ನೋಡ್ತಿರೋರು

ಶುಕ್ರವಾರ, ಜೂನ್ 26, 2009

ಸರಣಿ ೫ - ಡಾ. ಎಚ್. ನರಸಿಂಹಯ್ಯ - ಭಾರತದ ಜಾತಿ ವ್ಯವಸ್ಥೆ

ನನ್ನ ಉಪನ್ಯಾಸದ ವಿಷಯ 'ಇಂಡಿಯಾ ದೇಶದ ಜಾತಿ ವ್ಯವಸ್ಥೆ'. ನಾನು ಭೌತ ವಿಜ್ಞಾನದ ವಿದ್ಯಾರ್ಥಿಯೇ ಹೊರತು, ಸಾಮಾಜಿಕ ವಿಜ್ಞಾನದ ವಿದ್ಯಾರ್ಥಿಯಲ್ಲ. ಹೀಗಿರುವಾಗ ಜಾತಿ ವ್ಯವಸ್ಥೆಯ ಬಗ್ಗೆ ನನ್ನನ್ನು ಮಾತನಾಡಲು ಕೇಳಿರುವುದನ್ನು ನೋಡಿದರೆ, ಸಾಂಪ್ರದಾಯಿಕ ಹಾಗೂ ಪಾಂಡಿತ್ಯಪೂರ್ಣ ಭಾಷಣವನ್ನು ನನ್ನಿಂದ ನಿರೀಕ್ಷಿಸಿಲ್ಲವೆಂಬುದು ಗೊತ್ತಾಗುತ್ತದೆ. ನಾನು ಈ ಸಮಸ್ಯೆಯನ್ನು ಸಮಾಜ ವಿಜ್ಞಾನಿಯಾಗಿ ವಿಶ್ಲೇಸುವುದಕ್ಕಿಂತ ಹೆಚ್ಚಾಗಿ, ವಿಜ್ಞಾನದ ವಿದ್ಯಾರ್ಥಿಯಾಗಿ, ಶಿಕ್ಷಣದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿರುವ ವ್ಯಕ್ತಿಯಾಗಿ ವಿಶ್ಲೇಷಿಸುತ್ತೇನೆ. ಚಾತಿಯು ವಿಶೇಷ ರೀತಿಯ ಸಾಮಾಜಿಕ ವರ್ಗೀಕರಣವಾಗಿದ್ದು, ಈ ಪ್ರವೃತ್ತಿ ಎಲ್ಲ ಸಮಾಜದಲ್ಲಿಯೂ ಕಂಡು ಬರುತ್ತದೆ. ವಂಶ ವ್ಯತ್ಯಾಸಗಳು, ಧರ್ಮ ಯುದ್ಧದಲ್ಲಿನ ವಿಜಯ, ಆರ್ಥಿಕ ಬೆಳವಣಿಗೆ ಇವೆಲ್ಲಾ ವಿವಿಧ ಪ್ರಮಾಣದಲ್ಲಿ ಜಗತ್ತಿನಲ್ಲಿ ಕಂಡುಬರುವ ಅನೇಕ ಜಾತಿ ವ್ಯವಸ್ಥೆಗಳಿಗೆ ಕಾರಣವಾಗಿವೆ. ಜಾತಿ ವ್ಯವಸ್ಥೆಯ ಈ ಸ್ವರೂಪವು ಏಕರೂಪವಾಗಿಲ್ಲ.

ಭಾರತದ ಜಾತಿ ವ್ಯವಸ್ಥೆಯು ಮೊದಲು ವೃತ್ತಿಗೆ ಸಂಬಂಧಿಸಿದಂತೆ ಆರಂಭವಾಯಿತು. ಅನಂತರ ಈ ಸ್ವರೂಪವು ಹೊರಟುಹೋಗಿ ಅತಿನಿಷ್ಠೆಯುಳ್ಳ ಸ್ವಗೋತ್ರ ಸ್ತರಗಳಾಗಿ ಬೇರ್ಪಟ್ಟಿತು. ನಮಗೆಲ್ಲರಿಗೂ ತಿಳಿದಿರುವಂತೆ ಹಿಂದೂಧರ್ಮದ ಜಾತಿ ವ್ಯವಸ್ಥೆಯಲ್ಲಿ ಸಮಾಜವು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ನಾಲ್ಕು ಜಾತಿಗಳಾಗಿ ವಿಭಜಿಸಲ್ಪಟ್ಟಿದ್ದು, ಆ ಜಾತಿಗಳು ಕ್ರಮವಾಗಿ ಅವುಗಳ ಸಾಮಾಜಿಕ ಅಂತಸ್ತನ್ನು ಸೂಚಿಸುತ್ತದೆ. ಬ್ರಾಹ್ಮಣವರ್ಗ ಪೌರೋಹಿತ್ಯ ಮತ್ತು ಬೋಧನೆಯ ವೃತ್ತಿಯನ್ನು ಕೈಗೊಂಡಿದ್ದರು. ಕ್ಷತ್ರಿಯರು ಆಡಳಿತಗಾರರು ಮತ್ತು ಯೋಧರಾಗಿದ್ದರು. ವ್ಯಾಪಾರ ಮತ್ತು ವ್ಯವಸಾಯ ವೈಶ್ಯರ ಕಾಳಜಿಯಾಗಿದ್ದವು. ಶೂದ್ರರು ಕೀಳುವರ್ಗಕ್ಕೆ ಸೇರಿದ್ದು, ಉತ್ತಮ ಜಾತಿಯವರ ಸೇವೆಯನ್ನು ಮಾಡುತ್ತಿದ್ದರು. ಶೂದ್ರರಿಗಿಂತಲೂ ಅತ್ಯಂತ ಕೀಳಾದ ಮತ್ತೊಂದು ಜಾತಿಯಿತ್ತು. ಆ ಜಾತಿಗೆ ಸೇರಿದ ಜನರು ಅಸ್ಪೃಶ್ಯರಾಗಿದ್ದರು. ಉಳಿದ ಜಾತಿಗಳವರು ಅವರೊಡನೆ ನೇರವಾಗಿ ವ್ಯವರಹಿಸುತ್ತಿರಲಿಲ್ಲವಷ್ಟೇ ಅಲ್ಲದೆ, ಅಸ್ಪೃಶ್ಯರಲ್ಲಿ ಕೆಲವರು ನೋಡಲು ಸಹ ಅನರ್ಹರು ಎಂದು ಭಾವಿಸಿದ್ದರು. ಕೆಲವು ಕಾಲದ ನಂತರ ವೃತ್ತಿಯಿಂದ ನಿರ್ಧಾರವಾಗುತ್ತಿದ್ದ ಜಾತಿ, ಹುಟ್ಟಿನಿಂದ ನಿರ್ಧಾರವಾಗುವ ಸ್ಥಿತಿಗೆ ಬಂದಿತು.

ಧರ್ಮ ಮತ್ತು ದೈವವಿಧಾಯಕ ಶಕ್ತಿಗಳು ಜಾತಿವ್ಯವಸ್ಥೆಯನ್ನು ಸಮರ್ಥಿಸಿ ಸುರಕ್ಷಿತವಾಗಿದ್ದವು. ಕರ್ಮ ಸಿದ್ಧಾಂತ ಮತ್ತು ಪುನರ್ಜನ್ಮಗಳು ಹಿಂದೂ ಧರ್ಮದ ಅತ್ಯಂತ ಪ್ರಮುಖವಾದ ಎರಡು ತತ್ವಗಳಾಗಿವೆ. ಈ ಗಡುಸಾದ ನಿಯಮಗಳ ಪ್ರಕಾರ ಮಸುಷ್ಯನ ಒಳ್ಳೆಯ ಕೆಲಸಗಳು ಮತ್ತು ದುಷ್ಟ ಕೆಲಸಗಳು ಜನ್ಮಾಂತರಗಳ ತನಕ ಸಾಗುತ್ತವೆ. ಹಿಂದಿನ ಜೀವನವು ಕರ್ಮದ ಫಲವಾಗಿದ್ದು, ಮುಂದಿನ ಜೀವನವು ಮಾನವನ ನೆನಪಿನ ವ್ಯಾಪ್ತಿಯ ಆಚೆಗೂ ಹರಡಿರುವ, ಗೋರಿಯನ್ನು ಮೀರಿನಿಲ್ಲುವ ನಿತ್ಯ ನಿರಂತರ ಸಂಗತಿ. ಕರ್ಮ ಸಿದ್ಧಾಂತವು ನೈತಿಕತೆಯ ಕಾರ್ಯಕಾರಣ ಸಂಬಂಧವನ್ನು ಹೊಂದಿರುತ್ತದೆ. ಈ ಜಾತಿ ವ್ಯವಸ್ಥೆಯ ಬಲದಿಂದ ತಾನು ಬಿತ್ತಿದ್ದನ್ನು ತಾನು ಬೆಳೆಯಬೇಕಾಗುತ್ತದೆ. ಹೀಗಾಗಿ ಮನುಷ್ಯನು ಪ್ರಾಣಿಯಾಗಿ ಮತ್ತೆ ಜನ್ಮವನ್ನು ಹೊಂದಲು ಸಾಧ್ಯ. ಮನುಷ್ಯರಲ್ಲಿ ಅಸ್ಪೃಶ್ಯರು ಹಿಂದಿನ ಜನ್ಮದಲ್ಲಿ ಅತ್ಯಂತ ಪಾಪವನ್ನು ಮಾಡಿದವರು, ಬ್ರಾಹ್ಮಣರು ಅತ್ಯಂತ ಪುಣ್ಯಶಾಲಿಗಳು. ಹಿಂದೂ ಧರ್ಮದ ಪ್ರಕಾರ ಮನುಷ್ಯನ ಕರ್ಮಗಳು ಮುಂದಿನ ಜನ್ಮದ ಉದ್ಧೇಶವನ್ನು ಹೊಂದಿರ ಬೇಕು. ಆ ಮೂಲಕ ಅವನು ಕರ್ಮಕ್ಷಯವನ್ನು ಹೊಂದಿ ಮೋಕ್ಷಕ್ಕೆ ಮೊದಲು ಬ್ರಾಹ್ಮಣನಾಗಿ ಹುಟ್ಟಬೇಕು.

ಈ ಜಾತಿಗಳ ಉಗಮದ ಬಗ್ಗೆ ಇರುವ ತರ್ಕವು ಅದು ಹೊಂದಿರುವ ದೈವಿಕ ಆರೋಪವನ್ನು ವ್ಯಕ್ತಪಡಿಸುತ್ತವೆ. ಆ ತರ್ಕದಂತೆ ಬ್ರಾಹ್ಮಣರು ಬ್ರಹ್ಮನ ಶಿರಸ್ಸಿನಿಂದ, ಕ್ಷತ್ರಿಯರು ತೋಳುಗಳಿಂದ, ವೈಶ್ಯರು ತೊಡೆಗಳಿಂದ ಮತ್ತು ಕೊನೆಯಲ್ಲಿ ಶೂದ್ರರು ಅವನ ಪಾದಗಳಿಂದಹುಟ್ಟಿದ್ದಾರೆ. ಇವರಲ್ಲಿ ಮೊದಲ ಮೂವರು ದ್ವಿಜರು ಅಥವಾ ಎರಡು ಸಾರಿ ಹುಟ್ಟಿದವರು. ಅವರು ಉನ್ನತ ಜಾತಿಗಳಿಗೆ ಸೇರಿದವರು. ಈ ಚೌಕಾಕಾರದ ಕಟ್ಟದಲ್ಲಿ ಶೂದ್ರರು ಅಡಿಪಾಯವಾದರೆ ಬ್ರಾಹ್ಮಣರು ಶಿಖರ. ಮೊದಲೇ ನಾನು ತಿಳಿಸಿದಂತೆ ಜಾತಿ ಸ್ಥಿರವಾದ ಸಾಮಾಜಿಕ ಆಚರಣೆಯಾಗಿತ್ತು. ಅಂತರ ಜಾತಿಯ ಬೋಜನಕ್ಕೆ ಅವಕಾಶವಿರಲಿಲ್ಲ. ಅಂತರಜಾತಿಯ ವಿವಾಹವಂತೂ ಸಾಧ್ಯವೇ ಇರಲಿಲ್ಲ. ಜಾತಿ ವ್ಯವಸ್ಥೆ ಅಂಗವಾದ ಎಲ್ಲ ಬಗೆಯ ಕರಾಳ ಸಂಪ್ರದಾಯಗಳನ್ನು ವಿವರವಾಗಿ ಪಟ್ಟಿ ಮಾಡುವುದು ನನ್ನ ಉದ್ಧೇಶವಲ್ಲ. ಇದಂತೂ ನಿಜ! ಶೂದ್ರರು ಮತ್ತು ಅಸ್ಪೃಶ್ಯರು ಅತ್ಯಂತ ಅಮಾನವೀಯ ತಿರಸ್ಕಾರಕ್ಕೆ ಒಳಗಾಗಿದ್ದು, ಅವರನ್ನು ಪ್ರಾಣಿಗಳಿಗಿಂತ ಕೀಳಾಗಿ ಪರಿಗಣಿಸುತ್ತಿದ್ದರು. ಈ ಜಾತಿ ವ್ಯವಸ್ಥೆಯ ಮೂರು ಸಾವಿರ ವರ್ಷಗಳಿಗಿಂತಲೂ ಹಳೆಯದು. ಇದರ ಉಗಮವು ವೇದ ಪೂರ್ವ ಯುಗದಲ್ಲಿ ಆಗಿದ್ದು, ಸುಮಾರು ಕ್ರಿ ಪೂ ೧೫೦೦ರಲ್ಲಿ ಆರಂಭವಾದ ಈ ವ್ಯವಸ್ಥೆ ಬುದ್ಧನ ಕಾಲದಲ್ಲಿ ವಿಶೇಷವಾಗಿ ಬೆಳವಣಿಗೆ ಹೊಂದಿತು. ಕ್ರಿಸ್ತನು ಹುಟ್ಟುವುದಕ್ಕೆ ಮುಂಚೆ ಸುಮಾರು ಐದು ಶತಕಗಳ ಹಿಂದೆಯೇ ಈ ಜ್ಯಾತಿ ವ್ಯವಸ್ಥೆ ನಮ್ಮಲ್ಲಿತ್ತು. ಪ್ರತಿಯೊಂದು ರೂಢಿಯೂ, ಆರಾಧನೆಯೂ ಅನೇಕ ಉಪ ಪಂಗಡಗಳ ಉದಯಕ್ಕೆ ಕಾರಣವಾಯಿತು. ನಮ್ಮ ದೇಶದಲ್ಲಿ ೫೦೦೦ಕ್ಕೂ ಹೆಚ್ಚು ಉಪಜಾತಿಗಳು, ಪಂಗಡಗಳು ಇವೆಯೆಂದು ಅಂದಾಜು ಮಾಡಲಾಗಿದ್ದು, ಅವು ತಮ್ಮದೇ ಆದ ನಿರ್ದಿಷ್ಟ ಆಚರಣೆಗಳನ್ನು ಹೊಂದಿವೆ. ಈ ಜಾತಿಗಳ ಬಹು ಪ್ರಮಾಣ ಮತ್ತು ಸಂಕೀರ್ಣತೆಗಳು ಭಾರತೀಯ ಮತ್ತು ಪಾಶ್ಚಾತ್ಯ ಸಾಮಾಜಿಕ ವಿಜ್ಞಾನಿಗಳನ್ನು ದಿಗ್ಭ್ರಮೆ ಹಿಡಿಸಿವೆ.

ಜಾತಿ ವ್ಯವಸ್ಥೆಯನ್ನು ನೇರವಾಗಿ ಗಮನಿಸಿದರೆ ಅದು ಅನ್ಯಾಯ, ಅಮಾವವೀಯವಷ್ಟೇ ಅಲ್ಲದೆ ಅವಿವೇಕವೂ ಆಗಿದೆ. ಇದರಿಂದ ಸಮಾಜದ ಪ್ರಗತಿಗೆ ಲೆಕ್ಕ ಹಾಕಲು ಆಗದಷ್ಟು ಆಘಾತವುಂಟಾಗಿದೆ. ಹುಟ್ಟಿನ ಆಧಾರದಿಂದ ವ್ಯಕ್ತಿಯ ಹಿರಿಮೆಯನ್ನು ನಿರ್ಧರಿಸುವುದು, ಸಂಪೂರ್ಣವಾಗಿ ಅವೈಜ್ಞಾನಿಕ. ಈ ಜಾತಿ ವ್ಯವಸ್ಥೆಯು ನಮ್ಮ ಸಮಾಜಕ್ಕೆ ಅಂಟಿದ ಶಾಪವಾಗಿದ್ದು, ಸಮಾಜದ ಬಹುಭಾಗವನ್ನು ಅಜ್ಞಾನದಲ್ಲಿಟ್ಟಿದ್ದು, ಅವರು ಅತ್ಯಂತ ಹೀನಸ್ಥಿತಿಯಲ್ಲಿ ಬದುಕುವಂತೆ ಮಾಡಿದೆ. ಅದರ ಜೊತೆಗೆ ಇದು ಮನುಷ್ಯನ ಘನತೆಗೇ ಅವಮಾನಕರವಾದದ್ದು. ಅನೇಕ ತಲೆಮಾರುಗಳಿಂದ ಕೀಳುಜಾತಿಗಳಿಗೆ ಸೇರಿದ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ ಮೂಕಯಾತನೆಯನ್ನು ಸಹಿಸಿಕೊಂಡು ಬಂದಿದ್ದಾರೆ. ಉನ್ನತ ಜಾತಿಯವರು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ಬರಲು ಈ ನೀಚ ವ್ಯವಸ್ಥೆಯನ್ನು ರಕ್ಷಿಸಿಕೊಂಡು ಬಂದಿದ್ದಾರೆ. ನಮ್ಮ ದೇಶದಲ್ಲಿ ಧರ್ಮವು ಬಲವಾಗಿ ಬೇರೂರಿ ನಿಂತಿದೆ. ಅಜ್ಞಾನದ ವ್ಯಾಪ್ತಿಗೆ ಮಿತಿಯೇ ಇಲ್ಲ. ಮೂಢನಂಬಿಕೆಗಳಂತೂ ತುಂಬಿ ತುಳುಕುತ್ತಿವೆ. ಈ ಎಲ್ಲ ಅಂಶಗಳು ಕರಾಳ ಜಾತಿ ವ್ಯವಸ್ಥೆಯು ಉಳಿದುಕೊಂಡು ಬರಲು ಕಾರಣವಾಗಿದೆ.

ಈ ಜಾತಿ ವ್ಯವಸ್ಥೆಯು ನಮ್ಮ ದೇಶಕ್ಕೆ ವಿಶಿಷ್ಟವಾದದ್ದು, ನಾವೇ ಇದರ ಏಕೈಕ ನಿಯೋಗಿಗಳು. ಯಾವುದೇ ದೇಶವು ಈ ರೀತಿಯ ಅತಾರ್ಕಿಕ ಸಾಮಾಜಿಕ ತಳಹದಿಯನ್ನು ಹೊಂದಿಲ್ಲ. ಅನೇಕ ಕ್ಷೇತ್ರಗಳಲ್ಲಿ ಇದರ ಪರಿಣಾಮಗಳನ್ನು ಗುರುತಿಸ ಬಹುದು. ಈ ಜಾತಿ ಅಂಶಗಳಿಂದ ನಮ್ಮ ದೇಶದ ಅನೇಕ ಎಡಪಂಥೀಯ ರಾಜಕೀಯ ಸಿದ್ಧಾಂತಗಳು ಪ್ರತಿಕೂಲ ಪರಿಣಾಮಗಳನ್ನು ಎದುರಿಸಿವೆ. ಜಾತೀಯತೆಯನ್ನು ಪ್ರೋತ್ಸಾಹಿಸುವ ಮತ್ತು ಜಾತಿ ಸಂಘಟನೆಯನ್ನು ಎತ್ತಿಕಟ್ಟಲು ಒಂದಾಗುವ ಅನೇಕ ಪ್ರಗತಿಶೀಲರನ್ನು ನಮ್ಮ ಸಮಾಜದಲ್ಲಿ ವಿಶೇಷವಾಗಿ ಕಾಣಬಹುದು.

ಚುನಾವಣೆಯಲ್ಲಿ ಜಾತಿ ವಹಿಸುವ ಪ್ರಮುಖಪಾತ್ರ ಎಲ್ಲಿರಗೂ ತಿಳಿದ ಸಂಗತಿ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುವಾಗ ಜಾತಿಗೆ ಹೆಚ್ಚಿನ ಪ್ರಾಧಾನ್ಯ ಕೊಡುತ್ತಾರೆ. ತಮ್ಮ ಚುನಾವಣೆಯ ಪ್ರಣಾಳಿಕೆಗಳು ಏನೇ ಇರಲಿ, ಎಡ ಪಕ್ಷಗಳು ಕೂಡ ಈ ಸಂದರ್ಭದಲ್ಲಿ ಜಾತಿಯನ್ನು ಮರೆಯುವುದಿಲ್ಲ. ಒಂದು ಕ್ಷೇತ್ರ ಪ್ರಮುಖವಾಗಿ ಒಕ್ಕಲಿಗ ಜನಾಂಗವನ್ನು ಹೊಂದಿದ್ದರೆ, ರಾಜಕೀಯ ಪಕ್ಷಗಳು, ಸಾಮಾನ್ಯವಾಗಿ ಆ ಜಾತಿಯವರನ್ನೇ ಅಭ್ಯರ್ಥಿಯನ್ನಾಗಿ ಆರಿಸುತ್ತಾರೆ. ಲಿಂಗಾಯತರಲ್ಲಿ, ಮುಸ್ಲಿಂರಲ್ಲಿ ಅಥವಾ ಪ್ರಮುಖವಾದ ಯಾವುದೇ ಜಾತಿಯಲ್ಲೂ ಕಂಡುಬರುತ್ತದೆ. ಅನೇಕ ಖಾಸಗೀ ಉದ್ದಿಮೆಗಳಲ್ಲಿ, ಕೈಗಾರಿಕೆಗಳಲ್ಲಿ, ಬ್ಯಾಂಕ್‌ಗಳಲ್ಲಿ ಮತ್ತು ವಿದ್ಯಾ ಸಂಸ್ಥೆಗಳಲ್ಲಿ ಆಡಳಿತ ವರ್ಗದ ಜಾತಿಯವರೇ ಬಹುಪಾಲು ನೌಕರರು ಇರುತ್ತಾರೆ. ಬೇರೆ ದೇಶಗಳಲ್ಲಿ ಯಶಸ್ವಿಯಾಗಿರುವ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳು ನಮಗೆ ಅರ್ಥಪೂರ್ಣವಾಗಿದ್ದರೂ, ಅವಶ್ಯಕವಾಗಿದ್ದರೂ, ಅವುಗಳು ಇಲ್ಲಿ ವಿಫಲವಾಗಲು ಜಾತೀಯ ಭಾವನೆಗಳೇ ಕಾರಣವಾಗಿವೆ. ದೇವರು ಸರ್ವಾಂತರ್ಯಾಮಿ ಎಂಬ ಮಾತು ವ್ಯಕ್ತಿಯ ನಂಬಿಕೆಗೆ ಸಂಬಂಧಿಸಿದ್ದು. ಆದರೆ ನಮ್ಮ ದೇಶದಲ್ಲಿ ಜಾತಿಯ ಭಾವನೆ ಸರ್ವಾಂತರ್ಯಾಮಿ ಎಂದು ನಾನು ಹೇಳಿದರೆ ಅದು ವಾಸ್ತವ ಸಂಗತಿ.

ಜಾತಿ ವ್ಯವಸ್ಥೆಗೆ ಈ ಎಲ್ಲ ಹಿನ್ನೆಲೆಯಿದ್ದರೂ ಈಗಲೂ ಅನೇಕರಿಗೆ ಅದರಿಂದ ಉಂಟಾಗುವ ದುಷ್ಪರಿಣಾಮಗಳ ಪೂರ್ಣ ತಿಳುವಳಿಕೆ ಇಲ್ಲ. ಈ ವ್ಯವಸ್ಥೆಯಿಂದ ಒದಗುವ ಅಪಾಯವನ್ನು ತಪ್ಪಿಸಿಕೊಳ್ಳವುದಕ್ಕಾಗಿಯೇ ಕೆಳವರ್ಗದ ಜಾತಿಯವರು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸುವುದು. ಪರದೇಶಗಳ ಆಕ್ರಮಣ ಮತ್ತು ಗೆಲುವಿನ ನಂತರ ಸೋತ ಜನರ ಬಲವಂತ ಮತಾಂತರ ನಡೆಯುವುದು, ಸಾಮಾನ್ಯ. ನಮಗೆಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನದ ಉದಯವಾಗಿದ್ದು, ಧಾರ್ಮಿಕ ಹಾಗೂ ಮತೀಯ ಭಾವನೆಗಳಿಂದಲೇ. ಕೆಲವು ರಾಜ್ಯಗಳಲ್ಲಿದ್ದ ಬಹುಸಂಖ್ಯಾತ ಮುಸ್ಲಿಮರು ಹಿಂದುಗಳ ಆಳ್ವಿಕೆಗೆ ಇಷ್ಟ ಪಡಲಿಲ್ಲ. ಆ ಕಾರಣದಿಂದಲೇ ಅವರಿಗಾಗಿ ಪ್ರತ್ಯೇಕ ರಾಜ್ಯ ನಿರ್ಮಾಣವಾಯಿತು. ಈ ಅಂಶದಿಂದ ಯಾವ ರೀತಿ ಭದ್ರವಾಗಿ ಬೇರೂರಿರುವ ಜಾತೀಯ ಹಾಗೂ ಧಾರ್ಮಿಕ ಭಾವನೆಗಳಿಂದ ದೇಶದ ಒಳಿತಿಗೆ ಐಕ್ಯಮತಕ್ಕೆ ಧಕ್ಕೆ ಒದಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ.

ವಿವಿಧ ರಂಗದಲ್ಲಿ ಸಮಾಜಕ್ಕೆ ಆತಂಕವನ್ನುಂಟುಮಾಡಿರುವ ಈ ಅಪಾಯಕಾರಿ ವ್ಯವಸ್ಥೆಯ ನಿರ್ಮೂಲನ ಹೇಗೆ ಸಾಧ್ಯ ಎಂದು ಯೋಚಿಸುವುದು ಅವಶ್ಯಕ. ಉಚಿತವಾದ ಶಿಕ್ಷಣವೇ ಈ ಸಮಸ್ಯೆಯ ನಿವಾರಣೆಗೆ ಏಕೈಕ ಮಾರ್ಗ ಎಂಬುದು ನನ್ನ ಅಭಿಪ್ರಾಯ. ಉದ್ಧೇಶಿತ ಸಾಮಾಜಿಕ ಬದಲಾವಣೆಗೆ ಶಿಕ್ಷಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಅದರೆ ದುರದೃಷ್ಟವಶಾತ್ ನಮ್ಮ ಸಧ್ಯದ ಶಿಕ್ಷಣ ವ್ಯವಸ್ಥೆ ಜಾತಿವಾದಿಗಳನ್ನು ಶಿಕ್ಷಿತ ಜಾತಿವಾದಿಗಳನ್ನಾಗಿ ಪರಿವರ್ತಿಸುತ್ತದೆ. ನಮಗೆಲ್ಲಾ ತಿಳಿದಿರುವಂತೆ ಶಿಕ್ಷಣ ಪಡೆದ ಕೋಮುವಾದಿ, ಶಿಕ್ಷಣ ಪಡೆಯದವನಿಗಿಂತ ಸಮಾಜಕ್ಕೆ ಹೆಚ್ಚು ಅಪಾಯಕಾರಿ.

ಯಾವುದೇ ಶಿಕ್ಷಣ ಕ್ರಮದಲ್ಲಿ ಜಾತೀಯ ಭಾವನೆ ಉಂಟುಮಾಡುವ ದುಷ್ಪರಿಣಾಮಗಳು ಶಿಕ್ಷಣ ವಿಷಯಗಳಲ್ಲಿ ಸೇರ್ಪಡೆ ಆಗಿರ ಬೇಕು. ಜಾತಿವ್ಯವಸ್ಥೆಯ ಕರಾಳ ಮುಖಗಳನ್ನು ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ತಿಳಿಸಿಕೊಡಬೇಕು. ಈ ರೀತಿಯ ಗಂಭೀರ ವಿಷಯಗಳನ್ನು ತಿಳಿಸುವಾಗ ಹೆಚ್ಚಿನ ಎಚ್ಚರಿಕೆ ಮತ್ತು ಸಂಯಮ ಅವಶ್ಯಕ. ಇಂತಹ ವಿಷಯಗಳನ್ನು ಚರ್ಚಿಸುವಾಗ ವ್ಯಕ್ತಿಗತ ಆರೋಪಣೆಗಳಿಗೆ ಅವಕಾಶಕೊಡದೆ ವಸ್ತುನಿಷ್ಠ ದೃಷ್ಟಿಕೋಣವನ್ನು ಹೊಂದಿರಬೇಕು. ಯಾರೇ ಒಂದು ನಿರ್ಧಿಷ್ಟ ಜಾತಿಯಲ್ಲಿ ಹುಟ್ಟುವುದಕ್ಕೆ ಅವನು ಜವಾಬ್ದಾರನಾಗಿರುವುದಿಲ್ಲ. ಅದ್ದರಿಂದ ಒಬ್ಬನು ನಿರ್ಧಿಷ್ಟ ಜಾತಿ ಒಂದಕ್ಕೆ ಸೇರಿದವನೆಂಬ ಕಾರಣ್ಕಕಾಗಿಯೇ ಆಕ್ಷೇಪಿಸುವುದು ಸರಿಯಲ್ಲ. ಯಾರಿಗೂ ಅವರವರ ತಂದೆ-ತಾಯಿಗಳನ್ನು ಆರಿಸಿಕೊಳ್ಳುವದಕ್ಕೆ ಸ್ವಾತಂತ್ರ್ಯ ಇಲ್ಲ. ಈ ಕಾರಣದಿಂದ ಜಾತಿಯಂತಹ ಸೂಕ್ಷ್ಮವಿಷಯದ ಚರ್ಚೆಯು ಪೂರ್ತಿಯಾಗಿ ವೈಜ್ಞಾನಿಕವಾಗಿರಬೇಕು.

ಅನೇಕ ಸಮಾಜ ಸುಧಾರಕರು ಜಾತಿವ್ಯವಸ್ಥೆಯ ನಿವಾರಣೆಗೆ ಪ್ರಯತ್ನ ನಡೆಸಿದ್ದಾರೆ. ಈ ದಿಸೆಯಲ್ಲಿ ಪ್ರಥಮ ಪ್ರಯತ್ನ ನಡೆಸಿದ ಮಹಾನ್‌ವ್ಯಕ್ತಿ ಬುದ್ಧ. ಜಾತಿ ವ್ಯವಸ್ಥೆಯನ್ನು ಪ್ರಬಲವಾಗಿ ವಿರೋಧಿಸಿದ ಬುದ್ಧ ತನ್ನ ಧರ್ಮಕ್ಕೆ ಜಾತಿಯ ನಿಬಂಧನೆ ಹಾಕದೆ ಎಲ್ಲರನ್ನೂ ಸೇರಿಸಿಕೊಂಡ. ಬಸವಣ್ಣನವರು ಜಾತಿಯ ವಿರುದ್ಧ ಸೌಮ್ಯ ಯುದ್ಧವನ್ನೇ ಹೂಡಿದ್ದಲ್ಲದೆ, ಅಂತರಜಾತೀಯ ವಿವಾಹಗಳಿಗೆ ಪ್ರೋತ್ಸಾಹ ಕೊಟ್ಟರು. ಆದರೆ ನಮ್ಮಲ್ಲಿ ಬೌದ್ಧಧರ್ಮ ತನ್ನ ಪ್ರಭಾವವನ್ನು ಕಳೆದುಕೊಂಡು, ಪ್ರಚಾರಕ್ಕೆ ಬಾರದೇ ಇರುವಂತಹ ಪರಿಸ್ಥಿತಿ ಪಡೆದುಕೊಂಡದ್ದು ವಿಷಾದಪಡಬೇಕಾದ ಅಂಶ. ಬಸವಣ್ಣನವರ ಅನುಯಾಯಿಗಳು, ಕೂಡ ಮತ್ತೊಂದು ಪ್ರಬಲ ಜಾತಿಯಾಗಿ ಒಟ್ಟಾದರು. ಎಲ್ಲ ಜಾತಿಗಳಂತೆ ಅದು ಸಹ ತನ್ನದೇ ಆದ ಸಂಪ್ರದಾಯ ಸಂಬಂಧಗಳನ್ನು ರೂಪಿಸಿಕೊಂಡಿತು.

ಜಾತಿಯು ಹಲವಾರು ಉಪಜಾತಿಗಳನ್ನು ಸಹ ಪಡೆದುಕೊಂಡಿದೆ.

ಆರ್ಯ ಸಮಾಜವನ್ನು ಸ್ಥಾಪಿಸಿದ ದಯಾನಂದ ಸರಸ್ವತಿ ಅವರು ಹಿಂದೂ ಧರ್ಮದಲ್ಲಿ ಕಂಡುಬರುವ ಜಾತಿಯ ಅಂತರವನ್ನು ನಿವಾರಿಸಲು, ಈ ಮೂಲಕ ಸಾಮಾಜಿಕ ಸಂಘಟನೆಯನ್ನು ಉಂಟುಮಾಡಲು ಪ್ರಯತ್ನಿಸಿದರು. ಸ್ವಲ್ಪಮಟ್ಟಿಗೆ ಸಿಖ್ ಧರ್ಮವು ಕೂಡ ಈ ಉದ್ಧೇಶದಿಂದಲೇ ಸ್ಥಾಪಿತವಾದದ್ದು. ಈ ಎಲ್ಲ ಪ್ರಯತ್ನಗಳು ಅಂಶಿಕವಾಗಿ ಸಾಫಲ್ಯ ಹೊಂದಿದವಷ್ಟೆ. ಜಾತಿಯ ವಿರುದ್ಧ ಹೊರಟ ಧರ್ಮಗಳೇ ಜಾತಿಗಳಾಗಿ ಪರಿವರ್ತಿತವಾದದ್ದು ದುರಂತ. ಜಾತಿಯ ಕಟ್ಟುಪಾಡುಗಳನ್ನು ತೊಡೆಯಲು ಪ್ರಯತ್ನಿಸಿದ ಮತ್ತೊಬ್ಬ ಧೀಮಂತ ಕೇರಳದ ನಾರಾಯಣ ಗುರು. ಜಾತಿ ವ್ಯವಸ್ಥೆಯನ್ನು ಉಗ್ರವಾಗಿ, ನಿರ್ಭಯವಾಗಿ ಎದುರಿಸಿದವರಲ್ಲಿ ತಮಿಳುನಾಡಿನ ರಾಮಸ್ವಾಮಿ ನಾಯ್ಕರ್ ಅವರೊಬ್ಬರು. ಜಾತಿ ವ್ಯವಸ್ಥೆಯನ್ನು ನಿರ್ಮೂಲನಗೊಳಿಸಲು ಇಷ್ಟಪಟ್ಟ ಅವರ ಕ್ರಾಂತಿಕಾರಕ ವಿಚಾರಗಳು ಕೆಳಜಾತಿಯ ಜನರಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನವನ್ನುಂಟು ಮಾಡಿದವು.

ಜಾತಿ ವ್ಯವಸ್ಥೆಯನ್ನು ಕುರಿತು ಚರ್ಚಿಸುವ ಸಂದರ್ಭದಲ್ಲೆಲ್ಲಾ, ಕೈಗಾರಿಕೀಕರಣದ ಹರಡುವಿಕೆಯಿಂದ ಜಾತಿ ಭಾವನೆಗಳು ಕಡಿಮೆ ಆಗಿವೆ ಎಂಬ ಅಭಿಪ್ರಾಯ ಕೇಳಿ ಬರುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಜಾತಿ ವ್ಯವಸ್ಥೆ ಕಟ್ಟಡ ಬಿರುಕು ಬಿಟ್ಟಿದೆ ಎನ್ನುವುದು ನಿಜ. ವಿಜ್ಞಾನದ ಈ ಯುಗದಲ್ಲಿ ಜಾತಿಯ ಬಿಗಿಯಾದ ಸಂಪ್ರದಾಯಗಳಿಗೇ ಅಂಟಿಕೊಂಡಿರುವುದು ಸಾಧ್ಯವಿಲ್ಲ ಎಂಬುದು ಸತ್ಯ. ಆದರೆ ಈ ರೀತಿಯ ಬದಲಾವಣೆಗಳು ಬಹುಪಾಲು ಮೇಲುಮೇಲಿನವು ಮಾತ್ರ. ಅನಿವಾರ್ಯವಾಗಿ ಉಂಟಾಗಿವೆಯಷ್ಟೇ ಹೊರತು, ಮನಃಪೂರ್ವಕವಾಗಿ ನಡೆದಿಲ್ಲ. ಉಗ್ರವಾದ ಮತಾಭಿಮಾನಿ ಕೂಡ ಎಷ್ಟೇ ಪ್ರಯತ್ನಿಸಿದರೂ ಹಳೆಯ ನಂಬಿಕೆಗಳನ್ನೇ ಈ ದಿನಗಳಲ್ಲಿ ಆಚರಣೆಗೆ ತರುವುದು ಸಾಧ್ಯವಿಲ್ಲ. ಜಾತಿ ಮತ್ತು ಕೋಮುಭಾವನೆಗಳು ಬಹುಪಾಲು ಜನರಲ್ಲಿ ಅತ್ಯಧಿಕವಾಗಿ ಇರುವುದು ವಾಸ್ತವ ಸಂಗತಿ.

ಜಾತಿ ವ್ಯವಸ್ಥೆಯ ನಿರ್ಮೂಲನಕ್ಕೆ ಸೂಚಿಸುವ ಪಗ್ರತಿಪರ ಪರಿಹಾರಗಳಲ್ಲಿ ಅಂತರಜಾತಿಯ ವಿವಾಹವ್ಯವಸ್ಥೆ ಒಂದು. ಆದರೆ ಎಷ್ಟೋ ಸಂದರ್ಭಗಳಲ್ಲಿ ಅಂತರಜಾತಿಯ ವಿವಾಹಗಳು ಆಕಸ್ಮಿಕವಾಗಿ ನಡೆದಿರುತ್ತವಷ್ಟೆ. ಈ ರೀತಿ ಮದುವೆ ಆದವರಿಗೆ ಜಾತೀಯ ಭಾವನೆಗಳು ಇರುವುದಿಲ್ಲವೆಂದು ಹೇಳಲು ಬರುವುದಿಲ್ಲ. ತಮ್ಮ ಸಂಗಾತಿಗಳನ್ನು ಆರಿಸಿಕೊಳ್ಳುವಾಗ ಜಾತಿಯನ್ನು ಅವರು ಲೆಕ್ಕಿಸಿಲ್ಲ ಎಂಬುದು ಮಾತ್ರ ನಿಜ. ಬಹುಪಾಲು ಇಂತಹ ಮದುವೆಗಳಲ್ಲಿ ವಧುವು ವರನ ಅಥವಾ ವರನು ವಧುವಿನ ಜಾತಿಯನ್ನು ಸ್ವೀಕರಿಸುತ್ತಾರೆ. ಹೀಗಾದಾಗ ಒಬ್ಬ ವ್ಯಕ್ತಿ ಒಂದು ಜಾತಿಯಿಂದ ದೂರವಾಗಿ ಮತ್ತೊಂದು ಜಾತಿಯಲ್ಲಿ ಸೇರ್ಪಡೆ ಆಗುವುದು ಮಾತ್ರ ಕಂಡುಬರುತ್ತದೆ. ಈ ಕಾರಣದಿಂದ ಅಂತರಜಾತೀಯ ಮದುವೆಗಳಿಂದಲೇ ಜಾತಿಸಹಿತ ಸಮಾಜದ ವ್ಯವಸ್ಥೆ ನಿರ್ಮೂಲವಾಗಲು ಸಾಧ್ಯವಿಲ್ಲ. ವಧು-ವರರು ತಾವು ಯಾವುದೇ ಜಾತಿಗೆ ಸೇರಿದವರಲ್ಲವೆಂದು ಘೋಷಿಸಬೇಕು. ಹಾಗಾದಾಗ ಸ್ವಾಭಾವಿಕವಾಗಿಯೇ ಅವರ ಮಕ್ಕಳು ಯಾವುದೇ ಜಾತಿಗೆ ಸೇರುವುದಿಲ್ಲ. ಅಂತರ ಜಾತೀಯ ವಿವಾಹಗಳ ವಿರುದ್ಧ ಹೇಳುವವರು ಮುಖ್ಯವಾಗಿ ಮಕ್ಕಳ ಜಾತಿ ಮತ್ತು ಭವಿಷ್ಯವನ್ನು ಕುರಿತು ವಾದ ಮಂಡಿಸುತ್ತಾರೆ. ಮಕ್ಕಳು ಯಾವುದೇ ಜಾತಿಗೆ ಸೇರದ ಗುಂಪಾದರೆ ಈ ಸಮಸ್ಯೆ ಪರಿಹಾರವಾಗುತ್ತದೆ. ಈ ಗುಂಪು ಹೆಚ್ಚು ಹೆಚ್ಚು ಬೆಳೆದಂತೆಲ್ಲಾ ಜಾತಿ ವ್ಯವಸ್ಥೆ ನಿಧಾನವಾಗಿ ನಶಿಸಿಹೋಗುತ್ತದೆ. ಇದು ಬಹಳ ನಿಧಾನವಾಗಿ ಮತ್ತು ಕಷ್ಟದ ಮಾರ್ಗದಿಂದ ಮಾತ್ರ ಸಾಧ್ಯ. ಮೂವತಕ್ಕೂ ಹೆಚ್ಚು ಶತಕಗಳಿಂದ ಬೇರುಬಿಟ್ಟಿರುವ ಈ ಸಾಮಾಜಿಕ ವ್ಯವಸ್ಥೆಗೆ ಶೀಘ್ರ ಪರಿಹಾರ ಅಸಾಧ್ಯ. ಸಮಾಜದ ಮೇಲೆ ವಿನಾಶಕಾರಿ ಪ್ರಭಾವವನ್ನು ಬೀರಿರುವ ಈ ಜಾತಿ ವ್ಯವಸ್ಥೆಯ ನಿರ್ಮೂಲನಕ್ಕೆ ಶ್ರಮಿಸುವುದು ಜನತೆಯ, ಸಂಸ್ಥೆಗಳ ಮತ್ತು ಸರ್ಕಾರದ ಕರ್ತವ್ಯ. ಈ ದಿಸೆಯಲ್ಲಿ ಸಾಧ್ಯವಿರುವ ಎಲ್ಲ ರೀತಿಯ ವ್ಯವಸ್ಥಿತ, ಅವ್ಯಾಹತ ಪ್ರಯತ್ನ ಅವಶ್ಯಕ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಜಾತಿರಹಿತವ್ಯವಸ್ಥೆಯ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಬಲ್ಲದು.
ಸರಣಿ ೫ - ಡಾ. ಎಚ್. ನರಸಿಂಹಯ್ಯ - ಭಾರತದ ಜಾತಿ ವ್ಯವಸ್ಥೆ

ಕಾಮೆಂಟ್‌ಗಳಿಲ್ಲ: