ನೋಡ್ತಿರೋರು

ಭಾನುವಾರ, ಅಕ್ಟೋಬರ್ 31, 2010

ಮ್ಯೆಸೂರು ಅರಮನೆ

ಮ್ಯೆಸೂರು ಅರಮನೆ ಒಂದು ಅಧ್ಬುತ ಕಥಾನಕ.........
ಕಣ್ಣ ಮುಂದೆಯೇ ಕಾಣುವ ಕೌತುಕ,
ಎಷ್ಟು ನೋಡಿದರೂ ತೀರದ ತವಕ,
ಅದೇ ಹೆಮ್ಮೆಯ ಕರ್ನಾಟಕ

ಇಲ್ಲಿ ಚಿಟುಕಿಸಿ ಮ್ಯೆಸೂರು ಅರಮನೆ

ಬುಧವಾರ, ಅಕ್ಟೋಬರ್ 6, 2010

ರಂಗೋಲಿ....... ಚಿತ್ತ-ಚಿತ್ತಾರಗಳ ನಡುವೆ - ಸಂಚಿಕೆ ೧


ತುಂಬಾ ದಿನಗಳಿಂದ ಬರೀಬೇಕು, ಬರೀಬೇಕು ಅಂತಾ ಕುಳಿತು ಪೆನ್ನು ಹಿಡಿದ್ರೆ ಹಾಳಾದ್ದು ಏನೇನೋ ಆಲೋಚನೆ ಕಣ್ ಮುಂದೆ ಬರೋದು, ಇವತ್ತು ಬರೀಲೇಬೇಕು, ಅಂತ ಬೆಳ್ಳಂಬೆಳ್ಳಗ್ಗೆ ಎದ್ದು, ಮೊದಲು ಪೋನ್ಗಳು ಸ್ವಿಚ್ ಆಫ್ ಮಾಡಿ ಕೂತೆ, ಮನೆ ಹೊರಗಡೆ ರಂಗೋಲಿ ರಂಗೋಲಿ............ ಅಂತ ಕೂಗ್ತಾಯಿರೋ ಸದ್ದು, ಚಿಕ್ಕಂದಿನಿಂದಲೂ ಈ ಸದ್ದು ಕೇಳಿದ್ದು ಮತ್ತೊಮ್ಮೆ, ನನ್ನ ಬಾಲ್ಯವನ್ನು ನೆನಪಿಸಿದ ಹಾಗೆ ಓಡೋಡಿ ಹೊರಗೆ ಬಂದೆ, ಮನೆಯ ಸುತ್ತಮುತ್ತಲಿನ ಕೆಲವರು ರಂಗೋಲಿ ವ್ಯಾಪಾರ ಮಾಡ್ತಿದ್ರು, ಸೇರಿಗೆ ೧೫ರೂಪಾಯಿ ಅಂತ ಆಕೆ, ಈ ಹೆಂಗಸರು ೧೦ರೂಪಾಯಿಗೆ ಒಂದು ಸೇರು ಕೊಡು ಅಂತ ವಾಗ್ವಾದ.

ನೆನಪಿದ್ದಂತೆ ಸೇರಿಗೆ ೧ರೂಪಾಯಿ ೧.೫೦ರೂಪಾಯಿತ್ತು. ನಿತ್ಯ ಜೀವನದ ದರ ಸಮರ, ಆರ್ಥಿಕ ಸಮತೋಲನ ಈ ರಂಗೋಲಿ ಹುಡುಗಿಯ ಮೇಲು ಬಿದ್ದಂಗಿದೆ ಅನ್ಕೊಂಡು, ಒಳಗೆ ಬರೋವಾಗ ಅಕಸ್ಮಾತ್ ಏನೋ ನೋಡಿದ ನೆನಪಾಗಿ ರಂಗೋಲಿ ಮಾರುವ ಹುಡುಗಿಯನ್ನೇ ದಿಟ್ಟಿಸಿ ನೋಡಿದೆ, ಎಲ್ಲೋ ನೋಡಿದ ನೆನಪು, ಗೊತ್ತಾಗ್ತಾಯಿಲ್ವೆಲ್ಲ, ಅಂತ ಅವಳ ಮುಖವನ್ನೇ ದಿಟ್ಟಿಸಿ ನೋಡ್ತಿದ್ದೆ. ಆಕೆ ಅಲ್ಲಿ ಚೌಕಾಸಿ ಮಾಡಿ ವ್ಯಾಪಾರ ಮುಗಿಸುವ ಧಾವಂತದಲ್ಲಿದ್ದಳು. ಈ ಹುಡುಗಿ ನನಗೆಲ್ಲೋ ಪರಿಚಯ ಇರಬಹುದಾ !!, ಇವಳನ್ನಾ ನೋಡಿದ್ದಿನಾ ಅಂತ ನನ್ನ ಸಮಸ್ತ ಗೆಳೆಯರ ಬಳಗವನ್ನೇ ಒಮ್ಮೆ ಮೆಲುಕು ಹಾಕಿದ್ದಾಯಿತು. ನೆನಪಾಗಲಿಲ್ಲ.

ಯೋಚನೆ ಬೆಳಿಗ್ಗೆಯ ನನ್ನ ಪ್ರಾತಕರ್ಮಗಳನ್ನು ಮರೆಸುವಂತಿತ್ತು. ಆಕೆ ನಮ್ಮ ಬೀದಿಯ ಕಡೆಯವರೆಗೂ ಹೋಗಿ ಒಂದ್ಯೆದು ನಿಮಿಷಕ್ಕೆ ವಾಪಸ್ ಬಂದು, ಅವಳನ್ನ ಕೇಳೇ ಬಿಡುವ ಅಂತ ನಿರ್ಧರಿಸಿ, ರೀ ಮೇಡಂ ಅಂದೆ, ಅರೆ!!! ಅರವಿಂದ ಅಲ್ವಾ ನೀವು ಅಂತಾ ಹುಡುಗಿ ನನ್ನ ಹತ್ರ ಬರ್ತಿದ್ಳು. ಈಗಂತೂ ನನ್ನ ನೆನಪಿನ ಶಕ್ತಿ ಕುಂದಿದೆ ಅನ್ನೋದು ಗ್ಯಾರೆಂಟಿ ಆಗೋಯ್ತು, ಏನಂತ ಹೇಳೋದು ಹು......... ಅಂದೆ. ನೀವಿಗ ಇಲ್ಲಿರೋದಾ ? ನಾನು ನಿಮ್ಮನ್ನ ಗುರುತು ಹಿಡಿತಿನಿ ಅಂತ ಅನ್ಕೊಂಡೆ ಇರಲಿಲ್ಲ ? ಅಪ್ಪ-ಅಮ್ಮ ಎಲ್ಲಾ ಹೇಗಿದ್ದಾರೆ ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಯಾವುದಕ್ಕೂ ಉತ್ತರಿಸಲಿ ಎಂಬ ಧಾವಂತ, ಜೊತೆಗೆ ಈಕೆ ಯಾರು ಎಂಬ ಮರೆವು ? ಎಲ್ಲಾ ಆರಾಮಾಗಿದ್ದಿವಿ, ಅಂತ ಹೇಳಿ ಜಾರಿಕೊಳ್ಳೋ ಪ್ರಯತ್ನ ಮಾಡಿದ್ರು, ಈಕೆ ಯಾರು ಎಂಬ ಸುಳಿವು ನೆನಪಾಗ್ಲಿಲ್ಲ.

ಧ್ಯೆರ್ಯಮಾಡಿ ಕೇಳೇ ಬಿಡೋಣ, ಅನ್ನಿಸಿ, ಕ್ಷಮಿಸಿ, ನಿಮ್ಮನ್ನ ನೋಡಿದ ನೆನಪು ಆದ್ರೆ ಯಾರು ಅಂತ ಗೊತ್ತಾಗ್ತಿಲ್ಲ, ಅಂದೆ ? ಒಂದು ಕ್ಷಣ ಅವಳು ಮುಗುಳು ನಗು ತಡೆಹಿಡಿದು, ನೆನಪಿಸ್ಕೊಳ್ಳೀ, ನೀವು ನನ್ನನ್ನ ಮರೆತಿರೋಲ್ಲ, ಆದ್ರೆ ನೀವು ಮರೀತಿರಾ ಅಂತ ಗೊತ್ತಿರಲಿಲ್ಲ. ಅಂದಾಗ ಬಟ್ಟೆಗೆ ಚಪ್ಪಲಿಸುತ್ತಿ ಹೊಡೆದಂತಾದ ಅನುಭವ, ಹೌದು ನಾನು ಸಾಮಾನ್ಯವಾಗಿ ಯಾರನ್ನು ಅಷ್ಟು ಮರೆತಿರೋಲ್ಲ, ಈಗ್ಯಾಕೆ ಹೀಗೆ ? ಅನ್ನಿಸಿ, ಇಲ್ಲಾರಿ ಗೊತ್ತಾಗಲಿಲ್ಲ,

ನಿಮಗೆ ಹುಳಿಸಾರು ಮಾಡಿಕೊಟ್ಟ ನಾನು ನನ್ನಮ್ಮ ಮರೆತೋಯ್ತಾ ಅಂದ್ಲು, ಹುಳಿಸಾರು ನನಗಿಷ್ಟ ಅಂತ ಈಕೆಗೆ ಹೇಗೆ ಗೊತ್ತಾಯ್ತು, ನಾನ್ಯಾವಾಗ ಈಕೆಯ ಮನೆಗೆ ಹೋಗಿದ್ದೆ ? ಇವರಮ್ಮ ನನಗೇಕೆ ಹುಳಿಸಾರು ಮಾಡಿಕೊಡಬೇಕು ? ಪ್ರಶ್ನೆಗಳಿಗೆಲ್ಲ ನನ್ನ ಮರೆವೇ ಉತ್ತರವೆಂಬಂತೇ ಪೆಚ್ಚಾಗಿ ನೋಡುತ್ತಿದ್ದೆ. ಇನ್ನು ಈ ಮರೆವು ಸುಬ್ಬನಿಗೆ ನೆನಪಿಸೋದು ಸಾಧ್ಯವಿಲ್ಲ ಅನ್ನಿಸಿ, ಆಕೆ ಅನಂತಪುರಕ್ಕೆ ನೀವು ಬಂದಿದ್ದು ನೆನಪಿಲ್ವಾ ಅಂದ್ಳು ? ತಕ್ಷಣ ನನ್ನ ಮೆದುಳಿನಲ್ಲಿ ಬಲ್ಬ್ ಹತ್ತಿ ಉರಿದಂತೆ ಹಾ........ ಬಂದಿದ್ದೇನೆ, ನನ್ನ ಗೆಳೆಯ ಶೇಖರ್ ಆಸ್ಪತ್ರೆಗೆ ಸೇರಿಸಿದಾಗ ಪಕ್ಕದ ಬೆಡ್ನಲ್ಲಿ ಮಲಗಿದ್ದ ಇವರಪ್ಪ ನೆನಪಾಯಿತು, ಹೋ ಸುನಂದ ತಾನೆ ನೀವು ಅಂದೆ! ಹು ಸದ್ಯ ನೆನಪಾಯಿತಲ್ಲಾ, ಅಂತ ಅವಳ ಮೂದಲಿಕೆ, ಹೇಗಿದ್ದೀರಾ,ನಿಮ್ಮ ಅಪ್ಪ-ಅಮ್ಮ ಹೇಗಿದ್ದಾರೆ ? ಅಪ್ಪನ ಆರೋಗ್ಯ ಸರಿ ಹೋಯ್ತಾ ? ಅಮ್ಮ ಈಗ ಎಲ್ಲಿ ? ಎಂಬ ಒಂದಷ್ಟು ಪ್ರಶ್ನೆಗಳು ನನ್ನಿಂದ. ಆಕೆಯನ್ನು ಮನೆಗೆ ಬರ ಹೇಳಿ ಅಮ್ಮನಿಗೆ ಆಕೆಯ ಪರಿಚಯ ಮಾಡಿಕೊಟ್ಟು ನನ್ನ ಹಳೆ ಪ್ರಶ್ನೆಗಳನ್ನೇ ಮತ್ತೊಮ್ಮೆ ಕೇಳಿದೆ.

ಅಪ್ಪ ತೀರಿ ಹೋದ್ರು, ಅಮ್ಮ ನಾನು ಈಗ ರಂಗೋಲಿ ವ್ಯಾಪಾರ ಮಾಡ್ಕೊಂಡು ಬೆಂಗಳೂರಿಗೆ ಬಂದು ೨ ವರ್ಷವಾಯ್ತು. ಯಾವತ್ತೋ ಒಂದಿನ ನೀವೆಲ್ಲಾ ಸಿಗಬಹುದು ಬೆಂಗಳೂರಿನಲ್ಲಿ ಅನ್ಕೊಂಡಿದ್ದೆ, ನನಗಂತೂ ಬಹಳ ಖುಷಿಯಾಯ್ತು, ಅನ್ನೋ ಅವಳ ಮಾತಿನಲ್ಲಿ ಹಿಂದೆ ನೋಡಿದ್ದ ಮತ್ತೆನೋ ಮುಚ್ಚಿಡ್ತಿದ್ದಾಳೆ, ಅನ್ನಿಸ್ತು, ಆಕೆ ಮೊದಲಿನಂತೆ ಸಹಜ ನಗು, ಗೆಲುವು ಇಲ್ಲ, ಯಾಕೆ ಸುನಂದ ಮೊದಲಿನಂತೆ ನೀವು ಈಗಿಲ್ಲ, ಏನೋ ಯೋಚಿಸ್ತಿರೋ ಹಾಗಿದೆ, ಹಾಗೇನು ಇಲ್ಲ, ನೀವೆಲ್ಲಾ ಅವತ್ತು ನಮ್ಮ ಮನೆಗೆ ಬಂದಾಗ ನನಗೇನೋ ಬಹಳ ಖುಷಿಯಾಗಿತ್ತು, ಆದ್ರೆ ಅವತ್ತಿನ ದಿನದ ನಂತರ ನಡೆದ ಘಟನೆಗಳು ತುಂಬಾ ನೋವುಂಟು ಮಾಡಿತ್ತು, ತುಂಬಾ ನೊಂದಿದ್ದಾಳೆ ಅನ್ನಿಸಿ, ಏನಾಯ್ತು ಸುನಂದ, ನನ್ನತ್ರನೂ ಹೇಳಾಬಾರ್ದಾ ಸಾಧ್ಯವಾದ್ರೆ ಪರಿಹಾರ ಮಾಡೋಣ ಹೇಳಿ, ಹಾಗೆಲ್ಲ ನೋವನ್ನ ಮನಸ್ಸಿನಲ್ಲೇ ಹಿಡಿದಿಡಬಾರದು. ನಾನು ನಿಮ್ಮನ್ನ ಅಕಾಲಿಕವಾಗಿ ಮರೆತಿದ್ದೆ ಹೌದು, ಆದ್ರೆ ನಿಮಗೆ ಸಹಕರಿಸುತ್ತೇನೆ ಎಂಬ ವಾಗ್ದಾನ ನೀಡಿದ್ದಾಯಿತು,

ಅರವಿಂದ್, ನೀವೆಲ್ಲ ಬಹುಶಃ ೧೯೯೯ ರ ಏಪ್ರಿಲ್ ತಿಂಗಳಲ್ಲಿ ಅನಂತಪುರದಲ್ಲಿದ್ದರೆಂಬ ನೆನಪು. ಹ್ಯೆದರಾಬಾದಿಗೆ ಹೊರಡ್ತಿದ್ರಿ ಅಲ್ವಾ. ನಿಮ್ಮ ಗೆಳೆಯ ಶೇಖರನನ್ನ ಆಸ್ಪತ್ರೆಯಿಂದ ಬೆಂಗಳೂರಿಗೆ ಕರೆತಂದ ವಾರಕ್ಕೆ ನಮ್ಮಪ್ಪನೂ ಮನೆಗೆ ವಾಪಸ್ ಬಂದ್ರು, ನನಗಾಗ ಗಂಡು ನೋಡೋಕೆ ಶುರು ಮಾಡಿದ್ರು, ನಾನು ಪಿಯುಸಿ ತನಕ ಓದಿದ್ದೆನಾದ್ದರಿಂದ, ಓದಿದ ಹುಡುಗನನ್ನೇ ಮದುವೆಯಾಗಬೇಕು, ಅನ್ನೋ ಆಸೆ, ಜೊತೆಗೆ ಆ ಹುಡುಗ ಸೆಟಲ್ ಆಗಿದ್ರೆ, ನನ್ನ ತಂದೆ ತಾಯಿಯನ್ನು ನನ್ನೊಂದಿಗೆ ಇರಿಸಿಕೊಳ್ಳುವ ಆಲೋಚನೆ, ಅಮ್ಮನಿಗೆ ಓದಿದ ಹುಡುಗನಾದ್ರೆ ಮಾತ್ರ ಮದುವೆಯಾಗೋದು, ಅವನು ನಮ್ಮೂರಿನವನೇ ಆಗಬೇಕೆಂದೇನಿಲ್ಲ. ಎಂಬ ಒಂದಿಷ್ಟು ಶರತ್ತುಗಳನ್ನು ಹೇಳಿದೆ. ಅಮ್ಮ ತಮ್ಮ ಪರಿಚಯವಿದ್ದ ಬಂಧುಗಳಿಗೆ ಸ್ನೇಹಿತರಿಗೆ ನನಗೆ ಮದುವೆಗೆ ವರ ನೋಡ್ತಿರೋ ವಿಷ್ಯ ಹೇಳ್ತಿದ್ರು. ಹಾಗೆ ನನ್ನ ಪರಿಚಿತರಿಂದ ಅದೇ ಊರಿನಿಂದ ಕೆಲವು ಹುಡುಗರೂ ಮನೆಗೆ ಬಂದುಹೋದರು. ಆದರೆ ನಂಗೆ ಇಷ್ಟ ಆಗೋಂತಾ ಕ್ವಾಲಿಟಿಸ್ ಅವರಲ್ಲಿ ಇರಲಿಲ್ಲ. ಈ ಮಧ್ಯೆ ನಮ್ಮ ಊರಿಗೆ ಹೊಸದಾಗಿ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಶುರುವಾಯಿತು. ಹಟಹಿಡಿದು ಕಂಪ್ಯೂಟರ್ ಕಲಿತರೆ ಏನಾದ್ರೂ ಮುಂದೆ ಉಪಯೋಗ ಬರಬಹುದೆಂದು ದಿನವೂ ಅಮ್ಮ-ಅಪ್ಪನ ಮುಂದೆ ದುಂಬಾಲು ಬಿದ್ದೆ, ಅಂತೂ ಇಂತೂ ಕಂಪ್ಯೂಟರ್ ಕಲಿಯೋಕೆ ಒಪ್ಪಿಗೆ ಸಿಕ್ಕಿ, ಸಂಜೆ ತರಗತಿಗೆ ಸೇರಿದ್ದಾಯಿತು.

ಬಹುಶಃ ಇದು ನನ್ನ ಜೀವನದಲ್ಲಿ ನಾ ಮಾಡಿದ ದೊಡ್ಡ ತಪ್ಪು ಅನ್ಸುತ್ತೆ, ಕಂಪ್ಯೂಟರ್ ಕಲಿತ ಹಮ್ಮು ಜೊತೆಗೆ ಒಂದಿಷ್ಟು ತಲೆಗೆ ಹೋಗಿ, ಆದಷ್ಟು ಬೇಗ ಒಂದು ನೌಕರಿ ಹುಡುಕುವ ಆಲೋಚನೆ, ಈ ಮೂರ್ನ್ನಾಲ್ಕು ತಿಂಗಳಲ್ಲಿ ಬಹಳ ಜನ ಹುಡುಗರನ್ನ ನೋಡೋ ಕಾರ್ಯಕ್ರಮವಾದರೂ ನಾನು ಯಾರನ್ನು ಒಪ್ಪಿಕೊಳ್ಳಲೇ ಇಲ್ಲ, ಇದರ ನಡುವೆ ನಮ್ಮ ಇನ್ಸ್ಟಿಟ್ಯೂಟಿಗೆ ಹ್ಯೆದರಾಬಾದಿನಲ್ಲಿನ ಒಂದು ಕಂಪೆನಿಗೆ ಕಂಪ್ಯೂಟರ್ ಆಪರೇಟರ್ಗಳು ಬೇಕಾಗಿದ್ದಾರೆ, ಎಂದು ಸಂಬಳ ತಿಂಗಳಿಗೆ ೭ ಸಾವಿರ, ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆಯಿದೆ. ಎಂದು ಇನ್ಸಿಟ್ಯೂಟಿನ ಹೆಡ್ ಹೇಳಿದರು, ಅದಕ್ಕೆ ಮೊದಲು ಮುಂದಿನ ಶನಿವಾರ ನಿಮ್ಮೆಲ್ಲರನ್ನೂ ಇಲ್ಲೇ ಇಂಟರ್ವ್ಯೂ ತೆಗೆದುಕೊಳ್ಳುತ್ತಾರೆ, ಬೆಳಿಗ್ಗೆ ಸರಿಯಾಗಿ ೧೦ಕ್ಕೆ ಎಲ್ಲರೂ ಇಲ್ಲಿ ಬಂದಿರುವುದೆಂದು ಹೇಳಿದರು. ಅದರಂತೆ ೨೦ ಜನ ಇಂಟರ್ವ್ಯೂಗೆ ತಯಾರಾಗಿ ಬಂದೆವು, ಮೊದಲು ಅವರು ಎಲ್ಲರನ್ನೂ ಒಂದು ರೂಮಿನಲ್ಲಿ ಕುಳಿತುಕೊಳ್ಳಲಿಕ್ಕೆ ಹೇಳಿ, ದೂರದಿಂದಲೇ ಪ್ರತಿಯೊಬ್ಬರನ್ನು ಗಮನಿಸಿ, ನಾನು, ವಂದನಾ, ಸುಖನ್ಯ, ರಾಧಾ, ಗೀತಾ, ಮಮ್ತಾಜ್, ಮೆಹುರೂಬಾಳನ್ನು ಮತ್ತು ಆನಂದನನ್ನು ಕರೆದರು, ನಮಗೆ ಎಲ್ಲಿಲ್ಲದ ಅತ್ಯುತ್ಸಾಹ, ಅವರು ಕೇಳಿದ್ದು ಕೆಲವೇ ಪ್ರಶ್ನೆ ನಿಮ್ಮೂರು ಯಾವುದು ? ಮತ್ತು ನಿಮ್ಮ ಮನೆಯಲ್ಲಿ ಯಾರ್ಯಾರು ಇದ್ದಾರೆ ಮತ್ತು ಏನು ಕೆಲಸ ಮಾಡುತ್ತಿದ್ದಾರೆ? ಎಲ್ಲರೂ ಏನು ಓದಿದ್ದಾರೆ ? ಎಲ್ಲರೂ ನಮ್ಮ ಯೋಗ್ಯಾನುತಾಸಾರ ಹೇಳಿದೆವು, ನಂತರ ಅವರು ನೀವು ಸದ್ಯಕ್ಕೆ ಅಲ್ಲಿ ಆರು ತಿಂಗಳ ಕಾಲ ಟ್ರ್ಯೆನಿಂಗಿನಲ್ಲಿ ಇರುತ್ತೀರಿ. ಮತ್ತು ನಿಮಗೆ ಆ ಆರು ತಿಂಗಳ ಸಂಬಳವನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಮತ್ತು ನಿಮ್ಮ ಖರ್ಚುಗಳನ್ನು ನಾವೇ ನೋಡಿಕೊಳ್ಳುತ್ತೇವೆ. ಇದೆಲ್ಲದಕ್ಕೆ ಒಪ್ಪಿಗೆಯಾದರೆ ಬುಧವಾರ ನೀವುಗಳೆಲ್ಲರೂ ನನ್ನೊಂದಿಗೆ ಹೊರಡಬೇಕು. ನಿಮ್ಮ ಅಭಿಪ್ರಾಯವನ್ನು ನನಗೆ ಸೋಮವಾರದೊಳಗೆ ತಿಳಿಸಬೇಕೆಂದು ಹೇಳಿದರು.

ನನಗಂತೂ ಅರವಿಂದ್ ಪ್ರಪಂಚವನ್ನೇ ಗೆದ್ದ ಅನುಭವ, ಅಪ್ಪ-ಅಮ್ಮನನ್ನು ಹೇಗಾದರೂ ಮಾಡಿ ಒಪ್ಪಿಸಿಬಿಡಬೇಕು, ಇನ್ಮುಂದೆ ನಮ್ಮ ಜೀವನ ಹಸನಾಗಿರುತ್ತದೆ. ನಾನು ಒಂದಷ್ಟು ವರ್ಷ ಕೆಲ್ಸ ಮಾಡಿ, ಒಳ್ಳೆಯ ಹುಡುಗನನ್ನು ಮದುವೆಯಾಗಬೇಕು........ ಇನ್ನು ಏನೇನೋ ಆಲೋಚನೆ, ಅಂತೂ ಅಪ್ಪ-ಅಮ್ಮನನ್ನು ಒಪ್ಪಿಸುವ ಶತಪ್ರಯತ್ನ ಸಫಲವಾಯಿತು.ಅಂದು ಬುಧವಾರ ನಾವೆಲ್ಲ ಅವರೇ ತಂದಿದ್ದ ಟಾಟ ಸುಮೋನಲ್ಲಿ ಹ್ಯೆದರಾಬಾದಿಗೆ ಹೊರಟದ್ದಾಯಿತು................

ಹ್ಯೆದರಾಬಾದಿನಂತಹ ದೊಡ್ಡ ಸಿಟಿಯನ್ನು ನನ್ನ ಜೀವಮಾನದಲ್ಲೂ ನೋಡದ ಅನುಭವ, ನನ್ನ ಕಲ್ಪನೆಗಳನ್ನು ಮೀರಿದ ಸ್ಥಳ, ಇಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನ ಸಾಗರ, ದೊಡ್ಡ ದೊಡ್ಡ ಬಿಲ್ಡಿಂಗಗಳು, ಅಬ್ಬಾ ನಿಜಕ್ಕೂ ನಾನು ಸಕ್ಕತ್ ಖುಷಿಯಿಂದಿದ್ದೆ. ಮೊದಲ ದಿನ ಸಂಜೆ ನಮ್ಮೆಲ್ಲರನ್ನು ಹ್ಯೆದರಾಬಾದಿನ ಚಾರ್ಮಿನಾರ್, ಪೇಟೆ ಬೀದಿಗಳಲ್ಲಿ ಸುತ್ತಾಡಿಸಿದರು. ಮತ್ತು ಎಲ್ಲೆಲ್ಲಿ ಜನಸಂದಣಿಯಿರುತ್ತದೆ. ಯಾವಾಗ ಜನ ಹೆಚ್ಚು ಈ ಸ್ಥಳಗಳಿಗೆ ಬರುತ್ತಾರೆ, ಅಲ್ಲಿಂದ ನಾವಿಳಿದುಕೊಂಡಿದ್ದ ಸ್ಥಳ ಎಷ್ಟು ದೂರ ಎಲ್ಲಾ ವಿಷಯವನ್ನು ತಿಳಿಸಿದರು. ರಾತ್ರಿ ಅಲ್ಲೇ ಒಂದು ಹೋಟೆಲಿನಲ್ಲಿ ಊಟಕ್ಕೂ ಕರೆದುಕೊಂಡು ಹೋದರು. ರಾತ್ರಿ ೧೦.೩೦ಕ್ಕೆ ಕೊಠಡಿಗೆ ಬಂದ ನಾವು ಮಲಗಿಕೊಳ್ಳುವ ತಯಾರಿಯಲ್ಲಿದ್ದೆವು.

ನಮ್ಮ ಜೊತೆ ಒಬ್ಬಳು ಹೆಂಗಸು ಬಂದು ಮಲಗಿದಳು, ಸುಮಾರು ೫೫ ರಿಂದ ೬೦ ವರ್ಷದ ಹೆಂಗಸು, ಹಣೆಗೆ ದೊಡ್ಡ ಕುಂಕುಮ, ನಿಡಿದಾದ ಸೀರೆ, ಹೆಸರು ಸೌಭಾಗ್ಯಮ್ಮ ಅಂತೆ ಮೂಲ ರಾಯಚೂರಿನವಳು ಎಂದಷ್ಟೆ ಗೊತ್ತಾಯಿತು. ಮೊದಲು ಎಲ್ಲರನ್ನು ತೆಲುಗು ಭಾಷೆಯಲ್ಲೇ ಪರಿಚಯ ಮಾಡಿಕೊಂಡಳು, ನಂತರ ನಾನು ಮೂಲತಃ ಕನ್ನಡದವಳು ಎಂದು ತಿಳಿದು ನನ್ನ ಜೊತೆಗೆ ಮಾತ್ರ ಕನ್ನಡದಲ್ಲಿ ಮಾತಾನಾಡಿಸಿದಳು. ನಾನು ಅವಳೊಂದಿಗೆ ಹೆಚ್ಚಿನ ಸಲುಗೆಯಿಂದ ಮಾತಾಡಿದಕ್ಕೋ ಏನೋ, ನನ್ನನ್ನೇ ಮೊದಲು ರೂಮಿನೊಳಗೆ ಬರೋಕೆ ಹೇಳಿ ಬಟ್ಟೆಗಳನ್ನೆಲ್ಲ ಬಿಚ್ಚುವಂತೆ ಹೇಳಿದಳು. ನಾನು ಆಗಂತೂ ಥರಗುಟ್ಟಿ ಹೋದೆ, ಯಾಕೆ ? ಬಟ್ಟೆ ಬಿಚ್ಚಬೇಕು, ನಾನು ಬಿಚ್ಚುವುದಿಲ್ಲ, ಎಂದು ಗಟ್ಟಿಯಾಗಿ ಹೇಳಿದಳು, ಅದುವರೆಗೂ ಶಾಂತ ರೀತಿಯಲ್ಲಿದ್ದ ಸೌಭಾಗ್ಯಮ್ಮ "ಮುಚ್ಚುಕೊಂಡು ಬಿಚ್ಚೆ ಲೌಡಿ, ನಿನಗಿಲ್ಲೇನು, ಹಾಯಾಗಿ ತಿಂದು ಕುಡಿದು ಮಜಾ ಮಾಡೋಕಾ ಕರ್ಕೊಂಡು ಬಂದಿರೋದು, ನಾನು ಹೇಳಿದಂತೆ ಕೇಳಿದರೆ ಇಲ್ಲಿ ಆರಾಮಾಗಿ ಇರ್ತೀಯಾ, ಇಲ್ಲಾಂದ್ರೆ ಸಾಯಿಸಿಬಿಡ್ತಿನಿ" ನಾಳೆಯಿಂದ ನೀವೆಲ್ಲಾ ಕೆಲಸ ಶುರು ಮಾಡಬೇಕು ಅಂದ್ಳು. ನಾನು ಮಾಡೊ ಕಂಪ್ಯೂಟರ್ ಆಪರೇಟರ್ ಕೆಲಸಕ್ಕೂ, ನಿನ್ಮುಂದೆ ಬಟ್ಟೆ ಬಿಚ್ಚೋಕು ಸಂಬಂಧ ಏನು ? ನಾನು ಬಿಚ್ಚೊಲ್ಲ ಅಂತ ಹಟ ಹಿಡಿದೆ, ಕಪಾಳಕ್ಕೆ ಜೋರಾಗಿ ಹೊಡೆದು ಬಟ್ಟೆ ಬಿಚ್ಚೋಕೆ ಅವಳೇ ಪ್ರಯತ್ನಿಸಿದಳು, ಆಗಂತೂ ನನಗೆ ತುಂಬಾ ಸಂಕಟ ಜೊತೆಗೆ ಅಮ್ಮ-ಅಪ್ಪನ ನೆನಪು ಜಾಸ್ತಿಯಾಗಿ ಅಳೋಕೆ ಶುರುವಿಟ್ಟೆ. ನನ್ನ ಆರ್ಭಟವನ್ನ ಕೇಳಿ ಇನ್ನು ಸಿಟ್ಟಾದ ಆಕೆ ಮನಸ್ಸಿಗೆ ಬಂದಂತೆ ಬಡಿಯಲಾರಂಭಿಸಿದಳು. ಅವಳ ಏಟಿಗೆ ನಾನು ಸುಸ್ತಾಗಿ ಜ್ನಾನ ತಪ್ಪಿ ಬಿದ್ದಂತಾಗಿತ್ತು, ಮತ್ತೆ ನೀರು ಹಾಕಿ ಎಬ್ಬಿಸಿ, ಅಸಹ್ಯವಾಗಿ ನನ್ನನ್ನು ನೋಡಲಾರಂಭಿಸಿದಳು. ನನಗೆ ಕ್ಷಣ ಕ್ಷಣಕ್ಕೂ ಅಮ್ಮನದೇ ನೆನಪು. ನಾನು ಋತುಮತಿಯಾದಾಗಲೂ ಅಮ್ಮ ಹೀಗೆ ಮಾಡಿದವಳಲ್ಲ, ಅವಳೇ ನನ್ನ ಎಲ್ಲವನ್ನೂ ಕಲಿಸಿಕೊಟ್ಟಳಾದಳು, ಒಮ್ಮೆಯೂ ಹೀಗೆ ಅಸಹ್ಯವಾಗಿ ಹೇಳಿದವಳಲ್ಲ, ನನಗೆ ಸೌಭಾಗ್ಯಮ್ಮನ ಆರ್ಭಟವನ್ನು ತಡೆಯುವ ಶಕ್ತಿಯೇ ಇಲ್ಲದಾಯಿತು. ನಂತರ ಯಾರಿಗೋ ಪೋನು ಮಾಡಿ ನನ್ನ ದೇಹದ ವಿವರವನ್ನು ಹೇಳಿದಳು ಅನ್ಸುತ್ತೆ, ನಂತರ ನನ್ನ ಜೊತೆಗಿದ್ದ ಹುಡುಗೀರಿಗೂ ಇದೇ ಅನುಭವವಾಯ್ತು.

ಎಚ್ಚರವಾದಾಗ ನಾನು ಯಾವುದೋ ಹಾಸಿಗೆಯಲ್ಲಿ ಮಲಗಿದ್ದೆ, ಅದು ರಾತ್ರಿ ನಾನಿದ್ದ ರೂಮಲ್ಲ, ಗಾಬರಿಯಿಂದೆದ್ದು ಸುತ್ತಲೂ ನೋಡಿದೆ, ಮಬ್ಬುಗತ್ತಲು ಹೊರಗೆ ವಾಹನಗಳು ಓಡಾಡುವ ಸದ್ದಷ್ಟೆ ಕೇಳುತ್ತಿದೆ ಬಾಗಿಲನ್ನು ಜೋರಾಗಿ ಬಡಿದು ಬಡಿದು ಸುಸ್ತಾಯಿತು, ಕುಡಿಯಲೂ ನೀರು ಇಲ್ಲ, ಸಂಜೆಗೆ ಯಾರೋ ಬಾಗಿಲು ತೆಗೆಯುವ ಸದ್ದು, ನಾನು ತಕ್ಷಣ ಎದ್ದು ಬಾಗಿಲ ಬಳಿ ಓಡಿ ಹೋದೆ, ಸೌಭಾಗ್ಯಮ್ಮ, ನನ್ನನ್ನು ಕರ್ಕೊಂಡು ಬಂದ ಆ ವ್ಯಕ್ತಿ ಮತ್ತು ಒಂದಿಬ್ಬರು ಗಂಡಸರು ಒಳಗೆ ಬಂದರು, ನಾನು ಅವರನ್ನು ಬಿಡಿಸಿಕೊಂಡು ಓಡಿಹೋಗಲಿಕ್ಕೆ ಪ್ರಯತ್ನಿಸಿದೆ, ಆಗಲಿಲ್ಲ ಅರವಿಂದ್. ಅವರು ನನ್ನನ್ನ ಭದ್ರವಾಗಿ ಹಿಡಿದು "ಗಲಾಟೆ ಮಾಡಬೇಡ, ನೀನು ನಾವು ಹೇಳಿದಂತೆ ಕೇಳಿದರೆ ನಿನಗೆ ಕೇಳಿದಷ್ಟೂ ಹಣ ಮತ್ತು ನಿಮ್ಮ ಅಪ್ಪ-ಅಮ್ಮನಿಗೂ ಹಣ ಕಳಿಸುವ ವ್ಯವಸ್ಥೆ ಮಾಡುತ್ತೇವೆ. ಇಲ್ಲದಿದ್ದರೆ ನಿನ್ನನ್ನು ಇಲ್ಲೇ ಸಾಯಿಸಿ, ನಿಮ್ಮಮ್ಮ ಅಪ್ಪನಿಗೂ ಸಾಯಿಸುತ್ತೇವೆ ಅಂತ ಹೆದರಿಸಿದರು. ನಾನು ಅಮಾಯಕಳಾಗಿ ಮತ್ತದೇ ಪ್ರಶ್ನೆಕೇಳಿದೆ ನನಗೆ ಕಂಪ್ಯೂಟರ್ ಕೆಲ್ಸ ಕೊಡ್ಸಿ ಸಾಕು, ನಾನು ಇಲ್ಲೇ ಇರ್ತೇನೆ, ನೀವೆಲ್ಲ ನನಗೆ ಹೊಡೆಯಬೇಡಿ, ನನ್ನ ಅಪ್ಪ-ಅಮ್ಮನ ಹತ್ರ ಕಳಿಸ್ಕೊಡಿ ಒಂದ್ಸಲ, ನಾನು ಅವರತ್ರ ಮಾತಾಡಬೇಕು ಎಂದೆಲ್ಲಾ ಮನಸ್ಸಿಗೆ ತೋಚಿದ್ದೆಲ್ಲಾ ಗೋಗರೆದೆ. ಕಲ್ಲು ಹೃದಯದವರು ಕೇಳಬೇಕಲ್ಲ, ಎಲ್ಲದಕ್ಕೂ ಒಪ್ಪಲು ಮುಂಚೆ ನೀನು ನಾವು ಹೇಳಿದ ಕೆಲ್ಸ ಮಾಡಿದರೆ ಮಾತ್ರ ಎಂಬ ಶರತ್ತು ಅವರದು. ಪ್ರತಿ ರಾತ್ರಿ ಅವರು ಹೇಳುವ ವ್ಯಕ್ತಿಯ ಜೊತೆಗೆ ನಾನು ಸುಖವನ್ನು ಹಂಚಬೇಕಂತೆ...........

ಇದ್ಯಾವುದಕ್ಕೂ ನಾನು ಕಿವಿಗೊಡದೆ ವಾರಗಟ್ಟಲೆ ಅವರ ಪ್ರತಿದಿನ ಅವರು ಕೊಡುವ ಹಿಂಸೆಯನ್ನು ಸಹಿಸಿ ಸಾಕಾಯಿತು, ಊಟವಿಲ್ಲದೆ, ಸರಿಯಾದ ನಿದ್ದೆಯಿಲ್ಲದೆ ನಾನು ಡಿಹ್ಯೆಡ್ರೆಷನಿಗೆ ಹೋಗಿ ಆಸ್ಪತ್ರೆಗೆ ಸೇರಿಸುವ ಪರಿಸ್ಥಿತಿ ಬಂದಿತ್ತು. ಅಂತಾ ಸಮಯದಲ್ಲೂ ಅವರು ನನಗೆ ಯಾವುದೇ ಡಾಕ್ಟರನ್ನು ಭೇಟಿಮಾಡುವ ಅವಕಾಶವನ್ನೇ ಕೊಡಲಿಲ್ಲ. ಇನ್ನು ನನ್ನ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ತಿಳಿದ ಅವರೆಲ್ಲ ಒಬ್ಬ ಡಾಕ್ಟರನ್ನು ನಾನಿರುವ ಜಾಗಕ್ಕೆ ಕರೆದುಕೊಂಡು ಬಂದು, ನನ್ನ ಆರೋಗ್ಯ ಸುಧಾರಿಸುವ ಪ್ರಯತ್ನದಲ್ಲಿದ್ದರು. ನಾನು ಡಾಕ್ಟರ್ ನನ್ನ ಬಳಿ ಬಂದು ಚಿಕಿತ್ಸೆ ನೀಡುವುದಕ್ಕೂ ಒಪ್ಪದೆ ಒಂದೇ ಸಮನೆ ಕಿರಿಚಾಡತೊಡಗಿದೆ. ಚಟಾರ್................... ಎಂದು ಕಪಾಳಕ್ಕೆ ಒದೆ ಬಿತ್ತು, ಅಷ್ಟೆ ಗೊತ್ತಾದದ್ದು, ಹೊಡೆದದ್ದು ಯಾರೆಂದು ನೋಡುವುದರೊಳಗೆ ನನಗೆ ಜ್ಣಾನ ತಪ್ಪಿದಂತಾಗಿತ್ತು. ಆಮೇಲೆನಾಯಿತೋ ಗೊತ್ತಿಲ್ಲ. ಎಚ್ಚರವಾದಾಗ ನನಗೆ ಕ್ಯೆಕಾಲುಗಳನ್ನು ಕಟ್ಟಿ ಹಾಕಿದ್ದರು. ಮತ್ತು ಮೊದಲಿನ ಸುಸ್ತು ಸ್ವಲ್ಪ ಕಡಿಮೆಯಾಗಿತ್ತು. ಪಕ್ಕದಲ್ಲೇ ಸೌಭಾಗ್ಯಮ್ಮ ಕುಳಿತಿದ್ದಳು. ಅವಳ ನೋಡುತ್ತಿದ್ದಂತೆ ನನಗೆ ರೋಷ ಉಕ್ಕಿಬಂದರು, ಇನ್ನು ನನ್ನಿಂದೇನು ಹೋರಾಡಲು ಸಾಧ್ಯವಿಲ್ಲ ಎನಿಸಿ, ಸುಮ್ಮನೆ ಮಲಗಿದ್ದೆ.

ಸೌಭಾಗ್ಯಮ್ಮ ಒಮ್ಮೊಮ್ಮೆ ಬಹಳ ಸಾದ್ವಿಯಂತೆ ನನ್ನ ಬಳಿ ಬಂದು ನಿನ್ನ ಆರೋಗ್ಯ ಸುಧಾರಿಸಿಕೋ, ನೀನು ಹಟ ಹಿಡಿದರೆ ಆರೋಗ್ಯ ಸುಧಾರಿಸುವುದಾದರೂ ಹೇಗೆ ? ಮೊದಲು ಹುಷಾರಾಗು ಎಂದೆಲ್ಲ ಥೇಟ್ ನಮ್ಮಮ್ಮನಂತೆ ಹೇಳುವಾಗಲಂತೂ ಅಪ್ಪ-ಅಮ್ಮನ ನೆನಪು ತುಂಬಾ ಬರುತ್ತಿತ್ತು.

ಮುಂದುವರೆಯುವುದು............