ್ತು ವ್ಯವಸಾಯ ವೈಶ್ಯರ ಕಾಳಜಿಯಾಗಿದ್ದವು. ಶೂದ್ರರು ಕೀಳುವರ್ಗಕ್ಕೆ ಸೇರಿದ್ದು, ಉತ್ತಮ ಜಾತಿಯವರ ಸೇವೆಯನ್ನು ಮಾಡುತ್ತಿದ್ದರು. ಶೂದ್ರರಿಗಿಂತಲೂ ಅತ್ಯಂತ ಕೀಳಾದ ಮತ್ತೊಂದು ಜಾತಿಯಿತ್ತು. ಆ ಜಾತಿಗೆ ಸೇರಿದ ಜನರು ಅಸ್ಪೃಶ್ಯರಾಗಿದ್ದರು. ಉಳಿದ ಜಾತಿಗಳವರು ಅವರೊಡನೆ ನೇರವಾಗಿ ವ್ಯವರಹಿಸುತ್ತಿರಲಿಲ್ಲವಷ್ಟೇ ಅಲ್ಲದೆ, ಅಸ್ಪೃಶ್ಯರಲ್ಲಿ ಕೆಲವರು ನೋಡಲು ಸಹ ಅನರ್ಹರು ಎಂದು ಭಾವಿಸಿದ್ದರು. ಕೆಲವು ಕಾಲದ ನಂತರ ವೃತ್ತಿಯಿಂದ ನಿರ್ಧಾರವಾಗುತ್ತಿದ್ದ ಜಾತಿ, ಹುಟ್ಟಿನಿಂದ ನಿರ್ಧಾರವಾಗುವ ಸ್ಥಿತಿಗೆ ಬಂದಿತು.

ಧರ್ಮ ಮತ್ತು ದೈವವಿಧಾಯಕ ಶಕ್ತಿಗಳು ಜಾತಿವ್ಯವಸ್ಥೆಯನ್ನು ಸಮರ್ಥಿಸಿ ಸುರಕ್ಷಿತವಾಗಿದ್ದವು. ಕರ್ಮ ಸಿದ್ಧಾಂತ ಮತ್ತು ಪುನರ್ಜನ್ಮಗಳು ಹಿಂದೂ ಧರ್ಮದ ಅತ್ಯಂತ ಪ್ರಮುಖವಾದ ಎರಡು ತತ್ವಗಳಾಗಿವೆ. ಈ ಗಡುಸಾದ ನಿಯಮಗಳ ಪ್ರಕಾರ ಮಸುಷ್ಯನ ಒಳ್ಳೆಯ ಕೆಲಸಗಳು ಮತ್ತು ದುಷ್ಟ ಕೆಲಸಗಳು ಜನ್ಮಾಂತರಗಳ ತನಕ ಸಾಗುತ್ತವೆ. ಹಿಂದಿನ ಜೀವನವು ಕರ್ಮದ ಫಲವಾಗಿದ್ದು, ಮುಂದಿನ ಜೀವನವು ಮಾನವನ ನೆನಪಿನ ವ್ಯಾಪ್ತಿಯ ಆಚೆಗೂ ಹರಡಿರುವ, ಗೋರಿಯನ್ನು ಮೀರಿನಿಲ್ಲುವ ನಿತ್ಯ ನಿರಂತರ ಸಂಗತಿ. ಕರ್ಮ ಸಿದ್ಧಾಂತವು ನೈತಿಕತೆಯ ಕಾರ್ಯಕಾರಣ ಸಂಬಂಧವನ್ನು ಹೊಂದಿರುತ್ತದೆ. ಈ ಜಾತಿ ವ್ಯವಸ್ಥೆಯ ಬಲದಿಂದ ತಾನು ಬಿತ್ತಿದ್ದನ್ನು ತಾನು ಬೆಳೆಯಬೇಕಾಗುತ್ತದೆ. ಹೀಗಾಗಿ ಮನುಷ್ಯನು ಪ್ರಾಣಿಯಾಗಿ ಮತ್ತೆ ಜನ್ಮವನ್ನು ಹೊಂದಲು ಸಾಧ್ಯ. ಮನುಷ್ಯರಲ್ಲಿ ಅಸ್ಪೃಶ್ಯರು ಹಿಂದಿನ ಜನ್ಮದಲ್ಲಿ ಅತ್ಯಂತ ಪಾಪವನ್ನು ಮಾಡಿದವರು, ಬ್ರಾಹ್ಮಣರು ಅತ್ಯಂತ ಪುಣ್ಯಶಾಲಿಗಳು. ಹಿಂದೂ ಧರ್ಮದ ಪ್ರಕಾರ ಮನುಷ್ಯನ ಕರ್ಮಗಳು ಮುಂದಿನ ಜನ್ಮದ ಉದ್ಧೇಶವನ್ನು ಹೊಂದಿರ ಬೇಕು. ಆ ಮೂಲಕ ಅವನು ಕರ್ಮಕ್ಷಯವನ್ನು ಹೊಂದಿ ಮೋಕ್ಷಕ್ಕೆ ಮೊದಲು ಬ್ರಾಹ್ಮಣನಾಗಿ ಹುಟ್ಟಬೇಕು.

ಈ ಜಾತಿಗಳ ಉಗಮದ ಬಗ್ಗೆ ಇರುವ ತರ್ಕವು ಅದು ಹೊಂದಿರುವ ದೈವಿಕ ಆರೋಪವನ್ನು ವ್ಯಕ್ತಪಡಿಸುತ್ತವೆ. ಆ ತರ್ಕದಂತೆ ಬ್ರಾಹ್ಮಣರು ಬ್ರಹ್ಮನ ಶಿರಸ್ಸಿನಿಂದ, ಕ್ಷತ್ರಿಯರು ತೋಳುಗಳಿಂದ, ವೈಶ್ಯರು ತೊಡೆಗಳಿಂದ ಮತ್ತು ಕೊನೆಯಲ್ಲಿ ಶೂದ್ರರು ಅವನ ಪಾದಗಳಿಂದಹುಟ್ಟಿದ್ದಾರೆ. ಇವರಲ್ಲಿ ಮೊದಲ ಮೂವರು ದ್ವಿಜರು ಅಥವಾ ಎರಡು ಸಾರಿ ಹುಟ್ಟಿದವರು. ಅವರು ಉನ್ನತ ಜಾತಿಗಳಿಗೆ ಸೇರಿದವರು. ಈ ಚೌಕಾಕಾರದ ಕಟ್ಟದಲ್ಲಿ ಶೂದ್ರರು ಅಡಿಪಾಯವಾದರೆ ಬ್ರಾಹ್ಮಣರು ಶಿಖರ. ಮೊದಲೇ ನಾನು ತಿಳಿಸಿದಂತೆ ಜಾತಿ ಸ್ಥಿರವಾದ ಸಾಮಾಜಿಕ ಆಚರಣೆಯಾಗಿತ್ತು. ಅಂತರ ಜಾತಿಯ ಬೋಜನಕ್ಕೆ ಅವಕಾಶವಿರಲಿಲ್ಲ. ಅಂತರಜಾತಿಯ ವಿವಾಹವಂತೂ ಸಾಧ್ಯವೇ ಇರಲಿಲ್ಲ. ಜಾತಿ ವ್ಯವಸ್ಥೆ ಅಂಗವಾದ ಎಲ್ಲ ಬಗೆಯ ಕರಾಳ ಸಂಪ್ರದಾಯಗಳನ್ನು ವಿವರವಾಗಿ ಪಟ್ಟಿ ಮಾಡುವುದು ನನ್ನ ಉದ್ಧೇಶವಲ್ಲ. ಇದಂತೂ ನಿಜ! ಶೂದ್ರರು ಮತ್ತು ಅಸ್ಪೃಶ್ಯರು ಅತ್ಯಂತ ಅಮಾನವೀಯ ತಿರಸ್ಕಾರಕ್ಕೆ ಒಳಗಾಗಿದ್ದು, ಅವರನ್ನು ಪ್ರಾಣಿಗಳಿಗಿಂತ ಕೀಳಾಗಿ ಪರಿಗಣಿಸುತ್ತಿದ್ದರು. ಈ ಜಾತಿ ವ್ಯವಸ್ಥೆಯ ಮೂರು ಸಾವಿರ ವರ್ಷಗಳಿಗಿಂತಲೂ ಹಳೆಯದು. ಇದರ ಉಗಮವು ವೇದ ಪೂರ್ವ ಯುಗದಲ್ಲಿ ಆಗಿದ್ದು, ಸುಮಾರು ಕ್ರಿ ಪೂ ೧೫೦೦ರಲ್ಲಿ ಆರಂಭವಾದ ಈ ವ್ಯವಸ್ಥೆ ಬುದ್ಧನ ಕಾಲದಲ್ಲಿ ವಿಶೇಷವಾಗಿ ಬೆಳವಣಿಗೆ ಹೊಂದಿತು. ಕ್ರಿಸ್ತನು ಹುಟ್ಟುವುದಕ್ಕೆ ಮುಂಚೆ ಸುಮಾರು ಐದು ಶತಕಗಳ ಹಿಂದೆಯೇ ಈ ಜ್ಯಾತಿ ವ್ಯವಸ್ಥೆ ನಮ್ಮಲ್ಲಿತ್ತು. ಪ್ರತಿಯೊಂದು ರೂಢಿಯೂ, ಆರಾಧನೆಯೂ ಅನೇಕ ಉಪ ಪಂಗಡಗಳ ಉದಯಕ್ಕೆ ಕಾರಣವಾಯಿತು. ನಮ್ಮ ದೇಶದಲ್ಲಿ ೫೦೦೦ಕ್ಕೂ ಹೆಚ್ಚು ಉಪಜಾತಿಗಳು, ಪಂಗಡಗಳು ಇವೆಯೆಂದು ಅಂದಾಜು ಮಾಡಲಾಗಿದ್ದು, ಅವು ತಮ್ಮದೇ ಆದ ನಿರ್ದಿಷ್ಟ ಆಚರಣೆಗಳನ್ನು ಹೊಂದಿವೆ. ಈ ಜಾತಿಗಳ ಬಹು ಪ್ರಮಾಣ ಮತ್ತು ಸಂಕೀರ್ಣತೆಗಳು ಭಾರತೀಯ ಮತ್ತು ಪಾಶ್ಚಾತ್ಯ ಸಾಮಾಜಿಕ ವಿಜ್ಞಾನಿಗಳನ್ನು ದಿಗ್ಭ್ರಮೆ ಹಿಡಿಸಿವೆ.

ಜಾತಿ ವ್ಯವಸ್ಥೆಯನ್ನು ನೇರವಾಗಿ ಗಮನಿಸಿದರೆ ಅದು ಅನ್ಯಾಯ, ಅಮಾವವೀಯವಷ್ಟೇ ಅಲ್ಲದೆ ಅವಿವೇಕವೂ ಆಗಿದೆ. ಇದರಿಂದ ಸಮಾಜದ ಪ್ರಗತಿಗೆ ಲೆಕ್ಕ ಹಾಕಲು ಆಗದಷ್ಟು ಆಘಾತವುಂಟಾಗಿದೆ. ಹುಟ್ಟಿನ ಆಧಾರದಿಂದ ವ್ಯಕ್ತಿಯ ಹಿರಿಮೆಯನ್ನು ನಿರ್ಧರಿಸುವುದು, ಸಂಪೂರ್ಣವಾಗಿ ಅವೈಜ್ಞಾನಿಕ. ಈ ಜಾತಿ ವ್ಯವಸ್ಥೆಯು ನಮ್ಮ ಸಮಾಜಕ್ಕೆ ಅಂಟಿದ ಶಾಪವಾಗಿದ್ದು, ಸಮಾಜದ ಬಹುಭಾಗವನ್ನು ಅಜ್ಞಾನದಲ್ಲಿಟ್ಟಿದ್ದು, ಅವರು ಅತ್ಯಂತ ಹೀನಸ್ಥಿತಿಯಲ್ಲಿ ಬದುಕುವಂತೆ ಮಾಡಿದೆ. ಅದರ ಜೊತೆಗೆ ಇದು ಮನುಷ್ಯನ ಘನತೆಗೇ ಅವಮಾನಕರವಾದದ್ದು. ಅನೇಕ ತಲೆಮಾರುಗಳಿಂದ ಕೀಳುಜಾತಿಗಳಿಗೆ ಸೇರಿದ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ ಮೂಕಯಾತನೆಯನ್ನು ಸಹಿಸಿಕೊಂಡು ಬಂದಿದ್ದಾರೆ. ಉನ್ನತ ಜಾತಿಯವರು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ಬರಲು ಈ ನೀಚ ವ್ಯವಸ್ಥೆಯನ್ನು ರಕ್ಷಿಸಿಕೊಂಡು ಬಂದಿದ್ದಾರೆ. ನಮ್ಮ ದೇಶದಲ್ಲಿ ಧರ್ಮವು ಬಲವಾಗಿ ಬೇರೂರಿ ನಿಂತಿದೆ. ಅಜ್ಞಾನದ ವ್ಯಾಪ್ತಿಗೆ ಮಿತಿಯೇ ಇಲ್ಲ. ಮೂಢನಂಬಿಕೆಗಳಂತೂ ತುಂಬಿ ತುಳುಕುತ್ತಿವೆ. ಈ ಎಲ್ಲ ಅಂಶಗಳು ಕರಾಳ ಜಾತಿ ವ್ಯವಸ್ಥೆಯು ಉಳಿದುಕೊಂಡು ಬರಲು ಕಾರಣವಾಗಿದೆ.

ಈ ಜಾತಿ ವ್ಯವಸ್ಥೆಯು ನಮ್ಮ ದೇಶಕ್ಕೆ ವಿಶಿಷ್ಟವಾದದ್ದು, ನಾವೇ ಇದರ ಏಕೈಕ ನಿಯೋಗಿಗಳು. ಯಾವುದೇ ದೇಶವು ಈ ರೀತಿಯ ಅತಾರ್ಕಿಕ ಸಾಮಾಜಿಕ ತಳಹದಿಯನ್ನು ಹೊಂದಿಲ್ಲ. ಅನೇಕ ಕ್ಷೇತ್ರಗಳಲ್ಲಿ ಇದರ ಪರಿಣಾಮಗಳನ್ನು ಗುರುತಿಸ ಬಹುದು. ಈ ಜಾತಿ ಅಂಶಗಳಿಂದ ನಮ್ಮ ದೇಶದ ಅನೇಕ ಎಡಪಂಥೀಯ ರಾಜಕೀಯ ಸಿದ್ಧಾಂತಗಳು ಪ್ರತಿಕೂಲ ಪರಿಣಾಮಗಳನ್ನು ಎದುರಿಸಿವೆ. ಜಾತೀಯತೆಯನ್ನು ಪ್ರೋತ್ಸಾಹಿಸುವ ಮತ್ತು ಜಾತಿ ಸಂಘಟನೆಯನ್ನು ಎತ್ತಿಕಟ್ಟಲು ಒಂದಾಗುವ ಅನೇಕ ಪ್ರಗತಿಶೀಲರನ್ನು ನಮ್ಮ ಸಮಾಜದಲ್ಲಿ ವಿಶೇಷವಾಗಿ ಕಾಣಬಹುದು.

ಚುನಾವಣೆಯಲ್ಲಿ ಜಾತಿ ವಹಿಸುವ ಪ್ರಮುಖಪಾತ್ರ ಎಲ್ಲಿರಗೂ ತಿಳಿದ ಸಂಗತಿ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುವಾಗ ಜಾತಿಗೆ ಹೆಚ್ಚಿನ ಪ್ರಾಧಾನ್ಯ ಕೊಡುತ್ತಾರೆ. ತಮ್ಮ ಚುನಾವಣೆಯ ಪ್ರಣಾಳಿಕೆಗಳು ಏನೇ ಇರಲಿ, ಎಡ ಪಕ್ಷಗಳು ಕೂಡ ಈ ಸಂದರ್ಭದಲ್ಲಿ ಜಾತಿಯನ್ನು ಮರೆಯುವುದಿಲ್ಲ. ಒಂದು ಕ್ಷೇತ್ರ ಪ್ರಮುಖವಾಗಿ ಒಕ್ಕಲಿಗ ಜನಾಂಗವನ್ನು ಹೊಂದಿದ್ದರೆ, ರಾಜಕೀಯ ಪಕ್ಷಗಳು, ಸಾಮಾನ್ಯವಾಗಿ ಆ ಜಾತಿಯವರನ್ನೇ ಅಭ್ಯರ್ಥಿಯನ್ನಾಗಿ ಆರಿಸುತ್ತಾರೆ. ಲಿಂಗಾಯತರಲ್ಲಿ, ಮುಸ್ಲಿಂರಲ್ಲಿ ಅಥವಾ ಪ್ರಮುಖವಾದ ಯಾವುದೇ ಜಾತಿಯಲ್ಲೂ ಕಂಡುಬರುತ್ತದೆ. ಅನೇಕ ಖಾಸಗೀ ಉದ್ದಿಮೆಗಳಲ್ಲಿ, ಕೈಗಾರಿಕೆಗಳಲ್ಲಿ, ಬ್ಯಾಂಕ್‌ಗಳಲ್ಲಿ ಮತ್ತು ವಿದ್ಯಾ ಸಂಸ್ಥೆಗಳಲ್ಲಿ ಆಡಳಿತ ವರ್ಗದ ಜಾತಿಯವರೇ ಬಹುಪಾಲು ನೌಕರರು ಇರುತ್ತಾರೆ. ಬೇರೆ ದೇಶಗಳಲ್ಲಿ ಯಶಸ್ವಿಯಾಗಿರುವ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳು ನಮಗೆ ಅರ್ಥಪೂರ್ಣವಾಗಿದ್ದರೂ, ಅವಶ್ಯಕವಾಗಿದ್ದರೂ, ಅವುಗಳು ಇಲ್ಲಿ ವಿಫಲವಾಗಲು ಜಾತೀಯ ಭಾವನೆಗಳೇ ಕಾರಣವಾಗಿವೆ. ದೇವರು ಸರ್ವಾಂತರ್ಯಾಮಿ ಎಂಬ ಮಾತು ವ್ಯಕ್ತಿಯ ನಂಬಿಕೆಗೆ ಸಂಬಂಧಿಸಿದ್ದು. ಆದರೆ ನಮ್ಮ ದೇಶದಲ್ಲಿ ಜಾತಿಯ ಭಾವನೆ ಸರ್ವಾಂತರ್ಯಾಮಿ ಎಂದು ನಾನು ಹೇಳಿದರೆ ಅದು ವಾಸ್ತವ ಸಂಗತಿ.

ಜಾತಿ ವ್ಯವಸ್ಥೆಗೆ ಈ ಎಲ್ಲ ಹಿನ್ನೆಲೆಯಿದ್ದರೂ ಈಗಲೂ ಅನೇಕರಿಗೆ ಅದರಿಂದ ಉಂಟಾಗುವ ದುಷ್ಪರಿಣಾಮಗಳ ಪೂರ್ಣ ತಿಳುವಳಿಕೆ ಇಲ್ಲ. ಈ ವ್ಯವಸ್ಥೆಯಿಂದ ಒದಗುವ ಅಪಾಯವನ್ನು ತಪ್ಪಿಸಿಕೊಳ್ಳವುದಕ್ಕಾಗಿಯೇ ಕೆಳವರ್ಗದ ಜಾತಿಯವರು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸುವುದು. ಪರದೇಶಗಳ ಆಕ್ರಮಣ ಮತ್ತು ಗೆಲುವಿನ ನಂತರ ಸೋತ ಜನರ ಬಲವಂತ ಮತಾಂತರ ನಡೆಯುವುದು, ಸಾಮಾನ್ಯ. ನಮಗೆಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನದ ಉದಯವಾಗಿದ್ದು, ಧಾರ್ಮಿಕ ಹಾಗೂ ಮತೀಯ ಭಾವನೆಗಳಿಂದಲೇ. ಕೆಲವು ರಾಜ್ಯಗಳಲ್ಲಿದ್ದ ಬಹುಸಂಖ್ಯಾತ ಮುಸ್ಲಿಮರು ಹಿಂದುಗಳ ಆಳ್ವಿಕೆಗೆ ಇಷ್ಟ ಪಡಲಿಲ್ಲ. ಆ ಕಾರಣದಿಂದಲೇ ಅವರಿಗಾಗಿ ಪ್ರತ್ಯೇಕ ರಾಜ್ಯ ನಿರ್ಮಾಣವಾಯಿತು. ಈ ಅಂಶದಿಂದ ಯಾವ ರೀತಿ ಭದ್ರವಾಗಿ ಬೇರೂರಿರುವ ಜಾತೀಯ ಹಾಗೂ ಧಾರ್ಮಿಕ ಭಾವನೆಗಳಿಂದ ದೇಶದ ಒಳಿತಿಗೆ ಐಕ್ಯಮತಕ್ಕೆ ಧಕ್ಕೆ ಒದಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ.

ವಿವಿಧ ರಂಗದಲ್ಲಿ ಸಮಾಜಕ್ಕೆ ಆತಂಕವನ್ನುಂಟುಮಾಡಿರುವ ಈ ಅಪಾಯಕಾರಿ ವ್ಯವಸ್ಥೆಯ ನಿರ್ಮೂಲನ ಹೇಗೆ ಸಾಧ್ಯ ಎಂದು ಯೋಚಿಸುವುದು ಅವಶ್ಯಕ. ಉಚಿತವಾದ ಶಿಕ್ಷಣವೇ ಈ ಸಮಸ್ಯೆಯ ನಿವಾರಣೆಗೆ ಏಕೈಕ ಮಾರ್ಗ ಎಂಬುದು ನನ್ನ ಅಭಿಪ್ರಾಯ. ಉದ್ಧೇಶಿತ ಸಾಮಾಜಿಕ ಬದಲಾವಣೆಗೆ ಶಿಕ್ಷಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಅದರೆ ದುರದೃಷ್ಟವಶಾತ್ ನಮ್ಮ ಸಧ್ಯದ ಶಿಕ್ಷಣ ವ್ಯವಸ್ಥೆ ಜಾತಿವಾದಿಗಳನ್ನು ಶಿಕ್ಷಿತ ಜಾತಿವಾದಿಗಳನ್ನಾಗಿ ಪರಿವರ್ತಿಸುತ್ತದೆ. ನಮಗೆಲ್ಲಾ ತಿಳಿದಿರುವಂತೆ ಶಿಕ್ಷಣ ಪಡೆದ ಕೋಮುವಾದಿ, ಶಿಕ್ಷಣ ಪಡೆಯದವನಿಗಿಂತ ಸಮಾಜಕ್ಕೆ ಹೆಚ್ಚು ಅಪಾಯಕಾರಿ.

ಯಾವುದೇ ಶಿಕ್ಷಣ ಕ್ರಮದಲ್ಲಿ ಜಾತೀಯ ಭಾವನೆ ಉಂಟುಮಾಡುವ ದುಷ್ಪರಿಣಾಮಗಳು ಶಿಕ್ಷಣ ವಿಷಯಗಳಲ್ಲಿ ಸೇರ್ಪಡೆ ಆಗಿರ ಬೇಕು. ಜಾತಿವ್ಯವಸ್ಥೆಯ ಕರಾಳ ಮುಖಗಳನ್ನು ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ತಿಳಿಸಿಕೊಡಬೇಕು. ಈ ರೀತಿಯ ಗಂಭೀರ ವಿಷಯಗಳನ್ನು ತಿಳಿಸುವಾಗ ಹೆಚ್ಚಿನ ಎಚ್ಚರಿಕೆ ಮತ್ತು ಸಂಯಮ ಅವಶ್ಯಕ. ಇಂತಹ ವಿಷಯಗಳನ್ನು ಚರ್ಚಿಸುವಾಗ ವ್ಯಕ್ತಿಗತ ಆರೋಪಣೆಗಳಿಗೆ ಅವಕಾಶಕೊಡದೆ ವಸ್ತುನಿಷ್ಠ ದೃಷ್ಟಿಕೋಣವನ್ನು ಹೊಂದಿರಬೇಕು. ಯಾರೇ ಒಂದು ನಿರ್ಧಿಷ್ಟ ಜಾತಿಯಲ್ಲಿ ಹುಟ್ಟುವುದಕ್ಕೆ ಅವನು ಜವಾಬ್ದಾರನಾಗಿರುವುದಿಲ್ಲ. ಅದ್ದರಿಂದ ಒಬ್ಬನು ನಿರ್ಧಿಷ್ಟ ಜಾತಿ ಒಂದಕ್ಕೆ ಸೇರಿದವನೆಂಬ ಕಾರಣ್ಕಕಾಗಿಯೇ ಆಕ್ಷೇಪಿಸುವುದು ಸರಿಯಲ್ಲ. ಯಾರಿಗೂ ಅವರವರ ತಂದೆ-ತಾಯಿಗಳನ್ನು ಆರಿಸಿಕೊಳ್ಳುವದಕ್ಕೆ ಸ್ವಾತಂತ್ರ್ಯ ಇಲ್ಲ. ಈ ಕಾರಣದಿಂದ ಜಾತಿಯಂತಹ ಸೂಕ್ಷ್ಮವಿಷಯದ ಚರ್ಚೆಯು ಪೂರ್ತಿಯಾಗಿ ವೈಜ್ಞಾನಿಕವಾಗಿರಬೇಕು.

ಅನೇಕ ಸಮಾಜ ಸುಧಾರಕರು ಜಾತಿವ್ಯವಸ್ಥೆಯ ನಿವಾರಣೆಗೆ ಪ್ರಯತ್ನ ನಡೆಸಿದ್ದಾರೆ. ಈ ದಿಸೆಯಲ್ಲಿ ಪ್ರಥಮ ಪ್ರಯತ್ನ ನಡೆಸಿದ ಮಹಾನ್‌ವ್ಯಕ್ತಿ ಬುದ್ಧ. ಜಾತಿ ವ್ಯವಸ್ಥೆಯನ್ನು ಪ್ರಬಲವಾಗಿ ವಿರೋಧಿಸಿದ ಬುದ್ಧ ತನ್ನ ಧರ್ಮಕ್ಕೆ ಜಾತಿಯ ನಿಬಂಧನೆ ಹಾಕದೆ ಎಲ್ಲರನ್ನೂ ಸೇರಿಸಿಕೊಂಡ. ಬಸವಣ್ಣನವರು ಜಾತಿಯ ವಿರುದ್ಧ ಸೌಮ್ಯ ಯುದ್ಧವನ್ನೇ ಹೂಡಿದ್ದಲ್ಲದೆ, ಅಂತರಜಾತೀಯ ವಿವಾಹಗಳಿಗೆ ಪ್ರೋತ್ಸಾಹ ಕೊಟ್ಟರು. ಆದರೆ ನಮ್ಮಲ್ಲಿ ಬೌದ್ಧಧರ್ಮ ತನ್ನ ಪ್ರಭಾವವನ್ನು ಕಳೆದುಕೊಂಡು, ಪ್ರಚಾರಕ್ಕೆ ಬಾರದೇ ಇರುವಂತಹ ಪರಿಸ್ಥಿತಿ ಪಡೆದುಕೊಂಡದ್ದು ವಿಷಾದಪಡಬೇಕಾದ ಅಂಶ. ಬಸವಣ್ಣನವರ ಅನುಯಾಯಿಗಳು, ಕೂಡ ಮತ್ತೊಂದು ಪ್ರಬಲ ಜಾತಿಯಾಗಿ ಒಟ್ಟಾದರು. ಎಲ್ಲ ಜಾತಿಗಳಂತೆ ಅದು ಸಹ ತನ್ನದೇ ಆದ ಸಂಪ್ರದಾಯ ಸಂಬಂಧಗಳನ್ನು ರೂಪಿಸಿಕೊಂಡಿತು.

ಜಾತಿಯು ಹಲವಾರು ಉಪಜಾತಿಗಳನ್ನು ಸಹ ಪಡೆದುಕೊಂಡಿದೆ.

ಆರ್ಯ ಸಮಾಜವನ್ನು ಸ್ಥಾಪಿಸಿದ ದಯಾನಂದ ಸರಸ್ವತಿ ಅವರು ಹಿಂದೂ ಧರ್ಮದಲ್ಲಿ ಕಂಡುಬರುವ ಜಾತಿಯ ಅಂತರವನ್ನು ನಿವಾರಿಸಲು, ಈ ಮೂಲಕ ಸಾಮಾಜಿಕ ಸಂಘಟನೆಯನ್ನು ಉಂಟುಮಾಡಲು ಪ್ರಯತ್ನಿಸಿದರು. ಸ್ವಲ್ಪಮಟ್ಟಿಗೆ ಸಿಖ್ ಧರ್ಮವು ಕೂಡ ಈ ಉದ್ಧೇಶದಿಂದಲೇ ಸ್ಥಾಪಿತವಾದದ್ದು. ಈ ಎಲ್ಲ ಪ್ರಯತ್ನಗಳು ಅಂಶಿಕವಾಗಿ ಸಾಫಲ್ಯ ಹೊಂದಿದವಷ್ಟೆ. ಜಾತಿಯ ವಿರುದ್ಧ ಹೊರಟ ಧರ್ಮಗಳೇ ಜಾತಿಗಳಾಗಿ ಪರಿವರ್ತಿತವಾದದ್ದು ದುರಂತ. ಜಾತಿಯ ಕಟ್ಟುಪಾಡುಗಳನ್ನು ತೊಡೆಯಲು ಪ್ರಯತ್ನಿಸಿದ ಮತ್ತೊಬ್ಬ ಧೀಮಂತ ಕೇರಳದ ನಾರಾಯಣ ಗುರು. ಜಾತಿ ವ್ಯವಸ್ಥೆಯನ್ನು ಉಗ್ರವಾಗಿ, ನಿರ್ಭಯವಾಗಿ ಎದುರಿಸಿದವರಲ್ಲಿ ತಮಿಳುನಾಡಿನ ರಾಮಸ್ವಾಮಿ ನಾಯ್ಕರ್ ಅವರೊಬ್ಬರು. ಜಾತಿ ವ್ಯವಸ್ಥೆಯನ್ನು ನಿರ್ಮೂಲನಗೊಳಿಸಲು ಇಷ್ಟಪಟ್ಟ ಅವರ ಕ್ರಾಂತಿಕಾರಕ ವಿಚಾರಗಳು ಕೆಳಜಾತಿಯ ಜನರಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನವನ್ನುಂಟು ಮಾಡಿದವು.

ಜಾತಿ ವ್ಯವಸ್ಥೆಯನ್ನು ಕುರಿತು ಚರ್ಚಿಸುವ ಸಂದರ್ಭದಲ್ಲೆಲ್ಲಾ, ಕೈಗಾರಿಕೀಕರಣದ ಹರಡುವಿಕೆಯಿಂದ ಜಾತಿ ಭಾವನೆಗಳು ಕಡಿಮೆ ಆಗಿವೆ ಎಂಬ ಅಭಿಪ್ರಾಯ ಕೇಳಿ ಬರುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಜಾತಿ ವ್ಯವಸ್ಥೆ ಕಟ್ಟಡ ಬಿರುಕು ಬಿಟ್ಟಿದೆ ಎನ್ನುವುದು ನಿಜ. ವಿಜ್ಞಾನದ ಈ ಯುಗದಲ್ಲಿ ಜಾತಿಯ ಬಿಗಿಯಾದ ಸಂಪ್ರದಾಯಗಳಿಗೇ ಅಂಟಿಕೊಂಡಿರುವುದು ಸಾಧ್ಯವಿಲ್ಲ ಎಂಬುದು ಸತ್ಯ. ಆದರೆ ಈ ರೀತಿಯ ಬದಲಾವಣೆಗಳು ಬಹುಪಾಲು ಮೇಲುಮೇಲಿನವು ಮಾತ್ರ. ಅನಿವಾರ್ಯವಾಗಿ ಉಂಟಾಗಿವೆಯಷ್ಟೇ ಹೊರತು, ಮನಃಪೂರ್ವಕವಾಗಿ ನಡೆದಿಲ್ಲ. ಉಗ್ರವಾದ ಮತಾಭಿಮಾನಿ ಕೂಡ ಎಷ್ಟೇ ಪ್ರಯತ್ನಿಸಿದರೂ ಹಳೆಯ ನಂಬಿಕೆಗಳನ್ನೇ ಈ ದಿನಗಳಲ್ಲಿ ಆಚರಣೆಗೆ ತರುವುದು ಸಾಧ್ಯವಿಲ್ಲ. ಜಾತಿ ಮತ್ತು ಕೋಮುಭಾವನೆಗಳು ಬಹುಪಾಲು ಜನರಲ್ಲಿ ಅತ್ಯಧಿಕವಾಗಿ ಇರುವುದು ವಾಸ್ತವ ಸಂಗತಿ.

ಜಾತಿ ವ್ಯವಸ್ಥೆಯ ನಿರ್ಮೂಲನಕ್ಕೆ ಸೂಚಿಸುವ ಪಗ್ರತಿಪರ ಪರಿಹಾರಗಳಲ್ಲಿ ಅಂತರಜಾತಿಯ ವಿವಾಹವ್ಯವಸ್ಥೆ ಒಂದು. ಆದರೆ ಎಷ್ಟೋ ಸಂದರ್ಭಗಳಲ್ಲಿ ಅಂತರಜಾತಿಯ ವಿವಾಹಗಳು ಆಕಸ್ಮಿಕವಾಗಿ ನಡೆದಿರುತ್ತವಷ್ಟೆ. ಈ ರೀತಿ ಮದುವೆ ಆದವರಿಗೆ ಜಾತೀಯ ಭಾವನೆಗಳು ಇರುವುದಿಲ್ಲವೆಂದು ಹೇಳಲು ಬರುವುದಿಲ್ಲ. ತಮ್ಮ ಸಂಗಾತಿಗಳನ್ನು ಆರಿಸಿಕೊಳ್ಳುವಾಗ ಜಾತಿಯನ್ನು ಅವರು ಲೆಕ್ಕಿಸಿಲ್ಲ ಎಂಬುದು ಮಾತ್ರ ನಿಜ. ಬಹುಪಾಲು ಇಂತಹ ಮದುವೆಗಳಲ್ಲಿ ವಧುವು ವರನ ಅಥವಾ ವರನು ವಧುವಿನ ಜಾತಿಯನ್ನು ಸ್ವೀಕರಿಸುತ್ತಾರೆ. ಹೀಗಾದಾಗ ಒಬ್ಬ ವ್ಯಕ್ತಿ ಒಂದು ಜಾತಿಯಿಂದ ದೂರವಾಗಿ ಮತ್ತೊಂದು ಜಾತಿಯಲ್ಲಿ ಸೇರ್ಪಡೆ ಆಗುವುದು ಮಾತ್ರ ಕಂಡುಬರುತ್ತದೆ. ಈ ಕಾರಣದಿಂದ ಅಂತರಜಾತೀಯ ಮದುವೆಗಳಿಂದಲೇ ಜಾತಿಸಹಿತ ಸಮಾಜದ ವ್ಯವಸ್ಥೆ ನಿರ್ಮೂಲವಾಗಲು ಸಾಧ್ಯವಿಲ್ಲ. ವಧು-ವರರು ತಾವು ಯಾವುದೇ ಜಾತಿಗೆ ಸೇರಿದವರಲ್ಲವೆಂದು ಘೋಷಿಸಬೇಕು. ಹಾಗಾದಾಗ ಸ್ವಾಭಾವಿಕವಾಗಿಯೇ ಅವರ ಮಕ್ಕಳು ಯಾವುದೇ ಜಾತಿಗೆ ಸೇರುವುದಿಲ್ಲ. ಅಂತರ ಜಾತೀಯ ವಿವಾಹಗಳ ವಿರುದ್ಧ ಹೇಳುವವರು ಮುಖ್ಯವಾಗಿ ಮಕ್ಕಳ ಜಾತಿ ಮತ್ತು ಭವಿಷ್ಯವನ್ನು ಕುರಿತು ವಾದ ಮಂಡಿಸುತ್ತಾರೆ. ಮಕ್ಕಳು ಯಾವುದೇ ಜಾತಿಗೆ ಸೇರದ ಗುಂಪಾದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಈ ಗುಂಪು ಹೆಚ್ಚು ಹೆಚ್ಚು ಬೆಳೆದಂತೆಲ್ಲಾ ಜಾತಿ ವ್ಯವಸ್ಥೆ ನಿಧಾನವಾಗಿ ನಶಿಸಿಹೋಗುತ್ತದೆ. ಇದು ಬಹಳ ನಿಧಾನವಾಗಿ ಮತ್ತು ಕಷ್ಟದ ಮಾರ್ಗದಿಂದ ಮಾತ್ರ ಸಾಧ್ಯ. ಮೂವತಕ್ಕೂ ಹೆಚ್ಚು ಶತಕಗಳಿಂದ ಬೇರುಬಿಟ್ಟಿರುವ ಈ ಸಾಮಾಜಿಕ ವ್ಯವಸ್ಥೆಗೆ ಶೀಘ್ರ ಪರಿಹಾರ ಅಸಾಧ್ಯ. ಸಮಾಜದ ಮೇಲೆ ವಿನಾಶಕಾರಿ ಪ್ರಭಾವವನ್ನು ಬೀರಿರುವ ಈ ಜಾತಿ ವ್ಯವಸ್ಥೆಯ ನಿರ್ಮೂಲನಕ್ಕೆ ಶ್ರಮಿಸುವುದು ಜನತೆಯ, ಸಂಸ್ಥೆಗಳ ಮತ್ತು ಸರ್ಕಾರದ ಕರ್ತವ್ಯ. ಈ ದಿಸೆಯಲ್ಲಿ ಸಾಧ್ಯವಿರುವ ಎಲ್ಲ ರೀತಿಯ ವ್ಯವಸ್ಥಿತ, ಅವ್ಯಾಹತ ಪ್ರಯತ್ನ ಅವಶ್ಯಕ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಜಾತಿರಹಿತವ್ಯವಸ್ಥೆಯ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಬಲ್ಲದು.
ಸರಣಿ ೫ - ಡಾ. ಎಚ್. ನರಸಿಂಹಯ್ಯ - ಭಾರತದ ಜಾತಿ ವ್ಯವಸ್ಥೆ

ಸರಣಿ ೬ - ಡಾ. ಎಚ್. ನರಸಿಂಹಯ್ಯ - ಪ್ರಾರ್ಥನೆಯಿಂದ ಮಳೆ ಬರುವುದಂತೆ ? ಮಳೆಗಾಗಿ ಯೋಗಿಯೊಬ್ಬನ ವ್ಯರ್ಥ ಪ್ರಾರ್ಥನೆ

ಬೆಂಗಳೂರು, ಸುಮಾರು ಮೂವತ್ತು ಲಕ್ಷ ಜನರು ವಾಸಿಸುವ ನಗರ. ಈ ನಗರಕ್ಕೆ ನೀರನ್ನು ಒದಗಿಸುವ ಮುಖ್ಯ ಆಕರಗಳಲ್ಲಿ, ಇಲ್ಲಿಂದ ಇಪ್ಪತ್ತು ಮೈಲಿಗಳ ದೂರದಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯವೂ ಒಂದು. ಈ ಜಲಾಶಯಕ್ಕೆ ನೀರು ಸರಬರಾಜು ಮಾಡುವ ಜಲಾನಯನ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಬೀಳದ ಕಾರಣ, ಕೆರೆಯ ನೀರಿನ ಮಟ್ಟ ಒಂದೇ ಸಮನೆ ಕುಸಿಯತೊಡಗಿ, ಸರ್ಕಾರ ಮತ್ತು ಸಾರ್ವಜನಕರಿಗೆ ಅಪಾರ ಆಂತಕವಾಗಿತ್ತು..

೧೮-೦೪-೮೫ ರಂದು ಕರ್ನಾಟಕದಲ್ಲಿ ಅತ್ಯಧಿಕ ಪ್ರಸಾರವಿರುವ ಜನಪ್ರಿಯ ಇಂಗ್ಲಿಷ್ ದಿನ ಪತ್ರಿಕೆಯಾದ ಡೆಕ್ಕನ್ ಹೆರಾಲ್ಡ್‌ನಲ್ಲಿ ಈ ಕೆಳಗಿನ ಸುದ್ದಿಯು ಪ್ರಕಟವಾಯಿತು.

'ಇನ್ನೂ ಮಳೆಯ ದೇವತೆಯು ಕರುಣೆ ತೋರದಿರುವ ಕಾರಣ, ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು, ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಆಶೀರ್ವದಿಸಲು ಯೋಗಿಯೊಬ್ಬರನ್ನು ಆಹ್ವಾನಿಸುವ ಯೋಜನೆ ಹಾಕಿಕೊಂಡಿದೆ.

ಬರುವ ತಿಂಗಳ ಮೊದಲ ವಾರದಲ್ಲಿ, ಜಲಾಶಯದ ಬಳಿ, ಶ್ರೀ ಶಿವಬಾಲಯೋಗಿಯವರು ಮಳೆಗಾಗಿ ಪ್ರಾರ್ಥನೆ ಮಾಡಲಿರುವರೆಂದು ನಗರಾಭಿವೃದ್ಧಿ ಸಚಿವರಾದ ಶ್ರೀ ಎ. ಲಕ್ಷೀಸಾಗರ್ ಅವರು ಈ ದಿನ ವರದಿಗಾರರಿಗೆ ತಿಳಿಸಿದರು. ಸಂಪೂರ್ಣವಾಗಿ ಬತ್ತಿಹೋಗಿರುವ ಹೆಸರಘಟ್ಟ ಕೆರೆ, ಹಾಗೂ ಜಲಮಟ್ಟ ೭೪ ಅಡಿಗಳಿರಬೇಕಾಗಿದ್ದು, ಈಗ ೨೩ ಅಡಿಗಳಿಗೆ ಇಳಿದಿರುವ ತಿಪ್ಪಗೊಂಡನಹಳ್ಳಿ ಕೆರೆಗಳ ಭೇಟಿಗೆಂದು ಕರೆದೊಯ್ದಾಗ ಈ ಮಾಹಿತಿಯನ್ನು ನೀಡಲಾಯಿತು.'

ನಾನು ಅದೇ ದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಾಚಕರವಾಣಿ ವಿಭಾಗಕ್ಕೆ ಪತ್ರವೊಂದನ್ನು ಬರೆದೆ. ೧೯-೦೪-೮೫ ರಂದು ಪ್ರಕಟವಾದ ಆ ಪತ್ರದ ಒಕ್ಕಣೆ ಈ ರೀತಿ ಇತ್ತು.

ಮಳೆ ಬರಲೆಂದು ಮಾಡುವ ಪ್ರಾರ್ಥನೆಯು ನಮ್ಮ ರಾಜ್ಯಾಂಗದ ಮೂಲತತ್ವವನ್ನು ಭಂಗಿಸುತ್ತದೆ.

ಇಂದು ಬೆಳಿಗ್ಗೆ ಪತ್ರಿಕೆಗಳನ್ನು ಓದುವಾಗ ಶ್ರೀ ಶಿವಬಾಲಯೋಗಿಯವರ ಸಹಾಯದಿಂದ ಮಳೆ ತರಿಸುವುದಾಗಿ ನಗರಾಭಿವೃದ್ಧಿ ಸಚಿವರಾದ ಶ್ರೀ ಎ. ಲಕ್ಷ್ಮೀಸಾಗರ್ ಅವರು ನೀಡಿರುವ ಹೇಳಿಕೆಯನ್ನು ಓದಿ ನನಗೆ ದಿಗ್ಭ್ರಮೆಯಾಯಿತು.

'ಸ್ವಾಮಿ ಶ್ರೀ ಶಿವಬಾಲಯೋಗಿಯವರು ಬರುವ ತಿಂಗಳ ಮೊದಲ ವಾರ ಜಲಾಶಯದ ಬಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ' ಎಂದು ಸಚಿವರು ಹೇಳಿದ್ದಾರೆ. ಈ ಮಾತು ಬಹಳ ಅವೈಜ್ಞಾನಿಕವಾಗಿರುವುದಷ್ಟೇ ಅಲ್ಲದೆ, ಒಟ್ಟು ಭಾರತೀಯ ರಾಜ್ಯಾಂಗಕ್ಕೆ ಧಕ್ಕೆ ತರುವಂತಹುದಾಗಿದೆ. ನಮ್ಮದು ಕಾನೂನಿನಂತೆ ಜಾತ್ಯತಿತ ರಾಷ್ಟ್ರವೆನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆಕ್ಸ್‌ಫರ್ಡ್ ಇಂಗ್ಸಿಷ್ ನಿಘಂಟಿನ ಪ್ರಕಾರ ಸೆಕ್ಯುಲರ್ (ಜಾತ್ಯತೀತ) ಎಂಬ ಪದದ ಅರ್ಥ ಈ ರೀತಿ ಇದೆ.

ಈ ಜಗತ್ತಿನ ಲೌಕಿಕ ವ್ಯವವಹಾರಗಳಿಗೆ ಸಂಬಂಧಪಟ್ಟಿದ್ದು, ಚರ್ಚ್ ಮತ್ತು ಧರ್ಮದ ವಲಯದಿಂದ ಪ್ರತ್ಯೇಕವಾಗಿ ಇರುವಂತಹದು. ನಾಗರೀಕವೂ, ಜನಸಾಮಾನ್ಯರಿಗೆ ಸಂಬಂಧಿಸಿದ್ದೂ, ತತ್ಕಾಲೀನವೂ ಆದ ವಿಷಯ. ಮುಖ್ಯವಾಗಿ ಇದನ್ನು ಅ-ಧಾರ್ಮಿಕ, ಅ-ಪವಿತ್ರ ಎಂಬ ಅರ್ಥದಲ್ಲಿ ಉಪಯೋಗಿಸಲಾಗುತ್ತದೆ.

ಎನ್ಸೈಕ್ಲೋಪೀಡಿಯಾ ಬ್ರಿಟಾನಿಕ ಪ್ರಕಾರ,

'ಸೈಕ್ಯುಲರ್ ಎಂದರೆ ಧಾರ್ಮಿಕವಲ್ಲದ್ದು. ಆಧ್ಯಾತ್ಮಿಕವಾದ ಮತ್ತು ಧಾರ್ಮಿಕವಾದ ವಿಚಾರಗಳ ಬಗೆಗೆ ಯಾವುದೇ ಆಸಕ್ತಿಯನ್ನು ತೋರಿಸದೆ ಇರುವಂತಹುದು '

ಇವೆಲ್ಲದರ ಪ್ರಕಾರ ರಾಜ್ಯವ್ಯವಸ್ಥೆಯು ಧರ್ಮದ ವಿಷಯದಲ್ಲಿ ಸಂಪೂರ್ಣವಾಗಿ ತಟಸ್ಥವಾಗಿರಬೇಕು. ಧರ್ಮವು ಖಾಸಗೀ ವಿಷಯವಾದ್ದರಿಂದ, ಸರ್ಕಾರವು ಧಾರ್ಮಿಕ ಆಚರಣೆಗಳನ್ನು ಪ್ರೋತ್ಸಾಹಿಸೂಬಾರದು. ತಡೆಗಟ್ಟಲೂಬಾರದು.

ಮಳೆಯನ್ನು ತರಿಸಲೆಂದು ಸ್ವಾಮೀಜಿಯೊಬ್ಬರ ನೆರವನ್ನು ಪಡೆದುಕೊಳ್ಳಲೆತ್ನಿಸುವ ಸರ್ಕಾರದ ಕ್ರಮವು, ನಮ್ಮ ರಾಜ್ಯಾಂಗದ ಮತ್ತೊಂದು ಕಲಮನ್ನು ಕೂಡ, ಅತ್ಯಂತ ಸ್ಪಷ್ಟವಾಗಿ ಉಲ್ಗಂಘಿಸುತ್ತಿದೆ. ರಾಜ್ಯಾಂಗದ ಪ್ರಕಾರ ನಮ್ಮೆಲ್ಲರ ಮೂಲಭೂತ ಕರ್ತ್ಯವಗಳಲ್ಲಿ ಒಂದೆದರೆ ವೈಜ್ಞಾನಿಕ ಮನೋಧರ್ಮ, ಮಾನವೀಯತಾವಾದ, ಪ್ರಶ್ನೆ ಕೇಳುವ ಪ್ರವೃತ್ತಿ ಹಾಗೂ ಸುಧಾರಣ ಪರತೆಗಳನ್ನು ಬೆಳೆಸುವುದು. ಈ ದೃಷ್ಟಿಯಲ್ಲಿ ಕಾನೂನು ಸಚಿವರು ರಾಜ್ಯಾಂಗದ ಪ್ರಕಾರ ಅಪರಾಧಿಗಳಾಗುತ್ತಾರೆ. ಅವರು ತಮ್ಮ ಇಡೀ ಸರ್ಕಾರವನ್ನೇ, ಅಸ್ಪಷ್ಟವಾದ ಸಿದ್ಧಾಂತಗಳ ಪ್ರಸಾರಕ್ಕೆಂದು ನಿಸ್ಸಂಕೋಚವಾಗಿ ಬಳಸಿಕೊಂಡಿದ್ದಾರೆ.

ಯಾವ ಪವಿತ್ರ ವ್ಯಕ್ತಿಯೂ ಮಳೆಯನ್ನೂ ತರಿಸಲಾರ. ಪ್ರಾಕೃತಿಕ ನಿಯಮಗಳು ಸಾರ್ವತ್ರಿಕವೂ, ಸರ್ವಶಕ್ತವೂ ಆಗಿದೆ. ಈ ನಿಯಮಗಳನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಮದ್ರಾಸು ಮತ್ತು ಅದರ ಪರಿಸರದಲ್ಲಿ, ಸತತವಾಗಿ ಮಳೆಬರದೆ ಜನರು ಪಟ್ಟಪಾಟು ಅಷ್ಟಿಷ್ಟಲ್ಲ. ಅಲ್ಲಿನ ಜನರು ಮಳೆಬರಿಸಲು ಭಗೀರಥ ಪ್ರಯತ್ನ ನಡೆಸಿದರು. ಅದಕ್ಕಾಗಿ ಎಲ್ಲ ಬಗೆಯ ಹತಾಶ ಪ್ರಯತ್ನಗಳನ್ನೂ ನಡೆಸಿದರು. ಪ್ರತಿದಿನದ ಪೂಜೆಗಳು, ಸಾಮೂಹಿಕ ಪ್ರಾರ್ಥನೆಗಳು ಎಲ್ಲ ಅರಣ್ಯರೋಧನಗಳಾದವು. 'ಪರ್ಜನ್ಯ ಜಪ' ವು ಒಂದೇ ಒಂದು ಹನಿ ಮಳೆ ತರಿಸಲು ಸಮರ್ಥವಾಗಲಿಲ್ಲ. ಖ್ಯಾತ ಪೀಟಿಲು ವಾದಕರಾದ ಕುನ್ನಕುಡಿ ವೈದ್ಯನಾಥನ್ ಅವರು ನುಡಿಸಿದ ಅಮೃತವರ್ಷಿಣಿ ರಾಗವು ವ್ಯರ್ಥವಾಯಿತು. ಇಂಥ ಹಲವು ಅವೈಜ್ಞಾನಿಕ ಪ್ರಯತ್ನಗಳನ್ನು ಮಾಡಿದರೂ ಮಳೆ ಬರುವ ಕುರುಹು ಕಾಣಲಿಲ್ಲ. ಅಲ್ಲಿನ ಜನರ ಯಾತನೆಯು ಮನಮಿಡಿಯುವಂಥದಾಗಿತ್ತು. ಕೊನೆಗೆ ಅವರು ನೀರಿಗಾಗಿ ಹಾತೊರೆಯುತ್ತಾ ರಾಜ್ಯದ ಬೇರೆ ಭಾಗಗಳಿಗೆ ವಲಸೆ ಹೋದರು.

ಸನ್ಯಾಸಿಗಳು ಹಾಗೂ ಪೂಜೆಗಳಿಂದ ಮಳೆ ತರಿಸಲು ಸಾಧ್ಯವಿದ್ದರೆ, ನಮ್ಮಲ್ಲಿ ತೀರ ಕಡಿಮೆ ಮಳೆ ಬೀಳುವ ಭೂ ಪ್ರದೇಶಗಳು ಇರುತ್ತಲೇ ಇರಲಿಲ್ಲ. ಮಳೆಯ ಅಭಾವವನ್ನು ಇಂಥ ವಿಧಾನಗಳಿಂದ ಬಹಳ ಸುಲಭವಾಗಿ ಹೊಗಲಾಡಿಸಿಕೊಳ್ಳಬಹುದಿತ್ತು. ಇದೇ ಉಪಾಯವನ್ನು ಅತಿವೃಷ್ಟಿಯನ್ನು ತಡೆಯಲೆಂದೂ ಬಳಸಬಹುದಿತ್ತು. ಒಂದು ಮಾತಿನಲ್ಲಿ ಹೇಳುವುದಾದರೆ ಆಗ ಈ ಜಗತ್ತಿನಲ್ಲಿ ಸಹರಾ ಆಗಲೀ ಚಿರಾಪುಂಜಿಯಾಗಲೀ ಇರುತ್ತಿರಲಿಲ್ಲ.

ಸನ್ಯಾಸಿಗಳು, ಭಗವಾನರು, ಬಾಬಾಗಳು ಹಾಗೂ ಇನ್ನಿತರ ದೈವೀಪುರುಷರಿಂದ ನಮ್ಮ ದೇಶವು ಕಕ್ಕಿರಿದು ಹೋಗಿದೆಯೆಂದು ನಮಗೆಲ್ಲರಿಗೂ ಗೊತ್ತು. ನಮ್ಮ ಸಮಯದ ಒಂದು ಭಾಗ ಜಪ-ತಪ, ಪೂಜೆ ಪುನಸ್ಕಾರಗಳಲ್ಲಿ ಕಳೆದುಹೋಗುತ್ತದೆ. ಆದರೂ `ಧರ್ಮಭೂಮಿ`, 'ಪುಣ್ಯಭೂಮಿ' ಎಂದು ಕರೆಸಿಕೊಳ್ಳುವ ನಮ್ಮ ದೇಶವು ಬಹುಪಾಲು ಜನರಿಗೆ ನರಕವಾಗಿಯೇ ಉಳಿದಿದೆ.

ಅವಿದ್ಯಾವಂತನಾದ ಮೂಢನಂಬಿಕಸ್ಥನಿಗಿಂತ ಅವನ ವಿದ್ಯಾವಂತ ಗೆಳೆಯನು ದೇಶಕ್ಕೆ ಹೆಚ್ಚು ಅಪಾಯಕಾರಿಯೆಂಬ ಸತ್ಯವು ಕಾನೂನು ಸಚಿವರ ಹೇಳಿಕೆಗಳಿಂದ ಸ್ಪಷ್ಟವಾಗುತ್ತದೆ. ರಾಜ್ಯಾಂಗದ ಮೂಲತತ್ವಗಳ ಉಲ್ಲಂಘನೆಗಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾನು ತಿಳಿದಿದ್ದೇನೆ.

ಈ ಪತ್ರವು ಬಹಳ ವಾದ-ವಿವಾದಗಳಿಗೆ ಕಾರಣವಾಯಿತು. ಡೆಕ್ಕನ್ ಹೆರಾಲ್ಡ್‌ನಲ್ಲಿ ಅನೇಕ ಪ್ರತಿಕ್ರೆಯೆಗಳು ಪ್ರಕಟವಾದವು. ಬೇರೆ ಪತ್ರಿಕೆಗಳಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆಯಿತು. ಬಹುಪಾಲು ಪತ್ರಗಳು ನನ್ನ ನಿಲುವನ್ನು ವಿರೋಧಿಸಿ, ಕಾನೂನು ಸಚಿವರ ಹೇಳಿಕೆಯನ್ನು ಸಮರ್ಥಿಸಿದವು. ಎಲ್ಲೊ ಕೆಲವು ನನಗೆ ಬೆಂಬಲ ನೀಡಿದವು. ಬೇರೆ ಪತ್ರಿಕೆಗಳ ವರದಿಗಾರರು ಈ ಬಗ್ಗೆ ನನ್ನ ಸಂದರ್ಶನ ನಡೆಸಿದರು.

ರಾಜ್ಯ ಸರ್ಕಾರ ಹಾಗೂ ಬೆಂಗಳೂರು ನಗರ ಜಲಮಂಡಲಿಯು ಈ ಎಲ್ಲ ವಾದವಿವಾದಗಳಿಂದ ಕೊಂಚ ವಿಚಲಿತವಾದವು. ಯೋಗಿಗಳನ್ನು ಆಹ್ವಾನಿಸುವುದನ್ನು ಮುಂದೂಡಲಾಯಿತು.

ಭಾರತದಲ್ಲಿಯೇ ಅತಿ ಹೆಚ್ಚಿನ ಪ್ರಸಾರ ಸಂಖ್ಯೆಯಿರುವ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ೬-೫-೮೫ ರಂದು ಈ ಕೆಳಗಿನ ಸುದ್ದಿಯು ಪ್ರಕಟವಾಯಿತು.

ಜಲಮಂಡಳಿಯು ಮಳೆಗಾಗಿ ತಪಸ್ಸನ್ನು ಮುಂದೂಡಿದೆ.

ಬೆಂಗಳೂರು, ಮೇ ೫ (ಪಿ ಟಿ ಐ):

'ವಿಚಾರವಾದಿ ಮತ್ತು ಆಧ್ಯಾತ್ಮವಾದಿಗಳ ನಡುವೆ ಎದ್ದಿರುವ ವಾಗ್ವಾದ ಫಲವಾಗಿ ಜನರೆಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಶ್ರೀ ಶಿವಬಾಲಯೋಗಿಗಳ ತಪಸ್ಸನ್ನು ಮುಂದೆ ಹಾಕಲಾಗಿದೆ. ಈ ಕಾರ್ಯಕ್ರಮವು ಇದೇ ತಿಂಗಳ ಮೊದಲ ವಾರದಲ್ಲಿ ನಡೆಯಬೇಕಾಗಿತ್ತು. ಕಾನೂನು ಮತ್ತು ನಗರಾಭಿವೃದ್ಧಿ ಸಚಿವರಾದ ಶ್ರೀ ಲಕ್ಷ್ಮೀಸಾಗರ್ ಅವರ ಹೇಳಿಕೆಯಂತೆ, ಸರ್ಕಾರವು ಶ್ರೀ ಶಿವಬಾಲಯೋಗಿಗಳ ನೆರವಿನಿಂದ ಒಣಗುತ್ತಿರುವ ನಗರಕ್ಕೆ ಜಲಸೇಚನೆ ಮಾಡುವ ಯೋಜನೆಯನ್ನು ಹಾಕಿಕೊಂಡಿತ್ತು.'

ಈ ಸುದ್ಧಿಯು ಪ್ರಕಟವಾದ ಕೂಡಲೇ ವಿಚಾರವಾದಿಯಾದ ಡಾ. ಹೆಚ್. ನರಸಿಂಹಯ್ಯನವರು ಶಿವಬಾಲಯೋಗಿಗಳ ಆಧ್ಯಾತ್ಮಿಕ ಸಾಮರ್ಥ್ಯವನ್ನು ಪ್ರಶ್ನಿಸಿದರು. ಈ ನಿರ್ಣಯವನ್ನು ಪ್ರತಿಭಟಿಸುತ್ತಾ ಅದು ಸಮಸ್ತ ಜನರಿಗೂ ಅವಮಾನಕರವಾದುದೆಂದು ಹೇಳಿ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆದಿದ್ದಾರೆ.

ನಾನು ಮತ್ತೊಮ್ಮೆ ಇದನ್ನು ಬಲವಾಗಿ ವಿರೋಧಿಸಿದೆ. ನಮ್ಮ ರಾಜ್ಯದಲ್ಲಿ ಯಾವುದೇ ಕಾರಣದಿಂದ ಇಂಥ ಅತಿನಿಗೂಢ ಚಟುವಟಿಕೆಗಳಿಗೆ ಎಡೆಮಾಡಿಕೊಡಬಾರದೆಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆದೆ. ಅದರ ಪ್ರತಿಗಳನ್ನು ಎಲ್ಲ ಮಂತ್ರಿಗಳಿಗೂ ಕಳಿಸಿಕೊಟ್ಟೆ. ಏನೂ ಪ್ರಯೋಜನವಾಗಲಿಲ್ಲ.

ಈ ಮಧ್ಯೆ ಇಂಡಿಯನ್ ಎಕ್ಸ್‌ಪ್ರೆಸ್‌ನ ಪ್ರತಿನಿಧಿಗಳು ಶ್ರೀ ಶಿವಬಾಲಯೋಗಿಗಳು ಮತ್ತು ನನ್ನ ಸಂದರ್ಶನ ನಡೆಸಿ, ಅದರ ಭಾಗಗಳನ್ನು ಅನುಕ್ರಮವಾಗಿ ೨೨-೦೪-೮೫ ಮತ್ತು ೨೩-೦೪-೮೫ರ ಪತ್ರಿಕೆಯಲ್ಲಿ ಪ್ರಕಟಿಸಿದರು.

ಮಳೆತರಿಸಲು ಸಿದ್ಧವಾಗಿರುವ ಬಾಲಯೋಗಿ ಮತ್ತು ಡಾ ಎಚ್.ಎನ್.

ಬೆಂಗಳೂರು, ಏಪ್ರಿಲ್,೨೨: ಕರ್ನಾಟಕ ಸರ್ಕಾರವು ಬತ್ತಿಹೋಗಿರುವ ಬೆಂಗಳೂರು ನಗರಕ್ಕೆ ಮಳೆ ಬರಿಸಲೆಂದು ಆಹ್ವಾನಿಸಿರುವ ವ್ಯಕ್ತಿಯು ಸನ್ನದ್ಧರಾಗಿದ್ದಾರೆ. ಶ್ರೀ ಶ್ರೀ ಶ್ರೀ ಶಿವಬಾಲಯೋಗಿಯವರು ತಮ್ಮ ಯೋಗಶಕ್ತಿಯಿಂದ, ಆಕಾಶವನ್ನೇ ಬಿರಿಸಿ ಸಮೃದ್ಧ ಮಳೆ ಸುರಿಸುವುದಲ್ಲದೆ, ಈ ವಿಷಯದಲ್ಲಿ ವಿಚಾರವಾದಿಯಾದ ಡಾ. ಹೆಚ್. ಎನ್. ಅವರೊಂದಿಗೆ ಮುಕ್ತವಾದ ಚರ್ಚೆಯನ್ನು ನಡೆಸಲು ತಯಾರಾಗಿದ್ದಾರೆ. ವಿಚಾರವಾದಿ ಮತ್ತು ಆಧ್ಯಾತ್ಮವಾದಿಗಳ ನಡುವೆ ಎದ್ದಿರುವ ಎಲ್ಲ ವಾದವಿವಾಗಳಿಗೂ ಅಂತಿಮ ಉತ್ತರಗಳನ್ನು ನೀಡಿ ಮಂಗಳ ಹಾಡಬೇಕೆಂದು ಅವರ ಹಂಬಲ.

ಸುಮಾರು ೫೦ ವರ್ಷ ವಯಸ್ಸಿನ ಸ್ವಾಮೀಜಿಯವರು ಜೆ.ಪಿ ನಗರದ ತಮ್ಮ ಆಶ್ರಮದಲ್ಲಿ ನಡೆದ ಸಂದರ್ಶನವೊಂದರಲ್ಲಿ ಪತ್ರಕರ್ತರ ಬಿರುಸಾದ ಪ್ರಶ್ನೆಗಳನ್ನು ಎದುರಿಸಿದರು. ಅವರು ಹೀಗೆ ಹೇಳಿದರು :

"ನಾನು ನರಸಿಂಹಯ್ಯನವರಿಗೆ ಸವಾಲು ಹಾಕುತ್ತೇನೆ ಬೇಕಾದರೆ ಅವರು ಎಲ್ಲಾ ವಿಜ್ಞಾನಿಗಳನ್ನೂ ಕರೆತರಲಿ. ಈ ಹುಚ್ಚಾಟವನ್ನು ನಾನು ಇಂದು ಕೊನೆ ಮುಟ್ಟಿಸುತ್ತೇನೆ. ಯಾರದು ಸತ್ಯ ಮತ್ತು ಯಾರದು ಸುಳ್ಳು ಎನ್ನುವುದು ಇಡೀ ದೇಶಕ್ಕೆ ತಿಳಿಯಲಿ."

ಶಿವಬಾಲಯೋಗಿಯವರಿಂದ ಮಳೆ ತರಿಸುವ ಪ್ರಯತ್ನವನ್ನು, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳೂ, ವಿಚಾರವಾದಿಯೂ ಆದ ಡಾ. ಹೆಚ್.ಎನ್. ವಿರೋಧ ವ್ಯಕ್ತಪಡಿಸಿದ್ದರು. ಅದನ್ನು ಕೇಳಿದ ಶಿವಬಾಲಯೋಗಿಗಳು ಈ ರೀತಿ ಸಿಡಿದೆದ್ದಿದ್ದಾರೆ. ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರೂ ಆಗಿರುವ ಶ್ರೀ ನರಸಿಂಹಯ್ಯನವರು ಸರ್ಕಾರದ ಈ ಕ್ರಮವನ್ನು ಅಸಂಗತ ಹಾಗೂ ಚಾತಿಪರ ಎಂದು ಕರೆದು, ಇದು ರಾಜ್ಯಾಂಗಬಾಹಿರವೆಂದು ಟೀಕಿಸಿದ್ದಾರೆ.

ಇದರಿಂದ ಯೋಗಿಗಳು ಇನ್ನಷ್ಟು ಕೆರಳಿದರು. ಅವರು ಹೀಗೆ ಹೇಳಿದರು.

"ಜಾಗ ಬಿಟ್ಟು ಓಡಿಹೋಗಲು ನಾನು ಸತ್ಯಸಾಯಿಬಾಬಾ ಅಲ್ಲ. ಅವರು ಇಲ್ಲಿಗೆ ಬರಲಿ. ನಾನು ಸರಿಯಾದ ಉತ್ತರ ಕೊಡುತ್ತೇನೆ. ಇನ್ನು ಮುಂದೆ ಅವರು ಈ ದೇಶದ ಸನ್ಯಾಸಿಗಳ ತಂಟೆಗೆ ಬರದಂತೆ ಪಾಠ ಕಲಿಸುತ್ತೇನೆ."

ಮೊದಲು ಮಳೆತರಿಸಿ: ಬಾಲಯೋಗಿಗಳಿಗೆ ಡಾ ಹೆಚ್. ಎನ್. ಉತ್ತರ

ಬೆಂಗಳೂರು, ಏಪ್ರಿಲ್, ೨೩: ಬೆಂಗಳೂರಿನ ಪ್ರಸಿದ್ಧ ವಿಚಾರವಾದಿಗಳಾದ ಎಚ್ ನರಸಿಂಹಯ್ಯನವರು, ಇದೇ ನಗರದ ಪ್ರಸಿದ್ಧ ಮಳೆಯೋಗಿಗಳಾದ ಶ್ರೀ ಶ್ರೀ ಶ್ರೀ ಶಿವಬಾಲಯೋಗಿಗಳಿಗೆ ತಾನು ನಿಗದಿ ಪಡಿಸಿದ ಸ್ಥಳ ಮತ್ತು ಕಾಲದಲ್ಲಿ ಮಳೆ ತರಿಸಿಕೊಡಬೇಕೆಂದು ಸವಾಲು ಹಾಕಿದ್ದಾರೆ.

ನಿನ್ನೆ ಇದೇ ಅಂಕಣದಲ್ಲಿ ಪ್ರಕಟವಾದ ಶಿವಬಾಲಯೋಗಿಗಳ ಸವಾಲಿಗೆ ನರಸಿಂಹಯ್ಯನವರ ಪ್ರತ್ಯುತ್ತರ ಇದು.

ಮಳೆ ತರಿಸಲೆಂದು ಯೋಗಿಗಳನ್ನು ಆಹ್ವಾನಿಸಿರುವ ಶ್ರೀ ಲಕ್ಷ್ಮೀಸಾಗರ್ ಅವರು ನಮ್ಮ ರಾಜ್ಯಾಂಗದ ಮೂಲತತ್ವಗಳಿಗೆ ಅಪಚಾರ ಮಾಡಿದ್ದಾರೆಂದು ಡಾ. ಹೆಚ್.ಎನ್ ಹೇಳಿದರು.

"ಶಿವಬಾಲಯೋಗಿಗಳು ಬೇಕಾದರೆ ಎಂಟು ತಿಂಗಳುಗಳ ತಯಾರಿ ನಡೆಸಲಿ. ಆದರೆ ನಾನು ಹೇಳಿದ ಕಾಲದಲ್ಲಿ, ಹೇಳಿದ ಸ್ಥಳದಲ್ಲಿ ಮಳೆ ತರಿಸ ಬೇಕು. ಅವರು ಹೀಗೆ ಮಾಡಬಲ್ಲರೇ? ಮಾಡುತ್ತಾರೆಯೇ?"

ಶಿವಬಾಲಯೋಗಿಗಳು ಸರ್ಕಾರದ ಆಮಂತ್ರಣವನ್ನು ಒಪ್ಪಿಕೊಂಡರು. ೩೦-೫-೮೫ರಂದು ತಿಪ್ಪಗೊಂಡನಹಳ್ಳಿ ಜಲಾಶಯದ ಅಂಚಿನಲ್ಲಿ ಮಳೆಗಾಗಿ ಪ್ರಾರ್ಥನೆ ನಡೆಸುವೆನೆಂದು ಬಹಿರಂಗವಾಗಿ ಘೋಷಿಸಿದರು. ಅದನ್ನು ನಿರೀಕ್ಷಿಸಲು ಪತ್ರಕರ್ತರು, ಆಕಾಶವಾಣಿಯವರು ಹಾಗೂ ದೂರದರ್ಶನದವರಿಗೆ ಕರೆ ನೀಡಿದರು. ಹೀಗೆ ದೊಡ್ಡ ಪರಿವಾರ ಮತ್ತು ಪರಿಕರದೊಂದಿಗೆ ಶಿವಬಾಲಯೋಗಿಗಳು ಪ್ರಾರ್ಥನೆ ನಡೆಸಲೆಂದು ತಿಪ್ಪಗೊಂಡನಹಳ್ಳಿಗೆ ಹೋದರು.

ಅದರ ಮಾರನೆಯ ದಿನ, ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಇನ್ನಷ್ಟು ವಿವರಗಳೊಂದಿಗೆ ಈ ಕೆಳಗಿನ ವರದಿಯು ಪ್ರಕಟವಾಯಿತು.

ಒಂದು ತಿಂಗಳಲ್ಲಿ ಕೆರೆ ತುಂಬುತ್ತದೆ: ಪ್ರಾರ್ಥನೆ ಮುಗಿಸಿದ ಯೋಗಿಯ ಆಶ್ವಾಸನೆ

ಬೆಂಗಳೂರು, ಮೇ ೩೦: ಬಿಸಿಲಿನಿಂದ ಸುಟ್ಟು ಬಿರಿದ ತಿಪ್ಪಗೊಂಡನಹಳ್ಳಿ ಕೆರೆಯ ಅಂಗಳವು ಈ ದಿನ ಶ್ರೀ ಶಿವಬಾಲಯೋಗಿಗಳು ನಡೆಸಿದ ವರುಣ ಜಪದ ವೇದಿಕೆಯಾಯಿತು. ಅಂದು ಗುರುವಾರ ಯೋಗಿಗಳು ಕುಳಿತು ಜಪ ಮತ್ತು ಧ್ಯಾನ ಮಾಡಿದರು. ಅನಂತರ ಒಂದು ತಿಂಗಳಿನೊಳೆಗೆ ಕೆರೆಯು ತುಂಬುವುದೆಂದು ಜನರಿಗೆ ಭರವಸೆ ನೀಡಿದರು.

ಭಕ್ತರು ಉನ್ಮತ್ತ ಕುಣಿತ, ಶಂಖನಾದ, ಎತ್ತರದ ಧ್ವನಿಯ ಭಜನೆ, ಉದ್ರಿಕ್ತ ಅನುಯಾಯಿಗಳ ಕೀರುದನಿಯ ಕೇಕೆಗಳಿಂದ ತಿಪ್ಪಗೊಂಡನಹಳ್ಳಿಯ ಮೌನಮುದ್ರಿತ ವಾತಾವಾರಣವು ಕಲಕಿಹೋಯಿತು. ಈ ನಿಗೂಢ, ವಿಚಿತ್ರ ಸನ್ನಿವೇಶವನ್ನು ನಗರದ ಜಲಮಂಡಳಿಯು ನಿರ್ಮಿಸಿತ್ತು.

ಈ ದಿನದ ನಾಯಕಮಣಿಯೆಂದರೆ ಶ್ರೀ ಶಿವಬಾಲಯೋಗಿಗಳು, ಅವರು ಬಿಳಿಯುಡಿಗೆ ಧರಿಸಿದ ಸ್ಥೂಲಕಾಯರು. ಸುಮಾರು ಮಧ್ಯಾಹ್ನದ ವೇಳೆಗೆ ತಮ್ಮ ಲಿಮೋಸಿನ್ ಕಾರಿನಲ್ಲಿ ಬಂದಿಳಿದರು. ಅವರು ಕೆರೆಯಂಗಳಕ್ಕೆ ಆಗಮಿಸುವಷ್ಟರಲ್ಲಿ ಒಂದು ಘಂಟೆ ತಡವಾಗಿತ್ತು. ಅವರ ಶಿಷ್ಯರಿಂದ ಸಂಭ್ರಮದ ಸ್ವಾಗತ ದೊರಕಿತು.

ಯೋಗಿಗಳನ್ನು ಕಾರಿನಿಂದ ಇಳಿಸಿ, ಒಣಗಿಹೋಗುತ್ತಿದ್ದ ಕೆರೆಯಂಗಳದಲ್ಲಿ ನಿರ್ಮಿಸಲಾಗಿದ್ದ ಚಪ್ಪರವೊಂದಕ್ಕೆ ಕರೆತರಲಾಯಿತು. ಅವರು ನಿರ್ದಿಷ್ಟ ಪಡಿಸಿದ ಜಾಗದಲ್ಲಿ ಪದ್ಮಾಸನದಲ್ಲಿ ಕುಳಿತುಕೊಂಡರು. ಕಣ್ಣುಗಳನ್ನು ಮುಚ್ಚಿದರು. ಒಂದೆರಡು ನಿಮಿಷಗಳಲ್ಲಿಯೇ ಗಾಢವಾದ ಧ್ಯಾನದಲ್ಲಿ ಲೀನವಾದರು.

ಕುತೂಹಲ ತುಂಬಿದ ಹಳ್ಳಿಗರು, ಚಿಕ್ಕಮಕ್ಕಳು, ಸಂಭ್ರಮದ ಉಡುಗೆ ಧರಿಸಿದ ಮಹಿಳೆಯರು ಹಾಗೂ ಜಲಮಂಡಳಿಯ ಕೆಲವು ಅಧಿಕಾರಿಗಳು ಅವರ ಹಿಂದೆ ಕುಳಿತಿದ್ದರು. ತನ್ನ ಸುತ್ತಲೂ ನಡೆಯುತ್ತಿದ್ದ ಈ ಆಟಾಟೋಪಗಳಿಂದ ಯೋಗಿಗಳು ವಿಚಲಿತರಾಗಲಿಲ್ಲ. ಅವರು ಧ್ಯಾನದಲ್ಲಿ ಮುಳುಗಿ ಈ ಜಗತ್ತನ್ನು ಮರೆತಿದ್ದರು. ಉಸಿರಾಟಕ್ಕೆ ಅಲ್ಪ ಸ್ವಲ್ಪ ಚಲಿಸುತ್ತಿದ್ದ ಉದರ ಭಾಗವನ್ನು ಬಿಟ್ಟರೆ ಬಂಡೆಯಂತೆ ಕುಳಿತಿದ್ದರು. ಆಗೊಮ್ಮೆ ಈಗೊಮ್ಮೆ ಭಕ್ತನೊಬ್ಬನು ಅವರ ಮೈಮೇಲೆ ಸಂಗ್ರಹವಾಗುತ್ತಿದ್ದ ಬೆವರ ಹನಿಗಳನ್ನು ಒರೆಸಿ ನೊಣಗಳನ್ನು ಓಡಿಸುತ್ತಿದ್ದನು.

ಭಜನೆ ಮತ್ತು ಶಂಖನಾದಗಳು ತಮ್ಮ ಶಿಖರವನ್ನು ಮುಟ್ಟಿದಂತೆ ಭಕ್ತರು ಮೇಲೆದ್ದು ಉನ್ಮತ್ತ ಕುಣಿತದಲ್ಲಿ ತೊಡಗಿದರು.ತಮ್ಮ ಶರೀರವನ್ನು ಆಕಡೆ ಈಕಡೆ ಓಲಾಡಿಸುತ್ತ ವೀರಾವೇಶದಿಂದ ಕುಣಿಕುಣಿದು ಶಾಮಿಯಾನವನ್ನು ಸುತ್ತತೊಡಗಿದರು.

ಭಕ್ತಳೊಬ್ಬಳು ಮೈಮೇಲೆ ಬಂದಂತೆ ಕಿರುಚಿ ಕಿರುಚಿ, ಚಪ್ಪರಕ್ಕೆ ಕಟ್ಟಿದ್ದ ಹಸಿರು ಎಲೆಗಳನ್ನು ಕಚಪಚ ಅಗಿಯತೊಡಗಿದಳು. ತಾನೂ ಅಲ್ಲಾಡದೆ ಕುಳಿತು, ಕಣ್ಣು ಗುಡ್ಡೆಗಳನ್ನು ಉರುಳಿಸುತ್ತಾ ಶೂನ್ಯದ ಕಡೆ ನಿಟ್ಟಿಸಿ ನೋಡತೊಡಗಿದಳು.

ಹಳ್ಳಿಯ ಜನರು ಈ ದೃಶ್ಯವನ್ನೂ ಶಾಂತವಾಗಿ ನೋಡಿದರು. ಸಮಾಧಿ ಸ್ಥಿತಿಯಲ್ಲಿದ್ದ ಭಕ್ತರ ಆಶೀರ್ವಾದಗಳನ್ನು ಪಡೆದರು. ಆ ಭಕ್ಕರಾದರೋ ಪ್ರೇಕ್ಷಕರ ಹಣೆಗಳನ್ನು ತಮ್ಮ ಹೆಬ್ಬೆರಳಿನಿಂದ ಉಜ್ಜುವ ಮೂಲಕ ತಮ್ಮ ಆನಂದವನ್ನು ಅವರಿಗೆ ತಲುಪಿಸಿದರು. ಬೇರೆ ಕೆಲವು ನರ್ತಕರು ತಮ್ಮ ನಾಲಿಗೆಗಳನ್ನು ಮುಂದೆ ಚಾಚಿ ಅದರ ಮೇಲೆ ಉರಿಯುವ ಕರ್ಪೂರದ ಬಿಲ್ಲೆಗಳನ್ನು ಇಡಿಸಿಕೊಂಡರು.

ಎಲ್ಲವೂ ಶಾಂತವಾಗಿ ನಡೆಯುತ್ತಿತ್ತು. ಇದ್ದಕ್ಕಿಂದತೆ ಯುವಕರ ತಂಡವೊಂದು ವೇಗವಾಗಿ ನಡೆಯುತ್ತಾ ಕಪ್ಪುಬಾವುಟಗಳನ್ನು ಬೀಸುತ್ತಾ, ಜಲಮಂಡಳಿ ಹಾಗೂ ಮೂಢನಂಬಿಕೆಗಳ ವಿರುದ್ಧ ಘೋಷಣೆ ಕೂಗುತ್ತಾ ನುಗ್ಗಿ ಬಂದಿತು. ಅವರು ಯೋಗಿಗಳು ಜಪ ಮಾಡುತ್ತಿದ್ದ ಸ್ಥಳವನ್ನು ತಲುಪುವುದಕ್ಕೆ ಮೊದಲೇ ಪೋಲೀಸರು ಅವರನ್ನು ಕರೆದುಕೊಂಡು ಹೋದರು.

ಈ ಯುವಕರು ಹೆಬ್ಬಾಳಿನ ಕೃಷಿ ವಿಶ್ವವಿದ್ಯಾಲಯದ ಸಮಾಜವಾದಿ ಅಧ್ಯಯನ ಕೇಂದ್ರಕ್ಕೆ ಸೇರಿದವರು. ಅವರು ತಮ್ಮನ್ನು ನೀರಿಕ್ಷಿಸುತ್ತಿದ್ದ ಪೋಲೀಸರ ಕಣ್ಣು ತಪ್ಪಿಸಿ ಒಳಗೆ ಬಂದಿದ್ದರು. ತಾವು ಪತ್ರಿಕೋದ್ಯೋಗಿಗಳಂತೆ ನಟಿಸುವುದರ ಮೂಲಕ ಅವರು ಒಳಗೆ ಬಂದಿದ್ದರು.

ಸಮಯ ಸಾಗುತ್ತಿತ್ತು. ಕೆಲವು ಸಲ ಆಕಾಶ ಧಗಧಗ ಉರಿಯುತ್ತಿದ್ದರೆ ಮತ್ತೆ ಕೆಲವು ಸಲ ಮೋಡಗಳು ಅದಕ್ಕೆ ಮಸುಕು ಬಣ್ಣ ಕೊಡುತ್ತಿದ್ದವು. ಹೊಟ್ಟೆ ಹಸಿದ ಹಾಗೂ ಬೇಜಾರಾದ ಹಳ್ಳಿಗರ ತಂಡ ನಿಧಾನವಾಗಿ ದೂರ ನಡೆಯತೊಡಗಿತು. ಆಸ್ಟೇಲಿಯಾದ ನಾಗರೀಕರ ತಂಡವೊಂದು, ಭಾರತದ ಮತ್ತು ಅದರ ಪವಿತ್ರ ಯೋಗಿಗಳನ್ನು ಕುರಿತು ಹರಟೆ ಹೊಡೆಯತೊಡಗಿದರು. ಅವರೆಲ್ಲರೂ ಬೆಂಗಳೂರಿನಲ್ಲಿ ನೆಲಸಿ, ಸತ್ಯ ಮತ್ತು ಜೀವನ ಅರ್ಥಕ್ಕಾಗಿ ಹುಡುಕುತ್ತಿದ್ದವರು.

ಪತ್ರಕರ್ತರು ತಮ್ಮ ಕಾವಲು ಕೆಲಸವನ್ನು ನಿಲ್ಲಿಸಿ ಐದು ನಿಮಿಷಗಳಿಗೊಮ್ಮೆ ತಮ್ಮ ಕೈಗಡಿಯಾರಗಳ ಕಡೆ ನೋಡತೊಡಗಿದರು. ಇದ್ದಕ್ಕಿದ್ದಂತೆ ಚಪ್ಪರದಲ್ಲಿ ಕೋಲಾಹಲ ಪ್ರಾರಂಭವಾಯ್ತು. ಪತ್ರಕರ್ತರು, ಯೋಗಿ ಇದ್ದಕಡೆಗೆ ಓಡಿದರು. ಛಾಯಾಗ್ರಾಹಕರು ತಮ್ಮ ಕ್ಯಾಮರಾವನ್ನು ಸರಿಪಡಿಸಿಕೊಂಡರು. ಆಗ ಸುಮಾರು ೨ ಘಂಟೆ ೪೦ ನಿಮಿಷಗಳು. ಸ್ವಾಮಿಗಳು ತಮ್ಮ ಕಣ್ಣು ತೆಗೆದು ಜಪವನ್ನು ನಿಲ್ಲಿಸಿದರು.

ಆಮೇಲೆ ನಡೆದದ್ದು ಸಂಕ್ಷಿಪ್ತವಾದ ಆಚರಣೆ. ಯೋಗಿಗಳು ವಿಭೂತಿಯನ್ನು ಅನುಗ್ರಹಿಸಿದರು. ಅಗರ ಬತ್ತಿಗಳನ್ನು ಹಚ್ಚಿದರು. ಅವರಿಗೆಂದು ಐದು ತೆಂಗಿನಕಾಯಿಗಳನ್ನು ಅರ್ಪಿಸಲಾಯಿತು. ಅವರು ಅವುಗಳನ್ನು ಅನುಗ್ರಹಿಸಿ ಜಲಮಂಡಳಿಯ ಅಧಿಕಾರಿಗಳಿಗೆ ಹಿಂದುರಿಗಿಸಿದರು. ಅವರಾದರೋ ಅವುಗಳನ್ನು ಕೆರೆಗೆ ಸಮರ್ಪಿಸಿದರು. ಕೆರೆಯ ಕೆಸರು ಬಣ್ಣದ ನೀರು ಕ್ಷಣಕಾಲ ಕುಂಕುಮ ರಾಶಿ ಕರಗಿ ಕೆಂಪು ಬಣ್ಣ ತಳೆಯಿತು. ಕ್ರಮೇಣ ಕೆರೆಯ ಅಲೆಗಳು ಅವನ್ನೂ ನುಂಗಿದವು.

ಇದಾದ ಮೇಲೆ ಯೋಗಿಗಳ ಘನ ಆಶೀರ್ವಚನ ಸಮಯ ಬಂತು. ಪತ್ರಕರ್ತರಿಗೆ ಮೊಸರನ್ನದ ಸೇವೆ ನಡೆಯಿತು. ಅದನ್ನು ಜಲಮಂಡಳಿಯ ನೌಕರರ ಕಾಣಿಕೆಗಳಿಂದ ತಯಾರಿಸಲಾಗಿತ್ತು. ಎಲ್ಲರೂ ಅತಿಥಿ ಗೃಹಕ್ಕೆ ಹೋದರು. ಭಕ್ತಾದಿಗಳು ರತ್ನಗಂಬಳಿಯ ಮೇಲೆ ಕುಳಿತರು.

ಪತ್ರಕರ್ತರು ಪ್ರಶ್ನೆಗಳ ಸುರಿಮಳೆಯನ್ನು ಪ್ರಾರಂಭಿಸಿದರು

"ಹೇಳಿ, ಈ ಮೂರು ಘಂಟೆಗಳ ಕಾಲ ನಾನು ಯಾರಿಗಾದರೂ ತೊಂದರೆ ಕೊಟ್ಟೆನೆ? ನಾನು ಜನರನ್ನು ಮೋಸ ಮಾಡುತ್ತಿದ್ದೇನೆಯೇ? ನಾನು ಜನರ ಸೇವಕ" ಡಾ. ನರಸಿಂಹಯ್ಯನವರ ಮಾತು ಬಂದಾಗ ಅವರು ಹೀಗೆ ಹೇಳಿದರು.

"ನೂರಾರು ಸಾವಿರಾರು ಮಂತ್ರಿಗಳು, ಉಪಕುಲಪತಿಗಳು ಇರಬಹುದು. ಆದರೆ ಯೋಗಿ ಒಬ್ಬನೇ. ಅವರು ಪ್ರಜ್ಞೆ ಸರಿಮಾಡಿಕೊಳ್ಳಲಿ. ನನ್ನ ಅನುಭವಗಳನ್ನು ಮೊದಲು ಅರ್ಥ ಮಡಿಕೊಂಡು ನಂತರ ಸವಾಲು ಹಾಕಲಿ. ನಾನು ತಯಾರಿದ್ದೇನೆ. ಅವರು ತಮ್ಮ ಪ್ರಶ್ನೆಗಳನ್ನು ಬರವಣಿಗೆಯಲ್ಲಿ ಕಳಿಸಲಿ ನಮ್ಮ ಸಮ್ಮುಖದಲ್ಲಿ ಅದನ್ನು ಬಗೆಹರಿಸೋಣ." ಎಂದು ಅವರು ಪತ್ರಕರ್ತರಿಗೆ ಹೇಳಿದರು. ವಿಚಾರವಾದಿಯು ಆರಿಸಿದ ಸ್ಥಳ, ಸಮಯದಲ್ಲಿ ಮಳೆ ತರಿಸಲಾದೀತೆ ಎಂಬ ಸವಾಲನ್ನು ಜ್ಞಾಪಿಸಿದಾಗ ಯೋಗಿ ಉರಿದೆದ್ದು "ನರಸಿಂಹಯ್ಯ ನನ್ನ ದೊರೆಯಲ್ಲ. ಅವರು ಸೌಮ್ಯರಾಗಿ ಮಾತನಾಡುವುದನ್ನು ಕಲಿಯಲಿ. ಇಂಥ ಹುಚ್ಚು ಪ್ರಶ್ನೆಗಳಿಗೆ ನಾನು ಉತ್ತರಿಸಬೇಕಾದ್ದು ಅವಶ್ಯವಿಲ್ಲವೆಂದುಕೊಂಡಿದ್ದೇನೆ."

೩೦ ದಿನಗಳ ಅವಧಿ ಮುಗಿದು ಹೋಯಿತು. ಇಂಡಿಯನ್ನ್ ಎಕ್ಸ್‌ಪ್ರೆಸ್ ವಿವರಿಸಿದ ಪರಿಸ್ಥಿತಿ ಈ ರೀತಿ ಇದೆ:

ಯೋಗಿ ಹೊಸ ಸಬೂಬುಗಳನ್ನು ಹೇಳುತ್ತಿರುವಂತೆ ಜಲಾಗಾರ ಇನ್ನೂ ಬತ್ತಿಕೊಂಡೇ ಇದೆ.

ಬೆಂಗಳೂರು ಜೂನ್, ೨೯: ಯೋಗಿ ನಿರ್ದಿಷ್ಟವಾಗಿ ಹೇಳಿದ್ದ ೩೦ನೇ ದಿನದ ಕೊನೆಯಾಗಿದೆ. ತಿಪ್ಪಗೊಂಡನಹಳ್ಳಿ ಜಲಾಗಾರದಲ್ಲಿ ಮಳೆ ತರಿಸಲು ಸರ್ಕಾರ ಶಿವಬಾಲಯೋಗಿಯನ್ನು ನೇಮಿಸಿದ್ದರೂ ನೀರು ೧೪.೫ ಅಡಿಯಿಂದ ೭.೫ ಅಡಿಗೆ ಇಳಿದರೂ ಯೋಗಿಗೆ ಅವಮಾನವಾದಂತೆ ಕಾಣುವುದಿಲ್ಲ.

ಈಗ ಹೊಸ ವಿಚಾರವನ್ನು ಹುಟ್ಟಿಸಿಕೊಂಡಿದ್ದಾರೆ. "ಈ ೩೦ ದಿನಗಳೂ ಕೇವಲ ತಿಪ್ಪಗೊಂಡನಹಳ್ಳಿಗಾಗಿಯೇ ನಾನು ಪ್ರಾರ್ಥಿಸುತ್ತಿದ್ದನೆಂದು ನಿಮಗೆ ಹೇಳಿದವರಾರು?" ಎಂದು ಪತ್ರಕರ್ತರಿಗೆ ಕೇಳಿದರು. "ನಾನು ಇಡೀ ರಾಜ್ಯಕ್ಕಾಗಿ ಪ್ರಾರ್ಥಿಸುತ್ತಿದ್ದೆ. ಇಡೀ ರಾಜ್ಯದಲ್ಲಿ ಈಗ ಮಳೆ ಸುರಿಯುತ್ತಿಲ್ಲವೇ?" "ತಿಪ್ಪನಗೊಂಡನಹಳ್ಳಿಯಲ್ಲೂ ಮಳೆ ಸುರಿಯುತ್ತದೆ." ತಮ್ಮ ಬಲೆಯಲ್ಲೇ ತಾವು ಬೀಳುತ್ತಾ "ಇನ್ನೇನು ಒಂದು ವಾರದಲ್ಲೋ, ಹದಿನೈದು ದಿನದಲ್ಲೋ ಮಳೆ ಬೀಳುತ್ತದೆ. ಆ ಎಲ್ಲ ಜಾಗಗಳ ಮಳೆ ನಿಲ್ಲಿಸಿ ಇಲ್ಲಿ ಮಾತ್ರ ಮಳೆ ತರಿಸುವುದು ನ್ಯಾಯವೇ? ಇಡೀ ರಾಜ್ಯದ ನೀರನ್ನು ತಡೆದು ತಿಪ್ಪಗೊಂಡನಹಳ್ಳಿಗೆ ಮಾತ್ರ ನೀರು ಬರುವಂತೆ ಮಾಡುವುದು ಸರಿಯೇ?"

ಅವರೇ ಅಲ್ಲವೇ ಒಂದು ತಿಂಗಳಲ್ಲಿ ತಿಪ್ಪಗೊಂಡನಹಳ್ಳಿ ಕಂಠಪೂರ್ತಿ ತುಂಬುವುದೆಂದು ಹೇಳಿದ್ದವರು? ಈ ಪ್ರಶ್ನೆಗೂ ಯೋಗಿಯಲ್ಲಿ ಉತ್ತರ ತಯಾರಾಗಿತ್ತು. "ನೋಡಿ, ತಿಪ್ಪಗೊಂಡನಹಳ್ಳಿಯ ಸುತ್ತ ಬರಡು ನೆಲದ್ದೆ ತೊಂದರೆ. ಏನಂದರೆ ಜಲಾಗಾರಕ್ಕೆ ನೀರಿಳಿಯುವ ಮುನ್ನವೇ ಈ ಬಂಜರು ಭೂಮಿ ನೀರು ಕುಡಿದು ಬಿಡುತ್ತದೆ."

ಯಾರಾದರೂ ತಾವು ಕೇವಲ ತಿಪ್ಪಗೊಂಡನಹಳ್ಳಿಗಾಗಿ ಪ್ರಾರ್ಥಿಸಿತ್ತಿದ್ದುದಾಗಿ ತಿಳಿದಿದ್ದರೆ ಅದು ತಪ್ಪೆಂದು ಅವರು ಹೇಳಿದರು.

"ನಾನು ಇನ್ನೂ ಹೆಚ್ಚಿನ ಕಾಲಾವಕಾಶ ಗೊತ್ತು ಪಡಿಸಬೇಕಿತ್ತು. ಆಗ ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಈ ಗೊಂದಲಗಳು ಹುಟ್ಟುತ್ತಿರಲಿಲ್ಲವೇನೋ" ಎಂದು "ಎಂದೂ ಸೋಲದ" ಯೋಗಿ ಹೇಳಿದರು.

"ನಾನೆಂದೂ ಸೋಲುವುದಿಲ್ಲ" ತನ್ನ ಸಣ್ಣ ಧ್ವನಿಯಲ್ಲಿ ಯೋಗಿ ಹೇಳಿದರು. "ಈ ಬರಡು ರಾಜ್ಯಕ್ಕೆ ಮಳೆ ತರಿಸಲು ನಾನು ನನ್ನ ಅರೋಗ್ಯವನ್ನೇ ಹಾಳುಮಾಡಿಕೊಂಡಿದ್ದೇನೆ. ಪ್ರತಿದಿನ ಮುಂಜಾನೆ ಮೂರು ಘಂಟೆ ಕಾಲ ನಾನು `ಧ್ಯಾನ ` ಮಾಡುತ್ತೇನೆ. ತಿಪ್ಪಗೊಂಡನಹಳ್ಳಿಗಾಗಿಯೇ ವಿಶೇಷವಾಗಿ ಚಿಂತಿಸಬೇಡಿ. ಇಷ್ಟರಲ್ಲೇ ಮಳೆ ಸುರಿಯುತ್ತದೆ."

ಯಾವುದಾದರೂ ಅಪಶಕುನವು ದುಷ್ಟಶಕ್ತಿಗಳು ಅಡ್ಡ ಬಂದಿದೆಯೇ? ಎಂಬ ಪ್ರಶ್ನೆಗೆ "ಇಲ್ಲ, ಇಲಾಖೆಯವರು ನನಗೆ ಇದೇ ಪ್ರಶ್ನೆ ಕೇಳಿದರು. ವಿಚಾರವಾದಿಗಳು ಕಪ್ಪುಬಾವುಟ ಬೀಸಿದರು. ಗಲಾಟೆ ಮಾಡಿದರು. ಇಂಥವಕ್ಕೆಲ್ಲ ನಾನು ಚಿಂತಿಸುವುದಿಲ್ಲ. ನಾನು ನಿಜವಾದ ವಿಚಾರವಾದಿ. ಅವರಲ್ಲ. ನಾನು ಜನಪರ, ಅವರ ಕಪ್ಪು ಬಾವುಟಗಳು ಮಳೆ ತರಿಸಬಹುದೇ?"

"ಈ ದಿನ ಯೋಗಿ ಅತ್ಯಂತ ಕರುಣಾಜನಕವಾದ, ತನ್ನ ಮೇಲೆ ತಾನೇ ಗೂಬೆ ಕೂರಿಸಿಕೊಂಡ ವ್ಯಕ್ತಿ" ಎಂದು ಡಾ. ನರಸಿಂಹಯ್ಯನವರು ಹೇಳತೊಡಗಿದರು. ದೇವಪುರುಷರು ಮತ್ತು ಪವಾಡ ಪುರುಷರನ್ನು ಕುರಿತು ಮಾತನಾಡತೊಡಗಿದರೆ ಅವರಿಗೆ ಎಲ್ಲಿಲ್ಲದ ಉತ್ಸಾಹ.

"ಇವರು ಕೂಡ ರಾಜಕಾರಣಿಗಳಂತೆ ಜನರಿಗೆ ಬಾಯಿಗೆ ಬಂದಂತೆ ಭರವಸೆ ನೀಡಿದರು. ಈಗ ಅದರ ಪ್ರತಿಫಲವನ್ನು ಅನುಭವಿಸುತ್ತಿದ್ದಾರೆ." ಆದರೆ ನರಸಿಂಹಯ್ಯನವರು ಶಿವಬಾಲಯೋಗಿ ಜಾಣನೆಂದು ಒಪ್ಪಿಕೊಂಡರು. ಏಕೆಂದರೆ ಅವರು ಬೇಕೆಂದೇ ಮೂವತ್ತು ದಿನಗಳ ಗಡಿಗೆರೆಯನ್ನು ಹಾಕಿದ್ದರು. ಅಷ್ಟರಲ್ಲಿ ಮಳೆಗಾಲ ಯಾವಾಗ ಬೇಕಾದರೂ ಪ್ರಾರಂಭವಾಗಬಹುದಿತ್ತು. ಆದರೆ ಮಳೆ ಕೂಡ ಬಡಪಾಯಿಯೊಡನೆ ಸಹಕರಿಸಲಿಲ್ಲ. ಅವರು ಜನಗಳ ಎದುರು ನಗೆಪಾಟಲಾದರು.

ಈ ಯೋಗಿ ಕೊನೆಯ ದಿನವನ್ನು ಮುಂದೆ ಹಾಕುತ್ತಲೇ ಹೋಗುತ್ತಾರೆ. ಒಂದಲ್ಲ ಒಂದು ದಿನ ಕೆರೆ ಸಹಜವಾದ ಕಾರಣದಿಂದಲೇ ತುಂಬುತ್ತದೆ. ಪಾಪ, ಹೇಗಾದರೂ ಮಾಡಿ ಅವರು ತಮ್ಮ ಮರ್ಯಾದೆ ಉಳಿಸಿಕೊಳ್ಳಬೇಕಲ್ಲ. ಆದರೆ ಸಾಯಿಬಾಬಾ ಇವರಿಗಿಂತ ಜಾಣ. ಅವರು ನನ್ನ ಸವಾಲನ್ನು ಒಪ್ಪಿಕೊಳ್ಳಲೇ ಇಲ್ಲ. ಇವರು ಒಪ್ಪಿಕೊಂಡರು ಮತ್ತು ಹೆಸರು ಕೆಡಿಸಿಕೊಂಡರು.

ಆದರೆ ರಾಜ್ಯದ ಲಿಂಗನಮಕ್ಕಿ ಮತ್ತು ಇತರ ದೊಡ್ಡ ಜಲಾಶಯಗಳು ಸ್ವಾಮಿಗಳ ಯಾವ ಸಹಾಯವೂ ಇಲ್ಲದೆ ಮಳೆಯಿಂದಲೇ ತುಂಬುತ್ತಿರವ ಸಂಗತಿಯ ಕಡೆ ಅವರ ಗಮನ ಸೆಳೆದರು. ಇನ್ನು ಮೇಲಾದರೂ ಶಿವಬಾಲಯೋಗಿಗಳು ಇಂತಹ ಹುಚ್ಚುಸಾಹಸಗಳನ್ನು ನಿಲ್ಲಿಸಿ ತಮ್ಮ ಜೀವಿತದ ಉಳಿದ ಭಾಗವನ್ನು ನಿರಪಾಯಕಾರಿಯಾದ ಭಜನೆಗಳಲ್ಲಿ ಕಳೆಯಬೇಕೆಂದು ಅವರು ಸಲಹೆ ಕೊಟ್ಟರು.

ಇನ್ನು ಮೇಲಾದರೂ ಕರ್ನಾಟಕ ಸರ್ಕಾರವು ತನ್ನ ತಪ್ಪನ್ನು ತಿಳಿದುಕೊಳ್ಳುವುದೆಂದು ಅವರು ಆಶಿಸಿದರು. ಜಲಮಂಡಳಿ ಕೂಡಾ ಈ ರೀತಿಯ ವ್ಯರ್ಥಪ್ರಯತ್ನಗಳನ್ನು ನಿಲ್ಲಿಸಬಹುದೆಂದು ನಿರೀಕ್ಷಿಸಿದರು.

ಹೀಗೆ ಶಿವಬಾಲ ಯೋಗಿಯವರು ಸಾರ್ವಜನಿಕರ ದೃಷ್ಟಿಯಲ್ಲಿ ನಗೆಪಾಟಲಿಗೆ ಗುರಿಯಾದರು. ಅವರು ಈ ಐತಿಹಾಸಿಕ ಪರಾಭವದಿಂದ ಕಹಿಯಾದ ಪಾಠವೊಂದನ್ನು ಕಲಿತಿರುವರೆಂಬ ಆಸೆ ನನ್ನದು. ಅವರು ಇನ್ನು ಮೇಲೆ ದೇವರು, ಧರ್ಮ ಮತ್ತು ಪ್ರಾರ್ಥನೆಗಳ ಹೆಸರಿನಲ್ಲಿ ಜನರನ್ನು ವಂಚಿಸುವುದನ್ನು ನಿಲ್ಲಿಸಬೇಕು. ನಿಜವಾಗಲೂ ಆಧ್ಯಾತ್ಮಿಕ ಶಕ್ತಿಯುಳ್ಳ ಮಹಾನುಭಾವರು ಈ ರೀತಿ ಅಗ್ಗದ ಸಾರ್ವಜನಿಕ ಪ್ರದರ್ಶನಗಳಲ್ಲಿ ತೊಡುಗುವುದಿಲ್ಲ.

ಸರಣಿ ೭- ಡಾ. ಎಚ್. ನರಸಿಂಹಯ್ಯ -ಬದುಕು ನನಗೇನು ಕಲಿಸಿದೆ

ಭ್ರೂಣದಿಂದ ಸಮಾಧಿಯವರೆಗೆ ಕಲಿಕೆ ಒಂದು ನಿರಂತರ ಪ್ರಕ್ರಿಯೆ ಆಗಬೇಕು. ಕೇವಲ ತರಗತಿಯ ನಾಲ್ಕು ಗೋಡೆಗಳಿಗಷ್ಟೇ ಸೀಮಿತ ಎಂಬ ತಪ್ಪು ಕಲ್ಪನೆಯಿದೆ. ಚುರುಕಾದ ಪರಿಶೀಲನ ಪ್ರಜ್ಞೆಯುಳ್ಳ ವ್ಯಕ್ತಿಯ ಸೂಕ್ಷ್ಮ ಸಂವೇದಿ ಮನಸ್ಸು ಬದುಕಿನ ಪ್ರತಿಯೊಂದು ಘಟನೆಯಿಂದಲೂ ಕಲಿಯಬಹುದು.

ಸಿದ್ಧಾರ್ಥನ ಸಂದರ್ಭದಲ್ಲಿ ಆದದ್ದು ಹೀಗೆಯೇ. ಒಬ್ಬ ಮುದುಕ, ರೋಗಿ ಮತ್ತು ಒಂದು ಹೆಣ ಆತನಿಗೆ ಅರ್ಥಪೂರ್ಣ ಸಂದೇಶ ನೀಡಿತು. ಅಂತಿಮವಾಗಿ ಆತ ಬುದ್ಧನಾದ. ನಾವಾದರೋ ಮುದುಕರು, ರೋಗಿಗಳ ನಡುವೆಯೇ ಸಾವಿನಿಂದ ಆವೃತ್ತರಾಗಿದ್ದರೂ, ಪ್ರಭಾವಿತರಾಗದೆ ಬದುಕುತ್ತಿದ್ದೇವೆ.

ಮೂವತ್ತೈದು ವರ್ಷಗಳಿಗೂ ಮಿಕ್ಕಿ, ವಿದ್ಯಾರ್ಥಿಗಳ ಜೊತೆ ಕಾರ್ಯ ನಿರ್ವಹಿಸಿ, ಹಲವಾರು ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳ ಅನುಷ್ಠಾನದಲ್ಲಿ ಪಾಲ್ಗೊಂಡಿರುವ ನನ್ನ ಅನುಭವದಂತೆ ಮುಕ್ತ ಮನಸ್ಸಿದ್ದು, ವಿದ್ಯಾರ್ಥಿಗಳನ್ನು ಅಪ್ರಬುದ್ಧರು ಹಾಗೂ ಬೇಜವಾಬ್ದಾರರೆಂದು ಪರಿಗಣಿಸದೆ ಇದ್ದರೆ, ಮಲಿನವಾಗದ, ತಾಜಾ ಯುವ ಮನಸ್ಸುಗಳಿಂದ ಹೊಸ ಸಲಹೆಗಳನ್ನು ಸ್ವೀಕರಿಸಲು ಸಾಧ್ಯ.

ಮೂವತ್ತು ವರ್ಷಗಳ ಹಿಂದೆ ನ್ಯಾಷನಲ್ ಕಾಲೇಜಿನ ಹಾಸ್ಟಲ್ ವಾರ್ಡನ್ ಆಗಿ, ಕಡ್ಡಾಯವಾಗಿದ್ದ ಮುಂಜಾನೆಯ ಪ್ರಾರ್ಥನೆಗೆ ಬೇಗ ಎಚ್ಚರಗೊಳ್ಳದ ಹಾಸ್ಟೆಲ್ ನಿವಾಸಿಗಳಿಗೆ ನಾಲ್ಕಾಣೆ ದಂಡ ವಿಧಿಸಿದ್ದೆ. ತನಗೆ ಖಂಡಿತ ಬೀಳಬಹುದಾದ ದಂಡದ ಮೊದಲ ಕಂತಾಗಿ ಹಾಸ್ಟಲ್ ನಿವಾಸಿಯೊಬ್ಬ ಪ್ರಾಮಾಣಿಕವಾಗಿ ನನಗೆ ಒಂದು ರೂಪಾಯಿ ಮುಂಗಡ ಕೊಟ್ಟಿದ್ದ. ದಂಡನಾಕ್ರಮಗಳ ಬಗ್ಗೆ, ಯೋಚಿಸದಾಗಲೆಲ್ಲಾ ಈ ಸರಳ ಘಟನೆ ನನ್ನನ್ನು ನಿಯಂತ್ರಿಸುತ್ತಿತ್ತು.

ಸಾಧಾರಣವಾಗಿ ಜನ ನಿರ್ಲಕ್ಷಿಸುವ ಒಂದು ಸಾಮಾನ್ಯ ದೃಶ್ಯ ನನ್ನನ್ನು ದಶಕಗಳಿಂದ ಕಾಡುತ್ತಿದೆ. ಕಸದ ತೊಟ್ಟಿಯ ಹಿಡಿ ಎಂಜಲಿಗಾಗಿ ಬೀದಿ ನಾಯಿಯ ಜೊತೆಗಿನ ಮನುಷ್ಯನ ಜಗಳ ನನ್ನ ಮನಸ್ಸಿನ ಮೇಲೆ ತೀವ್ರವಾದ ಕಳವಳಕಾರಿ ಪರಿಣಾಮವನ್ನು ಬೀರುತ್ತಲೇ ಇದೆ. ಕಡು ಬಡತನದ ಇಂಥ ದೃಷ್ಯಗಳು ನನ್ನಲ್ಲಿ ಯಾವಾಗಲೂ ಅಪರಾಧಿತ್ವದ ಭಾವನೆ ಬೆಳೆಸುತ್ತವೆ.

ನಾನು ೧೩ ವರ್ಷದವನಾಗಿದ್ದಾಗ ಖಾದಿ ತೊಡಲು ಪ್ರಾರಂಭಿಸಿದೆ ಮತ್ತು ಈಗಲೂ ತೊಡುತ್ತಿರುವೆ. ರಾಷ್ಟ್ರೀಯತೆ ಕುರಿತು ನನ್ನ ವಿಚಾರಗಳಿಗೆ ಕುಮ್ಮಕ್ಕು ದೊರೆತದ್ದು ನಾನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ. ನನ್ನ ಬದುಕಿನ ಮೊದಮೊದಲ ವರ್ಷಗಳಲ್ಲಿ ತಮ್ಮ ಸರಳತೆ ಹಾಗೂ ದೃಢ ದೇಶ ಪ್ರೇಮಗಳಿಂದಾಗಿ ಗಾಂಧೀಜಿ ನನ್ನ ಮೇಲೆ ಆಳವಾದ ಪ್ರಭಾವ ಬೀರಿದ್ದರು. ೧೯೪೨ ನನ್ನ ಬದುಕಿಗೆ ತಿರುವು ತಂದ ವರ್ಷ.
ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಬಿ. ಎಸ್ಸಿ. (ಆನರ್ಸ್)ದ ಕಡೆಯ ವರ್ಷದಲ್ಲಿ ಓದುತ್ತಿದ್ದೆ. ಆಗಸ್ಟ್ ೯,೧೯೪೨ ರಂದು ತಾನು ತೊಡಗಬೇಕೆಂದಿದ್ದ `ಕ್ವಿಟ್ ಇಂಡಿಯಾ` ಚಳವಳಿಗೆ ಒಂದು ದಿನ ಮುಂಚೆ ಗಾಂಧೀಜಿ ಮತ್ತು ಉಳಿದ ಧುರೀಣರನ್ನು ಮುಂಬೈಯಲ್ಲಿ ಬಂಧಿಸಲಾಯಿತು. ದೇಶಾದ್ಯಂತ ಸ್ವಯಂ ಸ್ಪೂರ್ತಿಯ, ವ್ಯಾಪಕ ಚಳವಳಿ ಹರಡಿತ್ತು. ವ್ಯಾಸಂಗಕ್ಕೆ ಧಕ್ಕೆ ಒದಗಬಹುದು ಮತ್ತು ನನ್ನ ಭವಿಷ್ಯಕ್ಕೆ ಸಂಬಂಧಿಸಿದಂತೆ ಕತ್ತಲಾಳಕ್ಕೆ ಧುಮುಕುತ್ತಿರುವೆನೆಂದು ತಿಳಿದಿದ್ದರೂ ಸ್ವಾತಂತ್ರ್ಯ ಸಂಘರ್ಷದಲ್ಲಿ ತೊಡಗವುದೆಂದು ಬಲು ಹಿಂದೇಯೇ ನಿಶ್ಚಯಿಸಿದ್ದೆ. ಕಡು ಬಡತನದಿಂದ ಸೆಂಟ್ರಲ್‌ಕಾಲೇಜಿನ ಪ್ರಾಂಗಣವನ್ನು ನನ್ನ ಹಾದಿಯ ಅಂಗುಲ ಅಂಗುಲ ಹೋರಾಡುತ್ತಾ ತಲುಪಿದ್ದೆ. ಇಡಿ ದೇಶವೇ ಅಸಾದೃಶ್ಯವಾದ ಸಂಘರ್ಷದ ಹಿಡಿಯಲ್ಲಿರುವಾಗ ನನ್ನ ವೈಯಕ್ತಿಕ ಹಿತಸಾಧನೆಗಿಂತ ದೇಶಕ್ಕೆ ನಾನು ಸಲ್ಲಿಸಬೇಕಾದ ಕರ್ತವ್ಯವೇ ಮುಖ್ಯ ಎಂಬ ತೀರ್ಮಾನ ಕೈಗೊಂಡಿದ್ದು ಆಳವಾಗಿ ಯೋಚಿಸಿದ ನಂತರವೇ. ನನ್ನನ್ನು ಬಂಧಿಸಿ ಸೆಂಟ್ರಲ್ ಕಾಲೇಜು ರಸ್ತೆಯಾಚೆಗಿದ್ದ ಸೆಂಟ್ರಲ್ ಜೈಲಿನಲ್ಲಿ ಕೂಡಿಹಾಕಲಾಯಿತು.

ಸೆಂಟ್ರಲ್ ಕಾಲೇಜಿನಲ್ಲಿದ್ದಷ್ಟೇ ಖುಶಿಯಲ್ಲಿ ಸೆಂಟ್ರಲ್ ಜೈಲಿನಲ್ಲಿದ್ದೆ. ಮೈಸೂರು ಜೈಲಿನಲ್ಲಿ ಖೈದಿಯಾಗಿ ಮೂರು ತಿಂಗಳು ಕಳೆದ ಮೇಲೆ ಡಿಸೆಂಬರ್‌ನಲ್ಲಿ ನನ್ನನ್ನು ಬಿಡುಗಡೆ ಮಾಡಿದರು. ಸೆರೆಮನೆವಾಸ ನನ್ನ ದೇಶಪ್ರೇಮದ ಭಾವನೆಗಳನ್ನು, ಗಾಂಧೀಜಿ ಮತ್ತು ಇತರ ನಾಯಕರ ಬಿಡುಗಡೆಯಾಗುವತನಕ ಹೋರಾಟವನ್ನು ಮುಂದುವರಿಸಬೇಕೆಂಬ ನಿರ್ಧಾರವನ್ನು ಬಲಗೊಳಿಸಿತು. ಬಹುತೇಕ ವಿದ್ಯಾರ್ಥಿಗಳು ಮತ್ತು ನನ್ನ ಸಹಕಾರಾಗೃಹವಾಸಿಗಳು ತಮ್ಮ ವ್ಯಾಸಂಗವನ್ನು ಪುನರಾರಂಭ ಮಾಡಿದರೂ ನಾನು ಕಾಲೇಜಿಗೆ ಹೋಗಲು ನಿರಾಕರಿಸಿದೆ.

೧೯೪೩ ಫೆಬ್ರವರಿಯಲ್ಲಿ ಪೂನಾದಲ್ಲಿ ಗಾಂಧೀಜಿಯವರು ಪ್ರಾರಂಭಿಸಿದ ಐತಿಹಾಸಿಕ ಉಪವಾಸಕ್ಕೆ ಬೆಂಬಲವಾಗಿ, ಸರಕಾರದ ದಮನ ನೀತಿಯ ವಿರುದ್ಧವಾಗಿ, ನನ್ನ ಏಳು ಜನ ಗೆಳೆಯರೊಂದಿಗೆ ೧೪೪ನೇ ವಿಧಿಯನ್ನುಲ್ಲಂಘಿಸಲೆಂದು ಪೂನಾಕ್ಕೆ ತೆರಳಿದೆ. ನಿರೀಕ್ಷಿಸಿದಂತೆ ನಮ್ಮೆಲ್ಲರನ್ನು ಬಂಧಿಸಿ ಗಾಂಧೀಜಿಯವರ ಎರಡನೇ ಮನೆಯಂತಿದ್ದ ಯರವಾಡ ಸೆಂಟ್ರಲ್ ಜೈಲಿನಲ್ಲಿ ಕೂಡಿ ಹಾಕಿದರು. ಆ ಪ್ರಖ್ಯಾತ ಜೈಲಲ್ಲಿ ೫ ತಿಂಗಳ ಬಂಧನ ಕಠಿಣಕರವಾಗಿತ್ತು. ಆದರೆ ಅದಕ್ಕೆ ಅದರದೇ ಆದ ಪ್ರತಿಫಲವಿದೆ. ದೇಶದ ವಿವಿಧ ಭಾಗಗಳಿಂದ ಬಂದ ಸತ್ಯಾಗ್ರಹಿಗಳ ಒಡನಾಟದಿಂದ ನನ್ನ ದೃಷ್ಟಿಕೋಣ ಹೆಚ್ಚು ದೃಡವಾಯಿತು. ಆಗ ನಾವು ನಡೆಸುತ್ತಿದ್ದ ಅರ್ಥಪೂರ್ಣ ಚರ್ಚೆಯಲ್ಲಿ, ನನ್ನ ಇತರ ಆಧ್ಯಯನದಲ್ಲಿ, ಹಿಂದಿಯಲ್ಲಿ ಪ್ರೇಮಚಂದರ, ಸಾಮಾಜಿಕ ಪ್ರಸ್ತುತತೆಯ ಅನೇಕ ಕಾದಂಬರಿಗಳ ಓದನ್ನು ಈಗಲೂ ನಾನು ನಿಚ್ಚಳವಾಗಿ ಸ್ಮರಿಸುತ್ತೇನೆ. ಸೆರೆಮನೆವಾಸ ಖೈದಿಗಳ ಮೇಲೆ ಯಾವಗಲೂ ತನ್ನದೇ ಆದ ವಿಶಿಷ್ಟ ಪರಿಣಾಮ ಬೀರುತ್ತದೆ.

ನನ್ನ ಓದನ್ನು ಅರ್ಧಕ್ಕೆ ನಿಲ್ಲಿಸಿದ ಎರಡು ವರ್ಷಗಳ ನಂತರ ೧೯೪೪ರಲ್ಲಿ ಬಿ.ಎಸ್‌ಸಿ. (ಆನರ್ಸ್) ಯನ್ನು ಸೇರಿಕೊಂಡೆ. ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಸ್ವಾಮಿ ತ್ಯಾಗೀಶಾನಂದಜೀ ಅವರು ನನ್ನ ಬಿ.ಎಸ್‌ಸಿ. (ಆನರ್ಸ್) ಮತ್ತು ಎಂ. ಎಸ್‌ಸಿ. ಪದವಿ ಪೂರ್ಣಗೊಳಿಸುವವರೆಗೆ ಎರಡು ವರ್ಷಕಾಲ ಆಶ್ರಮದಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟರು. ಸ್ವಾಮೀಜಿಯವರು ಅಪಾರ ದೇಶಪ್ರೇಮಿ, ವಿಚಾರಪರ, ಕರುಣಾಮಯಿ ಹಾಗೂ ಸಹಾನುಭೂತಿಪರ ವ್ಯಕ್ತಿಯಾಗಿದ್ದರು. ಆಶ್ರಮದಲ್ಲಿ ನಾನು ಒಂದು ತರದ 'ನಾನ್-ಕನ್‌ಫಾರ್ಮಿಸ್ಟ್' ಆಗಿದ್ದರೂ ಸ್ವಾಮೀಜಿಯವರ ಪ್ರವಚನಗಳು ಮತ್ತು ಆಶ್ರಮ ಜೀವನ ನನ್ನ ಮೇಲೆ ಗಣನೀಯ ಪರಿಣಾಮ ಬೀರಿತು.

ಸ್ವಾಮೀಜಿಯವರ ಜೊತೆಗಿನ ಚರ್ಚೆಯಲ್ಲಿ ನಾನವರಿಗೆ ತುಂಬ ಕಸಿವಿಸಿಯುಂಟು ಮಾಡುವ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅತಾರ್ಕಿಕ ಊಹೆಗಳನ್ನಾಧರಿಸಿದ ಕೆಲವೊಂದು ಧಾರ್ಮಿಕ ತತ್ವಗಳ ವಿಚಾರದಲ್ಲಿ ಅವರೊಂದಿಗೆ ಭಿನ್ನಮತವಿರುತ್ತಿತ್ತು. ಬಡವರು ಮತ್ತು ಪತಿತರಿಗಾಗಿ ಮಿಡಿದ, ಉಸಿರುಗಟ್ಟಿಸುವ ಅರ್ಥಹೀನ ಆಚರಣೆ ಮತ್ತು ಮೂಢನಂಬಿಕೆಗಳನ್ನು ನಿಸ್ಸಂಯವಾಗಿ ತಿರಸ್ಕರಿಸಿದ, ವಿವೇಕಾನಂದರ ಉಪದೇಶಗಳ ನಿಕಟ ಪರಿಚಯವಾದದ್ದು ಆಶ್ರಮದಲ್ಲಿಯೇ.

೧೧ ವರ್ಷಗಳ ಕಾಲ ಕಾಲೇಜಿನಲ್ಲಿ ಅಧ್ಯಾಪನ ಮಾಡಿದ ನಂತರ ೧೯೬೦ರಲ್ಲಿ ನ್ಯೂಕ್ಲಿಯರ್ ಫಿಸಿಕ್ಸ್‌ನಲ್ಲಿ ಪಿ.ಎಚ್‌ಡಿ. ಪಡೆಯಲೆಂದು ನಾನು ಯು.ಎಸ್.ಎ ದಲ್ಲಿ ಮೂರು ವರ್ಷ ಇದ್ದೆ. ೭ ವರ್ಷಗಳ ನಂತರ ಈ ದೇಶಕ್ಕೆ ಮತ್ತೊಮ್ಮೆ ಒಂದು ವರ್ಷದ ಮಟ್ಟಿಗೆ ವಿಸಿಟಿಂಗ್ ಪ್ರೊಪೆಸರ್ ಆಗಿ ಭೇಟಿಕೊಟ್ಟೆ. ಕುಂದುಕೊರತೆಗಳಿದ್ದಾಗ್ಯೂ ಅಮೇರಿಕಾದ ಶಿಕ್ಷಣ ಪದ್ಧತಿ ನನಗೆ ಹಿಡಿಸಿತು. ಪಠ್ಯಕ್ರಮಮದ ರೂಪಿಸುವಿಕೆ ಬೋಧನೆ ಮತ್ತು ಮೌಲ್ಯಮಾಪನ ಆಯಾ ಅಧ್ಯಾಪಕರಿಂದಲೇ ನಡೆಯುತ್ತಿತ್ತು. ಪಠ್ಯಕ್ರಮ ಹೆಚ್ಚು ಪ್ರಸ್ತುತವೂ ಅರ್ಥಪೂರ್ಣವೂ ಆಗಿರುವುದರ ಜೊತೆಗೆ, ಮೇಲೆ ಹೇಳಿದ ಅಂಶ ಅಮೇರಿಕನ್ ಶಿಕ್ಷಣ ಪದ್ಧತಿಯ ವಿಶಿಷ್ಟ ಗುಣಗಳಲ್ಲೊಂದಾಗಿತ್ತು.

ಎಂದೂ ಒಬ್ಬ ಅಧ್ಯಾಪಕ ತರಗತಿಗೆ ತಡವಾಗಿ ಬರುವುದಿಲ್ಲ. ತರಗತಿಯನ್ನು ಬೇಗ ಬಿಡುವಂತಿಲ್ಲ. ಅಮೇರಿಕನ್ ಅಧ್ಯಾಪಕ ನನಗೆ ಕಂಡದ್ದು ಹೀಗೆ; ಆತ್ಮಸಾಕ್ಷಿಗೆ ನಿಷ್ಠವಾಗಿರುವ ಆತ್ಮಗೌರವ ಮತ್ತು ಸ್ವಯಂಶಿಸ್ತಿಗೆ ಬೆಲೆ ಕೊಡುವ ತನ್ನ ಕರ್ತವ್ಯಕ್ಕೆ ಸಮರ್ಪಿಸಿಕೊಂಡ ಸಮರ್ಥ ವ್ಯಕ್ತಿ. ಟೆಲೆವಿಶನ್ ಸಂದರ್ಶನದಲ್ಲಿ ಪ್ರತಿಕಾ ವರದಿಗಾರನೊಬ್ಬ, ತತ್ತ್ವಶಾಸ್ತ್ರದ ಪ್ರೊಫೆಸರ್ ಒಬ್ಬರನ್ನು 'ನಿಮ್ಮ ಅಭಿಪ್ರಾಯದಲ್ಲಿ ಅಮೇರಿಕಾದ ಹಿರಿಮೆ ಯಾವುದು?' ಎಂದು ಪ್ರಶ್ನಿಸಿದಾಗ ತತ್‌ಕ್ಷಣವೇ ಬಂದ ಉತ್ತರ : 'ಅಮೇರಿಕಾದ ಹಿರಿಮೆ, ಮೇಲ್ವಿಚಾರಣೆಯಿಲ್ಲದೆ ಕೆಲಸ ಮಾಡುವುದರಲ್ಲಿದೆ' ಎಂಥ ವಿಶಿಷ್ಟ, ಅರ್ಥಪೂರ್ಣ ಉತ್ತರ! ತದ್ವಿರುದ್ಧವಾಗಿ ನಮ್ಮ ದೇಶದಲ್ಲಿ ಕೆಲಸಗಾರರಿಗಿಂತ ಹೆಚ್ಚಿಗೆ ಮೇಲ್ವಿಚಾರಕರಿದ್ದಾರೆ.

ಸೋವಿಯತ್ ಶಿಕ್ಷಣ ವ್ಯವಸ್ಥೆಯ ಅಧ್ಯಯನಕ್ಕಾಗಿ ಕೊಲಂಬಸ್‌ನ ಓಹಿಯೋ ಸ್ಟೇಟ್ ಭೌತಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಪ್ರೊ ಎಚ್. ಎಚ್ ನೀಲ್ಸನ್ ಅವರು ಅಮೆರಿಕನ್ ನಿಯೋಗದ ಸದಸ್ಯರಾಗಿ ಸೋವಿಯತ್ ರಷ್ಯಾಕ್ಕೆ ಭೇಟಿನೀಡಿ ಮರಳಿದ ನಂತರ ಕೊಟ್ಟ ಒಂದು ಹೇಳಿಕೆ ನನ್ನ ನೆನಪಿಗೆ ಬರುತ್ತದೆ. ರಷ್ಯನ್ನರ ಮಿಲಿಟರಿ ಶಕ್ತಿಗಿಂತ ಅವರ ಶಿಕ್ಷಣ ವ್ಯವಸ್ಥೆಗೆ ಅಮೇರಿಕನ್ನರು ಹೆಚ್ಚು ಹೆದರಬೇಕಾಗಿದೆ ಎಂದು ಹೇಳಿದರು. ಈ ಎರಡು ಭೀಮಶಕ್ತಿಗಳು ಶಿಕ್ಷಣಕ್ಕೆ ಕೊಟ್ಟಿರುವ ಅಪ್ರತಿಮ ಮಹತ್ವ ಇದರಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ವಿರುದ್ಧವಾಗಿ ನಮಗೆಲ್ಲ ತಿಳಿದಿರುವಂತೆ ನಮ್ಮ ದೇಶದಲ್ಲಾದರೋ ಶಿಕ್ಷಣ ಅತ್ಯಂತ ನಿರ್ಲಕ್ಷಕ್ಕೆ ತುತ್ತಾದ ವಿಷಯ.

ಜೊತೆಗೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಅಧ್ಯಾಪಕ ಅತ್ಯಂತ ದುರ್ಬಲ ಕೊಂಡಿ ಎಂಬ ದೃಢ ಅಭಿಪ್ರಾಯ ನನ್ನದು. ಹಾಗೆಂದು ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ದುಡಿಯುತ್ತಿರುವ ಅರ್ಪಣಾ ಮನೋಭಾವದ, ಉತ್ಸಾಹ ತುಂಬುವ ಮಹಾನ್ ಶಿಕ್ಷಕರ ಬಗ್ಗೆ ನನಗೆ ತಿಳಿದಿಲ್ಲವೆಂದಲ್ಲ. ಆದರೆ ಇಂಥ ಶಿಕ್ಷಕರ ಸಂಖ್ಯೆ ತುಂಬ ಚಿಕ್ಕದು ಮತ್ತು ಬೇಗನೆ ಮಾಯವಾಗುತ್ತಿರುವಂಥದು. ಅನೇಕ ಶಿಕ್ಷಕರು ನಿರ್ಲಕ್ಷ ಮನೋಭಾವದವರು, ಅಸಮರ್ಥರು ಮತ್ತು ಸ್ವಾರ್ಥಿಗಳು. ಇಂಧ ಅಯೋಗ್ಯ ಶಿಕ್ಷಕರಿಂದಾಗಿ ಎಂಥ ಒಳ್ಳೆಯ ಶಿಕ್ಷಣ ಪದ್ಧತಿಯೂ ಹಾಳಾಗುತ್ತದೆ.

ನಾನು ಪಾಲ್ಗೊಂಡ ಪ್ರತಿಯೊಂದು ಚಟುವಟಿಕೆಯಿಂದಲೂ ಯಥಾಶಕ್ತಿ ಕಲಿಯಲು ಪ್ರಯತ್ನಿಸಿದ್ದೇನೆ. ಇ.ಎ.ಎಸ್ ಪ್ರಸನ್ನ ಮತ್ತು ಬಿ.ಎಸ್. ಚಂದ್ರಶೇಖರರೊಂದಿಗೆ ಟೆನಿಸ್‌ಬಾಲ್ ಕ್ರಿಕೆಟ್ ಆಡುವುದರೊಂದಿಗೆ ತೊಡಗಿ ಗಂಭೀರ ಕ್ರೀಡೆಗಳಾದ ಹಾಕಿ ಹಾಗೂ ಬ್ಯಾಸ್ಕೆಟ್ ಬಾಲನ್ನು ವಿಶ್ವವಿದ್ಯಾಲಯ ಮತ್ತು ರಾಜ್ಯ ಮಟ್ಟದ ತಂಡಗಳೊಂದಿಗೆ ಆಡಿದ್ದೇನೆ. ಯಶಸ್ಸು, ಅಪಯಸ್ಸುಗಳನ್ನು ಸಮಾನ ಚಿತ್ತದಿಂದ ಸ್ವೀಕರಿಸಿದ್ದೇನೆ. ನನ್ನ ಶೋಧನೆ ಮತ್ತು ಸಂಕಟಗಳಲ್ಲಿ ಈ ಕ್ರೀಡಾ ಮನೋಭಾವವೇ ನನಗೆ ಬೆಂಬಲವಾಗಿತ್ತು.

ಬುದ್ಧ, ಸ್ವಾಮಿ ವಿವೇಕಾನಂದ, ಗಾಂಧೀಜಿ, ಜವಹಾರ್‌ಲಾಲ್ ನೆಹರೂ ಮತ್ತು ಐನ್‌ಸ್ಟೀನ್‌ರ ವಿಚಾರಗಳು ನನ್ನ ಮೇಲೆ ಅಗಾಧ ಪ್ರಭಾವ ಬೀರಿವೆ. ಗುರಿಯಷ್ಟೇ ಸಾಧನಗಳೂ ಮುಖ್ಯ ಎಂಬುದನ್ನು ನಾನು ಈ ಮಹಾನ್ ವ್ಯಕ್ತಿಗಳಿಂದ ಕಲಿತೆ. ದೇವರ ಇರುವಿಕೆ, ಇಲ್ಲದಿರುವಿಕೆ, ಜೀವನ ಮೂಲ ಆಕಸ್ಮಿಕವೇ, ಬದುಕಿಗೊಂದು ಉದ್ದೇಶವಿದೆಯೆ, ಸಾವು ಬದುಕಿನ ಕೊನೆಯೆ, ಮರಣಾನಂತರವೂ ವ್ಯಕ್ತಿತ್ವ ಉಳಿಯಬಲ್ಲುದೆ, ಮುಂತಾದ ತತ್ವಶಾಸ್ತ್ರದ ಕೇವಲ ಇಳಿಗಾಲದ ಆಲೋಚನೆಗಳಲ್ಲ. ಧಾರ್ಮಿಕ ಸಾಹಿತ್ಯವನ್ನು ಸಾಕಷ್ಟು ವಿಸ್ತೃತವಾಗಿ ಅಧ್ಯಯನ ಮಾಡಿದರೂ, ಆಗಿಂದಾಗ್ಗೆ ಧಾರ್ಮಿಕ ವ್ಯಕ್ತಿಗಳು, ಬುದ್ಧಿಜೀವಿಗಳು, ವಿಚಾರವಾದಿಗಳು ಮತ್ತು ನಾಸ್ತಿಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದರೂ ಈ ಮೂಲಭೂತ ಸಮಸ್ಯೆಗಳಿಗೆ ಸಮಾಧಾನಕರ ಉತ್ತರ ನನಗೆ ದೊರೆತಿಲ್ಲ. ಆದರೆ ಧರ್ಮ ಮತ್ತು ದೇವರನ್ನು ಶೋಷಣೆ ಹಾಗೂ ವ್ಯಾಪಾರೀ ಸಿದ್ಧಾಂತಗಳ ಸಾಧನವಾಗಿ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಯಾವುದೇ ಧರ್ಮಗ್ರಂಥ ದೈವೋಕ್ತವೆಂದಾಗಲಿ, ಅಧಿಕೃತವೆಂದಾಗಲಿ ಅಥವಾ ಎಲ್ಲ ಕಾಲಕ್ಕೂ ಪ್ರಸ್ತುತವೆಂದಾಗಲಿ ನಾನು ಪರಿಗಣಿಸುವುದಿಲ್ಲ. ಅತ್ಯಂತ ಅಮಾನವೀಯ ಹಾಗೂ ನ್ಯಾಯ ಬಾಹಿರವಾದ ಜಾತಿ ಪದ್ಧತಿಗೆ ಹಿಂದೂ ಧರ್ಮ ಮನ್ನಣೆ ಕೊಟ್ಟಿರುವುದು ನಾಚಿಕೆಯ ಅಪಮಾನದ ಸಂಗತಿ. ತನ್ನ ಕೆಲವು ತತ್ವಗಳಲ್ಲಿ ಹಿಂದೂ ಧರ್ಮ ತುಂಬಾ ಆಧ್ಯಾತ್ಮಿಕ. ಆದರೆ ಬಹುತೇಕ ಹಿಂದೂ ಆಚರಣೆಗಳು ಹೆಚ್ಚು ಕಡಿಮೆ ಭೌತವಾದಿಯಾಗಿವೆ.

ಜನರ ಮನಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟಿರುವ ಕರ್ಮ ಸಿದ್ಧಾಂತ ವಿಧಿವಾದದಲ್ಲಿ ಪರಿಣಮಿಸಿದೆ. ಇದನ್ನು ಜನತೆಯ ಮನಸ್ಸಿನಿಂದ ಕಿತ್ತೊಗೆದು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು. ಮನುಷ್ಯನೇ ತನ್ನ ವಿಧಿಯ ಯಜಮಾನ ಮತ್ತು ಭವಿಷ್ಯದ ರೋವಾರಿ ಎಂಬ ಅಂಶವನ್ನು ಜನತೆಗೆ ತಿಳಿಯಹೇಳಬೇಕು. ಬೇರು ಬಿಟ್ಟಿರುವ ವಿಧಿವಾದೀ ಧಾರ್ಮಿಕ ಅಭಿಪ್ರಾಯಗಳು, ಅವೈಚಾರಿಕ ಅಂಧಶ್ರದ್ಧೆಯ ಆಚರಣೆಗಳು ಮತ್ತು ಪೂರ್ತಿ ಅವೈಜ್ಞಾನಿಕವಾಗಿರುವ ಜ್ಯೋತಿಷ್ಯದಲ್ಲಿನ ನಂಬಿಕೆ- ಇವೆಲ್ಲದರ ಹಿಡಿತ ನಮ್ಮ ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿನ ಆಮೂಲಾಗ್ರ ಕ್ರಾಂತಿಕಾರಿ ಬದಲಾವಣೆಗಳಿಗೆ ಅಡ್ಡ ಬಂದಿದೆ.

ಅಪ್ರಿಯವಾದ ಉದ್ಧೇಶಗಳಿಗಾಗಿ ಹೋರಾಡಲು ಮತ್ತು ಪ್ರವಾಹದ ವಿರುದ್ಧ ಈಜಲು ಯತ್ನಿಸಿದ್ದೇನೆ. ಆರ್ಥಿಕ ಬದಲಾವಣೆಯುಂಟುಮಾಡುವುದು, ಅನಾದಿ ಕಾಲದಿಂದ ಬಂದ ಸಾಂಪ್ರದಾಯಿಕ ಆಚರೆಣಗಳು ಮತ್ತು ಆಳಬೇರು ಬಿಟ್ಟ ಮೂಢನಂಬಿಕೆಗಳ ವಿರುದ್ಧ ಹೋರಾಡುವುದಕ್ಕಿಂತ ಹೆಚ್ಚು ಅಪ್ರಿಯವಲ್ಲ.

ನಾನು ನಾಸ್ತಿಕನಾದರೂ ಅಂಧ ಮೂರ್ತಿಭಂಜಕನಲ್ಲ. ಮಾನವ ಕೇಂದ್ರಿತ ಧರ್ಮದಲ್ಲಿ ನನಗೆ ನಂಬಿಕೆ. ಧರ್ಮ ಆಚರಣಾವಾದಿಯಾಗಬಾರದು, ನೀತಿವಾದಿ ಆಗಿರಬೇಕು. ಮಾನವೀಯ ಮೌಲ್ಯಗಳಲ್ಲಿ ನಂಬಿಕೆಯಿರುವ ಸ್ವಾರ್ಥರಹಿತ ಪ್ರಾಮಾಣಿಕನಾದ ಆಸ್ತಿಕನನ್ನು- ಅಮಾನವೀಯ, ಅಪ್ರಾಮಾಣಿಕ, ಆತ್ಮ ಕೇಂದ್ರಿತ ವಿಚಾರವಾದಿ ಅಥವಾ ನಾಸ್ತಿಕನಗಿಂಥ ಉತ್ತಮನೆಂದು ಪರಿಗಣಿಸುತ್ತೇನೆ. ದೇವರಲ್ಲಿ ನಂಬಿಕೆ ವಿನಾಶಕಾರಿಯಲ್ಲ. ದೇವರು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಪ್ರವೇಶಿಸುತ್ತಾನೆಯೇ ಎಂಬುದು ನಿರ್ಣಾಯಕ ಅಂಶ.

ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನದಲ್ಲಿ ನನಗೆ ದೃಢವಾದ ನಂಬಿಕೆ. ಸಮಾಜವನ್ನು- ಮುಖ್ಯವಾಗಿ ಧರ್ಮವನ್ನು ಪರಿಷ್ಕರಿಸಲು, ರೂಪಾಂತರಿಸಲು ವೈಜ್ಞಾನಿಕ ವಿಧಾನ ಅತ್ಯಂತ ಪ್ರಬಲ ಸಾಧನ ಎಂದು ನನಗನಿಸುತ್ತದೆ. ವಿಜ್ಞಾನದ ವಿದ್ಯಾರ್ಥಿಯಾಗಿ ಅದರ ಇತಿಮಿತಿಗಳು ನನಗೆ ಗೊತ್ತು. ಭಯ ಹಾಗೂ ಸ್ಫೂರ್ತಿಯನ್ನು ತುಂಬುವ ವಿಶ್ವದ ಅಗಾಧತೆ, ಅದರ ಸೂಕ್ಷ್ಮಗಳ ನಿಗೂಢತೆಯೂ ನನಗೆ ತಿಳಿದಿದೆ.

ಏಕಕೋಶ ಜೀವಿ ಅಮೀಬಾದಿಂದ ಮೊದಲ್ಗೊಂಡು ಮಾನವನ ವಿಕಾಸ ದಿಙ್ಮೂಢಗೊಳಿಸುವಂತದ್ದು ಮತ್ತು ವಿಸ್ಮಯಕಾರಿ. ಹಿಮ್ಮರಳಿ ನೋಡಿದಾಗ ನನ್ನ ಜೀವನ ನನ್ನನ್ನೇ ದಿಗ್ಭ್ರಮೆಗೊಳಿಸುತ್ತದಾದರೂ ಈ ಎಲ್ಲ ವಿವಾದಗಳ, ನಿಗೂಢಗಳ, ಒಗುಟಗಳ ನಡುವೆಯೂ ಸಮಸ್ಯೆಯನ್ನು ವೈಚಾರಿಕ ದೃಷ್ಟಿಕೋನದಿಂದ ಗಮನಿಸುವುದರಲ್ಲಿ ನನ್ನ ಕಾಲುಗಳು ದೃಢವಾಗಿ ಬೇರೂರಿವೆ. ವೈಜ್ಞಾನಿಕ ಮನೋಭಾವ ಮತ್ತು ಮಾನವೀಯತೆಯನ್ನು ಶಿಕ್ಷಣದ ಅವಿಭಾಜ್ಯ ಅಂಗವನ್ನಾಗಿ ಮಾಡುವುದೇ ಕಾಲಾನುಕಾಲದಿಂದ ನಮ್ಮ ಸಮಾಜವನ್ನು ಕಾಡುತ್ತಿರುವ ಅನೇಕ ಕೆಡುಕುಗಳಿಗೆ ಪರಿಹಾರ ಎಂಬುದು ನನ್ನ ಬಲವಾದ ಅಭಿಪ್ರಾಯ.

ಸರಣಿ ೮ - ಡಾ. ಎಚ್. ನರಸಿಂಹಯ್ಯ - ಕ್ವಿಟ್ ಇಂಡಿಯಾ ಚಳುವಳಿ



ಮೂವತ್ತಾರು ವರ್ಷಗಳ ಹಿಂದಿನ ನೆನಪು. ಆಗ ನಾನು ಭೌತಶಾಸ್ತ್ರದ ಬಿ. ಎಸ್‌ಸಿ. (ಆನರ್ಸ್) ಮೂರನೆಯ ತರಗತಿಯಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದೆ. ೧೯೪೨ನೆಯ ಇಸವಿ ಆಗಸ್ಚ್ ಮೊದನೆಯ ವಾರ, ತರಗತಿಯಲ್ಲಿ ಒಂದು ವಿಜ್ಞಾನದ ಪ್ರಯೋಗ ನಡೆಸುತ್ತಿದ್ದಾಗ ನನ್ನ ಸಹಪಾಠಿಗಳಾಗಿದ್ದ ಮತ್ತು ಈಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿರುವ ಶ್ರೀ ಕೆ. ಎನ್. ಶ್ರೀನಿವಾಸರಾವ್ ಅವರೊಂದಿಗೆ ಮಾತನಾಡುತ್ತಾ " ಇದೇ ನನ್ನ ಕೊನೆಯ ಪ್ರಯೋಗ. ಇನ್ನು ಎರಡು ದಿನಗಳಲ್ಲಿ ಆಗಸ್ಚ್ ೯ನೆ. ತಾರೀಖು ಮಹಾತ್ಮ ಗಾಂಧಿಯವರು ದೇಶದ ಸ್ವಾತಂತ್ರ್ಯಕ್ಕಾಗಿ `ಕ್ವಿಟ್ ಇಂಡಿಯಾ` ಚಳುವಳಿಯನ್ನು ಆರಂಭ ಮಾಡುತ್ತಾರೆ. ನಾನು ಆ ಚಳುವಳಿಯಲ್ಲಿ ಭಾಗವಹಿಸುತ್ತೇನೆ. ಕಾಲೇಜಿಗೆ ಬರುವುದಿಲ್ಲ." ಎಂದೆ. ಚಳುವಳಿಯು ಮೊದಲಾಗುವುದಕ್ಕೆ ಮುಂಚೆಯೇ ಬೊಂಬಾಯಿಯಲ್ಲಿ ಗಾಂಧೀಜಿ, ಪಂಡಿತ್ ಜವಹರ್‌ಲಾಲ್ ನೆಹ್ರೂ, ಸರ್ದಾರ್ ವಲ್ಲಭಾಯಿ ಪಟೇಲ್ ಮತ್ತು ದೇಶದ ಇತರ ಕಾಂಗ್ರೆಸ್ ನಾಯಕರನ್ನು ರಾತ್ರೋರಾತ್ರಿ ಹಠಾತ್ತನೆ ದಸ್ತಗಿರಿ ಮಾಡಿದರು. ದೇಶವೆಲ್ಲಾ ಅಲ್ಲೋಲ ಕಲ್ಲೋಲವಾಯಿತು. ಕೇಂದ್ರೀಕೃತ ಚಳುವಳಿಗೆ ಅವಕಾಶವೂ ಇಲ್ಲ, ನಾಯಕರೂ ಇಲ್ಲ. ಸ್ವಯಂ ಸ್ಪೂರ್ತಿಯಿಂದ ಹಳ್ಳಿ ಹಳ್ಳಿಯಲ್ಲಿಯೂ ಪ್ರತಿಭಟನೆ, ಅಂದೋಳನ ಮೊದಲಾಯಿತು. ಮೆರವಣಿಗೆ, ಸಭೆಗಳನ್ನು ನಡೆಸುವುದು, ಪ್ರತಿಬಂಧಕಾಜ್ಞೆಯನ್ನು ಮುರಿಯುವುದು, ಲಾಠಿ ಏಟು ತಿನ್ನುವುದು, ಜೈಲಿಗೆ ಹೋಗುವುದು ಇವು ಸ್ವಾತಂತ್ರ್ಯ ಪ್ರೇಮಿಗಳ ದಿನಚರಿ. ದೇಶದ ಎಲ್ಲ ಕಡೆಯಲ್ಲೂ ವಿಶೇಷ ಉತ್ಸಾಹದಿಂದ ಆತ್ಮ ವಿಶ್ವಾಸದಿಂದ ಮುಂದುವರಿಯಿತು.

ಅಹಮ್ಮದಾಬಾದ್ ನಗರದಲ್ಲಿ, ನನಗೆ ಜ್ಞಾಪಕವಿದ್ದ ಹಾಗೆ ಸುಮಾರು ಐದು ತಿಂಗಳು ಪ್ರತಿನಿತ್ಯವೂ ಗೋಳಿಬಾರ್ ನಡೆಯಿತು. ಜನರ ಅದಮ್ಯ ಉಗ್ರ ಪ್ರತಿಭಟನೆಗೆ ಇದು ಸಾಕ್ಷಿ. ಆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿಗಳ ಪಾತ್ರವಂತೂ ತುಂಬಾ ಶ್ಲಾಘನೀಯವಾದದ್ದು, ಮಹತ್ತರವಾದದ್ದು. ಆಗಿನ ಕೇಲವೇ ಆಂದೋಳನಗಳ ಕಾಲ, ಸದಾ ಸರ್ಕಾರಕ್ಕೂ ಸ್ವಾತಂತ್ರ್ಯ ಪ್ರೇಮಿಗಳಿಗೂ ಒಂದಲ್ಲ ಒಂದು ಕಾರಣದಿಂದ ಘರ್ಷಣೆ. ಗಾಂಧೀಜಿ ಮತ್ತು ಉಳಿದ ಅಪ್ರತಿಮ ನಾಯಕರುಗಳ ಹೇಳಿಕೆಗಳು ಮತ್ತು ಭಾಷಣಗಳನ್ನು ಪ್ರತಿ ನಿತ್ಯ ತುಂಬಾ ಆಸಕ್ತಿಯಿಂದ ಓದಿ ವಿದ್ಯಾರ್ಥಿಗಳು ಸ್ಫೂರ್ತಿಗೊಂಡಿದ್ದರು. ಧೀಮಂತವಾಗಿ ಹೋರಾಟ ನಡೆಸಿ ಇಂಗ್ಲೀಷರನ್ನು ಓಡಿಸಬೇಕೆಂಬ ಮಹೋನ್ನತ ಧ್ಯೇಯ.

ಗಾಂಧೀಜಿಯವರ ರಾಷ್ಟ್ರೀಯ ಪ್ರಜ್ಞೆಯಲ್ಲಿ ಮೊದಲನೆಯ ಪಾಠ ನನಗೆ ದೊರೆತಿದ್ದು ನಾನು ಮಿಡಲ್ ಸ್ಕೂಲಿನಲ್ಲಿ ಓದುತ್ತಿದ್ದಾಗ, ನನ್ನ ವಿದ್ಯಾಗುರುಗಳಾದ ದಿವಂಗತ ಶ್ರೀ ಎಸ್.ವೆಂಕಟಾಚಲಯ್ಯನವರು ಮತ್ತು ಶ್ರೀ ಎಂ. ಎಸ್ ನಾರಾಯಾಣ ರಾಯರಿಂದ. ಆಗಲೇ ನನಗೆ ಚರಕದಿಂದ ನೂಲುವುದು, ಖಾದಿ ಹಾಕಿಕೊಳ್ಳುವುದು ಮತ್ತು ಹಿಂದಿ ಕಲಿಯುವ ಅಭ್ಯಾಸಗಳು ಬೆಳೆದವು. ಈ ನನ್ನ ಖಾದೀ ಷರಟು, ಪಂಚೆ, ಟೋಪಿ ಉಡುಪು ಯಾವ ರಾಜಕೀಯ ಸಿದ್ಧಾಂತದ ಚಿಹ್ನೆಯೂ ಅಲ್ಲ. ಇದಕ್ಕೆ ಮುಂಚೆ ಹಲವು ಚಳುವಳಿಗಳನ್ನು ನಡೆಸಿ ಕೊನಗೆ ರೋಸಿ ಹೋಗಿ ಇದೇ ಕೊನೆಯ ಅಂದೋಳನ, ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ, `ಕ್ವಿಟ್ ಇಂಡಿಯಾ` ಎಂದು ನೈತಿಕ ಆಧಾರದ ಮೇಲೆ ಬ್ರಿಟಿಷರಿಗೆ ಆಜ್ಞೆ ಮಾಡಿದರು. ಇದನ್ನು ಕಾರ್ಯಗತ ಮಾಡುವ ಉದ್ದೇಶದಿಂದ ಭಾರತೀಯರಿಗೆ `ಮಾಡು ಅಥವಾ ಮಡಿ`- ಡು ಆರ್ ಡೈ ಎಂಬ ಆದೇಶವನ್ನು ಕೊಟ್ಟರು.

ಮೈಸೂರು ಸಂಸ್ಥಾನದಲ್ಲಿ ಚಳುವಳಿ ಬಿರುಸಿನಿಂದ ಸಾಗಿತು. ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟವು.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಮಾರ್ಕೆಟ್‌ನ ತನಕ ಸುಮಾರು ಒಂದು ಮೈಲಿ ಉದ್ದದ, ವಿದ್ಯಾರ್ಥಿಗಳ ಬೃಹತ್ ಮೆರವಣಿಗೆಗಳು; ಸಭೆಗಳು ಅದೇ ಪ್ರಮಾಣದಲ್ಲಿ. ಪ್ರತಿಬಂಧಕಾಜ್ಞೆ ಉಲ್ಲಂಘಿಸಿದಾಗ ನಗರದ ಮುನಿಸಿಪಲ್ ಗಡಿಯಿಂದ ಆಚೆಗೆ ಇದ್ದ ಬನಶಂಕರಿ ಪ್ರದೇಶದಲ್ಲಿ ಸಭೆ, ಭಾಷಣಗಳು.

ಆಗಸ್ಟ್ ಮೂರನೆಯ ವಾರ, ವಿಶ್ವೇಶ್ವರ ಪುರದ ಸಜ್ಜನರಾವ್ ಸರ್ಕಲ್‌ನಲ್ಲಿ ಒಂದು ದಿನ ಸಭೆ ನಡೆಸಬೇಕೆಂಬ ಪ್ರಯತ್ನದಲ್ಲಿ, ಹಲವಾರು ವಿದ್ಯಾರ್ಥಿಗಳು ಮನೆಗೆ ಸೈಕಲ್ ಮೇಲೆ ಹೋಗಿ ಬೆಳಿಗ್ಗೆ ಎಂಟು ಘಂಟೆಯ ಹೊತ್ತಿಗೆ ಆ ಸರ್ಕಲ್ ಬಳಿ ಬಂದೆ. ಒಂದು ಪೋಲೀಸ್ ವ್ಯಾನ್ ಭರದಿಂದ ಬಂದು ನನ್ನ ಸೈಕಲ್‌ಗೆ ಅಡ್ಡಲಾಗಿ ನಿಂತಿತು. ಪೋಲಿಸ್ ಅಧಿಕಾರಿ ಮತ್ತು ಕೆಲವು ಕಾನ್‌ಸ್ಟೇಬಲ್‌ಗಳು ವ್ಯಾನಿನಿಂದ ಇಳಿದರು. ಅಧಿಕಾರಿ `ನಿನಗೆ ಮಾಡೋಕೆ ಕೆಲಸ ಇಲ್ವೆ? ವಿದ್ಯಾರ್ಥಿಯಾಗಿದ್ದೀಯ, ಕಾಲೇಜಿಕೆ ಹೋಗಿ ಓದಿಕೋ. ರಾಮಕೃಷ್ಣ ಸ್ಟೂಡೆಂಟ್ ಹೋಂನಲ್ಲಿ ಬಿಟ್ಟಿ ಊಟ ಮಾಡ್ತಾ ಇದೇ ಕೆಲಸಾನೆ ಮಾಡೋದು. ಹುಷಾರ್` ಎಂದು ಎಚ್ಚರಿಕೆ ಕೊಟ್ಟರು. ಅದಕ್ಕೆ ನಾನು `ನಿಮ್ಮ ಕೆಲಸ ನೀವು ಮಾಡಿ ಸಾರ್, ನನ್ನ ಕೆಲಸ ನಾನು ಮಾಡ್ತೇನೆ ` ಎಂದೆ.

ಅವರಿಗೆ ಸಹಜವಾಗಿಯೇ ಕೋಪಬಂತು. `ನನ್ನ ಕೆಲಸ ಮಾಡಬೇಕೆಂದು ಬುದ್ಧಿ ಹೇಳ್ತೀಯಾ, ಮಾಡ್ತೇನೆ ನೋಡು. ನಿನ್ನನ್ನು ದಸ್ತಗಿರಿ ಮಾಡಿದ್ದೇನೆ. ವ್ಯಾನ್ ಹತ್ತು` ಎಂದರು. ಸೈಕಲ್ ಅನ್ನು ಅಲ್ಲಿ ನೆರದಿದ್ದವರ ಪೈಕಿ ಪರಿಚಯವಿರುವ ಒಬ್ಬ ಸ್ನೇಹಿತನಿಗೆ ಕೊಟ್ಟು, ಶ್ರೀ ರಾಮಕೃಷ್ಣ ಸ್ಟೂಡೆಂಟ್ ಹೋಂಗೆ ತಲುಪಿಸುವಂತೆ ಕೋರಿ ವ್ಯಾನಿನಲ್ಲಿ ಕೆಂಗೇರಿ ಗೇಟ್ ಪೋಲಿಸ್ ಠಾಣೆಗೆ ಬಂದೆ. ಅಲ್ಲಿದ್ದ ಉನ್ನತ ಪೋಲೀಸ್ ಅಧಿಕಾರಗಳು `ಕ್ಷಮಾಪಣೆ ಪತ್ರ ಕೊಡಿ, ಬಿಟ್ಟು ಬಿಡುತ್ತೇವೆ` ಎಂದು ಸೂಚಿಸಿದರು. ಅದನ್ನು ನಾನು ನಿರಾಕರಿಸಿದ ಮೇಲೆ ಅದೇ ವ್ಯಾನಿನಲ್ಲಿ ಸೆಂಟ್ರಲ್ ಜೈಲಿಗೆ ಕಳುಹಿಸಿದರು.

ಜೈಲಿನಲ್ಲಿ ಮೊಟ್ಟಮೊದಲು ನನ್ನನ್ನು ನಮ್ಮ ಗೌರಿಬಿದನೂರು ತಾಲ್ಲೂಕಿನ ಮುಖಂಡರಾದ ದಿವಂಗತ ಶ್ರೀ ಎನ್.ಸಿ. ನಾಗಯ್ಯರೆಡ್ಡಿಯವರು `ಏಮಯ್ಯ ಒಗಡೆ ವಸ್ತಿವಿ, ಉಪ್ಪಿಂಡಿ ತಿನ್ದಾಮು ರಾ` (ಏನಯ್ಯ ಒಬ್ಬನೇ ಬಂದೆ, ಉಪ್ಪಿಟ್ಟು ತಿನ್ನೋಣ, ಬಾ) ಎಂದು ಮುಗುಳುನಗೆಯಿಂದ ಸ್ವಾಗತಿಸಿದರು. ಸೆಂಟ್ರಲ್ ಜೈಲು ಕಾಂಗ್ರೆಸ್ ನಾಯಕರಿಂದ ಮತ್ತು ಕೆಲ ವಿದ್ಯಾರ್ಥಿಗಳಿಂದ ತುಂಬಿ ಹೋಗಿತ್ತು. ವಿದ್ಯಾರ್ಥಿಗಳನ್ನು ಕಾಂಗ್ರೆಸ್‌ನವರೊಂದಿಗಿಟ್ಟರೆ ವಿದ್ಯಾರ್ಥಿಗಳ ಅಭಿಪ್ರಾಯಗಳು ರಾಜಕೀಯ ವಿಚಾರಗಳಲ್ಲಿ ಖಚಿತವಾಗಬಹುದೆಂಬ ಶಂಕೆಯಿಂದ ಅಲ್ಲಿದ್ದ ಸುಮಾರು ೩೫ ಮಂದಿ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಸುಮಾರು ೨೦ ಮೈಲಿ ದೂರವಿರುವ ಅತ್ತಿಬೆಲೆ ಛತ್ರದಲ್ಲಿ ಕೂಡಿಹಾಕಿದರು. ಕನಿಷ್ಟ ಸೌಲಭ್ಯಗಳ ಅಭಾವದ ಪ್ರತಿಭಟಿಸಿ ಒಂದೆರಡು ದಿನ ಉಪವಾಸ ಮಾಡಿದ ಮೇಲೆ ಪುನಃ ಬೆಂಗಳೂರು ಸೆಂಟ್ರಲ್ ಜೈಲಿಗೆ ವರ್ಗಾಯಿಸಿ, ಅದಾದ ಮೂರನೆಯ ದಿನ ಸುಮಾರು ಇನ್ನೂರು ವಿದ್ಯಾರ್ಥಿಗಳನ್ನು ವ್ಯಾನುಗಳಲ್ಲಿ ಮೈಸೂರು ಜೈಲಿಗೆ ರವಾನಿಸಿದರು.

ಮೈಸೂರು ಜೈಲಿನಲ್ಲಿ ಯಾವ ರಾಜಕೀಯ ಖೈದಿಗಳೂ ಇರಲಿಲ್ಲ, ಸುಮಾರು ೩೦೦ ಮಂದಿ ವಿದ್ಯಾರ್ಥಿ ಬಂದಿಗಳು. ನಾವೆಲ್ಲಾ ವ್ಯವಸ್ಥಿತ ನಿತ್ಯ ಕಾರ್ಯಕ್ರಮಗಳಲ್ಲಿ ತೊಡಗಿದ್ದೆವು. ಪ್ರತಿಭಟನೆ, ಸಭೆ, ಚರ್ಚೆ, ಸ್ವಾತಂತ್ರ್ಯಗೀತೆಗಳ ಸಾಮೂಹಿಕ ಗಾಯನ, ಪುಸ್ತಕಗಳನ್ನು ಓದಿಕೊಳ್ಳುವುದು, ಸಂಜೆ ಖೋ ಖೋ, ಕಬ್ಬಡಿ ಆಟ, ಊಟ. ಉಪಹಾರ ಸಮರ್ಪಕವಾಗಿದ್ದವು. ಪ್ರಸಿದ್ಧ ಹೋಟೆಲ್ ಉದ್ಯಮಿಗಳಾಗಿದ್ದ ದಿವಂಗತ ಶ್ರೀ ಬಿ. ವಿ. ರಾಮಯ್ಯನವರಿಗೆ ಆ ಕೆಲಸ ವಹಿಸಲಾಗಿದ್ದಿತು. ೨೦ ಮಂದಿಗೆ ವಾಸಕ್ಕೆ ಆಗುವಷ್ಟು ವಿಶಾಲವಾದ ಕೊಠಡಿ. ಮಲಗಲು ಅನುಕೂಲಕ್ಕಾಗಿ ಒಬ್ಬೊಬ್ಬರಿಗೆ ಒಂದಡಿ ಎತ್ತರದ ಆಯಾಕಾರದ ದಿನ್ನೆ, ತಣ್ಣೀರು ಸ್ನಾನ, ಜೈಲಿನಲ್ಲಿಯೇ ಆಯಷ್ಕರ್ಮ. ಶಾಲೆವಿದ್ಯಾರ್ಥಿಗಳು ಎಂದು ಸರ್ಕಾರ ಮತ್ತು ಜೈಲಿನ ಅಧಿಕಾರಿಗಳು ಸಾಮಾನ್ಯವಾಗಿ ಉದಾರ ಮನೋಭಾವದಿಂದಲೇ ನಮ್ಮಗಳ ಯೋಗಕ್ಷೇಮಗಳ ಕಡೆ ಗಮನಕೊಟ್ಟಿದ್ದರು. ಏನೇ ಆಗಲಿ, ಜೈಲು, ಜೈಲೆ.

ಜೈಲಿನ ಅಧಿಕಾರಗಳಿಗೂ ವಿದ್ಯಾರ್ಥಿಗಳಿಗೂ ಪದೇ ಪದೆ ಕಿರಿಕಿರಿ ಉಂಟುಮಾಡುವ ಸಮಸ್ಯೆಗಳಿರುತ್ತಲೇ ಇದ್ದವು. ಒಂದು ಗುಂಪಿನ ವಿದ್ಯಾರ್ಥಿಗಳಿಗೆ ಕೆಲವು ಅನುಕೂಲಗಳಿರಲಿಲ್ಲ. ಒಂದು ದಿನ ತಮ್ಮ ಮೇಲೆ ಹಾಕಿದ್ದ ಮೊಕದ್ದಮೆಯ ವಿಚಾರಣೆಗಾಗಿ ಮೈಸೂರಿನಲ್ಲಿರುವ ಕೋರ್ಟಿಗೆ ಹೋಗಿ, ಸಂಜೆ ಜೈಲಿನ ಮಹಾದ್ವಾರಕ್ಕೆ ವಾಪಾಸು ಬಂದರು. ಆ ವಿದ್ಯಾರ್ಥಿಗಳಿಗೂ ಮತ್ತು ಅವರನ್ನು ಕರೆದುಕೊಂಡು ಹೋಗಿದ್ದ ಮೇಲ್ವಿಚಾರಕರಿಗೂ ಒಂದೆರಡು ವಿಷಯಗಳ ಬಗ್ಗೆ ವಿರಸ ಉಂಟಾಗಿತ್ತು. ಇವೆಲ್ಲಾ ಕೂಡಿ ಅಸಮಾಧಾನ ಹೆಚ್ಚಿತು. ತಮ್ಮ ಬೇಡಿಕೆಗಳು ಇತ್ಯರ್ಥವಾಗುವ ತನಕ ತಾವು ಜೈಲಿನೊಳಕ್ಕೆ ಬರುವುದಿಲ್ಲವೆಂದು ಪ್ರತಿಭಟಿಸಿ, ಮಹಾದ್ವಾರದ ಮುಂದೆ ವ್ಯಾನಿನಲ್ಲಿಯೇ ಕುಳಿತಿದ್ದರು. ಸಮಾಜಾರ ನಮಗೆ ಗೊತ್ತಾದ ಮೇಲೆ ನಮ್ಮ ಸ್ನೇಹಿತರಿಗೆ ಸಹಾನುಭೂತಿಯನ್ನು ತೋರಿಸುವ ಪ್ರಯುಕ್ತ ನಾವೆಲ್ಲಾ ಮಹಾದ್ವಾರದ ಕೆಳಭಾಗದಲ್ಲಿ ಕುಳಿತುಕೊಂಡೆವು.

ನಭೋಮಂಡಲವನ್ನು ಭೇದಿಸುವಂತೆ ಘೋಷಣೆಗಳ ಝೇಂಕಾರ, ದೇಶಭಕ್ತಿ ಗೀತೆಗಳ ವೃಂದಗಾನ, ನಮ್ಮಿಂದ ಆಚೆ ನಮ್ಮ ಒಡನಾಡಿಗಳ ಪ್ರತಿಧ್ವನಿ. ಮೌನವೀಕ್ಷಕರು ಜೈಲಿನ ಅಧಿಕಾರಿಗಳು, ಸಿಬ್ಬಂದಿ. ಸಂಜೆ ಮುಗಿಯಿತು, ಕಾಲ ಸಾಗಿತು. ರಾತ್ರಿಯಾಯಿತು. ಬೇಡಿಕೆಗಳಿಗೆ ಜೈಲಿನ ಅಧಿಕಾರಿಗಳು ಜಗ್ಗಲಿಲ್ಲ, ನಾವೂ ಜಗ್ಗಲಿಲ್ಲ. ಹನ್ನೊಂದು ಗಂಟೆಯ ಹೊತ್ತಿಗೆ ಸುಮಾರು ೧೦೦ ಮಂದಿ ಪೋಲೀಸರು ಪ್ರವೇಶಿಸಿ, ನಮ್ಮ ಮುಂದೆ ಸಾಲಾಗಿನಿಂತರು. ನಡುರಾತ್ರಿ ಸಮೀಪಿಸಿತು. ಬಿಕ್ಕಟ್ಟು ಬಗೆಹರಿಯಲಿಲ್ಲ. ಕಾಲಮಿಂಚಿದಂತೆ ಕಾವು ಮತ್ತು ಹುಮ್ಮಸ್ಸು ಹೆಚ್ಚಾದರೂ ಸುಸ್ತಿನಿಂದ ಮುಖಗಳು ಬಾಡಿದುವು. ಅಧಿಕಾರಿಗಳ ಬಿಗಿ ಮನೋಭಾವ ಅವರ ಮುಖದಲ್ಲೇ ಎದ್ದು ಕಾಣುತ್ತಿತ್ತು. ಪೋಲಿಸರದು ಗಡಸುಮುಖ.

ಪರಿಸ್ಥಿತಿ ಬದಲಾಯಿಸಿತು; ಬಿಗಡಾಯಿಸಿತು. ಆಚೆ ಇದ್ದ ವಿದ್ಯಾರ್ಥಿ ಸ್ನೇಹಿತರನ್ನು ಒಬ್ಬೊಬ್ಬರಾನ್ನಾಗಿ ಜೈಲಿನ ಕಿರುದ್ವಾರದ ಮೂಲಕ ಒಳಕ್ಕೆ ತಳ್ಳಿದರು. ಹಠಾತ್ತನೆ `ಚಾರ್ಜ` ಎಂಬ ಶಬ್ದ ಕೇಳಿಸಿತು. ಆ ಪೋಲೀಸಿನವರು ಅಸಹಾಯಕ ವಿದ್ಯಾರ್ಥಿಗಳ ಮೇಲೆ ಬಲವಾದ ಲಾಠಿ ಪ್ರಹಾರ ಮಾಡಿದರು. ನಾವೆಲ್ಲಾ ಕುಯ್ಯೋ ಮರ್ರೋ ಅಂತ ಆರ್ತನಾದ ಮಾಡಿಕೊಂಡು ದಿಕ್ಕು ಪಾಲಾಗಿ ಓಡಿ, ಬೆನ್ನು ಹತ್ತಿ ಬರುತ್ತಿರುವ ಪೋಲೀಸಿನವರ ಏಟುಗಳಿಂದ ಅಷ್ಟಷ್ಟು ತಪ್ಪಿಸಿಕೊಂಡು ಬದುಕಿದೆಯಾ ಬಡಜೀವವೇ ಎಂದು ಯಾವ ಕೊಠಡಿ ತೆಗೆದಿದ್ದರೆ ಆ ಕೊಠಡಿಗೆ ಓಡುತ್ತಾ ಬೆದರುತ್ತಾ ಬಾಗಿಲು ಮುಚ್ಚಿ ಬಲವಾಗಿ ಅಗಳಿ ಹಾಕಿಕೊಂಡೆವು. ಎಲ್ಲವೂ ಮಿಂಚಿನ ವೇಗದಲ್ಲಿ ನಡೆದು ಹೋಯಿತು. ನೇರವಾಗಿ ಏಟಿಗೆ ಸಿಕ್ಕದವರಿಗೆಯೇ ತುಂಬಾ ಹೊಡೆತ, ಗಾಯಗಳು. ಕೆಲವರಿಗೆ ತಲೆ ಒಡೆಯಿತು, ಮತ್ತೆ ಕೆಲವರಿಗೆ ಮೂಳೆ ಮುರಿಯಿತು. ಬಾಸುಂಡೆಗಳು ಬಂದವು. ಶಕರಂಪ್ಪ ಎಂಬ ವಿದ್ಯಾರ್ಥಿ ಮೂರು ದಿನಗಳಾದ ಮೇಲೆ ಸತ್ತೇ ಹೋದನು.

ಆ ನಿಶಿ ರಾತ್ರಿ ಭೀಕರ ಲಾಠಿ ಪ್ರಹಾರವಾದ ಬಳಿಕ ಹಲವು ವಿದ್ಯಾರ್ಥಿಗಳು ಧೃತಿಗೆಟ್ಟರು. ತಾಯಿ ತಂದೆಗಳಿಗೆ ವಿಪರೀತ ಕಾತರ, ಕಳವಳ ಅವರ ಮುಚ್ಚಳಿಕೆ, ಮತ್ತು ವಿದ್ಯಾರ್ಥಿಗಳ ಕ್ಷಮಾಪಣೆಯ ಆಧಾರದ ಮೇಲೆ ಹಲವು ವಿದ್ಯಾರ್ಥಿಗಳು ಬಿಡುಗಡೆ ಪಡೆದುಕೊಂಡರು.

ಆ ಘಟನೆಯಾದ ಕೆಲವು ದಿನಗಳ ಮೇಲೆ ನಮ್ಮಲ್ಲಿ ಹಲವರನ್ನು ಈಗ ಮಾನಸ ಗಂಗೋತ್ರಿಯ ಸಮೀಪದಲ್ಲಿರುವ ಒಂದು ಖಾಸಗಿ ಕಟ್ಟಡಕ್ಕೆ ಸಾಗಿಸಿದರು. ಡಿಸೆಂಬರ್ ತಿಂಗಳಲ್ಲಿ ಪಕ್ಷಾತೀತ ಮುಖಂಡರುಗಳ ಸಂಧಾನದಿಂದ ಎಲ್ಲಾ ವಿದ್ಯಾರ್ಥಿಗಳ ಬೇಷರತ್ ಬಿಡುಗಡೆಯಾಯಿತು.

ಚಳುವಳಿಯ ಉದ್ಧೇಶ ಸಾಧನೆಯಾಗದಿದ್ದ ಪ್ರಯುಕ್ತ ನಾನು ಕಾಲೇಜಿಗೆ ಹೋಗಲಿಲ್ಲ. ಬಹುಮಂದಿ ಕಾಲೇಜಿಗೆ ಹೋಗಿ ತಮ್ಮ ವ್ಯಾಸಂಗವನ್ನು ಮುಂದುವರಿಸಿದರು. ಜೈಲಿನಿಂದ ಬಂದ ಮೇಲೆ ನಾನು ನ್ಯಾಷನಲ್ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ಆಶ್ರಯ ಕೊಟ್ಟಿದ್ದ ನ್ಯಾಷನಲ್ ಹೈಸ್ಕೂಲಿನ ಅಂಗವಾದ ಬಡ ಹುಡುಗರ ವಿದ್ಯಾರ್ಥಿನಿಲಯದಲ್ಲಿಯೇ ಇರಲು ಅವಕಾಶ ಸಿಕ್ಕಿತು. ಅದರ ಮೇಲ್ವಿಚಾರಣೆಯಲ್ಲಿ ಸಹಾಯಕನಾಗಿ, ಊಟ, ವಸತಿಗಳ ಖರ್ಚಿಗಾಗಿ ನಾಲ್ಕೈದು ಪೆವೇಟ್ ಟ್ಯೂಷನ್ ಇಟ್ಟುಕೊಂಡಿದ್ದೆ.

ಗಾಂಧೀಜಿಯವರನ್ನು ದಸ್ತಗಿರಿ ಮಾಡಿದ ಮೇಲೆ ಶ್ರೀಮತಿ ಕಸ್ತೂರ್‌ಬಾ ಗಾಂಧಿ ಮತ್ತು ಗಾಂಧೀಜಿಯವರ ಕಾರ್ಯದರ್ಶಿ ಶ್ರೀ ಮಹದೇವ ದೇಸಾಯಿಯವರೊಂದಿಗೆ ಪೂನಾದಲ್ಲಿ ಆಗಾಖಾನ್ ಅರಮನೆಯಲ್ಲಿಟ್ಟದ್ದರು. ಗಾಂಧೀಜಿಯವರಿಗೆ ಅರಮನೆ, ಗುಡಿಸಲು ಎಲ್ಲಾ ಒಂದೆ. ೧೯೪೩ ನೇ ಇಸವಿ ಫ್ರೆಬ್ರವರಿ ೧೦ನೆಯ ತಾರೀಖು ಗಾಂಧಿಯವರು ೨೧ ದಿನಗಳ ಉಪವಾಸವನ್ನು ಮೊದಲು ಮಾಡಿದರು. ಅವರ ಉಪವಾಸಕ್ಕೆ ಸಹಾನುಭೂತಿ ತೋರಿಸುವ ಮತ್ತು ಸರ್ಕಾರದ ಧೋರಣೆಯನ್ನು ಪ್ರತಿಭಟಿಸುವ ಉದ್ಧೇಶದಿಂದ ದೇಶದ ಮೂಲೆ ಮೂಲೆಗಳಿಂದ ಹಲವಾರು ತಂಡಗಳು ಪೂನಾಕ್ಕೆ ಹೋಗಿ ಪ್ರದರ್ಶನಗಳನ್ನು ನಡೆಸುವ ಪ್ರಯತ್ನಗಳು ನಡೆದವು. ಸರ್ಕಾರ ಇವುಗಳನ್ನು ತಡೆಯುವದಕ್ಕಾಗಿ ಪ್ರತಿಬಂಧಕಾಜ್ಞೆಯನ್ನು ಜಾರಿಗೆ ತಂದಿತು. ಈ ಪ್ರತಿಬಂಧಕಾಜ್ಞೆಯನ್ನು ವ್ಯವಸ್ಥಿತಿವಾಗಿ ಮುರಿದ ಮೊದಲನೆಯ ತಂಡದ ನಾಯಕರು, ಆಗ ಬೊಂಬಾಯಿ ನಗರದ ಮೇಯರ್ ಮತ್ತು ಕಾಂಗ್ರೆಸ್ ಸೋಷಿಯಲಿಸ್ಟ್ ಪಾರ್ಟಿ ಮುಖಂಡರಾಗಿದ್ದ ಶ್ರೀ ಮೀನೂಮಸಾನಿಯವರು. ಬೆಂಗಳೂರಿನಿಂದ ಒಂದು ತಂಡ ಹೋಗಬೇಕೆಂಬ ಪ್ರಯತ್ನ ನಡೆಯಿತು. ನನ್ನ ಜೊತೆಗೆ ಇನ್ನೂ ಏಳು ಮಂದಿ ಸ್ನೇಹಿತರನ್ನು ಹುಡುಕಿದೆನು. ನಾವೆಂಟು ಮಂದಿ ಪೂನಾಕ್ಕೆ ಹೋಗಿ ಪ್ರತಿಬಂಧಕಾಜ್ಞೆಯನ್ನು ಮುರಿಯಬೇಕೆಂದು ನಿಶ್ಟಯಿಸಿದೆವು. ಭೂಗತ ನಾಯಕರ ಸಹಾದಿಂದ ಬೆಂಗಳೂರು-ಪೂನಾಕ್ಕೆ ರೈಲಿನಲ್ಲಿ ಹೋಗಿ ಬರುವಷ್ಟು ಹಣದ ಸಹಾಯ ಸಿಕ್ಕಿತು. ಒಂದು ದಿನ ಬೆಳಗ್ಗೆ ಬೆಂಗಳೂರಿನಿಂದ ರೈಲಿನಲ್ಲಿ ಹೊರಟು ಗುಂತಕಲ್ ಮಾರ್ಗವಾಗಿ ಮಾರನೆಯ ದಿನ ಸಂಜೆ ಪೂನಾಕ್ಕೆ ತಲುಪಿದೆವು. ಯಾವ ಕಡೆ ಹೋಗಬೇಕು ಎಂದು ತೋಚಲಿಲ್ಲ. ನಮ್ಮಲ್ಲಿ ಯಾರೂ ಪೂನಾ ನೋಡಿರಲಿಲ್ಲ. ವಿಚಾರಿಸಿಕೊಂಡು ಜನನಿಬಿಡವಾದ ಪ್ರದೇಶಕ್ಕೆ ಹೋದೆವು. ಪಾದಾಜಾರಿಗಳ ರಸ್ತೆಯಲ್ಲಿ ನಾವು ತಂದಿದ್ದ ಘೋಷಣೆಗಳನ್ನು ಬರೆದಿದ್ದ ಬಟ್ಟೆಯ ಬ್ಯಾನರ್ ಅನ್ನು ಹಿಡಿದುಕೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೆಲವು ಗಜ ದೂರ ಹೋಗುವಷ್ಟರಲ್ಲಿಯೇ ಒಂದು ಪೋಲೀಸ್ ವ್ಯಾನ್ ಧಾವಿಸಿಬಂದು ನಮ್ಮ ಬಳಿ ನಿಂತಿದ್ದೇ ತಡ, ಪೋಲೀಸ್ ಅಧಿಕಾರಿಗಳು, ಪೇದೆಗಳು ದಡದಡ ಇಳಿದು ನಮ್ಮನ್ನು ಸುತ್ತುಗಟ್ಟಿದರು. ಅಧಿಕಾರಿಗಳು ನಮ್ಮನ್ನು ಸುತ್ತುಗಟ್ಟಿದರು. ಅಧಿಕಾರಿಗಳು ನಿಮ್ಮನ್ನೆಲ್ಲಾ ದಸ್ತಗಿರಿ ಮಾಡಿದ್ದೇವೆ, ಹತ್ತಿ ವ್ಯಾನ್ ಎಂದು ಇಂಗ್ಲೀಷ್‌ನಲ್ಲಿ ಆಜ್ಞಾಪಿಸಿದರು. ತುಂಬಾ ಸಂತೋಷದಿಂದ, ಉತ್ಸಾಹದಿಂದ ವ್ಯಾನಿನಲ್ಲಿ ಪ್ರವೇಶಿಸಿ ಕುಳಿತುಕೊಂಡೆವು. ನಾವು ಬಂದ ಕೆಲಸವೆಲ್ಲಾ ಆಯಿತಲ್ಲಾ ಎನ್ನುವುದೇ ಸಮಾಧಾನ. ಪ್ರತಿಬಂಧಕಾಜ್ಞೆ ಮುರಿದದ್ದಾಯಿತು, ಸರ್ಕಾರದ ಆತಿಥ್ಯ ಸಿಕ್ಕಿತು. ದಸ್ತಗಿರಿ ಆಗದೇ ಇದ್ದರೆ ನಮಗೆ ಊಟ, ವಸತಿಗೆ ದೂರದ ಕಾಣದ ಊರಿನಲ್ಲಿ ತುಂಬಾ ಕಷ್ಟವಾಗುತ್ತಿತ್ತು.

ನಾವು ಕ್ಷಮಾಪಣೆ ಪತ್ರ ಕೊಟ್ಟರೆ ಬಿಡುಗಡೆ ಮಾಡುತ್ತೇವೆಂದು ಪೋಲೀಸ್ ಅಧಿಕಾರಿಗಳು ತಿಳಿಸಿದರು. ಸಹಜವಾಗಿಯೇ ನಾವು ಸಮ್ಮತಿಸಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಒಂದು ಬೃಹತ್ ಕಟ್ಟಡದ ಬಳಿ ಬಂದಿಳಿದೆವು. ಆ ಕಟ್ಟಡದ ಮೇಲೆ, ಯರವಾಡ ಸೆಂಟ್ರಲ್ ಜೈಲ್ ಎಂದು ಬರೆದಿದ್ದನ್ನು ನೋಡಿ ನನಗಂತೂ ತುಂಬಾ ಸಂತೋಷವಾಯಿತು.

ಯರವಾಡ ಜೈಲು ತುಂಬಾ ಪ್ರಸಿದ್ಧಿಯಾದ ಬಂದೀಖಾನೆ, ಇಡೀ ದೇಶದಲ್ಲಿಯೇ ಅತ್ಯಂತ ದೊಡ್ಡದಷ್ಟೇ ಅಲ್ಲ, ಮಹಾತ್ಮ ಗಾಂಧಿಯವರನ್ನು ಬಹು ಸಲ ಪೋಷಿಸಿದ ಕಾರಾಗೃಹ. ನಮ್ಮಲ್ಲಿದ್ದ ಹಣ ಮತ್ತು ಇತರೆ ಸಣ್ಣ ಪುಟ್ಟ ವಸ್ತುಗಳನ್ನು ಜೈಲಿನ ಕಛೇರಿಯಲ್ಲಿ ಅಧಿಕಾರಿಗಳು ವಶಪಡಿಸಿಕೊಂಡರು. ನಮಗೆ ವಸತಿಗೆ ಸುಮಾರು ೭೦ ಮಂದಿ ವಾಸ ಮಾಡುವಂತಹ ಕೊಠಡಿ. ಊಟಕ್ಕೆ, ಒಂದು ಕಬ್ಬಿಣದ, ರಂಧ್ರಗಳಿಲ್ಲದ ಜಲ್ಲಡಿಯಂತಹ ತಟ್ಟೆ, ನೀರು ಕುಡುಯುವದಕ್ಕೆ ಸ್ನಾನಕ್ಕೆ ಮ್ತತು ಉಳಿದ ಎಲ್ಲಾ ಕೆಲಸವನ್ನು ಮಾಡಲು ಉಪಯೋಗಿಸಬೇಕಾದ ಒಂದು ದೊಡ್ಡ ಕಬ್ಬಿಣದ ಲೋಟ. ಆ ಪಾತ್ರೆಗಳ ಕಿಲುಬು ಕೆಗೆಯುವುದೇ ನಮ್ಮ ನಿತ್ಯ ಕರ್ಮಗಳಲ್ಲೊಂದು. ಸಂಜೆ ಆರು ಘಂಟೆಯ ಹೊತ್ತಿಗೆ ಎಲ್ಲರನ್ನೂ ನಮ್ಮ ನಿವಾಸದೊಳಕ್ಕೆ ದೂಡಿ ಬೀಗ ಹಾಕುತ್ತಿದ್ದರು. ಬಾಗಿಲು ತೆರೆಯುವುದು ಮರುದಿನ ಬೆಳಗ್ಗೆ ಆರು ಘಂಟೆಗೆ. ಹೀಗೆ ದಿನದ ಅರ್ಧಭಾಗವನ್ನು ಜೈಲಿನಲ್ಲಿರುವ ಉಪ ಜೈಲಿನಲ್ಲಿ ಕಳೆಯುತ್ತಿದ್ದೆವು. ನಮ್ಮ ಮೇಲೆ ಉಸ್ತುವಾರಿಗೆ ದೀರ್ಘಅವಧಿ ಅಥವಾ ಕೊಲೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಗಳು. ಅವರ ಕೆಲಸ ಪ್ರತಿ ರಾತ್ರಿ ಮೂರು ನಾಲ್ಕು ಸಲ ನಮ್ಮನ್ನೆಲ್ಲಾ ಎಣಿಸಿ ಸಂಖ್ಯೆಯಲ್ಲಿ ಏನೂ ವ್ಯಾತ್ಯಾಸವಿಲ್ಲವೆಂದು ಖಚಿತ ಪಡಿಸಿ ಕೊಳ್ಳುವುದು. ಜೊತೆಗೆ ಯಾವುದಾದರೂ ಕಾರಣದಿಂದ ಪ್ರತಿಭಟನೆಯೋ ಅಥವಾ ಉಪವಾಸ ಸತ್ಯಾಗ್ರಹವೋ ಆಗುವ ಚಿಹ್ನೆಗಳಿದ್ದರೆ ಅದನ್ನು ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಹೆಸರನ್ನು ಮೇಲಾಧಿಕಾರಿಗಳಿಗೆ ತಿಳಿಸುವುದು ಅವರ ಕೆಲಸವಾಗಿದ್ದಿತ್ತು. ನಮ್ಮನ್ನೆಲ್ಲಾ ಕಂಡರೆ ಅವರಿಗೆ ಹಾಸ್ಯ. ಈ ಗಾಂಧಿ ಖೈದಿಗಳು ಈವತ್ತು ಬರ್ತಾರೆ, ನಾಳೆ ಹೋಗ್ತಾರೆ, ೧೦-೧೨ ವರ್ಷಗಳಿಂದ ಈ ಗಾಂಧಿ ಗಲಾಟೆ ನೋಡುತ್ತಲೇ ಇದ್ದೇವೆ ಎಂದು ಮೂದಲಿಸುತ್ತಿದ್ದರು, ಲೇವಡಿ ಮಾಡುತ್ತಿದ್ದರು.

ಯರವಾಡ ಜೈಲಿನ ಆಹಾರ ನಮಗಂತೂ ತೀರಾ ಹೊಸದು. ಬೆಳಿಗ್ಗೆ ಒಂದು ಅಳತೆ ಪಾವಿನಷ್ಟು ಗಂಜಿ, ಮಧ್ಯಾಹ್ನ, ಸಂಜೆ ಒಂದು ಜೋಳದ ರೊಟ್ಟಿ, (ಭಕ್ರಿ) ಈ ರೊಟ್ಟಿಯಲ್ಲಿ ಸಾಮಾನ್ಯವಾಗಿ ಜೋಳ ಮತ್ತು ಮಣ್ಣು ಸಮಸಮ. ಈ ರೊಟ್ಟಿಯ ಜೊತೆಗೆ ಹಚ್ಚಗೆ ಕಾಣುವಂಥ ಎಲ್ಲ ತರಹ ಸೊಪ್ಪುಗಳನ್ನು ಹಾಕಿ ಯಥಾಶಕ್ತಿ ಬೇಯಿಸಿದ ಹುಳಿ. ಅಂಬಲಿ ಕುಡಿಯುಷ್ಟು ಬಡತನದಲ್ಲಿಯೇ ಬೆಳಿದಿದ್ದರೂ ಅಭ್ಯಾಸವಿಲ್ಲದ ಆ ಗಂಜಿ ಕುಡಿಯಲು ಮನಸ್ಸು ಒಗ್ಗಲಿಲ್ಲ. ನನಗೆ ಆಗದಿದ್ದ ಮೇಲೆ ನನ್ನ ಸ್ನೇಹಿತರಿಗಂತೂ ಅದರ ವಾಸನೆ, ದೃಷ್ಟಿಯೇ ಹಿಡಿಸಲಿಲ್ಲ. ಮೊದನೆಯ ದಿನ ಬೆಳಿಗ್ಗೆ ಗಂಜಿ ಬಡಿಸಲು ಬಂದರು. `ಬೇಡ` ಅಂದಿವಿ, `ಬಿಡಿ` ಎಂದು ಹೋದರು. ಅವರು ಕೊಟ್ಟ ಜೋಳದ ರೊಟ್ಟಿ, ನಮಗೆ ಯಾವ ಮೂಲೆಗೂ ಸಾಕಾಗುತ್ತಿರಲಿಲ್ಲ. ಮಾರನೆಯ ದಿನ, ಸಧ್ಯ ಗಂಜಿ ಬಂದರೆ ಸಾಕಪ್ಪ ಎಂದು ಕಾದು ತಟ್ಟೆ ಹಿಡಿದುಕೊಂಡು ಜಾತಕ ಪಕ್ಷಿಗಳಂತೆ ನಿರೀಕ್ಷಿಸುತ್ತಿದ್ದೆವು. ನಿತ್ಯ ನಮಗೆ ಆ ಗಂಜಿಯೇ ಪರಮಾನ್ನ., ಪಂಚಾಮೃತವಾಯಿತು. ಭಾನುವಾರದ ಸಂಜೆಯ `ಹಬ್ಬ` ದೂಟಕ್ಕಾಗಿ ಎರಡು ಮೂರು ಹಿಂದಿನ ದಿನಗಳಿಂದಲೇ ನಿರೀಕ್ಷೆ. ಈ ಹಬ್ಬದ ಊಟಕ್ಕೆ ಜೋಳದ ಭಕ್ರಿಗೆ ಬದಲಾಗಿ ಒಂದು ಗೋದಿಯ ಚಪಾತಿ, ಒಂದು ಚಿಕ್ಕ ನಿಂಬೆಕಾಯಿ ಗಾತ್ರದಷ್ಟು ಬೆಲ್ಲ, ತೀರ್ಥಕೊಡುವಂತಹ ಒಂದು ಸಣ್ಣ ಉದ್ಧರಣೆಯಲ್ಲಿ ಎಣ್ಣೆ, ನಮಗೆ ಆ ದಿನ ಆನಂದವೋ ಆನಂದ. ಆ ಬೆಲ್ಲದ ಉಂಡೆ ಅದೇ ದಿನ ತಿನ್ನದೆ ಕಂತು ಕಂತುಗಳಲ್ಲಿ ತಿನ್ನುತ್ತಾ, ಅದರ ಅವಶೇಷವನ್ನು ಎಚ್ಚರಿಕೆಯಿಂದ ಎರಡು ಮೂರು ದಿನಗಳ ತನಕ ಕಾಪಾಡಿಕೊಂಡು ತಿನ್ನುತ್ತಿದ್ದೆವು. ಹತ್ತು ಹದಿನೈದು ದಿನಗಳಿಗೊಂದು ಸಲ ನಮಗೂ ಜೈಲಿನ ಅಧಿಕಾರಿಗಳಿಗೂ ಒಂದಲ್ಲ ಒಂದು ವಿಷಯದಲ್ಲಿ ತೀವ್ರ ಭಿನ್ನಾಭಿಪ್ರಿಯದ ಪ್ರಯುಕ್ತ ಉಪವಾಸದ ಮೂಲಕ ಪ್ರತಿಭಟನೆ, ಉಳಿದ ದಿವಸಗಳೆಲ್ಲಾ ಅರೆ ಊಟ, ಅರೆ ಉಪವಾಸ. ಆ ಜೈಲಿನಲ್ಲಿದ್ದ ಸುಮಾರು ಐದು ತಿಂಗಳು ಒಂದು ದಿನವಾದರೂ ಹೊಟ್ಟೆ ತುಂಬುವಷ್ಟು ಊಟ ನಮಗೆ ಕೊಡಲಿಲ್ಲ. ನನ್ನ ಮೊದಲನೆಯ ಮುಖಕ್ಷೌರವನ್ನು ಇನ್ನೂ ಮರೆತಿಲ್ಲ. ಮೈಸೂರು ಜೈಲಿನಲ್ಲಿದ್ದಂತೆ ಇಲ್ಲಿ ಆಯುಷ್ಕರ್ಮ ಶಾಲೆ ಇರಲಿಲ್ಲ. ನೆಲದ ಮೇಲೆ ನಾಯಿಂದನ ಮುಂದೆ ಕುಳಿತುಕೊಂಡೆ. ಬಟ್ಚಲಲ್ಲಿ ನೀರಿತ್ತು. ಅವನಕಡೆ ನೋಡುತ್ತಾ ಸುಮ್ಮನೆ ಕುಳಿತೇ ಇದ್ದೆ.

`ಕ್ಯಾ ದೇಖತಾಹೈ, ಪಾನೀ ಲಗಾಲೇ` (ಏನು ನೋಡ್ತಾ ಇದ್ದೀಯ ನೀರು ಹಚ್ಚಿಕೊ) ಎಂದು. ಸೋಪ್ ಬ್ರಷ್ ಕಹಾ ಹೈ? (ಸೋಪು ಮತ್ತು ಬ್ರಷ್ ಎಲ್ಲಿ?) ಎಂದೆ. ಯೆ ತೇರಾ ಬಾಪ್‌ಕಾ ಘರ್ ನಹೀ ಹೈ (ಇದು ನಿಮ್ಮಪ್ಪನ ಮನೆ ಅಲ್ಲ) ಎಂದು ಹೇಳಿದ. ಬರಿ ಕೈಯಲ್ಲಿಯೇ ನೀರನ್ನು ಮುಖಕ್ಕೆ ಹಚ್ಚಿಕೊಂಡೆ. ಆತನ ಎಷ್ಟು ಒರಟಾಗಿದ್ದನೋ ಆತನ ಕತ್ತಿಯೂ ಅಷ್ಟೇ ಮೊಂಡಾಗಿದ್ದಿತು. ಕೂದಲನ್ನು ಚರ್ಮಸಹಿತ ಮೂಲೋತ್ಪಾಟನೆ ಮಾಡುವ ಪ್ರಯತ್ನದಲ್ಲಿ ಆತನು ಅಲ್ಲಲ್ಲಿ ಯಶಸ್ವಿಯಾದನು. ಅದಾದ ಮೇಲೆ ಜೈಲಿನಲ್ಲಿ ಇದ್ದಷ್ಟು ದಿನ ಆಯುಷ್ಕರ್ಮಕ್ಕೆ ಪೂರ್ಣ ವಿರಾಮ ಹಾಕಿದ್ದಾಯಿತು.

ಸುಮಾರು ಒಂದೂವರೆ ತಿಂಗಳಾದ ಮೇಲೆ ನಮ್ಮ ಮೇಲಿನ ಮೊಕದ್ದಮೆ ವಿಚಾರಣೆಗೆ ಬಂತು. ಜೈಲಿನಲ್ಲಿಯೇ ಕೋರ್ಟು. ಪ್ರತಿಭಂದಕಾಜ್ಞೆ ಮುರಿದ ಅಪಾದನೆಯನ್ನು ಒಪ್ಪಿಕೊಂಡೆವು. ಕ್ಷಮಾಪಣೆ ಕೇಳಿದರೆ ಬಿಡುಗಡೆ ಮಾಡುತ್ತೇವೆಂದು ನ್ಯಾಯಾಧೀಶರು ಅಪ್ಪಣೆ ಕೊಡಿಸಿದರು. ಮಾಮೂಲಿನಂತೆ, ನಿರಾಕರಿಸಿದ ಮೇಲೆ ಮೂರು ತಿಂಗಳು ಕಠಿಣ ಶಿಕ್ಷೆವಿಧಿಸಿದರು.

ಸಾದಾ ಶಿಕ್ಷೆ ವಿಧಿಸಿದರೆ ಕೆಲಸ ಮಾಡಬೇಕಾಗಿಲ್ಲ. ಜೊತೆಗೆ ಇನ್ನೂ ಸ್ವಲ್ಪ ಸೌಲಭ್ಯಗಳಿರುತ್ತವೆ. ಕಠಿಣ ಶಿಕ್ಷೆ ಯವರಿಗೆ ಸೌಲಭ್ಯಗಳೆಲ್ಲ ಕಡಿತ, ಜೊತೆಗೆ ದಿನಕ್ಕೆ ಎಂಟು ಘಂಟೆ ಅವರು ಕೊಟ್ಟ ಕೆಲಸ ಮಾಡಬೇಕು. ನಮಗೆ ಒಪ್ಪಿಸಿದ ಕೆಲಸ ಕಷ್ಟವಾಗಿರಲಿಲ್ಲ. ಕೈಯಲ್ಲಿ ಬಟ್ಟೆ ಹೊಲಿಯುವುದು, ಆದರೆ ತುಂಬಾ ಬೇಜಾರಿನ ಕೆಲಸ.
ಶಿಕ್ಷೆ ಆಗುವತನಕ ನಮ್ಮ ಮಾಮೂಲು ಬಟ್ಟೆಯನ್ನೇ ಹಾಕಿಕೊಂಡಿದ್ದೆವು. ಆಮೇಲೆ ಉಡುಪಿನಲ್ಲಿ ಬದಲಾವಣೆ. ಖೈದಿಗಳ ವೇಷ; ದಪ್ಪ ಬಟ್ಟೆಯ ನಿಕ್ಕರ್, ಷರಟು ಮತ್ತು ಟೊಪ್ಪಿಗೆ. ದೇಶದಾದ್ಯಂತ ಎಲ್ಲಾ ಖೈದಿಗಳಿಗೂ ಒಂದೇ ಸಮವಸ್ತ್ರ.

ಜೈಲಿನಲ್ಲಿ ಆದ ಒಂದು ಭಯಾನಕ ಘಟನೆ ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ. ಒಂದು ಮಧ್ಯಾಹ್ನ ಸುಮಾರು ಒಂದೂವರೆ ಘಂಟೆ ಸಮಯ. ವಿರಮಾದ ವೇಳೆ. ನಾವಿದ್ದ ಕೊಠಡಿಯ ಮುಂದೆ ಸುಮಾರು ಹದಿನೈದು ಗಜ ದೂರದಲ್ಲಿ ಒಬ್ಬ ಪಠಾನ್ ಖೈದಿ ಅದೇ ವರ್ಗದ ಸಿಂಧಿ ಖೈದಿಯನ್ನು ಹಿಂದಿನ ವೈಷಮ್ಯದ ಕಾರಣ ಇರಿದುಕೊಂದನು. ಆಮೇಲೆ ಆವೇಶದಿಂದ ಆಯುಧವನ್ನು ಝಳಿಪಿಸುತ್ತಾ ಸಮೀಪದವರ ಮೇಲೆ ಎರಗುವ ಪ್ರಯತ್ನ ಮಾಡುತ್ತಾ, ಜಾಗದಿಂದ ಜಾಗಕ್ಕೆ ಹಾರುತ್ತಿದ್ದ ಆ ಪಠಾನ್ ಕೊಲೆ ಪಾತಕನನ್ನು ಜೈಲು ಸಿಬ್ಬಂಧಿ ಮತ್ತು ವಿಶೇಷ ಪೋಲಿಸಿನವರ ಸರ್ವ ಪ್ರಯತ್ನ ಮಾಡಿ, ಅವನ ಜೊತೆ ಸೆಣೆಸಾಡಿ ಸುಮಾರು ಅರ್ಥ ಘಂಟೆಯಾದ ಮೇಲೆ ಹಿಡಿದರು.

ಶಿಕ್ಷೆಯ ಅವಧಿ ಮುಗಿದು ಬಿಡುಗಡೆಯಾಯಿತು. ೧೯೪೩ ಜುಲೈ ತಿಂಗಳಿನಲ್ಲಿ ಬೆಂಗಳೂರಿಗೆ ಹಿಂದುರಿದೆವು. ಚಳುವಳಿ ಇನ್ನೂ ಮಣಿದಿರಲಿಲ್ಲ. ಆದರೆ ಕಾವು ತುಂಬಾ ಕಡಿಮೆಯಾಗಿತ್ತು. ಗಾಂಧೀಜಿ ಮತ್ತು ಉಳಿದ ನಾಯಕರು ಇನ್ನೂ ಜೈಲಿನಲ್ಲಿಯೇ ಇದ್ದರು. ಆ ವರ್ಷವೂ ಕಾಲೇಜಿಗೆ ಹೋಗಲಿಲ್ಲ. ಆ ವರ್ಷದ ಕೊನೆಯ ಭಾಗದಲ್ಲಿ ಸರ್ಕಾರಕ್ಕೂ, ಕಾಂಗ್ರೆಸ್ಸಿಗೂ ಸಂಧಾನದ ಮೂಲಕ ಒಪ್ಪಂದವಾಗಿ ಎಲ್ಲ ನಾಯಕರ ಬಿಡುಗಡೆಯಾಯಿತು. ೧೯೪೪ ಜೂನ್ ತಿಂಗಳಲ್ಲಿ ಕಾಲೇಜಿಗೆ ಸೇರಿ ವ್ಯಾಸಂಗ ಮುಂದುವರಿಸಬೇಕೆಂದು ನಿಶ್ಚಯಿಸಿದೆ. ಆದರೆ ಒಂದು ಬಹು ಮುಖ್ಯವಾದ ಅನುಕೂಲ ತಪ್ಪಿಹೋಗಿತ್ತು. ಚಳುವಳಿಗಾರನೆಂದು, ಜೈಲಿನಲ್ಲಿದ್ದೆನೆಂದು ಶ್ರೀರಾಮಕೃಷ್ಣ ಸ್ಟೂಡೆಂಟ್ ಹೋಂನಲ್ಲಿ ಊಟ ವಸತಿಗಳಿಗೆ ಅವಕಾಶ ಕೊಡಲಿಲ್ಲ. ಆ ಕಷ್ಟ ಸಮಯದಲ್ಲಿ ನನಗೆ ತೀರಾ ಅಪರಿಚಿತರಾಗಿದ್ದ, ಬಸವನಗುಡಿಯಲ್ಲಿರುವ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿದ್ದ ಸ್ವಾಮಿ ತ್ಯಾಗೀಶಾನಂದಜೀಯವರು ನನಗೆ ಹೇಳಿ ಕಳುಹಿಸಿ `ತುಂಬಾ ಕಷ್ಟದಲ್ಲಿದ್ದೀಯ ಎಂದು ತಿಳಿಯಿತು. ಆಶ್ರಮದಲ್ಲಿದ್ದುಕೊಂಡು ಬಿ. ಎಸ್‌ಸಿ. (ಆನರ್ಸ್) ಮತ್ತು ಎಂ. ಎಸ್‌ಸಿ, ಯನ್ನು ಮುಗಿಸಿಬಹುದು` ಎಂದಾಗ ನನಗಾದ ಸಂತೋಷದಲ್ಲಿ ಮಾತೇ ಹೊರಡಲಿಲ್ಲ. ಯಾರೋ ಹಿತಚಿಂತಕರು ನನ್ನ ಬವಣೆಯನ್ನು ಸ್ವಾಮೀಜಿಯವರಿಗೆ ಹೇಳಿರಬೇಕು. ತುಂಬಾ ಕೃತಜ್ಞತೆಯಿಂದ ಅವರ ಸಹಾಯ ಸ್ವೀಕರಿಸಿ ಆಶ್ರಮದಲ್ಲಿಯೇ ಎರಡು ವರ್ಷ ಇದ್ದು ನನ್ನ ವಿದ್ಯಾಭ್ಯಾಸವನ್ನು ಮುಗಿಸಿದೆ.

ನನ್ನ ಈ ಅನುಭವಗಳು ಆಗಾಗ ಜ್ಞಾಪಕಕ್ಕೆ ಬರುತ್ತವೆ. ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ತಪ್ಪದೆ ಈ ನೆನಪು ಮರುಕಳಿಸುತ್ತವೆ. ಯಾವ ಕ್ಷುಲ್ಲಕ ಕ್ಷುದ್ರರಾಜಕೀಯವೂ ಇಲ್ಲದ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ನೆನಪು, ಸಂತೃಪ್ತಿ, ಸಮಾಧಾನ ಇಂದಿಗೂ ಕೊಡುತ್ತದೆ