ನೋಡ್ತಿರೋರು

ಬುಧವಾರ, ಜುಲೈ 2, 2014

ಬಂದೇ ಬರುತಾವ ಕಾಲ


ಮೊಬ್ಯೆಲಿಗೊಂದು ಸಂದೇಶ... ನೀನು ಇಂದಿಗೂ ಅಂದಿನಷ್ಟೇ, ಪ್ರೀತಿಸುತ್ತೀಯಾ...? ಹಾಗಿದ್ದರೆ, ನನಗೊಂದು ಕರೆ ಮಾಡುವ ಸೌಜನ್ಯವಿದೆಯಾ...?, ಈ ಸಂದೇಶ ಯಾರದು ಅನ್ನೋ ಕುತೂಹಲ ಅವನಲ್ಲಿ... ಇರಬಹುದು ಅವಳೇ ಅಥವಾ ಇನ್ಯಾರದೋ ಸಂದೇಶ ತಪ್ಪಿ ಬಂತೇ...? ಗೊತ್ತಿಲ್ಲ.. ಆದರೂ ಕುತೂಹಲಕ್ಕೆ ಮನಸೋತ ಅವನ ಮನಸು, ನೀವ್ಯಾರು ಎಂಬ ಸಂದೇಶ ಕಳುಹಿಸದೇ ಇರಲಿಲ್ಲ...ಆ ಕಡೆಯಿಂದ ಉತ್ತರವೂ ಇರಲಿಲ್ಲ. ಬಹುಶಃ ಈ ಪ್ರಶ್ನೆ ಎದುರಾದದ್ದು ಉತ್ತರಕ್ಕೋ ಅಥವಾ ಅವಿತು ಕುಳಿತಿದ್ದ ಕಠೋರ ದ್ರೋಹಕ್ಕೋ ಎಂಬ ಸಂದಿಗ್ಧವಿರಬಹುದು.

ಎಷ್ಟು ಹೊತ್ತಾದರೂ ಬರದ ಸಂದೇಶ ಅಭಿರಾಂನ ಮನಸ್ಸಿಗಾಗಲಿ, ಮಾಡುತ್ತಿದ್ದ ಕೆಲಸಕ್ಕಾಗಲಿ ಸಂಬಂಧವೇ ಇರಲಿಲ್ಲ. ಇದ್ದ ಪ್ರಾಜೆಕ್ಟಿನ ಅಷ್ಟು ಕೆಲಸ ಅವತ್ತಿನ ಮಟ್ಟಿಗೆ ಬರಾಕತ್ತಾಗಿ ನಿಂತಿತ್ತು. ಚಡಪಡಿಕೆಯಲಿ ಮತ್ತೊಮ್ಮೆ ಆ ನಂಬರಿಗೆ ಪೋನ್ ಮಾಡುವ ಬಯಕೆ.. ಬೇಕಾದವರಾಗಿದ್ದರೆ ಅವರೇ ಮಾಡಬಹುದೆಂಬ ಅಹಂ. ಸಂಜೆ ಆಫೀಸು ಮುಗಿದರೂ ಮನೆಗೆ ಹೋಗುವ ಚಿಂತೆಯಿಲ್ಲದೆ ದೂರದ ಬೆಟ್ಟದೊಂದಿಗೆ ಮಾತನಾಡುವ ಬಯಕೆ. ಬ್ಯೆಕು ಅವನ ಮಾತು ಕೇಳಲೇ ಇಲ್ಲ. ಅದು ತನ್ನ ನಿಶ್ಚಲ ಮನಸ್ಸಿನಲ್ಲೇ ಹೊರಟಿತು ಮನೆಯ ಕಡೆಗೆ. ಎಲ್ಲವೂ ದಾಟಿ ಮನೆಯ ಮುಂದೆ ಗಾಡಿ ನಿಂತಾಗಲೇ ಗೊತ್ತಾದದ್ದು. ಓಹ್!! ಮನೆಗೆ ಬಂದ್ನಾ. ಇರಲಿ ಸ್ವಲ್ಪ ಫ್ರೆಶ್ ಆಗಿ ನಂತರ ಹೊರಗೆ ಹೋದರಾಯಿತು, ಎಂದು ಮನದಲ್ಲೇ ಲೆಕ್ಕಾಚಾರ ಹಾಕಿ ಬಾಗಿಲ ಬಳಿ ಬಂದಾಗಲೇ ಮಗಳು ಅಭಿಗ್ನಾ, ಅಪ್ಪಾ !! ಎಂದಾಗ ವಾಸ್ತವಕ್ಕೆ ಬರಲೇ ಬೇಕಾಯಿತು. ಮಗುವಿನ ಮುಖ ನಿಂಗೆ ಈಗೆಲ್ಲಾ ಇವು ಬೇಕಾ ? ಎಂಬ ಪ್ರಶ್ನಾರ್ಥಕ ಭಾವದಂತಿತ್ತು.