ನೋಡ್ತಿರೋರು

ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜೂನ್ 2, 2014

ರಂಗೋಲಿ....... ಚಿತ್ತ ಚಿತ್ತಾರಗಳ ನಡುವೆ - ಸಂಚಿಕೆ ೨


ಬಹಳ ದಿನಗಳಾಗಿತ್ತು.. ತಲೆಗೆ ಹಾಗೂ ಬರವಣಿಗೆಗೆ ಕೆಲಸ ಕೊಟ್ಟು :-) . ನೆನಪುಗಳು ಅಳಿಸಿಹೋಗುವ ಮೊದಲು ಬರೆದುಬಿಡೋಣ.., ಸುನಂದಳ ಬದುಕು ನೆನಪಲ್ಲೇ ಕಳೆದುಹೋಗಬಾರದೆಂಬ ಧಾವಂತ  ರಂಗೋಲಿ ಚಿತ್ತ ಚಿತ್ತಾರಗಳ ನಡುವೆಯ ಸರಣಿಯನ್ನು ಮುಂದುವೆರಿಸುತ್ತಿದ್ದೇನೆ..

 ಹಿಂದಿನ ಸರಣಿ

 
ಮುಂದಿನ ಕೆಲವೇ ದಿನಗಳಲ್ಲಿ ನನ್ನ ಮಾನಸಿಕ ಆರೋಗ್ಯ ದ್ಯೆಹಿಕ ಆರೋಗ್ಯ ಎಲ್ಲವೂ ಕ್ಷೀಣಿಸುತ್ತು.... ನಿರ್ದಯಿಗಳ ಮುಂದೆ ನಾನು ಅದಿನ್ನೆಂತಹ ಬೇಡಿಕೆಯಿಟ್ಟರೂ... ಅವರ ಬೇಡಿಕೆಗಳ ಮುಂದೆ ನನ್ನದೆಲ್ಲವೂ ಗೌಣವಾಗಿತ್ತು. ಸ್ವಲ್ಪ ದಿನಗಳ ನಂತರ ನನಗೂ ಇವೆಲ್ಲ ರೂಢಿಯಾಗಿ ಹೋಗಿತ್ತು. ಅದೇ ಸಮಯಕ್ಕೆ ಸೌಭಾಗ್ಯಮ್ಮನಿಗೆ ಆರೋಗ್ಯ ಕ್ಯೆಕೊಟ್ಟಿತ್ತು. ಏಳುವುದಕ್ಕೂ ಆಗದ ಸಂಧರ್ಬದಲ್ಲೂ ಆಕೆಯ ವ್ಯವಹಾರ ನಡೆಯುತ್ತಲೇ ಇತ್ತು. ಒಂದು ದಿನ ಬಹುಶಃ ಆಗಸ್ಟಿನಲ್ಲಿರಬಹುದು... ಆಕೆಯ ದೇಹದ ಬಲಭಾಗ ಪೂರ್ತಿ ಪಾಶ್ವವಾಯು ಉಂಟಾಗಿ ಮಲಗಿದ ಜಾಗದಿಂದೇಳಲು ಆಗದೆ, ಆಕೆಯ ಎಲ್ಲ ಕೆಲ್ಸಗಳು ಅಲ್ಲೇ ನಡೆಯುತ್ತಿತ್ತು. ಆ ಸಮಯಕ್ಕೆ ಇವಳೊಂದಿಗಿನ ವ್ಯವಹಾರಿಗಳಾಗಲಿ, ಇವಳೇ ಸಾಕು ಬೆಳೆಸಿದ ಜನರಾಗಲಿ ಯಾರೊಬ್ಬರೂ ಇವಳ ಸಹಾಯಕ್ಕೆ ಬರಲಿಲ್ಲ. ಕ್ರಮೇಣ ವ್ಯವಹಾರವೂ ನಿಂತಿತು.

ಬುಧವಾರ, ಅಕ್ಟೋಬರ್ 6, 2010

ರಂಗೋಲಿ....... ಚಿತ್ತ-ಚಿತ್ತಾರಗಳ ನಡುವೆ - ಸಂಚಿಕೆ ೧


ತುಂಬಾ ದಿನಗಳಿಂದ ಬರೀಬೇಕು, ಬರೀಬೇಕು ಅಂತಾ ಕುಳಿತು ಪೆನ್ನು ಹಿಡಿದ್ರೆ ಹಾಳಾದ್ದು ಏನೇನೋ ಆಲೋಚನೆ ಕಣ್ ಮುಂದೆ ಬರೋದು, ಇವತ್ತು ಬರೀಲೇಬೇಕು, ಅಂತ ಬೆಳ್ಳಂಬೆಳ್ಳಗ್ಗೆ ಎದ್ದು, ಮೊದಲು ಪೋನ್ಗಳು ಸ್ವಿಚ್ ಆಫ್ ಮಾಡಿ ಕೂತೆ, ಮನೆ ಹೊರಗಡೆ ರಂಗೋಲಿ ರಂಗೋಲಿ............ ಅಂತ ಕೂಗ್ತಾಯಿರೋ ಸದ್ದು, ಚಿಕ್ಕಂದಿನಿಂದಲೂ ಈ ಸದ್ದು ಕೇಳಿದ್ದು ಮತ್ತೊಮ್ಮೆ, ನನ್ನ ಬಾಲ್ಯವನ್ನು ನೆನಪಿಸಿದ ಹಾಗೆ ಓಡೋಡಿ ಹೊರಗೆ ಬಂದೆ, ಮನೆಯ ಸುತ್ತಮುತ್ತಲಿನ ಕೆಲವರು ರಂಗೋಲಿ ವ್ಯಾಪಾರ ಮಾಡ್ತಿದ್ರು, ಸೇರಿಗೆ ೧೫ರೂಪಾಯಿ ಅಂತ ಆಕೆ, ಈ ಹೆಂಗಸರು ೧೦ರೂಪಾಯಿಗೆ ಒಂದು ಸೇರು ಕೊಡು ಅಂತ ವಾಗ್ವಾದ.

ನೆನಪಿದ್ದಂತೆ ಸೇರಿಗೆ ೧ರೂಪಾಯಿ ೧.೫೦ರೂಪಾಯಿತ್ತು. ನಿತ್ಯ ಜೀವನದ ದರ ಸಮರ, ಆರ್ಥಿಕ ಸಮತೋಲನ ಈ ರಂಗೋಲಿ ಹುಡುಗಿಯ ಮೇಲು ಬಿದ್ದಂಗಿದೆ ಅನ್ಕೊಂಡು, ಒಳಗೆ ಬರೋವಾಗ ಅಕಸ್ಮಾತ್ ಏನೋ ನೋಡಿದ ನೆನಪಾಗಿ ರಂಗೋಲಿ ಮಾರುವ ಹುಡುಗಿಯನ್ನೇ ದಿಟ್ಟಿಸಿ ನೋಡಿದೆ, ಎಲ್ಲೋ ನೋಡಿದ ನೆನಪು, ಗೊತ್ತಾಗ್ತಾಯಿಲ್ವೆಲ್ಲ, ಅಂತ ಅವಳ ಮುಖವನ್ನೇ ದಿಟ್ಟಿಸಿ ನೋಡ್ತಿದ್ದೆ. ಆಕೆ ಅಲ್ಲಿ ಚೌಕಾಸಿ ಮಾಡಿ ವ್ಯಾಪಾರ ಮುಗಿಸುವ ಧಾವಂತದಲ್ಲಿದ್ದಳು. ಈ ಹುಡುಗಿ ನನಗೆಲ್ಲೋ ಪರಿಚಯ ಇರಬಹುದಾ !!, ಇವಳನ್ನಾ ನೋಡಿದ್ದಿನಾ ಅಂತ ನನ್ನ ಸಮಸ್ತ ಗೆಳೆಯರ ಬಳಗವನ್ನೇ ಒಮ್ಮೆ ಮೆಲುಕು ಹಾಕಿದ್ದಾಯಿತು. ನೆನಪಾಗಲಿಲ್ಲ.

ಯೋಚನೆ ಬೆಳಿಗ್ಗೆಯ ನನ್ನ ಪ್ರಾತಕರ್ಮಗಳನ್ನು ಮರೆಸುವಂತಿತ್ತು. ಆಕೆ ನಮ್ಮ ಬೀದಿಯ ಕಡೆಯವರೆಗೂ ಹೋಗಿ ಒಂದ್ಯೆದು ನಿಮಿಷಕ್ಕೆ ವಾಪಸ್ ಬಂದು, ಅವಳನ್ನ ಕೇಳೇ ಬಿಡುವ ಅಂತ ನಿರ್ಧರಿಸಿ, ರೀ ಮೇಡಂ ಅಂದೆ, ಅರೆ!!! ಅರವಿಂದ ಅಲ್ವಾ ನೀವು ಅಂತಾ ಹುಡುಗಿ ನನ್ನ ಹತ್ರ ಬರ್ತಿದ್ಳು. ಈಗಂತೂ ನನ್ನ ನೆನಪಿನ ಶಕ್ತಿ ಕುಂದಿದೆ ಅನ್ನೋದು ಗ್ಯಾರೆಂಟಿ ಆಗೋಯ್ತು, ಏನಂತ ಹೇಳೋದು ಹು......... ಅಂದೆ. ನೀವಿಗ ಇಲ್ಲಿರೋದಾ ? ನಾನು ನಿಮ್ಮನ್ನ ಗುರುತು ಹಿಡಿತಿನಿ ಅಂತ ಅನ್ಕೊಂಡೆ ಇರಲಿಲ್ಲ ? ಅಪ್ಪ-ಅಮ್ಮ ಎಲ್ಲಾ ಹೇಗಿದ್ದಾರೆ ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಯಾವುದಕ್ಕೂ ಉತ್ತರಿಸಲಿ ಎಂಬ ಧಾವಂತ, ಜೊತೆಗೆ ಈಕೆ ಯಾರು ಎಂಬ ಮರೆವು ? ಎಲ್ಲಾ ಆರಾಮಾಗಿದ್ದಿವಿ, ಅಂತ ಹೇಳಿ ಜಾರಿಕೊಳ್ಳೋ ಪ್ರಯತ್ನ ಮಾಡಿದ್ರು, ಈಕೆ ಯಾರು ಎಂಬ ಸುಳಿವು ನೆನಪಾಗ್ಲಿಲ್ಲ.

ಧ್ಯೆರ್ಯಮಾಡಿ ಕೇಳೇ ಬಿಡೋಣ, ಅನ್ನಿಸಿ, ಕ್ಷಮಿಸಿ, ನಿಮ್ಮನ್ನ ನೋಡಿದ ನೆನಪು ಆದ್ರೆ ಯಾರು ಅಂತ ಗೊತ್ತಾಗ್ತಿಲ್ಲ, ಅಂದೆ ? ಒಂದು ಕ್ಷಣ ಅವಳು ಮುಗುಳು ನಗು ತಡೆಹಿಡಿದು, ನೆನಪಿಸ್ಕೊಳ್ಳೀ, ನೀವು ನನ್ನನ್ನ ಮರೆತಿರೋಲ್ಲ, ಆದ್ರೆ ನೀವು ಮರೀತಿರಾ ಅಂತ ಗೊತ್ತಿರಲಿಲ್ಲ. ಅಂದಾಗ ಬಟ್ಟೆಗೆ ಚಪ್ಪಲಿಸುತ್ತಿ ಹೊಡೆದಂತಾದ ಅನುಭವ, ಹೌದು ನಾನು ಸಾಮಾನ್ಯವಾಗಿ ಯಾರನ್ನು ಅಷ್ಟು ಮರೆತಿರೋಲ್ಲ, ಈಗ್ಯಾಕೆ ಹೀಗೆ ? ಅನ್ನಿಸಿ, ಇಲ್ಲಾರಿ ಗೊತ್ತಾಗಲಿಲ್ಲ,

ನಿಮಗೆ ಹುಳಿಸಾರು ಮಾಡಿಕೊಟ್ಟ ನಾನು ನನ್ನಮ್ಮ ಮರೆತೋಯ್ತಾ ಅಂದ್ಲು, ಹುಳಿಸಾರು ನನಗಿಷ್ಟ ಅಂತ ಈಕೆಗೆ ಹೇಗೆ ಗೊತ್ತಾಯ್ತು, ನಾನ್ಯಾವಾಗ ಈಕೆಯ ಮನೆಗೆ ಹೋಗಿದ್ದೆ ? ಇವರಮ್ಮ ನನಗೇಕೆ ಹುಳಿಸಾರು ಮಾಡಿಕೊಡಬೇಕು ? ಪ್ರಶ್ನೆಗಳಿಗೆಲ್ಲ ನನ್ನ ಮರೆವೇ ಉತ್ತರವೆಂಬಂತೇ ಪೆಚ್ಚಾಗಿ ನೋಡುತ್ತಿದ್ದೆ. ಇನ್ನು ಈ ಮರೆವು ಸುಬ್ಬನಿಗೆ ನೆನಪಿಸೋದು ಸಾಧ್ಯವಿಲ್ಲ ಅನ್ನಿಸಿ, ಆಕೆ ಅನಂತಪುರಕ್ಕೆ ನೀವು ಬಂದಿದ್ದು ನೆನಪಿಲ್ವಾ ಅಂದ್ಳು ? ತಕ್ಷಣ ನನ್ನ ಮೆದುಳಿನಲ್ಲಿ ಬಲ್ಬ್ ಹತ್ತಿ ಉರಿದಂತೆ ಹಾ........ ಬಂದಿದ್ದೇನೆ, ನನ್ನ ಗೆಳೆಯ ಶೇಖರ್ ಆಸ್ಪತ್ರೆಗೆ ಸೇರಿಸಿದಾಗ ಪಕ್ಕದ ಬೆಡ್ನಲ್ಲಿ ಮಲಗಿದ್ದ ಇವರಪ್ಪ ನೆನಪಾಯಿತು, ಹೋ ಸುನಂದ ತಾನೆ ನೀವು ಅಂದೆ! ಹು ಸದ್ಯ ನೆನಪಾಯಿತಲ್ಲಾ, ಅಂತ ಅವಳ ಮೂದಲಿಕೆ, ಹೇಗಿದ್ದೀರಾ,ನಿಮ್ಮ ಅಪ್ಪ-ಅಮ್ಮ ಹೇಗಿದ್ದಾರೆ ? ಅಪ್ಪನ ಆರೋಗ್ಯ ಸರಿ ಹೋಯ್ತಾ ? ಅಮ್ಮ ಈಗ ಎಲ್ಲಿ ? ಎಂಬ ಒಂದಷ್ಟು ಪ್ರಶ್ನೆಗಳು ನನ್ನಿಂದ. ಆಕೆಯನ್ನು ಮನೆಗೆ ಬರ ಹೇಳಿ ಅಮ್ಮನಿಗೆ ಆಕೆಯ ಪರಿಚಯ ಮಾಡಿಕೊಟ್ಟು ನನ್ನ ಹಳೆ ಪ್ರಶ್ನೆಗಳನ್ನೇ ಮತ್ತೊಮ್ಮೆ ಕೇಳಿದೆ.

ಅಪ್ಪ ತೀರಿ ಹೋದ್ರು, ಅಮ್ಮ ನಾನು ಈಗ ರಂಗೋಲಿ ವ್ಯಾಪಾರ ಮಾಡ್ಕೊಂಡು ಬೆಂಗಳೂರಿಗೆ ಬಂದು ೨ ವರ್ಷವಾಯ್ತು. ಯಾವತ್ತೋ ಒಂದಿನ ನೀವೆಲ್ಲಾ ಸಿಗಬಹುದು ಬೆಂಗಳೂರಿನಲ್ಲಿ ಅನ್ಕೊಂಡಿದ್ದೆ, ನನಗಂತೂ ಬಹಳ ಖುಷಿಯಾಯ್ತು, ಅನ್ನೋ ಅವಳ ಮಾತಿನಲ್ಲಿ ಹಿಂದೆ ನೋಡಿದ್ದ ಮತ್ತೆನೋ ಮುಚ್ಚಿಡ್ತಿದ್ದಾಳೆ, ಅನ್ನಿಸ್ತು, ಆಕೆ ಮೊದಲಿನಂತೆ ಸಹಜ ನಗು, ಗೆಲುವು ಇಲ್ಲ, ಯಾಕೆ ಸುನಂದ ಮೊದಲಿನಂತೆ ನೀವು ಈಗಿಲ್ಲ, ಏನೋ ಯೋಚಿಸ್ತಿರೋ ಹಾಗಿದೆ, ಹಾಗೇನು ಇಲ್ಲ, ನೀವೆಲ್ಲಾ ಅವತ್ತು ನಮ್ಮ ಮನೆಗೆ ಬಂದಾಗ ನನಗೇನೋ ಬಹಳ ಖುಷಿಯಾಗಿತ್ತು, ಆದ್ರೆ ಅವತ್ತಿನ ದಿನದ ನಂತರ ನಡೆದ ಘಟನೆಗಳು ತುಂಬಾ ನೋವುಂಟು ಮಾಡಿತ್ತು, ತುಂಬಾ ನೊಂದಿದ್ದಾಳೆ ಅನ್ನಿಸಿ, ಏನಾಯ್ತು ಸುನಂದ, ನನ್ನತ್ರನೂ ಹೇಳಾಬಾರ್ದಾ ಸಾಧ್ಯವಾದ್ರೆ ಪರಿಹಾರ ಮಾಡೋಣ ಹೇಳಿ, ಹಾಗೆಲ್ಲ ನೋವನ್ನ ಮನಸ್ಸಿನಲ್ಲೇ ಹಿಡಿದಿಡಬಾರದು. ನಾನು ನಿಮ್ಮನ್ನ ಅಕಾಲಿಕವಾಗಿ ಮರೆತಿದ್ದೆ ಹೌದು, ಆದ್ರೆ ನಿಮಗೆ ಸಹಕರಿಸುತ್ತೇನೆ ಎಂಬ ವಾಗ್ದಾನ ನೀಡಿದ್ದಾಯಿತು,

ಅರವಿಂದ್, ನೀವೆಲ್ಲ ಬಹುಶಃ ೧೯೯೯ ರ ಏಪ್ರಿಲ್ ತಿಂಗಳಲ್ಲಿ ಅನಂತಪುರದಲ್ಲಿದ್ದರೆಂಬ ನೆನಪು. ಹ್ಯೆದರಾಬಾದಿಗೆ ಹೊರಡ್ತಿದ್ರಿ ಅಲ್ವಾ. ನಿಮ್ಮ ಗೆಳೆಯ ಶೇಖರನನ್ನ ಆಸ್ಪತ್ರೆಯಿಂದ ಬೆಂಗಳೂರಿಗೆ ಕರೆತಂದ ವಾರಕ್ಕೆ ನಮ್ಮಪ್ಪನೂ ಮನೆಗೆ ವಾಪಸ್ ಬಂದ್ರು, ನನಗಾಗ ಗಂಡು ನೋಡೋಕೆ ಶುರು ಮಾಡಿದ್ರು, ನಾನು ಪಿಯುಸಿ ತನಕ ಓದಿದ್ದೆನಾದ್ದರಿಂದ, ಓದಿದ ಹುಡುಗನನ್ನೇ ಮದುವೆಯಾಗಬೇಕು, ಅನ್ನೋ ಆಸೆ, ಜೊತೆಗೆ ಆ ಹುಡುಗ ಸೆಟಲ್ ಆಗಿದ್ರೆ, ನನ್ನ ತಂದೆ ತಾಯಿಯನ್ನು ನನ್ನೊಂದಿಗೆ ಇರಿಸಿಕೊಳ್ಳುವ ಆಲೋಚನೆ, ಅಮ್ಮನಿಗೆ ಓದಿದ ಹುಡುಗನಾದ್ರೆ ಮಾತ್ರ ಮದುವೆಯಾಗೋದು, ಅವನು ನಮ್ಮೂರಿನವನೇ ಆಗಬೇಕೆಂದೇನಿಲ್ಲ. ಎಂಬ ಒಂದಿಷ್ಟು ಶರತ್ತುಗಳನ್ನು ಹೇಳಿದೆ. ಅಮ್ಮ ತಮ್ಮ ಪರಿಚಯವಿದ್ದ ಬಂಧುಗಳಿಗೆ ಸ್ನೇಹಿತರಿಗೆ ನನಗೆ ಮದುವೆಗೆ ವರ ನೋಡ್ತಿರೋ ವಿಷ್ಯ ಹೇಳ್ತಿದ್ರು. ಹಾಗೆ ನನ್ನ ಪರಿಚಿತರಿಂದ ಅದೇ ಊರಿನಿಂದ ಕೆಲವು ಹುಡುಗರೂ ಮನೆಗೆ ಬಂದುಹೋದರು. ಆದರೆ ನಂಗೆ ಇಷ್ಟ ಆಗೋಂತಾ ಕ್ವಾಲಿಟಿಸ್ ಅವರಲ್ಲಿ ಇರಲಿಲ್ಲ. ಈ ಮಧ್ಯೆ ನಮ್ಮ ಊರಿಗೆ ಹೊಸದಾಗಿ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಶುರುವಾಯಿತು. ಹಟಹಿಡಿದು ಕಂಪ್ಯೂಟರ್ ಕಲಿತರೆ ಏನಾದ್ರೂ ಮುಂದೆ ಉಪಯೋಗ ಬರಬಹುದೆಂದು ದಿನವೂ ಅಮ್ಮ-ಅಪ್ಪನ ಮುಂದೆ ದುಂಬಾಲು ಬಿದ್ದೆ, ಅಂತೂ ಇಂತೂ ಕಂಪ್ಯೂಟರ್ ಕಲಿಯೋಕೆ ಒಪ್ಪಿಗೆ ಸಿಕ್ಕಿ, ಸಂಜೆ ತರಗತಿಗೆ ಸೇರಿದ್ದಾಯಿತು.

ಬಹುಶಃ ಇದು ನನ್ನ ಜೀವನದಲ್ಲಿ ನಾ ಮಾಡಿದ ದೊಡ್ಡ ತಪ್ಪು ಅನ್ಸುತ್ತೆ, ಕಂಪ್ಯೂಟರ್ ಕಲಿತ ಹಮ್ಮು ಜೊತೆಗೆ ಒಂದಿಷ್ಟು ತಲೆಗೆ ಹೋಗಿ, ಆದಷ್ಟು ಬೇಗ ಒಂದು ನೌಕರಿ ಹುಡುಕುವ ಆಲೋಚನೆ, ಈ ಮೂರ್ನ್ನಾಲ್ಕು ತಿಂಗಳಲ್ಲಿ ಬಹಳ ಜನ ಹುಡುಗರನ್ನ ನೋಡೋ ಕಾರ್ಯಕ್ರಮವಾದರೂ ನಾನು ಯಾರನ್ನು ಒಪ್ಪಿಕೊಳ್ಳಲೇ ಇಲ್ಲ, ಇದರ ನಡುವೆ ನಮ್ಮ ಇನ್ಸ್ಟಿಟ್ಯೂಟಿಗೆ ಹ್ಯೆದರಾಬಾದಿನಲ್ಲಿನ ಒಂದು ಕಂಪೆನಿಗೆ ಕಂಪ್ಯೂಟರ್ ಆಪರೇಟರ್ಗಳು ಬೇಕಾಗಿದ್ದಾರೆ, ಎಂದು ಸಂಬಳ ತಿಂಗಳಿಗೆ ೭ ಸಾವಿರ, ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆಯಿದೆ. ಎಂದು ಇನ್ಸಿಟ್ಯೂಟಿನ ಹೆಡ್ ಹೇಳಿದರು, ಅದಕ್ಕೆ ಮೊದಲು ಮುಂದಿನ ಶನಿವಾರ ನಿಮ್ಮೆಲ್ಲರನ್ನೂ ಇಲ್ಲೇ ಇಂಟರ್ವ್ಯೂ ತೆಗೆದುಕೊಳ್ಳುತ್ತಾರೆ, ಬೆಳಿಗ್ಗೆ ಸರಿಯಾಗಿ ೧೦ಕ್ಕೆ ಎಲ್ಲರೂ ಇಲ್ಲಿ ಬಂದಿರುವುದೆಂದು ಹೇಳಿದರು. ಅದರಂತೆ ೨೦ ಜನ ಇಂಟರ್ವ್ಯೂಗೆ ತಯಾರಾಗಿ ಬಂದೆವು, ಮೊದಲು ಅವರು ಎಲ್ಲರನ್ನೂ ಒಂದು ರೂಮಿನಲ್ಲಿ ಕುಳಿತುಕೊಳ್ಳಲಿಕ್ಕೆ ಹೇಳಿ, ದೂರದಿಂದಲೇ ಪ್ರತಿಯೊಬ್ಬರನ್ನು ಗಮನಿಸಿ, ನಾನು, ವಂದನಾ, ಸುಖನ್ಯ, ರಾಧಾ, ಗೀತಾ, ಮಮ್ತಾಜ್, ಮೆಹುರೂಬಾಳನ್ನು ಮತ್ತು ಆನಂದನನ್ನು ಕರೆದರು, ನಮಗೆ ಎಲ್ಲಿಲ್ಲದ ಅತ್ಯುತ್ಸಾಹ, ಅವರು ಕೇಳಿದ್ದು ಕೆಲವೇ ಪ್ರಶ್ನೆ ನಿಮ್ಮೂರು ಯಾವುದು ? ಮತ್ತು ನಿಮ್ಮ ಮನೆಯಲ್ಲಿ ಯಾರ್ಯಾರು ಇದ್ದಾರೆ ಮತ್ತು ಏನು ಕೆಲಸ ಮಾಡುತ್ತಿದ್ದಾರೆ? ಎಲ್ಲರೂ ಏನು ಓದಿದ್ದಾರೆ ? ಎಲ್ಲರೂ ನಮ್ಮ ಯೋಗ್ಯಾನುತಾಸಾರ ಹೇಳಿದೆವು, ನಂತರ ಅವರು ನೀವು ಸದ್ಯಕ್ಕೆ ಅಲ್ಲಿ ಆರು ತಿಂಗಳ ಕಾಲ ಟ್ರ್ಯೆನಿಂಗಿನಲ್ಲಿ ಇರುತ್ತೀರಿ. ಮತ್ತು ನಿಮಗೆ ಆ ಆರು ತಿಂಗಳ ಸಂಬಳವನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಮತ್ತು ನಿಮ್ಮ ಖರ್ಚುಗಳನ್ನು ನಾವೇ ನೋಡಿಕೊಳ್ಳುತ್ತೇವೆ. ಇದೆಲ್ಲದಕ್ಕೆ ಒಪ್ಪಿಗೆಯಾದರೆ ಬುಧವಾರ ನೀವುಗಳೆಲ್ಲರೂ ನನ್ನೊಂದಿಗೆ ಹೊರಡಬೇಕು. ನಿಮ್ಮ ಅಭಿಪ್ರಾಯವನ್ನು ನನಗೆ ಸೋಮವಾರದೊಳಗೆ ತಿಳಿಸಬೇಕೆಂದು ಹೇಳಿದರು.

ನನಗಂತೂ ಅರವಿಂದ್ ಪ್ರಪಂಚವನ್ನೇ ಗೆದ್ದ ಅನುಭವ, ಅಪ್ಪ-ಅಮ್ಮನನ್ನು ಹೇಗಾದರೂ ಮಾಡಿ ಒಪ್ಪಿಸಿಬಿಡಬೇಕು, ಇನ್ಮುಂದೆ ನಮ್ಮ ಜೀವನ ಹಸನಾಗಿರುತ್ತದೆ. ನಾನು ಒಂದಷ್ಟು ವರ್ಷ ಕೆಲ್ಸ ಮಾಡಿ, ಒಳ್ಳೆಯ ಹುಡುಗನನ್ನು ಮದುವೆಯಾಗಬೇಕು........ ಇನ್ನು ಏನೇನೋ ಆಲೋಚನೆ, ಅಂತೂ ಅಪ್ಪ-ಅಮ್ಮನನ್ನು ಒಪ್ಪಿಸುವ ಶತಪ್ರಯತ್ನ ಸಫಲವಾಯಿತು.ಅಂದು ಬುಧವಾರ ನಾವೆಲ್ಲ ಅವರೇ ತಂದಿದ್ದ ಟಾಟ ಸುಮೋನಲ್ಲಿ ಹ್ಯೆದರಾಬಾದಿಗೆ ಹೊರಟದ್ದಾಯಿತು................

ಹ್ಯೆದರಾಬಾದಿನಂತಹ ದೊಡ್ಡ ಸಿಟಿಯನ್ನು ನನ್ನ ಜೀವಮಾನದಲ್ಲೂ ನೋಡದ ಅನುಭವ, ನನ್ನ ಕಲ್ಪನೆಗಳನ್ನು ಮೀರಿದ ಸ್ಥಳ, ಇಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನ ಸಾಗರ, ದೊಡ್ಡ ದೊಡ್ಡ ಬಿಲ್ಡಿಂಗಗಳು, ಅಬ್ಬಾ ನಿಜಕ್ಕೂ ನಾನು ಸಕ್ಕತ್ ಖುಷಿಯಿಂದಿದ್ದೆ. ಮೊದಲ ದಿನ ಸಂಜೆ ನಮ್ಮೆಲ್ಲರನ್ನು ಹ್ಯೆದರಾಬಾದಿನ ಚಾರ್ಮಿನಾರ್, ಪೇಟೆ ಬೀದಿಗಳಲ್ಲಿ ಸುತ್ತಾಡಿಸಿದರು. ಮತ್ತು ಎಲ್ಲೆಲ್ಲಿ ಜನಸಂದಣಿಯಿರುತ್ತದೆ. ಯಾವಾಗ ಜನ ಹೆಚ್ಚು ಈ ಸ್ಥಳಗಳಿಗೆ ಬರುತ್ತಾರೆ, ಅಲ್ಲಿಂದ ನಾವಿಳಿದುಕೊಂಡಿದ್ದ ಸ್ಥಳ ಎಷ್ಟು ದೂರ ಎಲ್ಲಾ ವಿಷಯವನ್ನು ತಿಳಿಸಿದರು. ರಾತ್ರಿ ಅಲ್ಲೇ ಒಂದು ಹೋಟೆಲಿನಲ್ಲಿ ಊಟಕ್ಕೂ ಕರೆದುಕೊಂಡು ಹೋದರು. ರಾತ್ರಿ ೧೦.೩೦ಕ್ಕೆ ಕೊಠಡಿಗೆ ಬಂದ ನಾವು ಮಲಗಿಕೊಳ್ಳುವ ತಯಾರಿಯಲ್ಲಿದ್ದೆವು.

ನಮ್ಮ ಜೊತೆ ಒಬ್ಬಳು ಹೆಂಗಸು ಬಂದು ಮಲಗಿದಳು, ಸುಮಾರು ೫೫ ರಿಂದ ೬೦ ವರ್ಷದ ಹೆಂಗಸು, ಹಣೆಗೆ ದೊಡ್ಡ ಕುಂಕುಮ, ನಿಡಿದಾದ ಸೀರೆ, ಹೆಸರು ಸೌಭಾಗ್ಯಮ್ಮ ಅಂತೆ ಮೂಲ ರಾಯಚೂರಿನವಳು ಎಂದಷ್ಟೆ ಗೊತ್ತಾಯಿತು. ಮೊದಲು ಎಲ್ಲರನ್ನು ತೆಲುಗು ಭಾಷೆಯಲ್ಲೇ ಪರಿಚಯ ಮಾಡಿಕೊಂಡಳು, ನಂತರ ನಾನು ಮೂಲತಃ ಕನ್ನಡದವಳು ಎಂದು ತಿಳಿದು ನನ್ನ ಜೊತೆಗೆ ಮಾತ್ರ ಕನ್ನಡದಲ್ಲಿ ಮಾತಾನಾಡಿಸಿದಳು. ನಾನು ಅವಳೊಂದಿಗೆ ಹೆಚ್ಚಿನ ಸಲುಗೆಯಿಂದ ಮಾತಾಡಿದಕ್ಕೋ ಏನೋ, ನನ್ನನ್ನೇ ಮೊದಲು ರೂಮಿನೊಳಗೆ ಬರೋಕೆ ಹೇಳಿ ಬಟ್ಟೆಗಳನ್ನೆಲ್ಲ ಬಿಚ್ಚುವಂತೆ ಹೇಳಿದಳು. ನಾನು ಆಗಂತೂ ಥರಗುಟ್ಟಿ ಹೋದೆ, ಯಾಕೆ ? ಬಟ್ಟೆ ಬಿಚ್ಚಬೇಕು, ನಾನು ಬಿಚ್ಚುವುದಿಲ್ಲ, ಎಂದು ಗಟ್ಟಿಯಾಗಿ ಹೇಳಿದಳು, ಅದುವರೆಗೂ ಶಾಂತ ರೀತಿಯಲ್ಲಿದ್ದ ಸೌಭಾಗ್ಯಮ್ಮ "ಮುಚ್ಚುಕೊಂಡು ಬಿಚ್ಚೆ ಲೌಡಿ, ನಿನಗಿಲ್ಲೇನು, ಹಾಯಾಗಿ ತಿಂದು ಕುಡಿದು ಮಜಾ ಮಾಡೋಕಾ ಕರ್ಕೊಂಡು ಬಂದಿರೋದು, ನಾನು ಹೇಳಿದಂತೆ ಕೇಳಿದರೆ ಇಲ್ಲಿ ಆರಾಮಾಗಿ ಇರ್ತೀಯಾ, ಇಲ್ಲಾಂದ್ರೆ ಸಾಯಿಸಿಬಿಡ್ತಿನಿ" ನಾಳೆಯಿಂದ ನೀವೆಲ್ಲಾ ಕೆಲಸ ಶುರು ಮಾಡಬೇಕು ಅಂದ್ಳು. ನಾನು ಮಾಡೊ ಕಂಪ್ಯೂಟರ್ ಆಪರೇಟರ್ ಕೆಲಸಕ್ಕೂ, ನಿನ್ಮುಂದೆ ಬಟ್ಟೆ ಬಿಚ್ಚೋಕು ಸಂಬಂಧ ಏನು ? ನಾನು ಬಿಚ್ಚೊಲ್ಲ ಅಂತ ಹಟ ಹಿಡಿದೆ, ಕಪಾಳಕ್ಕೆ ಜೋರಾಗಿ ಹೊಡೆದು ಬಟ್ಟೆ ಬಿಚ್ಚೋಕೆ ಅವಳೇ ಪ್ರಯತ್ನಿಸಿದಳು, ಆಗಂತೂ ನನಗೆ ತುಂಬಾ ಸಂಕಟ ಜೊತೆಗೆ ಅಮ್ಮ-ಅಪ್ಪನ ನೆನಪು ಜಾಸ್ತಿಯಾಗಿ ಅಳೋಕೆ ಶುರುವಿಟ್ಟೆ. ನನ್ನ ಆರ್ಭಟವನ್ನ ಕೇಳಿ ಇನ್ನು ಸಿಟ್ಟಾದ ಆಕೆ ಮನಸ್ಸಿಗೆ ಬಂದಂತೆ ಬಡಿಯಲಾರಂಭಿಸಿದಳು. ಅವಳ ಏಟಿಗೆ ನಾನು ಸುಸ್ತಾಗಿ ಜ್ನಾನ ತಪ್ಪಿ ಬಿದ್ದಂತಾಗಿತ್ತು, ಮತ್ತೆ ನೀರು ಹಾಕಿ ಎಬ್ಬಿಸಿ, ಅಸಹ್ಯವಾಗಿ ನನ್ನನ್ನು ನೋಡಲಾರಂಭಿಸಿದಳು. ನನಗೆ ಕ್ಷಣ ಕ್ಷಣಕ್ಕೂ ಅಮ್ಮನದೇ ನೆನಪು. ನಾನು ಋತುಮತಿಯಾದಾಗಲೂ ಅಮ್ಮ ಹೀಗೆ ಮಾಡಿದವಳಲ್ಲ, ಅವಳೇ ನನ್ನ ಎಲ್ಲವನ್ನೂ ಕಲಿಸಿಕೊಟ್ಟಳಾದಳು, ಒಮ್ಮೆಯೂ ಹೀಗೆ ಅಸಹ್ಯವಾಗಿ ಹೇಳಿದವಳಲ್ಲ, ನನಗೆ ಸೌಭಾಗ್ಯಮ್ಮನ ಆರ್ಭಟವನ್ನು ತಡೆಯುವ ಶಕ್ತಿಯೇ ಇಲ್ಲದಾಯಿತು. ನಂತರ ಯಾರಿಗೋ ಪೋನು ಮಾಡಿ ನನ್ನ ದೇಹದ ವಿವರವನ್ನು ಹೇಳಿದಳು ಅನ್ಸುತ್ತೆ, ನಂತರ ನನ್ನ ಜೊತೆಗಿದ್ದ ಹುಡುಗೀರಿಗೂ ಇದೇ ಅನುಭವವಾಯ್ತು.

ಎಚ್ಚರವಾದಾಗ ನಾನು ಯಾವುದೋ ಹಾಸಿಗೆಯಲ್ಲಿ ಮಲಗಿದ್ದೆ, ಅದು ರಾತ್ರಿ ನಾನಿದ್ದ ರೂಮಲ್ಲ, ಗಾಬರಿಯಿಂದೆದ್ದು ಸುತ್ತಲೂ ನೋಡಿದೆ, ಮಬ್ಬುಗತ್ತಲು ಹೊರಗೆ ವಾಹನಗಳು ಓಡಾಡುವ ಸದ್ದಷ್ಟೆ ಕೇಳುತ್ತಿದೆ ಬಾಗಿಲನ್ನು ಜೋರಾಗಿ ಬಡಿದು ಬಡಿದು ಸುಸ್ತಾಯಿತು, ಕುಡಿಯಲೂ ನೀರು ಇಲ್ಲ, ಸಂಜೆಗೆ ಯಾರೋ ಬಾಗಿಲು ತೆಗೆಯುವ ಸದ್ದು, ನಾನು ತಕ್ಷಣ ಎದ್ದು ಬಾಗಿಲ ಬಳಿ ಓಡಿ ಹೋದೆ, ಸೌಭಾಗ್ಯಮ್ಮ, ನನ್ನನ್ನು ಕರ್ಕೊಂಡು ಬಂದ ಆ ವ್ಯಕ್ತಿ ಮತ್ತು ಒಂದಿಬ್ಬರು ಗಂಡಸರು ಒಳಗೆ ಬಂದರು, ನಾನು ಅವರನ್ನು ಬಿಡಿಸಿಕೊಂಡು ಓಡಿಹೋಗಲಿಕ್ಕೆ ಪ್ರಯತ್ನಿಸಿದೆ, ಆಗಲಿಲ್ಲ ಅರವಿಂದ್. ಅವರು ನನ್ನನ್ನ ಭದ್ರವಾಗಿ ಹಿಡಿದು "ಗಲಾಟೆ ಮಾಡಬೇಡ, ನೀನು ನಾವು ಹೇಳಿದಂತೆ ಕೇಳಿದರೆ ನಿನಗೆ ಕೇಳಿದಷ್ಟೂ ಹಣ ಮತ್ತು ನಿಮ್ಮ ಅಪ್ಪ-ಅಮ್ಮನಿಗೂ ಹಣ ಕಳಿಸುವ ವ್ಯವಸ್ಥೆ ಮಾಡುತ್ತೇವೆ. ಇಲ್ಲದಿದ್ದರೆ ನಿನ್ನನ್ನು ಇಲ್ಲೇ ಸಾಯಿಸಿ, ನಿಮ್ಮಮ್ಮ ಅಪ್ಪನಿಗೂ ಸಾಯಿಸುತ್ತೇವೆ ಅಂತ ಹೆದರಿಸಿದರು. ನಾನು ಅಮಾಯಕಳಾಗಿ ಮತ್ತದೇ ಪ್ರಶ್ನೆಕೇಳಿದೆ ನನಗೆ ಕಂಪ್ಯೂಟರ್ ಕೆಲ್ಸ ಕೊಡ್ಸಿ ಸಾಕು, ನಾನು ಇಲ್ಲೇ ಇರ್ತೇನೆ, ನೀವೆಲ್ಲ ನನಗೆ ಹೊಡೆಯಬೇಡಿ, ನನ್ನ ಅಪ್ಪ-ಅಮ್ಮನ ಹತ್ರ ಕಳಿಸ್ಕೊಡಿ ಒಂದ್ಸಲ, ನಾನು ಅವರತ್ರ ಮಾತಾಡಬೇಕು ಎಂದೆಲ್ಲಾ ಮನಸ್ಸಿಗೆ ತೋಚಿದ್ದೆಲ್ಲಾ ಗೋಗರೆದೆ. ಕಲ್ಲು ಹೃದಯದವರು ಕೇಳಬೇಕಲ್ಲ, ಎಲ್ಲದಕ್ಕೂ ಒಪ್ಪಲು ಮುಂಚೆ ನೀನು ನಾವು ಹೇಳಿದ ಕೆಲ್ಸ ಮಾಡಿದರೆ ಮಾತ್ರ ಎಂಬ ಶರತ್ತು ಅವರದು. ಪ್ರತಿ ರಾತ್ರಿ ಅವರು ಹೇಳುವ ವ್ಯಕ್ತಿಯ ಜೊತೆಗೆ ನಾನು ಸುಖವನ್ನು ಹಂಚಬೇಕಂತೆ...........

ಇದ್ಯಾವುದಕ್ಕೂ ನಾನು ಕಿವಿಗೊಡದೆ ವಾರಗಟ್ಟಲೆ ಅವರ ಪ್ರತಿದಿನ ಅವರು ಕೊಡುವ ಹಿಂಸೆಯನ್ನು ಸಹಿಸಿ ಸಾಕಾಯಿತು, ಊಟವಿಲ್ಲದೆ, ಸರಿಯಾದ ನಿದ್ದೆಯಿಲ್ಲದೆ ನಾನು ಡಿಹ್ಯೆಡ್ರೆಷನಿಗೆ ಹೋಗಿ ಆಸ್ಪತ್ರೆಗೆ ಸೇರಿಸುವ ಪರಿಸ್ಥಿತಿ ಬಂದಿತ್ತು. ಅಂತಾ ಸಮಯದಲ್ಲೂ ಅವರು ನನಗೆ ಯಾವುದೇ ಡಾಕ್ಟರನ್ನು ಭೇಟಿಮಾಡುವ ಅವಕಾಶವನ್ನೇ ಕೊಡಲಿಲ್ಲ. ಇನ್ನು ನನ್ನ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ತಿಳಿದ ಅವರೆಲ್ಲ ಒಬ್ಬ ಡಾಕ್ಟರನ್ನು ನಾನಿರುವ ಜಾಗಕ್ಕೆ ಕರೆದುಕೊಂಡು ಬಂದು, ನನ್ನ ಆರೋಗ್ಯ ಸುಧಾರಿಸುವ ಪ್ರಯತ್ನದಲ್ಲಿದ್ದರು. ನಾನು ಡಾಕ್ಟರ್ ನನ್ನ ಬಳಿ ಬಂದು ಚಿಕಿತ್ಸೆ ನೀಡುವುದಕ್ಕೂ ಒಪ್ಪದೆ ಒಂದೇ ಸಮನೆ ಕಿರಿಚಾಡತೊಡಗಿದೆ. ಚಟಾರ್................... ಎಂದು ಕಪಾಳಕ್ಕೆ ಒದೆ ಬಿತ್ತು, ಅಷ್ಟೆ ಗೊತ್ತಾದದ್ದು, ಹೊಡೆದದ್ದು ಯಾರೆಂದು ನೋಡುವುದರೊಳಗೆ ನನಗೆ ಜ್ಣಾನ ತಪ್ಪಿದಂತಾಗಿತ್ತು. ಆಮೇಲೆನಾಯಿತೋ ಗೊತ್ತಿಲ್ಲ. ಎಚ್ಚರವಾದಾಗ ನನಗೆ ಕ್ಯೆಕಾಲುಗಳನ್ನು ಕಟ್ಟಿ ಹಾಕಿದ್ದರು. ಮತ್ತು ಮೊದಲಿನ ಸುಸ್ತು ಸ್ವಲ್ಪ ಕಡಿಮೆಯಾಗಿತ್ತು. ಪಕ್ಕದಲ್ಲೇ ಸೌಭಾಗ್ಯಮ್ಮ ಕುಳಿತಿದ್ದಳು. ಅವಳ ನೋಡುತ್ತಿದ್ದಂತೆ ನನಗೆ ರೋಷ ಉಕ್ಕಿಬಂದರು, ಇನ್ನು ನನ್ನಿಂದೇನು ಹೋರಾಡಲು ಸಾಧ್ಯವಿಲ್ಲ ಎನಿಸಿ, ಸುಮ್ಮನೆ ಮಲಗಿದ್ದೆ.

ಸೌಭಾಗ್ಯಮ್ಮ ಒಮ್ಮೊಮ್ಮೆ ಬಹಳ ಸಾದ್ವಿಯಂತೆ ನನ್ನ ಬಳಿ ಬಂದು ನಿನ್ನ ಆರೋಗ್ಯ ಸುಧಾರಿಸಿಕೋ, ನೀನು ಹಟ ಹಿಡಿದರೆ ಆರೋಗ್ಯ ಸುಧಾರಿಸುವುದಾದರೂ ಹೇಗೆ ? ಮೊದಲು ಹುಷಾರಾಗು ಎಂದೆಲ್ಲ ಥೇಟ್ ನಮ್ಮಮ್ಮನಂತೆ ಹೇಳುವಾಗಲಂತೂ ಅಪ್ಪ-ಅಮ್ಮನ ನೆನಪು ತುಂಬಾ ಬರುತ್ತಿತ್ತು.

ಮುಂದುವರೆಯುವುದು............

ಬುಧವಾರ, ಆಗಸ್ಟ್ 4, 2010

ದೇವರು, ಧರ್ಮ ಮತ್ತವನ ಜಾತಿ. - ಸರಣಿ ೨

ಕ್ರಿ.ಪೂ. ೧೦೦೦
ದೇವರು ಹುಟ್ಟಿದ್ದು ಹೇಗೆ ?

ಹಳೆಶಿಲಾಯುಗದ ಕಾಲದಲ್ಲಿ ಮನುಷ್ಯ ತನ್ನ ಹೊಟ್ಟೆಪಾಡಿಗಾಗಿ ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದದ್ದು, ಪಠ್ಯಪುಸ್ತಕಗಳಲ್ಲಿ ಓದಿಯೇ ಇರುತ್ತೀರಿ. ಅದು ಅವನ ಅಂದಿನ ಅವಶ್ಯಕತೆ. ಆದರೆ ಮನುಷ್ಯನಿಗೆ ತನ್ನ ಸುತ್ತಮುತ್ತಲಿನ ನಿಸರ್ಗದ ವ್ಯೆಪರೀತ್ಯಗಳು, ಒಮ್ಮೊಮ್ಮೆ ವಿಚಿತ್ರವಾಗಿ ಉಂಟಾಗುವ ಗುಡುಗು, ಮಿಂಚು, ಭೂಕಂಪ ಅವನನ್ನು ಗೊಂದಲಕ್ಕೀಡು ಮಾಡುತ್ತಿತ್ತೇನೋ ? ಈ ವಿಚಿತ್ರಗಳ ಅನುಭವದಿಂದ ಮನುಷ್ಯ ತನ್ನನ್ನು ಮೀರಿ ಮತ್ತೊಬ್ಬ ಶಕ್ತಿವಂತನಿರಬಹುದು. ಆ ವ್ಯಕ್ತಿ ಇವೆಲ್ಲವನ್ನು ಮಾಡುತ್ತಿರಬಹುದೇನೋ ಎಂಬ ಭ್ರಾಂತಿಗೆ ಬಂದ ? ನಿಸರ್ಗದ ದೃಷ್ಠಿಯಲ್ಲಿ ಮನುಷ್ಯ ಕಂಡ ಪ್ರತಿ ಬದಲಾವಣೆಗಳನ್ನು ನಂತರದ ದಿನಗಳಲ್ಲಿ ದೇವರು ಎಂಬ ಹೆಸರಿನಲ್ಲಿ ಕರೆದಿರಬಹುದು.

ಇಂಥ ದೇವರುಗಳನ್ನು ಕಾಲಕ್ರಮೇಣ ಪ್ರತಿ ಪಂಗಡದಲ್ಲೂ ಅವರ ಕಲ್ಪನೆಯ ಅನುಸಾರ ಮೂರ್ತರೂಪ ಕೊಟ್ಟು, ಆ ಗುಂಪಿನ ನಾಯಕ ತನಗೆ ಏನು ತೋಚುತ್ತಿತ್ತೋ ಹಾಗೆ ಪೂಜೆಯನ್ನೋ ಅಥವಾ ಮತ್ತಿನ್ಯಾವುದೋ ರೀತಿ ಮನವಿಯನ್ನೋ ಮಾಡುತ್ತಿದ್ದುದು ಇನ್ನಿತರ ಸದಸ್ಯರುಗಳಿಗೆ ಅದೇ ಸರಿ ಮತ್ತು ನಾಯಕನ ಮಾತಿನಂತೆ ಮತ್ತವನು ಮಾಡುತ್ತಿದ್ದ ಪೂಜೆಯೆಂಬ ಹೆಸರಿನ ಪ್ರಕಾರವೇ ದೇವರನ್ನು ಒಲಿಸುವುದು ಎಂಬ ಭಾವನೆ ಬಂದಿರಬಹುದು. ಹೀಗೆ ನಡೆಸುವ ಪೂಜೆ-ಪುನಸ್ಕಾರಗಳ ನಂತರ ಅವರ ಕಷ್ಟಗಳು ಆಕಸ್ಮಿಕವಾಗಿ ನಿವಾರಣೆಯಾದಾಗ ದೇವರು ನಮ್ಮ ಇಷ್ಟಾರ್ಥವನ್ನು ಸಿದ್ಧಿಸುವ ವ್ಯಕ್ತಿ ಮತ್ತು ನಾವು ಆ ಕಾಣದ ವ್ಯಕ್ತಿಗೆ ಯಾವತ್ತೂ ಅಭಾರಿಯಾಗಿರಬೇಕೆನ್ನಿಸಿತೇನೋ ?,

 .  ಪ್ರಕೃತಿಯಲ್ಲಿನ ಪ್ರತಿ ಕ್ಷಣದ ಬದಲಾವಣೆಗಳು ಕೆಲವು ಕಾಲದ ನಂತರ ನಿಲ್ಲುತ್ತವೆ, ಮತ್ತೆ ಮತ್ತೆ ಪುನರಾವರ್ತನೆಗಳಾಗುತ್ತವೆ. ಇಂಥ ಪುನಾರವರ್ತನೆಗಳು ಭೂಮಿಯ ಮೇಲ್ಮ್ಯೆ ಲಕ್ಷಣ, ಭೌಗೋಳಿಕ ವ್ಯತ್ಯಾಸ, ವಾತಾವರಣದ ಏರು ಪೇರುಗಳಿಂದ ಸಾಧ್ಯ. ಕನಿಷ್ಠ ವಿಚಾರಗಳನ್ನು ಯೋಚಿಸಲು ಇಷ್ಟಪಡದ ಜನ ತಮ್ಮ ಗುಂಪಿನ ನಾಯಕನ ಅಣತಿಯಂತೆ ತಮ್ಮದೇ ಆದ ವಿಧಾನಗಳನ್ನು, ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವು ಮಾರ್ಪಾಡುಗಳನ್ನು ಕಾಲಕ್ರಮೇಣ ಮಾಡಿಕೊಂಡದ್ದು ಇರಬಹುದು. ಆಗಿನ ಶಿಲಾಯುಗದ ಜನರ ಅನೇಕ ಗುಂಪುಗಳು ಇಂಥದೇ ಪರಿಸ್ಥಿತಿಯನ್ನು ಎದುರಿಸಿ ಅವರದೇ ಆದ ನೀತಿ ಕಟ್ಟುಪಾಡುಗಳನ್ನು ಆಚರಣೆಗೆ ತಂದಿದ್ದಿರಬಹುದು.

ಮನಶಾಸ್ತ್ರಜ್ಣರು ಹೇಳುವಂತೆ ಎಲ್ಲ ಮನುಷ್ಯರು ಕಾಲಕ್ಕೆ ತಕ್ಕಂತೆ ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಅವು ಕಾಲದಿಂದ ಕಾಲಕ್ಕೆ ಬದಲಾದರೂ, ಅವುಗಳಲ್ಲಿನ ಬದಲಾವಣೆಗಳು ಮುಂದಿನ ತಲೆಮಾರಿನಿಂದ ಆಗಿರುತ್ತವೆ. ದೇವರು ಎಂಬ ಭಾವ ಮನುಷ್ಯನ ಕೆಲವು ವಿಚಿತ್ರ ಯೋಚನೆಗಳಿಗೆ ಅನುಕೂಲವು ಹಾಗೂ ಅನಾನುಕೂಲವು ಆಗಿದ್ದಿರಬಹುದು. ಅವನ ಅನುಕೂಲಗಳನ್ನು ದೇವರ ಕೃಪೆಯೆಂದು, ಅವನ ಅನಾನುಕೂಲವನ್ನು ಶಾಪವೆಂದು ಭ್ರಮಿಸಿ, ಅದರಂತೆ ನಡೆದುಬಂದಿರಬಹುದು.

ಪ್ರದೇಶದಿಂದ ಪ್ರದೇಶಕ್ಕೆ ಮಾರ್ಪಾಡುಗಳಾದಾಗ ಮೊದಲಿಗೆ ದೇವರ ಪರಿಕಲ್ಪನೆಯನ್ನು ಪ್ರತಿಗುಂಪುಗಳು ನಂಬಿದ್ದ ರೀತಿಯೇ ಶ್ರೇಷ್ಠ ಎಂಬುವ, ಹಾಗೂ ಅದರಂತೆ ನಡೆದುಕೊಳ್ಳುವ ಹಂಬಲ ಹೆಚ್ಚಾದದ್ದಿರಬಹುದು. ನಲವತ್ತು ಜನರಿರುವ ಒಂದು ಗುಂಪಿನ ನಾಯಕ ತನ್ನ ಮನಸ್ಸಿಚ್ಚೆಯಂತೆ ಯಾವುದನ್ನು ಆಚರಿಸುವನೋ ಅದೇ ಆ ಗುಂಪಿನ ಸದಸ್ಯರ ಆಚರಣೆಗಳಾಗಿರಬಹುದು. ನಂತರದ ದಿನಗಳಲ್ಲಿ ಅವನ ಗುಂಪಿನ ಮಕ್ಕಳು ಮೊಮ್ಮಕ್ಕಳು, ಮರಿ ಮಕ್ಕಳು ಆ ಕ್ರಮವನ್ನೇ ಆಚರಿಸುತ್ತಾ ಅದೇ ನಮ್ಮ ಕುಲದೇವರು ಮತ್ತು ಆ ಜಗವೇ ನಮ್ಮ ಜಾತಿ ಎಂಬ ಅಭಿಮತಕ್ಕೆ ಬಂದಿದ್ದಿರಬಹುದು. ಕಲ್ಲಿನಿಂದ ಕಲ್ಲನ್ನು ಹೊಡೆದಾಗ ಉಂಟಾಗುತ್ತಿದ್ದ ಬೆಳಕು ಬೆಂಕಿಯಾಗಿ, ನಂತರದ ದಿನಗಳಲ್ಲಿ ಮನುಷ್ಯನಿಗೆ ಅದರ ಬಳಕೆಯು ತಾನು ತಿನ್ನಿವ ಆಹಾರಕ್ಕೆ ಅಗತ್ಯವಾಗಿ, ಆಹಾರಗಳನ್ನು ಬೇಯಿಸಿ ತಿಂದರೆ ರುಚಿ ಹೆಚ್ಚೆಂಬುದನ್ನು ತಿಳಿದು, ಬೇಯಿಸಿ ತಿನ್ನುವ ಆಹಾರ ಶುದ್ಧ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎಂಬ ಚಿಂತನೆ, ದೇವರ ಹುಟ್ಟಿಗೂ ತಳುಕು ಹಾಕಿ ನೋಡಬಹುದು.

ಮುಂದುವರೆಯುವುದು.................

ಮಂಗಳವಾರ, ಆಗಸ್ಟ್ 3, 2010

ಯುವ ಜನರೇ ಆತ್ಮಹತ್ಯೆಗೆ ಮುನ್ನ ಯೋಚಿಸಿ ?

ಬದುಕಿನ ಕಟ್ಟಕಡೆಯ ಸಂಧರ್ಭವಾದರು, ಯಾರಿಗೂ ತಿಳಿಯದ ನಿಗೂಢ, ಇಂದಿನ ಯುವ ಜನರ ಮನದಲ್ಲಿ ಸಾವು ಎಂಬುದು ಆಟಿಕೆಯ ವಸ್ತುವೇ ? ಸಾವನ್ನು ಅಷ್ಟು ಸುಲಭವಾಗಿ ಆಸ್ವಾದಿಸುವುದಾದರೆ ಎಷ್ಟೋ ಸಮಸ್ಯೆಗಳಿಗೆ ಜೀವವೇ ಇರುತ್ತಿರಲಿಲ್ಲ. ಇಂದಿನ ಧಾವಂತದದ ಯುಗದಲ್ಲಿ ಎಲ್ಲೆಲ್ಲೂ ಪ್ಯೆಪೋಟಿ, ಎಲ್ಲರನ್ನು ಹಿಂದುಕ್ಕುವಂತ ನಾಗಾಲೋಟದ ಮನಸ್ಸಿಗೆ ಅಷ್ಟು ಸುಲಭವಾಗಿ ಸಾವು ಬಂತಂದರೆ ಅಥವಾ ಸಾವಿನ ನಿರ್ಣಯವನ್ನು ಕ್ಯೆಗೆತ್ತುಕೊಂಡರೆ ಅದಕ್ಕಿಂತಲೂ ಹೇಡಿತನ ಮತ್ತೊಂದಿಲ್ಲ.

ಅಸಲಿಗೆ ನಮ್ಮ ಯುವ ಜನರಲ್ಲಿ ಸಮಸ್ಯೆಗಳ ಪರಿಹಾರವನ್ನು ಹುಡುಕಿಕೊಳ್ಳುವ ತಾಳ್ಮೆಯೇ ಇಲ್ಲದಾಗಿದೆಯೇ ? ಅಥವಾ ಪ್ಯೆಪೋಟಿ ಜಗತ್ತಿಗೆ ಅವರನ್ನು ಒಡ್ಡಿಕೊಳ್ಳುವ ಛಲವೇ ಮರೆತು ಹೋಗಿದೆಯೇ ? ಸಮಸ್ಯೆ ಕೌಟುಂಬಿಕದ್ದೆ ಇರಲಿ, ಅಥವಾ ನೌಕರಿಯದೆ ಇರಲಿ, ಪ್ರತಿ ಸಮಸ್ಯೆಗಳು ಸೃಷ್ಟಿಗಳಿಗೂ ಕಾರಣ ಪರಿಹಾರವಿಲ್ಲದೆ ಇಲ್ಲ. ಈಗ್ಗೆ ಕೆಲವು ವರುಷಗಳಿಂದ ಸ್ವಾಭಾವಿಕ ಸಾವಿನ ಸಂಖ್ಯೆ ಇಳಿಮುಖವಾದರು, ಅಸ್ವಾಭಾವಿಕವಾಗಿ ಸಾವನ್ನು ಬರಮಾಡಿಕೊಳ್ಳುವ ಯುವ ಜನರಲ್ಲಿ ಮಾನಸಿಕ ಸ್ಥ್ಯೇರ್ಯ, ಸಮಸ್ಯೆಗಳ ಸ್ವರೂಪದಲ್ಲಿರುವ ಗೋಜಲುಗಳು, ಅರ್ಥಮಾಡಿಕೊಳ್ಳುವದರಲ್ಲಿ ಸಂಯಮವೇ ಕಳೆದು ಹೋಗಿದೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕದೆ ಯಾರನ್ನೋ ಹೊಣೆಯನ್ನಾಗಿ ಮಾಡುವ, ಸಾವನ್ನೇ ಆಯ್ಕೆ ಮಾಡಿಕೊಳ್ಳುವ ಯೋಚನೆಯಲ್ಲಿರುವ, ಮತ್ತು ಅದರ ಕೂತೂಹಲಕ್ಕೆ ಪ್ರಯತ್ನಿಸುವ ಮಿತ್ರರೇ, ಒಮ್ಮೆ ನಿಮ್ಮ ಸಮಸ್ಯೆಯಾ ಬಗ್ಗೆ ಚಿಂತನೆ ನಡೆಸಿ, ಸಾಧ್ಯವಾದರೆ ನಿಮ್ಮ ಆಪ್ತರೊಡನೆ ಒಮ್ಮೆ ಚರ್ಚಿಸಿ,

ನನ್ನ ಮಿತ್ರನೊಬ್ಬ ಕಳೆದ ವರುಷಗಳ ಹಿಂದೆ ಇದ್ದಕ್ಕಿದ್ದಂತೆ ನೇಣಿಗೆ ಶರಣಾದ, ಅವನ ಸಮಸ್ಯೆ ಕೇವಲ ದುಡ್ಡಿಗೆ ಸಂಭಂದಿಸಿದ್ದು, ತಂಗಿಯ ಮದುವೆಗೆ ಸಾಲ ಮಾಡಿದ್ದ ಜವಾಬ್ದಾರಿಯುತ ವ್ಯಕ್ತಿ, ಸಾಲ ತೀರಿಸಲಾಗದೆ ಸಾವನ್ನು ಬರಮಾಡಿಕೊಂಡಿದ್ದ. ಒಂದಿಬ್ಬರು ಗೆಳೆಯರಲ್ಲಿ ಸಣ್ಣ ಪುಟ್ಟ ಸಾಲ ಇತ್ತಾದರೂ ಅದ್ಯಾವುದು ಅವನ ಸಾವಿನಿಂದ ಪರಿಹಾರವಾಗುವ ಸಮಸ್ಯೆಯಲ್ಲ. ತನ್ನ ೧೮ನೇ ವಯಸ್ಸಿಗೆ ಸಾಲ ಮಾಡಿ ಆಟೋ ಖರೀದಿಸಿದ ಹುಡುಗ, ಸಮಯದ ಪರಿವೆಯೇಯಿಲ್ಲದೆ ದುಡಿದು ಎರಡು ವರುಷಗಳಲ್ಲೇ ಸಾಲ ತೀರಿಸಿದವನು, ತನ್ನ ತಂಗಿಯ ಮದುವೆಗೆ ಮಾಡಿದ ಸಾಲ ತೀರಿಸದೆ ಹೋದಾನೆ, ಅದು ಕೇವಲ ಒಂದೂವರೆ ಲಕ್ಷ. ಆತನ ಪರಿಸ್ಥಿತಿಗೆ ಅದು ದೊಡ್ಡದೇ ಇರಬಹುದು, ಸಾವಿನಿಂದ ಅದು ಪರಿಹಾರವಾಗಲಿಲ್ಲ. ಈಗ ಅವನ ಸಾಲವೂ ಬೆಳೆದಿದೆ. ಅವನ ತಾಯಿಗೆ ವಯಸ್ಸಾಗಿದ್ದರೂ ದುಡಿದು ಸಾಲ ತೀರಿಸುವ ಹಂಬಲ. ಆದರೆ ಆರೋಗ್ಯ ಕ್ಯೆಕೊಟ್ಟಿದೆಯಾದರೂ, ಒಬ್ಬರಲ್ಲಿ ಅವಲಂಬನೆಯಾಗದ ತುಡಿತ. ಆಕೆಯೇ ಮಗನಂತೆ ಸಾವಿಗೆ ಶರಣಾಗಿದ್ದಾರೆ ?

ನನ್ನ ಮತ್ತೊಬ್ಬ ಗೆಳೆಯ ಶೇಖರ್ ಈ ದಿನ ಅವನು ಇಲ್ಲವಾದರೂ ಅವನ ಮಾನಸಿಕ ಸ್ಥ್ಯೇರ್ಯ, ಬದುಕಿನ ಹಂಬಲ ಎಂಥವರಿಗೂ ಉತ್ಸಾಹ ತರಿಸುವಂತದ್ದು. ಪದವಿಯ ಕೊನೆಯ ವರ್ಷದಲ್ಲಿ ನಮ್ಮೆಲ್ಲರ ಜೊತೆಗೆ ಪ್ರವಾಸಕ್ಕೆ ಹೊರಟ ಶೇಖರನಿಗೆ ಅದೇ ತನ್ನ ಜೀವನದ ಕಡೆಯ ಉಲ್ಲಾಸದ ಕ್ಷಣ ಎಂದು ಯಾರೂ ಎಣಿಸಿರಲಿಲ್ಲ. ಆಂಧ್ರಪ್ರದೇಶದ ಹ್ಯೆದರಾಬಾದಿಗೆ ಪ್ರವಾಸ ಹೊರಟ ನಾವೆಲ್ಲರೂ ಅನಂತಪುರದ ಸ್ಟೇಶನ್ ಬರುವ ಹೊತ್ತಿಗೆ ಟ್ರೇನ್ ಸಿಗ್ನಲ್ಗಾಗಿ ಅನಂತಪುರದಲ್ಲಿನ ಸಣ್ಣ ಸ್ಟೇಶನ್ ಬಳಿ ನಿಲ್ಲುತ್ತಿತ್ತು. ಬಾಗಿಲ ಬಳಿ ನಿಂತಿದ್ದ ಶೇಖರ್ ಒಮ್ಮೆಗೆ ಕಾಲುಜಾರಿತಷ್ಟೇ........... ಕೆಲವೇ ನಿಮಿಷಗಳಲ್ಲಿ ಟ್ರೇನಿನ ಅಡಿಯಲ್ಲಿ ಸಿಕ್ಕ ಅವನ ಎರಡು ಕ್ಯೆಗಳು ಮತ್ತು ಒಂದು ಕಾಲು ಅವನ ಪರಿವೆಯೇ ಇಲ್ಲದೆ ಜಜ್ಜಿ ಹೋಗಿತ್ತು, ಅದೃಷ್ಟವಶಾತ್ ಅವನ ತಲೆ ಟ್ರೇನಿನ ಕಂಬಿ ಮತ್ತು ಗೋಡೆಯ ಮಧ್ಯದಲ್ಲಿತ್ತು. ತಕ್ಷಣ ಟ್ರೇನಿನ ಚ್ಯೇನೆಳೆದು ಅವನನ್ನು ಉಳಿಸುವುದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದೆವು. ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲೇ ಕೆಲವು ದಿನಗಳು ಇದ್ದ. ನಂತರ ಪರಿಸ್ಥಿತಿ ಕ್ಯೆಮೀರಿದಾಗ ಬೆಂಗಳೂರಿನ ಸಂಜಯ್ ಗಾಂಧೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಹಲವು ಕಡೆ ಓಡಾಡಿದ್ದಾಯಿತು, ಡಾಕ್ಟರ್ಗಳ ಕಠಿಣ ಪರಿಶರಮದಲ್ಲೂ ಅವನ ಕಾಲು ಕ್ಯೆಗಳು ಮೊದಲಿನಂತೆ ಸಾಧ್ಯವಾಗದೆ ಅವನ ಎರಡು ಕ್ಯೆ ಹಾಗು ಒಂದು ಕಾಲನ್ನು ತೆಗೆಯಲೇ ಬೇಕಾದ ಪರಿಸ್ಥಿತಿಯಿತ್ತು. ಕೆಲವು ದಿನಗಳ ನಂತರ ಜ್ಞಾನ ಬಂದವನಿಗೆ ತನ್ನ ಕಾಲು ಕ್ಯೆಗಳಿಗೆ ಬ್ಯಾಂಡೇಜ್ ಸುತ್ತಿರುವಷ್ಟೇ ತಿಳಿಯುತ್ತಿತ್ತು. ಅವನ ಈ ಪರಿಸ್ಥಿತಿಯನ್ನು ಅವನಿಗೆ ಹೇಗೆ ಹೇಳುವುದು ಅನ್ನುವುದೇ ಅವನ ಕುಟುಂಬಕ್ಕೆ ಹಾಗು ನಮಗೆ ಅರ್ಥವಾಗಲಿಲ್ಲ. ಸುಮಾರು ಎರಡು ತಿಂಗಳು ಅವನಿಗೆ ವಿಷಯ ತಿಳಿಸುವ ಗೋಜಿಗೆ ಹೋಗಿರಲಿಲ್ಲ, ಅವನು ಏನನ್ನು ಕೇಳುತ್ತಿರಲಿಲ್ಲ, ಒಮ್ಮೆ ಹೀಗೆ ಮಾತಿನ ಭರದಲ್ಲಿ ಗೆಳೆಯನೊಬ್ಬ ಕ್ಯೆ ಕಾಲುಗಳನ್ನು ತೆಗೆಯುವ ವಿಷಯ ಮಾತನಾಡುತ್ತಿದ್ದಾಗ " ನನ್ನ ಪರಿಸ್ಥಿತಿಯು ಹಂಗೆ ಅಲ್ವಾ ಶಿವ " ಅಂದಾಗ ಮಾತ್ರ ದುಖದ ಕಟ್ಟೆ ಎಲ್ಲರನ್ನು ದೂಡಿ ಮುಂದೆ ಬಂದಿತ್ತು. ಹೆಚ್ಚು ಕಡಿಮೆ ಎಂಟು ತಿಂಗಳುಗಳೇ ಉರುಳಿದವು.

ನಂತರದ ಕೆಲವು ತಿಂಗಳಲ್ಲಿ ಅವನ ವ್ಯಕ್ತಿತ್ವದಲ್ಲಾದ ಬದಲಾವಣೆಗಳು ನಿಜಕ್ಕೂ ಊಹಿಸಲು ಸಾಧ್ಯವಿಲ್ಲ. ತನ್ನ ಎರಡು ಭುಜದ ಕೆಳಗೂ ಕೋಲುಗಳನ್ನು ಸಿಕ್ಕಿಸಿ, ಅವನು ನಡೆಯುತ್ತಿದ್ದರೆ ನಾವು ಅವನೊಂದಿಗೆ ಓಡುತ್ತಿದ್ದೆವು, ಬೀಳುತ್ತಾನೆ ಎಂಬ ಭಯದಿಂದಲ್ಲ, ಅವನ ನಡಿಗೆಯ ವೇಗ ಅಂತದ್ದು. ಎಂದಿಗೂ ಎಲ್ಲರೊಂದಿಗೆ ನಗುನಗುತ್ತಲೇ ಮತಾನಾದುತ್ತಿದ್ದ ಗೆಳೆಯನಿಗೆ ತನ್ನ ಎರಡು ಕ್ಯೆ ಮತ್ತು ಕಾಲಿಲ್ಲವೆಂಬ ವಿಚಾರ ಮರೆತು ಹೋದನೇನೋ ಎನ್ನುವಷ್ಟು, ಉತ್ಸಾಹ ಭರಿತನಾಗಿದ್ದ. ಒಂದು ವರ್ಷದಲ್ಲಿ ಅವನ ಲವಲವಿಕೆ, ವಿಚಾರಗಳು ಎಲ್ಲವೂ ಭಿನ್ನವಾಗಿದ್ದವು. ತನ್ನ ಈ ಸಮಸ್ಯೆಯಿಂದ ೪ ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ  ನನಗಿನ್ನೂ ನೀನು ಬೇಡ ಎಂದರು, ಅವನು ಯೋಚಿಸುತ್ತಿದ್ದ ರೀತಿ, ಸತ್ಯದೆದಗಿನ ಮಾತು ನಮ್ಮೆಲ್ಲರನ್ನೂ ಬಹಳ ಕಾಡುತ್ತಿತ್ತು.

ಇಂಥ ಉದಾಹರಣೆಗಳು ನಮ್ಮ ನಿಮ್ಮ ನಿತ್ಯ ಬದುಕಿನಲ್ಲಿ ಸಾವಿರಾರು ಬಂದು ಹೋಗುತ್ತವೆ, ಅವಕ್ಕೆ ಸಾವೊಂದೇ ಪರಿಹಾರವಾದರೆ, ನನ್ನ ಗೆಳೆಯನ ತಾಯಿ ಹಾಗು ಶೇಖರ್ ಎಂದೋ ಆತ್ಮಹತ್ಯೆಗೆ ಮುಂದಾಗುತ್ತಿದ್ದರು. ಸ್ನೇಹಿತರೆ ಇದಕ್ಕಿಂತಲೂ ಕ್ರೂರವೆ ನಿಮಗೊದಗಿರುವ ಸಮಸ್ಯೆ ?

ಸಾವನ್ನು ಕರೆಯುವ ಮುನ್ನು ಯೋಚಿಸಿ ನೋಡಿ. ನಿಮ್ಮ ಭವಿಷ್ಯ ನಿಮ್ಮ ಕ್ಯೆಯಲ್ಲೇ ಹೊರತು, ನಿಮ್ಮ ಪೋಷಕರದೋ ? ಸ್ನೇಹಿತರದೋ ಅಲ್ಲ ? ನಿಮ್ಮ ಜೀವನದ ಪ್ರತಿ ತಿರುವುಗಳಿಗೆ ನೀವೇ ಜವಾಬ್ದಾರರು.

ಗುರುವಾರ, ಜುಲೈ 15, 2010

ದೇವರು, ಧರ್ಮ ಮತ್ತವನ ಜಾತಿ. - ಸರಣಿ ೧

ದೇವರು ಎಂಬ ಪದ ಸಾರ್ವಜನಿಕವಾಗಿ ಒಮ್ಮೆ ಚರ್ಚೆಗೆ ಬಂದರೆ ಅಲ್ಲಿ ತನ್ನ ಪರಮ ಪ್ರಿಯ ದೇವರೇ ಶ್ರೇಷ್ಠ. ಮತ್ತೆಲ್ಲವೂ ನಿಕೃಷ್ಟ, ಎಂಬಂತೆ ವಾದ ಮಂಡಿಸುವ ಭಕ್ತ ಸಮೂಹ ಎಲ್ಲಿಲ್ಲ ಹೇಳಿ. ಅದರಲ್ಲೂ ವಾದಿಸುವವ ತಾನು ಪೂಜಿಸುವ ದೇವರು ಹೇಗೆಲ್ಲ ಶ್ರೇಷ್ಠ ಎಂಬುದನ್ನು ಸಾಬೀತುಪಡಿಸಲಿಕ್ಕೆ, ಆ ದೇವರ ಕುರಿತಾದ ಕಥೆಗಳು, ಉಪಮೆಗಳು, ಮತ್ತು ಆಧಾರಗಳು, ಮತ್ಯಾವುದೋ ಮಹಿಮೆ, ಅವತಾರಗಳ ಪಟ್ಟಿಯನ್ನೇ ಕೊಟ್ಟುಬಿಡುತ್ತಾನೆ. ನಿಜಕ್ಕೂ ದೇವರೇ ಕೇಳಿಸಿಕೊಂಡರು (ಇದ್ದಲ್ಲಿ) ಈ ಪರಿಯ ವಿಚಾರಗಳು ಅವನಿಗೂ ತಿಳಿದಿರುತ್ತದೋ ಇಲ್ಲವೋ, ಆದರೆ ಹಟಕ್ಕೆ ಬೀಳುವ ಭಕ್ತ ಅದನ್ನು ಹೇಗಾದರೂ ಸರಿಯೇ ಪ್ರಾಬಲ್ಯಕ್ಕೆ ಕಟ್ಟು ಬೀಳುವ ಹಾಗೆ ವಾದಿಸುತ್ತಾನೆ.

ಅಸಲಿಗೆ ದೇವರಿಗೂ ಧರ್ಮಕ್ಕೂ ವಾದಿಸುವ ವ್ಯಕ್ತಿಗೆ ಅಸಲಿಗೆ ಪ್ರತ್ಯಕ್ಷ ದೇವರೇ ಎದುರಿಗೆ ಬಂದರೂ ನಂಬುವುದಿಲ್ಲ, ಇಂತಹ ಪರಿಸ್ಥಿತಿಯಲ್ಲೂ ದೇವರೆಂಬ ದೇವರೇ ಏನು ಮಾಡಲಾಗದಿರುವಾಗ, ಇಲ್ಲ ಸಲ್ಲದ ವಾದ ವಿವಾದಗಳಲ್ಲಿ ತಲೆತೂರಿಸಿ ತನ್ನ ವಾದಶಕ್ತಿಯಿಂದಲೇ ಮತ್ತೊಬ್ಬನನ್ನು ಮರುಳು ಮಾಡುತ್ತೇನೆಂದು ನಿಂತವನಿಗೆ ಮತ್ತೆಲ್ಲವೂ ಗೌಣ್ಯ.

ಎಲ್ಲರೂ ದೇವರು!!!!!!!!!!! ದೇವರು!!!!!!!!!! ಎನ್ನುವ ಈ ದೇವರು ನಿಜಕ್ಕೂ ಯಾರು ? ಮತ್ತು ಯಾವುದು ?

ದೇವರು ಯಾರು ? ಎಂದರೆ (ಧರ್ಮಗಳ ಬಗ್ಗೆ ಮುಂದೆ ದಿನ ಚರ್ಚೆ ಮಾಡೋಣ) ಹಿಂದೂ ಎಂಬ ಹಣೆಪಟ್ಟಿಯಲ್ಲಿ ಬೆಳೆದವನು ಅಟ್ಟಿ ಲಕ್ಕಮ್ಮನಿಂದ ಹಿಡಿದು ಬ್ರಹ್ಮ, ವಿಷ್ಣು, ಮಹೇಶ್ವರಾದಿಗಳವರೆಗೂ ದೊಡ್ಡ ಪಟ್ಟಿಯನ್ನು ಕೊಡುತ್ತಾನೆ. ಇನ್ನು ಮುಸ್ಲಿಂ ಹಣೆಪಟ್ಟಿಯಡಿ ದೇವರುಗಳ ಸಂಖ್ಯೆ ಚಿಕ್ಕದಾದರೂ ಆತ ಯಾವುದನ್ನೂ ಬಿಡದೆ ತಿಳಿಸುತ್ತಾನೆ. ಇನ್ನು ಕ್ರ್ಯೆಸ್ತ, ಜ್ಯೆನ, ಬೌದ್ದ, ಇನ್ನಿತರ ಹಣೆಪಟ್ಟಿಯಡಿ ಬರುವ ಪ್ರಪಂಚದ ದೇವರುಗಳು ತಮ್ಮವೇ ದೇವರುಗಳ ಪ್ರವರ ನೀಡಿ, ಏನನ್ನೋ ಸಾಧಿಸಿಬಿಟ್ಟನೆಂಬಂತೆ ಒಮ್ಮೆ ಬೀಗುತ್ತಾರೆ.

ದೇವರು ಪರಿಕಲ್ಪನೆಯಲ್ಲಿ ಒಂಥರಾ ರಿಮೋಟ್ ಇದ್ದ ಹಾಗೆ, ಅವನ ಟಿವಿಯಲ್ಲಿ ಬರೋಬ್ಬರಿ ೬೦೦ ಕೋಟಿ ಹೆಚ್ಚು ಚಾನೆಲ್ಗಳು ಅಡಕ. ಹಾಗಿರುವ ದೇವರಿಗೆ ಭಕ್ತನ ಪ್ರತಿ ಹೆಜ್ಜೆಯೂ ಆಲೋಚನೆಗಳು ಮತ್ತವನ ನಡುವಳಿಕೆಗಳು, ಒಳ್ಳೆಯದು ಕೆಟ್ಟದ್ದು ಎಲ್ಲವೂ ತಿಳಿದಿರುವ ದೇವರಿಗೆ, ಈ ಉಪಮೆಗಳು ಯಾವತ್ತೂ ದೇವರ ಅಸ್ತಿತ್ವದಲ್ಲಿದ್ದಾನೆಂಬ ನಂಬಿಕೆಗಷ್ಟೆ ಅರ್ಹ. ನಿಜಕ್ಕೂ ದೇವರು ಎಂಬುದು ಇಂದಿನ ಬಹುಜನರ ಪ್ರಶ್ನಾರ್ಥಕ ಚಿಹ್ನೆ, ಇದರ ಉತ್ತರ ಬಿಡಿಸಲು ಹೋದ ಪ್ರತಿಯೋರ್ವನು ನಿರಾಶೆಯಿಂದ ಪ್ರಯತ್ನ ಬಿಟ್ಟಿರುತ್ತಾನೆ. ಹಾಗಂತ ಎಲ್ಲೂ ದೇವರಿಲ್ಲ ಎಂಬ ಮಾತಿಗೆ ಅವನ ವಿರೋಧ ಇದ್ದೇ ಇರುತ್ತದೆ.

ಗುರುವಾರ, ಡಿಸೆಂಬರ್ 24, 2009

ಕನಸು ನನಸಾದಾಗ..............

ಇವತ್ತು ನಿಮ್ಮೊಂದಿಗೆ ಒಂದು ಸುಂದರ ಕನಸುಗಳನ್ನ ಹಂಚಿಕೊಳ್ಳುವ ಇರಾದೆ. ಕನಸುಗಳೆಂದರೆ ಕಪ್ಪು ಬಿಳಿಪಿನ ಕನಸೇ, ಕಲರ್ ಪುಲ್ ಕನಸೇ ? ಅಕಸ್ಮಾತ್ ಕನಸು ಕಪ್ಪು ಬಿಳುಪಾಗಿಯು ಬೀಳ್ತವೆಯೇ ? (ಇದುವರೆಗೂ ಯಾವ ಕನಸು ನನಗಂತೂ ಕಪ್ಪು ಬಿಳುಪಾಗಿ ಬಿದ್ದಿಲ್ಲ ) :) ನನದು ಒಂದು ಕಲರ್ ಪುಲ್ ಕನಸ ಕೇಳಿ .........,


ನೆನ್ನೆ ರಾತ್ರಿ ಮಲಗುವಾಗಲೇ ತಡವಾಯ್ತು ಬಹುಶಃ ಎರಡು ಮೂರು ಘಂಟೆ ಇರಬಹುದು. ಸ್ವಲ್ಪ ಹೊತ್ತಿನಲ್ಲೇ ವಾಸ್ತವದಲ್ಲಿ ನನಗೆ ಪರಿಚಯವಿಲ್ಲದವರೊಬ್ಬರು, ಆದರೆ ತುಂಬಾ ಪರಿಚಿತರಂತೆ ಮಾತನಾಡುತಿದ್ದಾರೆ. ಎಷ್ಟು ಹೊತ್ತಾದರೂ ಅವರ ಮುಖವೇ ಕನಸಿನಲ್ಲಿ ಮೂಡುತ್ತಿಲ್ಲ . ಆದರೆ ಆ ಧ್ವನಿ ನನಗೆ ತುಂಬಾ ಪರಿಚಿತವೇನೋ ಎಂಬಂತೆ, ಎಚ್ಚರವಾದರೂ ಅವರೊಂದಿಗೆ ಮಾತಾನುದುತ್ತಿರುವಂತೆ ಭಾಸ. ಅಷ್ಟರೊಳಗೆ ಬೆಳಗಿನ ಜಾವವಾದ್ದರಿಂದ ನಾನು ನನ್ನ ನಿತ್ಯ ಕೆಲಸಗಳಲ್ಲಿ ತೊಡಗಿಕೊಂಡೆ, ಇಂದು ಮಧ್ಯಾನ್ಹ ೧೨ಕ್ಕೆ ನನ್ನ ಕಚೇರಿಯಲ್ಲಿ ಅಕೌಂಟ್ ಅಸಿಸ್ಟಂಟ್ ಹುದ್ದೆಗೆ ಸಂದರ್ಶನವಿತ್ತು. ಅಷ್ಟರೊಳಗೆ ನಾನು ಆ ಕನಸನ್ನು ಮರೆತುಹೋಗಿದ್ದೆ. ಸಂದರ್ಶನಕ್ಕೆ ಬಂದ ೫ ಜನರಲ್ಲಿ ೨ ಹುಡುಗಿಯರು ಮತ್ತೆಲ್ಲ ಹುಡುಗರು. ಆಗತಾನೆ ಪದವಿ ಮುಗಿಸಿ ಬಂದಿದ್ದ ಹೊಸಬರು. ಒಬ್ಬೊಬ್ಬರಾಗಿ ಸಂದರ್ಶನಕ್ಕೆ ಹಾಜರಾಗುತ್ತಿದ್ದರು. ಇನ್ನೇನು ಎಲ್ಲರ ಸಂದರ್ಶನ ಮುಗಿಸುವ ಹೊತ್ತಿಗೆ ಮತ್ತೊಂದು ಹುಡುಗಿಯು ಸಂದರ್ಶನಕ್ಕೆ ಬಂದಿದ್ದಾಳೆ ಎಂದು ನನ್ನ ಕಚೇರಿಯ ಸ್ವಾಗತಕಾರಿಣಿ ಪೋನ್ ಮೂಲಕ ಮೀಟಿಂಗ್ ರೂಮಲ್ಲಿದ್ದ ನನಗೆ ತಿಳಿಸಿದಳು, ಆಗಲೇ ಘಂಟೆ ೧.೩೦ ಆಗಿತ್ತು. ಸರಿ ಆಕೆಯನ್ನು ಸಂದರ್ಶನಕ್ಕೆ ಬರಲು ಹೇಳಿ, ಈಗಾಗಲೇ ಸಂದರ್ಶಿಸಿದವರಲ್ಲಿ ಯಾರು ಉತ್ತಮರೆಂದು ಮನಸ್ಸಿನಲ್ಲೆ ಲೆಕ್ಕಾಚಾರ ಹಾಕುತ್ತಿದ್ದೆ. ಒಳಗೆ ಬರಬಹುದ ?????????? ಎಂದು ಕೇಳಿದ ಧ್ವನಿಗೆ ಆಶ್ಚರ್ಯಚಕಿತನಾದೆ, ಏಕೆಂದರೆ ಇದೆ ಧ್ವನಿಯನ್ನು ತಾನೇ ಕನಸಿನಲ್ಲಿ ಕೇಳಿದ್ದು. ಒಂದು ಕ್ಷಣ ಮೂಕ ವಿಸ್ಮಿತನಂತಾಗಿ, ಕಮಿನ್ ಎಂದು ಹೇಳಿದೆ. "ನ್ಯೆಸ್ " ಟೆಲ್ ಮಿ ಅಬೌಟ್ ಯುವರ್ ಸೇಲ್ಪ್ಹ್ ? ಅಂತಷ್ಟೇ ಉಗುಳು ನುಂಗಿಕೊಂಡು ಹೇಳಿದ್ದು. ಆ ಹುಡುಗಿಯ ಹೆಸರು ಮಾನಸ, ಊರು ಶಿವಮೊಗ್ಗದ ಹತ್ತಿರ ಶಿರಾಳಕೊಪ್ಪ, ಆ ಕಡೆಯಿಂದ ಉಳಿಯಿತು ಆ ಧ್ವನಿ. ಆಕೆ ಏನೇನೋ ಹೇಳತೊಡಗಿದಳು, ಒಂದು ಯಾವುದು ಕೇಳಿಸಿದಂತಾಯಿತು. ಒಂದೈದು ನಿಮಿಷ ಕಾಟಾಚಾರಕ್ಕೆ ಮಾತಾಡಿ ಆಕೆಯನ್ನು ಹೊರಡುವಂತೆ ಹೇಳಿ ಹೊರಬಂದೆ.


ಊಟ ಮುಗಿಸಿ, ನನ್ನ ಬಾಕಿ ಕೆಲಸದಲ್ಲಿ ತಲ್ಲಿನನಾಗಲು ಪ್ರಯತ್ನಿಸಿದನಾದರು, ಯಾಕೋ ಸಾಧ್ಯವಾಗಲಿಲ್ಲ. ಪ್ರತಿ ಐದು ನಿಮಿಷಕೊಮ್ಮೆ ಆಕೆಯ ಪರಿಚಯ ಪತ್ರವನ್ನು ಓದತೊಡಗಿದೆ. ಹು... ಹು. ಇಲ್ಲ ...... ಯಾವುದೇ ಕಾರಣಕ್ಕೂ ಇನ್ನು ಬೇರೆ ಸಂದರ್ಶನವನ್ನು ಮಾಡಬಾರದು. ಈಕೆಯನ್ನೇ ಆರಿಸುವ ಎಂದು ಒಳಮನಸು ಹೇಳಿತಾದರು, ಮತ್ತೊಮ್ಮೆ ಅವಳೇನು ಅಂಥ ಸುಂದರಿಯಲ್ಲ, ಆದರು ಮಾತು, ಸಂಯಮ, ಪ್ರಜ್ಞೆ ಎಲ್ಲವು ಸರಿ, ಮೇಲಾಗಿ ಮೊದಲೆರಡು ಸಂದರ್ಶನ ಮಾಡಿದ ಹುಡುಗ ಹುಡುಗಿಗಿಂತ ಕೆಲಸಕ್ಕೆ ಬೇಕಾದ ವಿಚಾರಗಳನ್ನು ಈಕೆ ತಿಳಿದುಕೊಂಡಿಲ್ಲ ಎನಿಸುತ್ತಿತ್ತು. ಯಾವ ನಿರ್ಧಾರವನ್ನು ತೆಗೆದುಕೊಳ್ಳದೆ ನನ್ನ ಹಿರಿಯ ಅಧಿಕಾರಿಗಳಿಗೆ ನಾಳೆ ಶಾರ್ಟ್ ಲಿಸ್ಟ್ ಕಳಿಸುತ್ತೇನೆ, ಎಂದು ಮಿಂಚಂಚೆ ಕಳುಹಿಸಿದೆ.

ಮಿಂಚಂಚೆಗೆ ಪ್ರತ್ಯುತ್ತರ ಬಂತು ಇಂದೇ ನಿರ್ಧಾರ ತೆಗೆದುಕೊಳ್ಳಬೇಕು, ನಾಳೆ ನಾನು ಬೆಳಿಗ್ಗೆ ಇರುವುದಿಲ್ಲ ಇಂತಿ ಎಂ ಡಿ. ನನ್ನ ಲೆಕ್ಕಾಚಾರ ತಲೆಕೆಳಗಾಗುವ ಸರದಿ ಈಗ (ನಾಳೆ ಬೆಳಿಗ್ಗೆ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಮೀಟಿಂಗ್ ಇತ್ತು. ಅಷ್ಟರೊಳಗೆ ನಾನು ಆರಿಸಿದವರ ಪರಿಚಯ ಪತ್ರವನ್ನು ನಮ್ಮ ಎಂ ಡಿಗೆ ನೀಡುವ ಎಂದೆಣಿಸಿದ್ದೆ) . ಜಗದೀಶ್ ೫/೧೦, ನವೀನ ಕುಮಾರ್ ೬/೧೦, ಸಂಜನ ೬/೧೦, ನಟರಾಜ್ ೩/೧೦, ಮಾನಸ ೯/೧೦ ಬರೆದಾಗಿತ್ತು :)

ಎಲ್ಲವನ್ನು ಕೂಲಂಕುಷವಾಗಿ ನೋಡಿದ ಎಂ. ಡಿ. ಹಾಸ್ಯ ಮಿಶ್ರಿತವಾಗಿ ಏನರವಿಂದ್ ೯/೧೦ ಈಕೆ, ಅಷ್ಟು ಚೆಂದನಾ ? ? ಅಂತ ಕಣ್ಣು ಹೊಡೆದು ಕೇಳಿದಾಗ, ಆತಂಕದಲಿದ್ದ ನಾನು ಹು...... ಸರ್,,,,,,,, ಅಯ್ಯೋ ಇಲ್ಲಾ ಸರ್........... ಅಂತ ಏನೇನೋ ಒದರಲಾರಂಭಿಸಿದೆ. ಆದರೆ ಅವರು ಅದನ್ನು ಗಮನಿಸಲಿಲ್ಲ ಅನ್ಸುತ್ತೆ. ಸರಿ ಹಾಗಾದರೆ ಆಕೆಯನ್ನು ನಾಳೆ ಮತ್ತೊಂದು ಸುತ್ತಿನ ಸಂದರ್ಶನಕ್ಕೆ ಸಮಯವನ್ನು ನೀನೆ ಗೊತ್ತು ಮಾಡು, ಸಂಜೆ ೩ರ ನಂತರವಾದರೆ ಮೋಹನ್(ಮತ್ತೊಬ್ಬ ಎಂ. ಡಿ.) ಸಹ ಇರ್ತಾರೆ, ಎಂದರು. ತಲೆಯಲ್ಲಾಡಿಸಿ ಹೊರಬಂದೆ, ಮನಸಿನಲ್ಲಿ ಏನೋ ಸಂತೋಷ, ನನ್ನ ಕುರ್ಚಿಯ ಹೋಗಿ ಮೊದಲು ಫೋನ್ ರಿಸಿವರ್ ಕ್ಯೆಗೆತ್ತುಕೊಂಡು ಮೊದಲಿನಿಂದಲೂ ಆ ಮೊಬ್ಯೆಲ್ ಸಂಖ್ಯೆ ಗೊತ್ತೇನೋ ಎಂಬಂತೆ ಪಟಪಟನೆ ಸಂಖ್ಯೆ ಒತ್ತಿದೆ...... ೯೯೪೫೦........(ಆಕೆಯ ಧ್ವನಿಗೆ ಕಾತರನಾಗಿದ್ದೆ) ಆ ಕಡೆಯಿಂದ ಹಲೋ ......... ಎಂದಿತೊಂದು ಧ್ವನಿ (ಅವಳಲ್ಲ), :( ಸಾವರಿಸಿಕೊಂಡು "ಆಮ್ ಸ್ಪೀಕಿಂಗ್ ತು ಮಿಸ್. ಮಾನಸ ?, ಇಲ್ಲ (ಕನ್ನಡಲ್ಲೇ) ಅವಳಿಲ್ಲ ಯಾರು ಮಾತಾಡೋದು ಎಂದಿತು ಆ ವ್ಯಕ್ತಿ, ನಾನು ಇಂತ ಕಂಪೆನಿಯಿಂದ, ಈ ವಿಚಾರವಾಗಿ ಪೋನ್ ಮಾಡ್ತಿದ್ದೀನಿ, ನಿಮ್ಮ ಹುಡುಗಿಗೆ ನಮ್ಮ ಆಫೀಸಿಗೆ ಸಂದರ್ಶನಕ್ಕೆ ಬಂದಿದ್ದರು, ಅವರಿಗೆ ನಾಳೆ ನಮ್ಮ ಆಫೀಸಿಗೆ ಬಂದು ನನ್ನನ್ನು ಕಾಣಲು ಹೇಳಿ ಎಂದೆ (ಸಂಜೆ ೩ ಘಂಟೆಗೆ, ಹೇಳಲು ಮರೆಯಲಿಲ್ಲವಾದರು). ಮತ್ತು ಯಾವುದೇ ವಿಚಾರಕ್ಕೂ ನನ್ನ ಮೊಬ್ಯೆಲ್ ಸಂಖ್ಯೆಯನ್ನು ಕೊಟ್ಟಿರಿ ಎಂದು ಆ ವ್ಯಕ್ತಿಗೆ ನನ್ನ ನಂಬರನ್ನು ನೀಡಿದೆ, ಅಲ್ಲಿಯವರೆಗೆ ಕಾಯುವ ತಾಳ್ಮೆ ನನ್ನಲ್ಲಿರಲಿಲ್ಲ. ಪೋನ್ ಇಟ್ಟೆ.


ಯಾಕೋ ಕೆಲಸ ಮಾಡುವ ಮನಸಿಲ್ಲ, ಮನದಲ್ಲೇ ---- ಛೆ ಇವಳಾದರು ಫೋನ್ ಎತ್ತಿದ್ದರೆ........... ನನ್ನ ಮೊಬ್ಯೆಲ್ ನಂಬರನ್ನ ಆ ವ್ಯಕ್ತಿ ಸರಿಯಾಗಿ ಬರೆದುಕೊಂಡಿಲ್ಲದಿದ್ದರೆ, ಬಹುಷಃ ಸರಿಯಾಗಿ ಬರೆದುಕೊಂಡಿದ್ದರು, ಆಕೆ ಫೋನ್ ಮಾಡದಿದ್ದರೆ, ಛೆ!!!! ಏನೆಲ್ಲಾ ಯೋಚನೆ..... ಚಡಪಡಿಸುತ್ತಿದೆ ಮನಸು........................ ಇನ್ನು ನಾಳೆ ಅವಳು ಸಂದರ್ಶನಕ್ಕೆ ಬರ್ತಾಳೆ ಮೂರು ಘಂಟೆಗೆ .............. ಕಾಯುವ ಸರದಿ ನನದು. :(

ಬುಧವಾರ, ಡಿಸೆಂಬರ್ 16, 2009

ಪ್ರೀತಿಗೊಂದು ಬ್ಯ್ಯೆಯಾಗ್ರಫಿ

ಎಂಥ ಸುಂದರ ಕಲ್ಪನೆ, ಎಂಥ ನವಿರಾದ ವಿಚಾರಗಳು, ಪ್ರೀತಿ ಬಗ್ಗೆ ಮಾತಾಡ್ತಾ ಹೋದ್ರೆ ಅದಕ್ಕೊಂದು ಆದಿ ಅಂತ್ಯನೇ ಇಲ್ಲದ, ಸುವರ್ಣಾತೀತ, ಸುಕೋಮಲ ಮನಸುಗಳ ದಿವ್ಯ ವಿಚಾರ. ಅದೊಂದು ಸಮುದ್ರ ಭೋಗರತದ ಆರ್ತನಾದದಲ್ಲೂ ದಿವಿನಾದ ಏಕಾಂತವ ಕಾಣುವ ಕವನಗಳ ಸಂಕೋಲೆ, ಮಾತುಗಳು ಸಾವಿರ ಕಡಲ ಅಲೆಗಳಾಗಿ ತಾ ಮುಂದು ನಾ ಮುಂದು ಅಂದರೂ, ಎಲ್ಲೋ ಕಾಣದ ನೀರವ ಮೌನ, ಮನಸುಗಳ ಸಂಘರ್ಷದ ಆರ್ತನಾದದಲ್ಲೂ ಅದೊಂದು ದಿವ್ಯ ಬೆಳಗು.

ಮೊದಲ ಬಾರಿಗೆ ಎಲ್ಲೋ ಎಡತಾಕಿಕೊಂಡು ಎದೆಯ ಭಾವನೆಗಳಿಗೆ ಲಗ್ಗೆ ಇಡುವ ಈ ಪ್ರೀತಿಗೆ ಎಂಥ ವ್ಯಕ್ತಿ ಸೂಕ್ತ ಎಂಬ ನಿರ್ಧರಿಸುವ ಧೃಡ ನಿರ್ಧಾರವೇ ಇರುವುದಿಲ್ಲ, ಎಲ್ಲೋ ಕಾಲೇಜಿನಲ್ಲಿ, ಯಾವುದೋ ಕಚೇರಿಯ ಸಹೋದ್ಯಮಿ, ಬಸ್ ಸ್ಟಾಂಡಿನ ಬೆಳಗಿನ ಧಾವಂತದಲ್ಲಿ, ಆಕಸ್ಮಿಕ ಪ್ರಯಾಣದಲ್ಲಿ, ಅಂತರ್ಜಾಲದ ಹರಟೆಯಲ್ಲಿ, ಆಕಸ್ಮಿಕವಾಗಿ ಬಂದು ಬೀಳುವ ಯಾವುದೋ ಮೊಬ್ಯೆಲ್ ಸಂಖ್ಯೆಯ ಕಿರುಸಂದೇಶದಲ್ಲಿ ಇಂಥ ಅದೆಷ್ಟೋ ಅಲ್ಲಿ-ಇಲ್ಲಿಗಳಲ್ಲಿ ಒಂದು ಬಾರಿ ಮಿಂಚಿನಂತೆ ಬಂದು ಹೋಗುವ ಈ ಭಾವನೆ, ಜೀವವನ್ನೇ ಹಿಡಿದು ನುಂಗುವ ಮಟ್ಟಕ್ಕೆ ಹೋದರೂ ಆಶ್ಚರ್ಯವಿಲ್ಲ, ಹಾಗಾದರೆ ಮುಂದೆ ಹೇಳುತ ಹೊರಡುವ ಈ ವಿಧವಿಧದ ಪರಿಚಯಗಳಲ್ಲಿ ಎಂಥ ಅನುಬಂಧ ಇದೆ ಅಲ್ವಾ ತಿಳಿಯೋಣ!!!!

ಈ ಹುಡುಗ ಆಗ ತಾನೇ ಪಿಯುಸಿ ಎರಡನೇ ವರ್ಷದಲ್ಲಿ ಕಾಲಿರಿಸಿದವ, ತನ್ನ ಮುಂದಿನ ಭವಿಷ್ಯತ್ತಿನ ದಾರಿಯನ್ನು ಸುಗಮಗೊಳಿಸುವುದಕ್ಕಾಗಿ ಓದೊಂದೆ ಸರಿ ಎಂಬ ಮನೋಭಾವದವ. ತಂದೆ ತಾಯಿಗಳ ಅಚ್ಚುಮೆಚ್ಚಿನ ಒಬ್ಬನೇ ಮಗ. ಹೆಸರು ಬಾಬು ಪೂರ್ತಿ ಹೆಸರು ಆನಂದ ಬಾಬು. ಹುಟ್ಟಿದಾರಾಭ್ಯ ಕಷ್ಟ ಕೋಟಲೆಗಳನ್ನೇ ಮೃಷ್ಟಾನ್ನವಾಗಿ ಮ್ಯೆವೇಳಿಸಿಕೊಂಡವ. ಓದು ಅಷ್ಟಕ್ಕಷ್ಟೆಯಾದ್ರೂ, ಬುದ್ದಿವಂತ. ಇಂತಹ ಒಬ್ಬ ಸಾಮಾನ್ಯ ಹುಡುಗ ಎಂಥಂಥ ಸಂಧರ್ಬಗಳನ್ನು ಎದುರಿಸುವ...

ಆನಂದಬಾಬು ಅಂಥ ಸುಂದರಾಂಗನಲ್ಲದಿದ್ದರೂ ಪದ್ಮಿನಿಯನ್ನು ನೋಡಿದ ಕೆಲವು ದಿನಗಳಿಂದ ಅವಳ ಯೋಚನೆಯಲ್ಲೇ ತನ್ನ ಸಮಯವನ್ನು ಕಳೆಯುತಾ ಹೋಗುವುದರಲ್ಲಿ ಅವನಿಗೆಂಥದೋ ಅಭ್ಯಾಸ. ಪದ್ಮಿನಿಯೇನು ಅಂಥಾ ಚಂದುಳ್ಳಿ ಚೆಲುವೆಯಲ್ಲದಿದ್ದರೂ ತನ್ನ ಸಾಮಾನ್ಯ ಅಂದಕ್ಕೆ ಮೆರುಗು ನೀಡುವ ಅವಳ ಕಣ್ಣುಗಳು ಎಂಥವನನ್ನೂ ಒಂದು ಕ್ಷಣ ಹಿಡಿದಿಡುವ ತಾಕತ್ತು. ಇಂಥ ಸಾಮಾನ್ಯರ ಬಗ್ಗೆ ನಡೆಯುವ ಪ್ರೇಮ ಪ್ರಲಾಪ ಎಂಥದ್ದೂ ಅದರ ಅಂತ್ಯ .................. ???????





ಮುಂದುವರೆಯುವುದು............

ಶುಕ್ರವಾರ, ಜೂನ್ 26, 2009

ಹುಚ್ಚ ಅಪಾಯಕಾರಿಯಲ್ಲ, ಮತ್ಯಾರು ?

"ಇನ್ನು ಸಾಕು ಈ ಮನುಷ್ಯನ ಸಹವಾಸ, ಒಂದಷ್ಟು ಕಡಿಮೆ ಸಂಬಳವಾದರೂ ಚಿಂತಿಲ್ಲ, ನಾವು ಮಾಡುವ ಕೆಲಸವನ್ನು ಮಾಡಲು ಬಿಟ್ಟರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ"...................

ಹೀಗೆ ಮನಸ್ಸಲ್ಲೇ ಮಂಡಿಗೆ ತಿನ್ನುವ ಅದೆಷ್ಟೋ ಸಹೋದ್ಯೋಗಿಗಳನ್ನ, ಅವರ ಚಿಂತೆಗಳನ್ನ ಕೇಳಿದ್ದೆ. ಆದರೆ ನಾ ಸೇರಿದ ಹೊಸ ಕೆಲಸಕ್ಕೆ ೨ ತಿಂಗಳಾಯಿತು ಅಷ್ಟೆ. ಅಷ್ಟರಲ್ಲೇ ಸಾಕಪ್ಪಾ ಸಾಕು ಅನ್ನಿಸಿದೆ, ಈ ಕಂಪೆನಿ, ಯಾವುದೇ ಕೆಲಸವನ್ನು ಮಾಡಲು ಮೊದಲಿಗೆ ಬೇಕಾಗಿರುವುದು ಯೋಜನೆ, ಮತ್ತು ಆ ಕೆಲಸಕ್ಕೆ ಬೇಕಾದ ಸರಿಯಾದ ಯೋಚನೆ, ಮುಂದೊದಗಿ ಬರಬಹುದಾದ ತೊಂದರೆಗಳ ಚಿಂತನೆ.

ಈ ಕಂಪೆನಿಯಲ್ಲಿ ನಾನು ದಿನದ ಮೊದಲಿನಿಂದಲೂ ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ಅಂದಿನ ಹಿಂದಿನ ದಿನವೇ ಸರಿಮಾಡಿಕೊಂಡು ಬೆಳ್ಳಂಬೆಳಿಗ್ಗೆ ಆಫೀಸಿಗೆ ಕಾಲಿಡುತ್ತಿದ್ದಂತೆ, ನೆನ್ನೆಯ ಅಷ್ಟೂ ಯೋಜನೆಗಳನ್ನು ಒಮ್ಮೆಲೆ ಮುರಿದುಬಿಡುವ ಶತಮೂರ್ಖನ ಕೆಳಗೆ ಕೆಲಸ ಮಾಡುವ ನನ್ನ ಪರಿಸ್ಥಿತಿ ಮಾತ್ರ ವಿಚಿತ್ರ. ಕಂಪೆನಿಯ ಆಗುಹೋಗುಗಳ ಬಗ್ಗೆ ಒಂದು ಸುಧೀರ್ಘ ಯೋಚನೆಗಳನ್ನೇ, ಅದಕ್ಕೆ ತಕ್ಕುದಾದ ಯೋಜನೆಗಳನ್ನೇ ಮಾಡುವಂತಹ ಜನರ ಅನುಭವದ ಕೆಳಗೆ ಕೆಲಸ ಕಲಿತ ನನ್ನಂತವರಿಗೆ, ಕಂಪೆನಿ ಹುಟ್ಟಿ ಆರೇಳು ವರ್ಷಗಳಾದರೂ ಇನ್ನೂ ಟ್ರ್ಯೆಯಲ್ ಮತ್ತು ಎರರ್ಗಳನ್ನೇ ಮಾಡುತ್ತಿದ್ದರೆ ಹೇಗೆ ?

ಹಾಗಂತಾ ನಾವುಗಳು ಏನಾದರೂ ಹೊಸ ಯೋಜನೆಗಳನ್ನು ಮಾಡಿದರೆ ಅಥವಾ ಇತರೆ ಕಂಪೆನಿಗಳು ಈ ರೀತಿ ಅನುಸರಿಸುತ್ತಿವೆ ಎಂದು ಹೇಳಿದರೆ ಒಪ್ಪುವುದಿಲ್ಲ. ತಾನು ಹೇಳಿದ್ದೆ ಕಡೆ ಎಂಬುವ ವಾದ, ಆ ರೀತಿಯ ಅವಾಂತರಗಳ ಪಟ್ಟಿ ಇಲ್ಲಿದೆ ನೋಡಿ.

ಸನ್ನಿವೇಶ : ಮೀಟಿಂಗ್

ಮುಖ್ಯಸ್ಥ : ಕಂಪೆನಿಯಲ್ಲಿ ಫ್ಯೆಲಿಂಗ್ ವ್ಯವಸ್ಥೆ ಚೆನ್ನಾಗಿರಬೇಕು, ಪ್ರತಿಯೊಂದಕ್ಕೂ ಅದರದೇ ಆದ ಫ್ಯೆಲ್ ಅನುಸರಿಸಿ, ಸಹಿ ಹಾಕಬೇಕಾದರೆ ಆ ಫ್ಯೆಲಿನ ಅಷ್ಟು ಹಿಂದಿನ ವಿವರಗಳು ಅದರಲ್ಲಿರಬೇಕು.(೧೫ನೇ ಜೂನ್, ೧೦.೩೦ಕ್ಕೆ)
ನೌಕರರು : ಸರಿ ಸರ್, ಎಲ್ಲ ಕೆಲಸಗಾರರು ಮೊದಲಿನಿಂದಲೂ ಅದರಂತೆ ನಿರ್ವಹಿಸುತ್ತಿದ್ದರೂ, ಎದುರಾಡುವ ಧ್ಯೆರ್ಯವಿಲ್ಲದೆ, ಸರಿ ಎಂದಷ್ಟೆ ಹೇಳಿ ಬಂದರು.

ಸನ್ನಿವೇಶ : ಚೆಕ್ಕಿಗೆ ಸಹಿ ಹಾಕಿಸುವಾಗ

ಮುಖ್ಯಸ್ಥ : ಏನ್ರೀ ಇದು ಇಷ್ಟೊಂದು ಫ್ಯೆಲ್ ತಂದಿದ್ದೀರಾ, ಒಂದೊಂದು ಫ್ಯೆಲನ್ನ ಒಬ್ಬೊಬ್ಬ ಕಸ್ಟಮರ್ಗೆ ಇಟ್ಟಿರೆ ಹೇಗೆ ? ಒಂದೇ ಫ್ಯೆಲಿನಲ್ಲಿ ಎಲ್ಲವನ್ನೂ ತನ್ನಿ ಹೋಗಿ,(೧೬ನೇ ಜೂನ್ ೧೧.೧೦ಕ್ಕೆ)
ನೌಕರ : ಸರ್, ನೀವೆ ಮೊನ್ನೆ ಹೇಳಿದಿರಲ್ಲ, ಎಲ್ಲ ವೆಂಡರ್ಸ್ ಪೇಮೆಂಟ್ ಮಾಡುವಾಗ ಅವರಿಗೆ ಸಂಬಂಧಪಟ್ಟ ಫ್ಯೆಲನ್ನು ತರಲೆಂದು,
ಮುಖ್ಯಸ್ಥ : ನಾನು ಹೇಳಿದಂತೆ ಮಾಡ್ರಿ, ಇಷ್ಟೊಂದು ಫ್ಯೆಲ್ ವೇಸ್ಟ್ ಆಗಲಿಲ್ವಾ ಈಗ.
ನೌಕರ : ಸರಿ ಸರ್ ನೀವು ಹೇಳಿದಂತೆ ಮಾಡಿ ತಂದಿದ್ದೇನೆ.
ಮುಖ್ಯಸ್ಥ : xxx ಕಂಪೆನಿಗೆ ಕಡೆಯದಾಗಿ ಪಾವತಿ ಮಾಡಿದ್ದು ಯಾವಾಗ ? (೧೬ನೇ ಜೂನ್ ೧೨.೧೫ಕ್ಕೆ)
ನೌಕರ : ಹೋದ ತಿಂಗಳು ಸರ್, ಅವರ ಬಾಕಿ ಜಾಸ್ತಿಯಿದೆ.
ಮುಖ್ಯಸ್ಥ : ಅದರ ವಿವರವೆಲ್ಲಿ ?
ನೌಕರ : ಸರ್ ಇಲ್ಲಿದೆ ನೋಡಿ.
ಮುಖ್ಯಸ್ಥ : ಏನ್ರಿ ಇದು ಎಲ್ಲಾನು ಒಂದೇ ಕಡೆ ಫ್ಯೆಲ್ ಮಾಡಿದ್ದೀರಲ್ಲ, ಬೇರೆ ಬೇರೆಯಾಗಿ ತರಬೇಕು ಅಂತಾ ಹೇಳಿರಲಿಲ್ವಾ,
ನೌಕರ : ಸಾರ್ ನೀವೆ ಹೇಳಿದ್ರಲ್ಲಾ, ಎಲ್ಲಾನೂ ಒಂದಕ್ಕೆ ಫ್ಯೆಲಿಂಗ್ ಮಾಡಿ ಸಹಿಗೆ ತರಲು.
ಮುಖ್ಯಸ್ಥ : ನಾನೊಂದು ಹೇಳಿದ್ರೆ, ನೀವೊಂದು ಮಾಡ್ತಿರಾ, ಕೊಡಿ
ನೌಕರ : (ಸ್ವಗತ) ಅಬ್ಬಾ ಅಂತು ಸಹಿ ಆಯ್ತು Smiling

ಬಾಗಿಲಿನಿಂದ ಹೊರಬೀಳುತ್ತಿದ್ದಂತೆ...........

ಮುಖ್ಯಸ್ಥ : ರೀ ಬನ್ನಿ ಇಲ್ಲಿ, ಇದಕ್ಯಾಕೆ ಪೇಮೆಂಟ್ ಮಾಡ್ತಿದ್ದೀರಾ, ಅವನಿಗೆ ನಾನು ಹೇಳಿದ ಟ್ಯೆಮಿಗೆ ಮೆಟಿರೀಯಲ್ ಕಳಿಸೊಲ್ಲಾ, ಪೇಮೆಂಟ್ ಮಾಡಬೇಡಿ (ರೊಯ್ಯನೆ ಸಹಿ ಮಾಡಿದ ಚೆಕ್ಕನ್ನು ಹರಿದುಬಿಟ್ಟರು)
ನೌಕರ : ಸಾರ್ ಅವರು ಹಳೆಯ ಬಾಕಿ ಕೊಡದ ಹೊರತು ಮೆಟಿರಿಯಲ್ ಕೊಡೊಲ್ಲಾ ಅಂತಿದ್ದಾರೆ,
ಮುಖ್ಯಸ್ಥ : ನಾನು ನೋಡ್ಕೊತೀನಿ ಬಿಡಿ.

ಅಲ್ಲಿಗೆ ಸಹಿ ಮಾಡಿಸಿದ ಚೆಕ್, ಅದಕ್ಕಾಗಿ ವ್ಯಯಿಸಿದ ಸಮಯ ಎಲ್ಲಾ ನಿರ್ನಾಮ Smiling

ಸನ್ನಿವೇಶ : ಮೀಟಿಂಗ್ (ಜೂನ್ ೨೨, ೧೦.೩೦ಕ್ಕೆ)

ಮುಖ್ಯಸ್ಥ : ಇನ್ನೂ ಮುಂದೆ ಕಂಪೆನಿಯ ನೌಕರರು ನಾನು ಹೇಳಿದ ಕೆಲಸಗಳನ್ನು ಮಾತ್ರ ನೋಡಿಕೊಳ್ಳಬೇಕು,
ಅರವಿಂದ್, ನೀವು ಎಂದಿನಂತೆ ಅಕೌಂಟ್ಸ್ ಮತ್ತು ಫ್ಯೆನಾನ್ಸ್ ನೋಡ್ಕೋತಿರಾ,
ವಿಶ್ವನಾಥ್, ನೀವು ಸೇಲ್ಸ್ ನೋಡ್ಕೊಳ್ರಿ (ಆತ ಕಂಪೆನಿಯ ಅತಿ ಹಿರಿಯ ವ್ಯಕ್ತಿ, ಅವರಿಗೆ, ಫ್ಯೆನಾನ್ಸ್ ಬಿಟ್ರೆ ಬೇರೆನೂ ಗೊತ್ತಿಲ್ಲ)
ವಿಜಯ್, ನೀವು ಟ್ಯಾಕ್ಸೇಷನ್ ಮತ್ತು ಸ್ಟಾಟುಟರಿ ನೋಡ್ಕೊಳ್ರಿ, (ಈತನಿಗೆ ೫೫ ವರ್ಷ, ನಮ್ಮ ಸರ್ಕಾರಿ ಸಂಸ್ಥೆಗಳ ಓಡಾಟ ಸಹ್ಯವೇ ಎಂಬುದು ಅರಿವಿಲ್ಲ,ಮೇಲಾಗಿ ಸ್ಟೋರ್ಸ್ ಡಿಪಾರ್ಟ್ಮೆಂಟ್ ಇವರ ವೃತ್ತಿ)
ಅನಿತ, ನೀವು ಬ್ಯಾಂಕಿಂಗ್ ನೋಡ್ಕೊಳ್ಳಿ, ಲೇಬರ್ಸ್ ಪೇಮೆಂಟ್ ನೋಡ್ಕೊಳ್ಳಿ, ನನ್ನ ಲೋನ್, ಮತ್ತಿತರ ವ್ಯವಹಾರ ನೋಡ್ಕೊಳ್ಳಿ, (ಇನ್ನೂ ಈಗ ತಾನೇ ಕೆಲಸದ ಪ್ರಪಂಚಕ್ಕೆ ಕಾಲಿಡುತ್ತಿರುವ ಹುಡುಗಿ, ಈಗಷ್ಟೆ, ಡಿಗ್ರಿ ಮುಗಿಸಿ ಬಂದಿದ್ದಾಳೆ)
ಪ್ರಸಾದ್, ನೀವು ಅಕೌಂಟ್ಸ್ ಅಸಿಸ್ಟ್ ಮಾಡ್ರಿ ಅರವಿಂದ್ಗೆ (ಆತನಿಗೆ ಅಕೌಂಟ್ಸ್ ಗಂಧ ಗಾಳಿಯೇ ಗೊತ್ತಿಲ್ಲ, ಆತ ಬಿ.ಎ. ಪದವಿಧರ, ಸ್ಟೋರ್ಸ್ ಆತನ ಐದು ವರ್ಷಗಳ ಅನುಭವ)

ಅಬ್ಬಾ ಮೀಟಿಂಗ್ ಸಮಾಪ್ತಿ Smiling

ಸನ್ನಿವೇಶ : ಮತ್ತೊಂದು ರೀತಿಯ ಚೆಕ್ ಸಹಿ ಪ್ರಸಂಗ

ಅನಿತ : ಸಾರ್ ಈ ಲೋನ್ ಅಕೌಂಟಿಗೆ ಹಣ ತುಂಬಲು ನಿಮ್ಮ ಸಹಿ ಬೇಕಿತ್ತು.
ಮುಖ್ಯಸ್ಥ : ಯಾವುದ್ರೀ ಅದು,
ಅನಿತ : xxxxx ಲೋನ್ ಸರ್,
ಮುಖ್ಯಸ್ಥ : ಕೊಡಿ, (ಸಹಿ ಮಾಡುವ ಮುನ್ನಾ ಯೋಚಿಸುತ್ತಾ ) ಅನಿತ ನಮ್ಮ ಕಂಪೆನಿಯ ಈ ತಿಂಗಳ ಸೇಲ್ಸ್ ಎಷ್ಟಾಗಿದೆ ?
ಅನಿತ : ಸರ್ ಗೊತ್ತಿಲ್ಲ, ವಿಶ್ವನಾಥ್ ಸೇಲ್ಸ್ ಹ್ಯಾಂಡಲ್ ಮಾಡ್ತಿದ್ದಾರೆ
ಮುಖ್ಯಸ್ಥ : ನೀವೇನ್ರಿ ಅದೆಲ್ಲಾ ತಿಳ್ಕೊಂಡು ಬರಬೇಕು ಇಲ್ಲಿ ಅಂತಾ ಗೊತ್ತಿಲ್ವಾ ?
ಅನಿತ : ಸರಿ ಸಾರ್ ಕೇಳಿಕೊಂಡು ಬರ್ತಿನಿ,
ಮುಖ್ಯಸ್ಥ : ಬೇಡಾ ಇರಿ, ವಿಶ್ವನಾಥ್ನ ನಾನೇ ಕರೀತಿನಿ, (ಟ್ರಿಣ್ ........ ಟ್ರಿಣ್..) ವಿಶ್ವನಾಥ್ ಬನ್ರಿ ಇಲ್ಲಿ
ವಿಶ್ವನಾಥ್ : ಸರ್ ಮೇ ಐ ಕಂಮಿನ್ (ಒಳಗೆ ಬರಬಹುದಾ ಅಂತಾ ಕೇಳುತ್ತಾ )
ಮುಖ್ಯಸ್ಥ : ಬನ್ರಿ ನಿಮಗೇನು ಅರಿಶಿನ ಕುಂಕುಮ ಕೊಡಬೇಕಾ ? ನಮ್ಮ ಸೇಲ್ಸ್ ಎಷ್ಟಾಗಿದೆ ಅಂತಾ ಅನಿತಾಗೆ ಯಾಕೆ ಹೇಳಲಿಲ್ಲ, ನೀವು ?
ವಿಶ್ವನಾಥ್ : ಸರ್ ಅದು........... ಅಕೌಂಟ್ಸ್ ಡಿಪಾರ್ಟ್ಮೆಂಟಿಗೆ ಎಷ್ಟು ವಿಚಾರಗಳು ತಿಳಿಸಬೇಕೋ ಅಷ್ಟು ತಿಳಿಸಿದ್ದೇನೆ, ಅವರು ಬಾಬ್ತುಗಳು, ರಸೀತಿಗಳ ವಿವರ ಕೊಟ್ಟಿದ್ದೀನಿ,
ಮುಖ್ಯಸ್ಥ : ಬರೀ ಇಷ್ಟು ಕೊಡಬೇಕು, ಇಷ್ಟು ಬರುತ್ತೆ ಸೇಲ್ಸ್ ಅಂತಾ ಕೊಟ್ರೆ ಸಾಕಾ, ಇನ್ನು ಮೇಲೆ ಪ್ರತಿ ಸೇಲ್ಸ್ ವಿಚಾರವನ್ನು ಅನಿತಾಗೆ ಹೇಳಬೇಕು.
ವಿಶ್ವಾನಾಥ್ : ಸರಿ ಸರ್
ಮುಖ್ಯಸ್ಥ : ಸೇಲ್ಸ್ ಟ್ಯಾಕ್ಸ್ ಕಟ್ಟಿದ್ರೇನ್ರಿ ಈ ತಿಂಗಳು ?
ವಿಶ್ವನಾಥ್ : ಸರ್ ಅದು ವಿಜಯ್ ಅವರು ನೋಡ್ಕೊಳ್ತಿದ್ದಾರೆ.
ಮುಖ್ಯಸ್ಥ : ನೀವು ತಿಳ್ಕೊಳ್ಳಬಾರ್ದು ಅಂತಾ ನಾನು ಹೇಳಿದ್ದೀನಾ.

ಕಡೆಗೆ ಆ ಲೋನ್ಗೆ ಸಹಿ ಆಗಲೇ ಇಲ್ಲಾ ಇವತ್ತು...................,

ಹೆಣ್ಣುಮಗಳೊಬ್ಬಳ ಕಥೆ............

ಹಿಂದೊಮ್ಮೆ ಲ್ಯೆಂಗಿಕ ಶೋಷಣೆ ಕುಟುಂಬದಲ್ಲೇ ಯಾಕೆ ? ಎಂಬ ಬ್ಲಾಗ್ ಬರಹವನ್ನು ಬರೆದಿದ್ದೆ, ಅದರಲ್ಲಿ ಸುಮುಖನ ಮನಕಲಕುವ ವಿಚಾರಗಳನ್ನು ಬಹಿರಂಗಪಡಿಸಿದ್ದೆ. ಲ್ಯೆಂಗಿಕಶೋಷಣೆ ಕುಟುಂಬದಲ್ಲೇ ಯಾಕೆ ? ಈಗ ಇದೇ ಸರಣಿಯಲ್ಲಿ ಮತ್ತೊಂದು ನಿಜ ಸ್ವರೂಪವನ್ನು ಒಬ್ಬ ಹೆಣ್ಣುಮಗಳ ಜೀವನ ಕಥೆಯನ್ನು ತೆರೆದಿಡುವ ಪ್ರಯತ್ನ ಮಾಡುತ್ತಿದ್ದೇನೆ.



ಇಲ್ಲಿ ನಮಿತಾ ಕಥೆಯ ನಾಯಕಿ,

"ಅಯ್ಯೋ ! ಏನಾಯ್ತೇ ಚಂಡಾಳಿ, ನನ್ನ ಮಗನಿಗೆ ಏನು ಮಾಡಿಸಿದೆ, ಅವನು ಹೀಗೆ ಆಸ್ಪತ್ರೆಯಲ್ಲಿ ದಿನಗಟ್ಟಲೆ ಇದ್ದು, ತಪಾಸಣೆಗಳು, ಮಾತ್ರೆಗಳು ಹೀಗೆ ಒಂದರ ಮೇಲೊಂದರಂತೆ ತೆಗೆದುಕೊಂಡರು, ಅವನ್ಯಾಕೆ ಹೀಗಾಗಿದ್ದಾನೆ" ನಾನು ತೀರ್ಥಯಾತ್ರೆಗೆ ಹೋಗಿ ಬರುವುದರೊಳಗೆ ಅವನನ್ನು ಹೀಗೆ ಮಾಡಿದ್ದೀಯಾ, ನಿನ್ನ ಮುಖ ತೋರಿಸಬೇಡ, ಹೊರಡಿನ್ನು, ಸಾವಿತ್ರಿಬಾಯಿ ಮಗನ ಅವಸ್ಥೆಯನ್ನು ನೋಡಿ, ಸೊಸೆಗೆ ಹಿಗ್ಗಾಮುಗ್ಗಾ ಬ್ಯೆಯ್ಯುತ್ತಿರುತ್ತಾಳೆ, ಅತ್ತೆ ನಾನೇನು ಮಾಡಲಿಲ್ಲ, ಈಗ್ಗೆ ಕೆಲವು ದಿನಗಳಿಂದ ಅವರಿಗೆ ಇದ್ದಕ್ಕಿದ್ದಂತೆ ಸುಸ್ತು, ಜ್ವರ ಬಿಟ್ಟು ಬಿಟ್ಟು ಬರುತ್ತದೆ, ನಾನು ಡಾ!! ಸುರೇಶರ ಬಳಿ ಕರೆದುಕೊಂಡು ಹೋಗಿದ್ದೆ, ಅವರು ಇಲ್ಲಿಗೆ ಸೇರಿಸಲು ಹೇಳಿದರು, ಆದರೆ ಇವರಿಗೆ ಏನಾಗಿದೆ ಅಂತ ನನ್ನ ಹತ್ರ ಹೇಳಲಿಲ್ಲ, ನಮಿತಾ ಪರಿಪರಿಯಾಗಿ ಸಾವಿತ್ರಿಬಾಯಿಗೆ ಪರಿಸ್ಥಿತಿಯನ್ನು ವಿವರಿಸಿದರೂ, ತಾಯಿ ಕರಳು ಮಗನ ಸ್ಥಿತಿಯ ಬಗ್ಗೆಗಷ್ಟೆ ಯೋಚನೆ.

ಇಷ್ಟೆಲ್ಲಾ ಮಾತುಕತೆಗಳು ನಡೆಯುತ್ತಿದ್ದರು ಶ್ರೀನಿವಾಸ ತನಗೇನು ಸಂಬಂಧವಿಲ್ಲದಂತೆ, ಹಾಸಿಗೆಯಲ್ಲಿ ಮಲಗಿಕೊಂಡು ಎಲ್ಲವನ್ನೂ ನೋಡುತ್ತಿರುತ್ತಾನೆ, ಅವನಿಗೆ ತಾಯಿಯ ಬಾಯಿಗೆ ಎದುರಾಡುವ ಧ್ಯೆರ್ಯವಾದರೂ ಎಲ್ಲಿಂದ ಬರಬೇಕು. ಅವಮಾನ ತಾಳಲಾರ ನಮಿತಾ ಹೊರಗೆ ಬಂದು ದುಖಿಃಸುತ್ತಿರುವಾಗ, ಶ್ರೀನಿವಾಸನ ತಂದೆ ರಾಮಚಂದ್ರರಾಯರ ಆಗಮನ, ಮಾವನನ್ನು ನೋಡಿದ ಮೇಲೆ ನಮಿತಾಳಿಗೆ ದುಃಖ ತಡೆಯಲಾಗಲಿಲ್ಲ. ಮಾವ, ಯಾರೂ ನನ್ನ ಮಾತನ್ನು ಕೇಳುತ್ತಿಲ್ಲಾ, ಅತ್ತೆ ತುಂಬಾ ಹೀನಾಯವಾಗಿ ನನ್ನನ್ನು ಬ್ಯೆಯ್ಯುತ್ತಿದ್ದಾರೆ, ಇದರಲ್ಲಿ ನನ್ನ ತಪ್ಪೇನು ? ಅಂತಾ. ರಾಮಚಂದ್ರರಾಯರಿಗೆ ನಮಿತಾಳನ್ನು ಸಂತ್ಯೆಸಲಾಗದೆ, ಸುಮ್ಮನಾಗಿ ಹೋದರು.



ನಮಿತಾ ಅಂದರೆ ನೀವೆನಾ..........? ಡಾಕ್ಟರ್ ಕರೀತಿದ್ದಾರೆ ನಿಮ್ಮನ್ನ, ವಾರ್ಡ್ ಬಾಯ್ ಕರೆದಾಗಲಿ ನಮಿತಾ ಎಚ್ಚೆತ್ತಿದ್ದು, ಹಾ.........ನಾನೇ ನಮಿತಾ,,,, ಎಂದು ಲಗುಬಗನೆ, ಡಾಕ್ಟರ್ ಇದ್ದ ಕೋಣೆಗೆ ದೌಡಾಯಿಸಿದಳು. ಡಾ!! ಸತ್ಯನಾರಾಯಣ, ಬಹು ಪ್ರಸಿದ್ದ ತಜ್ಣರು, ನಮಿತಾ ಒಳಗೆ ಬರುತ್ತಿದ್ದಂತೆ ಡಾಕ್ಟರರ ಗಂಭೀರ ಮುಖ ನೋಡಿ, ಅಳು ತಡೆಯಲಾಗದೆ, ಡಾಕ್ಟರ್ ನನ್ನ ಗಂಡನನ್ನು ಉಳಿಸಿಕೊಡಿ, ನಾನು ಅನಾಥೆ, ನನಗೆ ಅವರನ್ನು ಬಿಟ್ಟರೆ ಬೇರೆ ದಿಕ್ಕಿಲ್ಲ ?, ಅವರನ್ನು ನಂಬಿಕೊಂಡು ನಾನು, ನನ್ನ ಹೊಟ್ಟೆಯಲ್ಲಿರೋ ಕುಡಿ ಜೀವ ಇಬ್ಬರೂ ಇದ್ದೇವೆ. ದಯವಿಟ್ಟು ಉಳಿಸಿಕೊಡಿ...................... ನಮಿತಾರವರೆ, ಸ್ವಲ್ಪ ಧ್ಯೆರ್ಯವಹಿಸಬೇಕು, ನೀವು ಗರ್ಭಿಣಿ ಹೀಗೆಲ್ಲಾ ಅನಾಯಾಸವಾಗಿ ಆಯಾಸ ಮಾಡಿಕೊಳ್ಳಬಾರದು, ನಾನು ಹೇಳುವುದನ್ನ ಧ್ಯೆರ್ಯವಾಗಿ ಕೇಳಿ, ನಿಮ್ಮ ಗಂಡ ಶ್ರೀನಿವಾಸನನ್ನು ಉಳಿಸಲು ನಮ್ಮಿಂದ ಸಾಧ್ಯವಿಲ್ಲ, ಆದರೆ ಅವರನ್ನು ಕೆಲವು ದಿನಗಳವರೆಗೆ ಬದುಕಿಸಿಕೊಡಲಷ್ಟೆ ನಮ್ಮಿಂದ ಸಾಧ್ಯ, ಧ್ಯೆರ್ಯತಂದುಕೊಳ್ಳಿ....ಡಾ!! ಸತ್ಯನಾರಾಯಣ್ ತಮ್ಮ ಅಸಹಾಯಕತೆಯನ್ನು ವಿವರಿಸುತ್ತಿದ್ದಂತೆ, ನಮಿತಾಗೆ ಇದ್ದ ಒಂದು ಆಸರೆಯೂ ಕಣ್ಮರೆಯಾಗಿತೆಂಬ ಭಾವನೆ.



ಏನಾಯ್ತು ಡಾಕ್ಟರ್ ? ನನ್ನವರಿಗೆ ? ಅದೇ ಅಮಾಯಕ ಪ್ರಶ್ನೆ ಪದ್ಮಾಳದು.........................

ಲ್ಯೆಂಗಿಕ ಶೋಷಣೆ ಕುಟುಂಬದಲ್ಲೇ ಯಾಕೆ ?

ಲ್ಯೆಂಗಿಕ ಶೋಷಣೆಯೆಂಬ ಪಿಡುಗು ಕುಟುಂಬದಲ್ಲೇ ಯಾಕೆ ಹೆಚ್ಚು ? ನನ್ನ ಗೆಳೆಯನ ಮನೆಯಲ್ಲಿ ಎಲ್ಲರೂ ತುಂಬಾ ಸಂಪ್ರದಾಯಸ್ಥ ಮನೆತನದವರು, ನನ್ನ ಗೆಳೆಯನ ಹೆಸರು ಸುಮುಖ್, ಅವನಿಗೊಬ್ಬಳು ಅಕ್ಕ, ಮತ್ತು ಸುಮುಖ್ ತಂದೆ - ತಾಯಿ ಅಷ್ಟೆ, ಬಹಳ ವರ್ಷಗಳ ಹಿಂದೆ ಮದುವೆಯಾದ ಸುಮುಖ್ ಅಕ್ಕಾ, ತನ್ನ ಗಂಡನ ಜೊತೆ ತುಂಬಾ ಹೊಂದಿಕೆಯಿಂದಿದ್ದಳು. ಅವರ ಮತ್ತು ಸುಮುಖ್ನ ಮನೆಗಳಲ್ಲಿ, ಸಮಾರಂಭ, ಸಂಭ್ರಮಕ್ಕೆ ಎಲ್ಲೆ ಇರಲಿಲ್ಲ,

ಕೆಲವು ವರ್ಷಗಳ ನಂತರ ಸುಮುಖ್ನ ಅಕ್ಕಇಗೆ ಎರಡು ಮುದ್ದಾದ ಹೆಣ್ಣು ಮಕ್ಕಳೂ ಆಯ್ತು, ಎಲ್ಲರ ಒಡನಾಟ, ಪೋಷಣೆಗಳಿಂದ ಮಕ್ಕಳು ತುಂಬಾ ಮುದ್ದಾಗಿ, ಬುದ್ದಿವಂತರಾಗಿ ಬೆಳೆಯುತ್ತಿದ್ದಾರೆ, ಸುಮುಖ್ನ ಭಾವ ಸುಶಾಂತ್(ಅಕ್ಕನ ಗಂಡ) ಹಾಗೂ ಸುಮುಖ್ನ ಒಡನಾಟವೂ ಜಾಸ್ತಿಯಾಯಿತು, ಈಗ ಸುಮುಖ್ ೨೮ರ ತರುಣ, ಅವನಿಗೆ ತನ್ನ ಕೆಲಸದ ಬಗ್ಗೆ ಅಪರಿಮಿತ ಪ್ರೀತಿ, ಮತ್ತು ಆಸ್ಥೆ, ಹಾಗೂ ಹೀಗೂ ಒಂದು ದೊಡ್ಡ ಎಮ್.ಎನ್. ಸಿ. ಕಂಪೆನಿಯಲ್ಲಿ ಜವಾಬ್ದಾರಿ ಹುದ್ದೆಯನ್ನೂ ನಿರ್ವಹಿಸುತ್ತಿದ್ದಾನೆ. ಈಗ ಸುಮುಖ್ನ ತಂದೆ ತಾಯಿ ಹಾಗೂ ಅಕ್ಕ-ಭಾವಂಗೆ ಸುಮುಖ್ನ ಮದುವೆಯ ಯೋಚನೆ, ಅವರುಗಳು ಸುಮುಖ್ನ ಮನಕ್ಕೊಪ್ಪುವ, ಹಾಗೂ ಮನೆಗೊಪ್ಪುವ ಕನ್ಯಾನ್ವೇಷಣೆಯಲ್ಲಿ ತೊಡಗಿರುತ್ತಾರೆ,

ಕನ್ವಾನ್ವೇಷಣೆಯ ಕೆಲಸದಲ್ಲಿ ಸುಮುಖ್ ಅಕ್ಕನ ಮನೆಗೆ ಹೋಗಿ ಬರುವುದು ಹೆಚ್ಚಾಯಿತು. ಹಾಗೂ ಎಷ್ಟೊ ರಾತ್ರಿಗಳಲ್ಲಿ ಅಕ್ಕನ ಮನೆಯಲ್ಲೇ ಉಳಿದುಕೊಳ್ಳಬೇಕಾಗಿ ಬಂತು, .....................................

ನಮ್ಮ ಸುಮುಖನ ವಿಷಮ ಜೀವನ ಶುರುವಾದದ್ದೇ ಇಲ್ಲಿಂದ, ತಾನಾಯಿತು ತನ್ನ ಮುದ್ದಿನ ಅಕ್ಕನ ಮಕ್ಕಳ ಜೊತೆ ಆಟವಾಯಿತು ಎಂಬಂತಿದ್ದ ಸುಮುಖನಿಗೆ ಕೆಲವು ರಾತ್ರಿಗಳು ಯಾವುದೇ ರೀತಿಯ ತೊಂದರೆಗಳಿರಲಿಲ್ಲ, ಸುಮುಖನ ಭಾವನ ನಿಜವಾದ ರಾಕ್ಷಸ ನಡತೆಯ ಪರಿಚಯವಾದದ್ದೇ ಎರಡು ರಾತ್ರಿಗಳು ಕಳೆದ ಮೇಲೆ, ಒಂದು ರಾತ್ರಿ ಸುಮುಖ್ ತನ್ನಕ್ಕನ ಮನೆಯ ಹಾಲಲ್ಲಿ ಮಲಗಿರುವಾಗ ಅವನ ಭಾವ ಸುಶಾಂತ್ ಆತನ ಬಳಿ ಬಂದು ಮಲಗುವಂತೆ ನಟಿಸುತ್ತಾ, ಲ್ಯೆಂಗಿಕವಾಗಿ ಆತನ್ನು ಹಿಂಸಿಸುತ್ತಿರುತ್ತಾನೆ, ಇದರ ಆಘಾತ ಸುಮುಖ್ನ ಜೀವನದಲ್ಲಿ ಯಾರ ಬಳಿಯೂ ಹೇಳಲಾಗದ, ಯಾರೊಂದಿಗೂ ಹಂಚಿಕೊಳ್ಳಲಾಗದ ನಿರ್ಭಾವುಕತೆ.

ಇಲ್ಲಿ ಸುಶಾಂತನ ಬಗ್ಗೆ ನಿಮಗೆ ಸ್ವಲ್ಪ ಪರಿಚಯ ಮಾಡಿಸುವುದು ಒಳಿತು. ಈತ ಸ್ವಭಾವತಃ ಎಲ್ಲರೆದುರಿಗೂ ತುಂಬಾ ಸಭ್ಯ, ಒಳ್ಳೆ ಕೆಲಸ, ಮತ್ತು ದೇವರು ಮಂತ್ರ, ಭಜನೆಯೆಂಬ ಸದಾಚಾರವನ್ನೇ ಮ್ಯೆಗೂಡಿಸಿಕೊಂಡವನು, ಅವನನ್ನು ಹೀಗೆ ಎಂದು ಬೊಟ್ಟು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇನ್ನೂ ಮನೆಯಲ್ಲೂ ಸ್ವಭಾವತಃ ಬಹಳ ಜವಾಬ್ದಾರಿಯುತ ವ್ಯಕ್ತಿ.

ಈ ರೀತಿಯ ಶೋಷಣೆಗಳು ಕೇವಲ ಒಂದು ದಿನವಾಗಿದ್ದರೆ ಅಥವಾ ಮದುವೆಯಾದವರ (Absent Mind)ನ ಯೋಚನೆಗಳೆಂದು ಸುಮುಖನೂ ಸುಮ್ಮನಾಗಿದ್ದ, ಆದರೆ ದಿನಕಳೆದಂತೆ ಸುಶಾಂತನ ಕೀಟಲೆ ಜಾಸ್ತಿಯಾಗುತ್ತಲೇ ಇತ್ತು. ಹಗಲಲ್ಲಿ ಸಭ್ಯನಂತೆ ಸಂಧ್ಯಾವಂದನೆ, ದೇವರ ಪೂಜೆ, ಮತ್ತಿತರ ಧಾರ್ಮಿಕ ಕಾರ್ಯಗಳಲ್ಲಿ ಎಲ್ಲರ ಗಮನಸೆಳೆದಿದ್ದ ಸುಶಾಂತ ಈಗ್ಯಾಕೋ ಕೆಲವು ದಿನಗಳಿಂದ ರಾತ್ರಿಯಾದರೆ ಹೀಗೆ ನೀಡುತ್ತಿದ್ದ ಪ್ಯೆಶಾಚಿಕ ಹಿಂಸೆ ಸುಮುಖನಿಗೆ ನುಂಗಲಾರದ ಉಗುಳಲಾರದ ಬಿಸಿ ತುಪ್ಪದಂತೆ ಕಾಣಲಾರಂಭಿಸಿತು. ಸ್ವಭಾವತಃ ಬುದ್ದಿವಂತನಾಗಿದ್ದ, ಜವಾಬ್ದಾರಿವಂತನಾಗಿದ್ದ ಸುಮುಖ, ತನ್ನೆಲ್ಲಾ ಪ್ರಯತ್ನಗಳಿಂದಲೂ ಸುಶಾಂತನಿಗೆ ಬುದ್ದಿಹೇಳುತ್ತಾ ಅವನನ್ನು ತಿರಸ್ಕರಿಸುತ್ತಲೇ ಬಂದಿದ್ದ,

ಈಗ ಸುಮುಖ್ನ ಯೋಚನೆ ಹೀಗೆ ಎಲ್ಲರೆದುರು ಹೇಳಿದರೆ ತನ್ನ ಮನೆ ಮರ್ಯಾದೆ ಹೋಗುವ ಪ್ರಸಂಗ, ಮತ್ತೊಂದು ಕಡೆ ತನ್ ಭಾವ ಸುಶಾಂತನ ವಿಚಿತ್ರ ಆಸಕ್ತಿ, ಹಾಗೆ ಎಲ್ಲರೆದುರು ಹೇಳಲಾಗದ ಮನೋವೇದನೆ. ಹಾಗಂತ ದಿನವೂ ಸುಶಾಂತ್ ನೀಡುವ ದ್ಯೆಹಿಕ ಹಿಂಸೆ ಸಹಿಸಲಾಗದ ಇದಕ್ಕೆ ಇತಿಶ್ರೀ ಹಾಡುವುದು ಹೇಗೆಂಬ ನರಕ ಯಾತನೆ.

ಆಗ ಸುಮುಖ ಮತ್ಯಾವುದೋ ವಿಚಾರಗಳಿಗೆ ಸುಶಾಂತನೊಂದಿಗೆ ಎಲ್ಲಾರ ಸಮ್ಮುಖದಲ್ಲೇ ಜಗಳವಾಡಿ, ಆತನ ಒಡನಾಟವನ್ನೇ ಬಿಟ್ಟಿದ್ದ, ಸುಮುಖ ತಾನು ಈ ವಿಚಾರವನ್ನು ಯಾರ ಬಳಿಯೂ ಹೇಳಬಾರದೆಂದು, ಅದು ತನ್ನ ಮನೆ ಹಾಗೂ ತನ್ನ ಅಕ್ಕಳ ಜೀವನದ ಪ್ರಶ್ನೆಯೆಂದು ತನ್ನಲ್ಲೇ ಅದಕ್ಕೆ ಸಮಾಧಿಯನ್ನು ಕಟ್ಟಿದ್ದ. ಈ ಕಡೆ ಸುಮುಖನಿಗೆ ಮದುವೆಯ ಕೆಲವು ನಿಷ್ಕರ್ಷೆಗಳು ಬಂದು ಹೋಗಿದ್ದವು, ಕೆಲವು ಹುಡುಗೀರು ಸುಮುಖನಿಗೆ ಇಷ್ಟವಾಗಿದ್ದರೂ ಸಾಂಪ್ರಾದಾಯಿಕ ಮನೆತನದವರಾದ ಸುಮುಖನ ಕುಟುಂಬ ಜಾತಕ ಸರಿ ಹೊಂದುದ ಕಾರಣ ಕೆಲವನ್ನೂ ರಿಜೆಕ್ಟ್ ಕೂಡ ಮಾಡಿದ್ದರು,

ಇಲ್ಲಿಯವರೆಗೂ ಯಾವುದೇ ರೀತಿಯ ಕಹಿ ಘಟನೆಗಳು ಸುಮುಖನ ಮನೆಯಲ್ಲಾಗಲಿ, ಸುಶಾಂತನ ಮನೆಯಲ್ಲಾಗಲಿ ನಡೆದಿರಲಿಲ್ಲ, ಸುಮುಖ ಮತ್ತು ಸುಶಾಂತ ಒಬ್ಬರನ್ನೊಬ್ಬರು ಮಾತನಾಡಿಸದೇ ಇರುವುದು ಯಾರಿಗೂ ತೊಂದರೆಯೂ ಆಗಿರಲಿಲ್ಲ. ತನಗೆ ಸಹಕರಿಸಲಿಲ್ಲವೆಂಬ ಸೇಡಿನಿಂದ ಸುಶಾಂತ್ ಇಂತಹ ಸಮಯವನ್ನೇ ಎದುರು ನೋಡುತ್ತಿರುವಂತೆ, ಮೆಲ್ಲಗೆ ತನ್ನ ಹೆಂಡತಿ (ಸುಮುಖನ ಅಕ್ಕ) ಬಳಿ ಸುಮುಖನ ನಡತೆ ಸರಿಯಿಲ್ಲ, ಅವನು ನನ್ನನ್ನಾ ರಾತ್ರಿಗಳ ನೀರವತೆಯಲ್ಲಿ ಬೇಕಂತಲೇ ಕಾಡಿದ್ದ, ಅವನಿಗೆ ಮದುವೆ ಮಾಡಿಸುವುದರಿಂದ ಮನೆಗೆ ಬರುವ ಆ ಹೆಣ್ಣು ಮಗುವಿಗೆ ತೊಂದರೆ, ಅದು ................... ಇದು. ಎಂದು ಏನೇನೋ ಹೇಳಿ ಅವಳಲ್ಲಿ ಒಳ್ಳೆಯವನಾಗಿ ಬಿಟ್ಟಿದ್ದ.

ಇದ್ಯಾವುದರ ಯೋಚನೆಯೇ ಇಲ್ಲದ ಸುಮುಖ ತನ್ನ ಅಕ್ಕನೊಂದಿಗೆ, ಮತ್ತವಳ ಮಕ್ಕಳೊಂದಿಗೆ ನಗು ನಗುತಾ ಸಂತೋಷವಾಗೇ ಇದ್ದ, ಕೆಲವು ದಿನಗಳ ನಂತರ ಸುಹಾಸಿನಿ ಎಂಬ ಹುಡುಗಿಯ ಜಾತಕವೂ ಸರಿಹೊಂದಿ ಇಬ್ಬರೂ ಒಬ್ಬರನ್ನೊಬ್ಬರು ಮನಸಾರೆ ಒಪ್ಪಿ ಅವಳ ಮತ್ತು ಸುಮುಖನ ವಿವಾಹದ ನಿಷ್ಕರ್ಷೆ ಮಾಡುವ ಸಲುವಾಗಿ ಮನೆಯವರೆಲ್ಲಾರೀಗೆ ಹೇಳಿಕಳುಹಿಸಿದಾಗ, ಸುಶಾಂತ ತನ್ನ ವರಾತವನ್ನು ತೆಗೆದ.

ಈಗ ಹೇಳೀ ಸುಮಖನ ಮುಂದಿನ ಜೀವನ ಹೇಗೆ ??????????????????? ನಿಮ್ಮಲ್ಲಿ ಇದಕ್ಕೆ ಪರಿಹಾರವಿದೆಯೇ ? ಇದರಲ್ಲಿ ತಪ್ಪು ಯಾರದ್ದು ?? ಸುಮುಖನ ಪರಿಸ್ಥಿತಿಯ ಸುಧಾರಣೆ ಹೇಗೆ ????????????///